ಯಶವಂತ್ ಕುಮಾರ್ ಎ. ವಿಸ್ತಾರ ನ್ಯೂಸ್, ದಾವಣಗೆರೆ
ಬೆಣ್ಣೆದೋಸೆ ಎಂದಾಕ್ಷಣ ನೆನಪಾಗೋದು ದಾವಣಗೆರೆ. ಈ ಬಾರಿಯ ದಾವಣಗೆರೆ ಜಿಲ್ಲೆಯ ಚುನಾವಣಾ ಕಣ ರಂಗೇರಿದೆ. 2018 ರ ಫಲಿತಾಂಶ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ ಪಡುತ್ತಿದ್ದರೆ, ಕಾಂಗ್ರೆಸ್ 2013ರ ಫಲಿತಾಂಶಕ್ಕಾಗಿ ಹೋರಾಟ ಮಾಡುತ್ತಿದೆ. ಜಿಲ್ಲೆಯಲ್ಲಿ ಈ ಮೊದಲು 8 ವಿಧಾನಸಭಾ ಕ್ಷೇತ್ರಗಳಿದ್ದು, ವಿಜಯನಗರ ಜಿಲ್ಲೆ ರೂಪುಗೊಂಡ ಮೇಲೆ ಹರಪನಹಳ್ಳಿ ತಾಲೂಕು ವಿಜಯನಗರಕ್ಕೆ ಸೇರಿದೆ. ಹೀಗಾಗಿ 7 ವಿಧಾನಸಭಾ ಕ್ಷೇತ್ರಗಳು ದಾವಣಗೆರೆ ಜಿಲ್ಲೆಯಲ್ಲಿ ಉಳಿದುಕೊಂಡಿವೆ.
ಕಾಂಗ್ರೆಸ್‌ನಲ್ಲಿ ದಾವಣಗೆರೆ ಜಿಲ್ಲೆಯ ಹೈಕಮಾಂಡ್ ಎಂದೇ ಗುರುತಿಸಿಕೊಂಡಿರುವ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಪುತ್ರ ಮಲ್ಲಿಕಾರ್ಜುನ್ ಈ ಬಾರಿ ತಮ್ಮ ಗೆಲುವಿಗಾಗಿ ಶ್ರಮಿಸುತ್ತಿದ್ದು, ಅಕ್ಕಪಕ್ಕದ ಕ್ಷೇತ್ರಗಳತ್ತ ತಿರುಗಿಯೂ ನೋಡುತ್ತಿಲ್ಲ. ಇದರಿಂದ ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸ್ವಲ್ಪ ಹೊಡೆತ ಬೀಳುವ ಸಾಧ್ಯತೆ ಇದೆ. ಇನ್ನೂ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಪ್ರಕರಣ ಯಾರಿಗೆ ವರ, ಯಾರಿಗೆ ನಷ್ಟ ಎನ್ನುವ ಲೆಕ್ಕಾಚಾರ ಕೂಡ ನಡೆಯುತ್ತಿದೆ.
ದಾವಣಗೆರೆ ದಕ್ಷಿಣ:
ಕಾಂಗ್ರೆಸ್ ಬಿಜೆಪಿ
ನಡುವೆ ನೇರ ಹಣಾಹಣಿ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಡಾ.ಶಾಮನೂರು ಶಿವಶಂಕರಪ್ಪ ಅವರ ಶಕ್ತಿ ಕೇಂದ್ರ. 1994ರಲ್ಲಿ ಮೊದಲಬಾರಿಗೆ ಪಕ್ಷೇತರವಾಗಿ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪ ಶಾಸಕರಾಗಿ ಆಯ್ಕೆಯಾದರು. ಅಂದಿನಿಂದ ಇಲ್ಲಿಯವರೆಗೂ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ.
