ಬೆಂಗಳೂರು/ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜನ್ಮ ದಿನದ ಪ್ರಯುಕ್ತ ಆಚರಣೆ ಮಾಡಲಾಗುತ್ತಿರುವ ಸಿದ್ದರಾಮೋತ್ಸವದ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ದಾವಣಗೆರೆಯಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮೋತ್ಸವ ಬದಲಿಗೆ ಶರಣ ಸಿದ್ದರಾಮೇಶ್ವರರ ನಿತ್ಯೋತ್ಸವ ನೀಡಿ ಎಂದು ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ.
ಕೊಪ್ಪಳ ಹಾಗೂ ದಾವಣಗೆರೆ ಪ್ರವಾಸಕ್ಕೆ ಹೊರಡುವ ಮುನ್ನ ಬೆಂಗಳೂರಿನ ನಿವಾಸದಲ್ಲಿ ವಿವಿಧ ವಿಚಾರಗಳಿಗೆ ಪ್ರತಿಕ್ರಿಯಿಸುತ್ತಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಅತ್ತ ನಡೆದರು. ಈ ವೇಳೆ ಪತ್ರಕರ್ತರು, ಸಿದ್ದರಾಮೋತ್ಸವ ಕುರಿತು ಪ್ರಶ್ನಿಸಿದರು. ಸಾಕಷ್ಟು ಮುಂದೆ ಸಾಗಿದ್ದ ಸಿಎಂ ಪುನಃ ಆಗಮಿಸಿ, ಸಿದ್ದರಾಮೋತ್ಸವ ಕುರಿತು ನಮಗೆ ಏನೂ ಆಕ್ಷೇಪಣೆ ಇಲ್ಲ. ಅವರು ಮಾಡಿಕೊಳ್ಳುತ್ತಿದ್ದಾರೆ. ನಾವು ಸಿದ್ದರಾಮೇಶ್ವರರ ಜಯಂತಿ ಮಾಡುತ್ತೇವೆ. ಶರಣ ಸಿದ್ದರಾಮೇಶ್ವರರ ಪೂಜೆ ಎಂದರು.
ಇದೇ ಮಾತನ್ನು ದಾವಣಗೆರೆಯಲ್ಲಿಯೂ ಪುನರಾವರ್ತಿಸಿದ್ದಾರೆ. ದಾವಣಗೆರೆಯ ಶಿವಯೋಗಿ ಮಂದಿರದ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ಸಿದ್ದರಾಮೇಶ್ವರ ದೇವರಿಗೆ ನಿತ್ಯೋತ್ಸವ ಮಾಡಬೇಕು. ಬೇರೆಯವರ ನಿತ್ಯೋತ್ಸವ ಮಾಡಬೇಡಿ. ನಾವು ಏನು ಮಾತನಾಡುತ್ತೇವೆ ಎನ್ನುವುದು ಮುಖ್ಯ ಅಲ್ಲ. ಮಾಡುವ ಕೆಲಸ ಮುಖ್ಯ. ಕೆಲಸ ಮಾಡುವವರನ್ನು ಜನ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ಗರೀಬಿ ಹಠಾವೊ ಎಂದು ಹೇಳಿದವರನ್ನು ನೀವು ನೋಡಿದ್ದೀರಿ. ದೇವರು ಕೂಲಿಕಾರರ ಶ್ರಮ ರೈತರ ಬೆವರಿನಲ್ಲಿದ್ದಾನೆ. ನಾವು ದುಡಿಯುವಂತಹ ಕಾಯಕ ಸಮುದಾಯದ ಜತೆ ಇರುತ್ತೇವೆ ಎಂದು ತಿಳಿಸಿದರು.
ಶಿವಯೋಗಿ ಶ್ರೀ ಸಿದ್ದರಾಮೇಶ್ವರ ದೇವರ ರಥ ವಜ್ರ ಮಹೋತ್ಸವದ ಕುರಿತು ಪ್ರತಿಕ್ರಿಯಿಸಿ, ಸಮಾಜವನ್ನು ಜಾಗೃತಗೊಳಿಸಲು ಗುರುಪೀಠ ಒಳ್ಳೆಯ ಕೆಲಸ ಮಾಡುತ್ತಿದೆ. ಅವರ ಮಾರ್ಗದರ್ಶನ ನಮಗೆ ಆದರ್ಶ. ಎಲ್ಲ ಜನಾಂಗದ ಅಭಿವೃದ್ಧಿಯಾದಾಗ ನಾಡು ಅಭಿವೃದ್ಧಿಯಾಗುತ್ತದೆ. ಅಧಿಕಾರ ಇದ್ದಾಗ ಹಿಂದುಳಿದವರು ತಳ ಸಮುದಾಯದವರು ಅಭಿವೃದ್ಧಿಯಾಗಬೇಕು ಎಂದರು.
ನಿರಂತರ ಸಮಸ್ಯೆಯಲ್ಲಿರುವ ಬೋವಿ ಸಮಾಜಕ್ಕೆ ಕುಲಕಸುಬು ಮಾಡಲು ಅನೇಕ ತೊಂದರೆಗಳಿವೆ. ಪಾರಂಪರಿಕ ಕಸುಬಿಗೆ ತೊಡಕಾಗುವ ಹಲವು ಕಾನೂನುಗಳಿವೆ. ನನಗೆ ಸಮಸ್ಯೆಗಳ ಬಗ್ಗೆ ಅರಿವಿದೆ. ಕೈಯಲ್ಲಿ ಕಲ್ಲು ಒಡೆಯುವ ಸಮಾಜಕ್ಕೆ ಪೂರಕವಾದ ಕಾನೂನನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಾಡುತ್ತೇವೆ. ಮುಂದೆ ಯಾರೂ ಪ್ರಶ್ನೆ ಮಾಡದಂತೆ ಕಾನೂನು ಮಾಡುತ್ತೇವೆ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನದಲ್ಲಿ ಎಲ್ಲ ಸರ್ಕಾರಗಳಿಗಿಂದ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಬೋವಿ ಸಮಾಜದ ನಿಗಮಕ್ಕೆ 107 ಕೋಟಿ ರೂ. ಅನುದಾನ ಕೊಟ್ಟಿದ್ದೇವೆ. ಆದರೆ ದುರ್ಧೈವವಶಾತ್ ಕೆಲವರು ಭ್ರಷ್ಟಾಚಾರ ಮಾಡಿದರು, ಅವರನ್ನು ತೆಗೆದುಹಾಕಿದ್ದೇವೆ. ಇನ್ನರೆಡು ದಿನದಲ್ಲಿ ಬೋವಿ ನಿಗಮಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ದಾವಣಗೆರೆಯ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ರಥ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಭಾಗವಹಿಸಿದರು. ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು, ಹರಿಹರ ವೀರಶೈವ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಶ್ರೀಗಳು, ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು, ಮಾದಾರ ಚನ್ನಯ್ಯ ಸ್ವಾಮೀಜಿ, ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಚಿವರಾದ ಬಿ.ಎ. ಬಸವರಾಜ, ಡಾ:ಕೆ.ಸುಧಾಕರ್, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಅರವಿಂದ ಲಿಂಬಾವಳಿ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.