2004, 2008, 2013, 2018 ಸತತವಾಗಿ ಡಾ. ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿ ಸೋಲಿಲ್ಲದ ಸರದಾರರಾಗಿದ್ದಾರೆ. ಆದರೆ, ಈ ಬಾರಿ ಬಿಜೆಪಿ ಅಭ್ಯರ್ಥಿ ಬಿ. ಜಿ. ಅಜಯ್ ಕುಮಾರ್ ಭರ್ಜರಿ ಪೈಪೋಟಿ ನೀಡುತ್ತಿದ್ದಾರೆ. ಇನ್ನೂ ಜೆಡಿಎಸ್ ಅಸ್ವಿತ್ವಕ್ಕಾಗಿ ಹೋರಾಡುತ್ತಿದೆ.
ಬಿ.ಜಿ.ಅಜಯ್ ಕುಮಾರ್ ಹೊಸ ಅಭ್ಯರ್ಥಿಯಾದರೂ 1 ವರ್ಷ ಮಹಾನಗರ ಪಾಲಿಕೆ ಮೇಯರ್ ಆಗಿ ಜನರಿಗೆ ಹತ್ತಿರ ಆಗಿದ್ದಾರೆ. ಇಲ್ಲಿ ಮುಸ್ಲಿಮರ ಮತಗಳೇ ನಿರ್ಣಾಯಕವಾಗಿದ್ದು, ನೇರ ಹಣಾಹಣಿ ಇದೆ. ಶಾಮನೂರು ಶಿವಶಂಕರಪ್ಪ ಅವರಗೆ 92 ವರ್ಷ ವಯಸ್ಸಾಗಿದ್ದು, ಜನ ಒಪ್ಪುತ್ತಾರಾ ಅನ್ನೋ ಲೆಕ್ಕಾಚಾರ ಕೂಡ ಇದೆ.
ಕಳೆದ ಬಾರಿಯ ಫಲಿತಾಂಶ ಏನು?
ಡಾ.ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್): 71,369 | ಯಶವಂತರಾವ್ ಜಾಧವ್ (ಬಿಜೆಪಿ): 55,485 | ಅಮಾನುಲ್ಲಾ ಖಾನ್ (ಜೆಡಿಎಸ್): 6,020 | ಗೆಲುವಿನ ಅಂತರ : 15,884
ದಾವಣಗೆರೆ ಉತ್ತರ:
ಬಿಜೆಪಿ-ಕಾಂಗ್ರೆಸ್
ನಡುವೆ ಜಿದ್ದಾಜಿದ್ದಿ
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಕಾಂಗ್ರೆಸ್ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಕಾಂಗ್ರೆಸ್‌ನಿಂದ ಕಣಕ್ಕಿಳಿದ್ದಿದ್ದು, ಅವರ ಗೆಲುವಿಗಾಗಿ ಇಡೀ ಶಾಮನೂರು ಕುಟುಂಬ ಚುನಾವಣಾ ಅಖಾಡಕ್ಕೆ ಧುಮುಕಿದೆ.
2018 ರ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಸೋಲು ಕಂಡಿದ್ದರು. ಈ ಬಾರಿ ಶತಾಯಗಥಾಯ ಗೆಲ್ಲಬೇಕು ಎಂದು ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಮತ್ತು ಮಕ್ಕಳು, ಸಹೋದರರು ಮಲ್ಲಿಕಾರ್ಜುನ್ ಪರ ಪ್ರಚಾರ ಮಾಡುತ್ತಿದ್ದಾರೆ.
ಇನ್ನೂ ಉತ್ತರದಲ್ಲಿ ಬಿಜೆಪಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದ ಲೋಕಿಕೆರೆ ನಾಗರಾಜ್ ಅವರನ್ನ ಚುನಾವಣಾ ಅಖಾಡಕ್ಕೆ ಇಳಿಸಿದೆ. ಲೋಕಿಕೆರೆ ನಾಗರಾಜ್ ರೈತ ಪರ ಹೋರಾಟಗಾರಾಗಿದ್ದು, ಕ್ಷೇತ್ರದ ಜನರಿಗೂ ಚಿರಪರಿಚಿತ. ಅಲ್ಲದೇ ಬಿಜೆಪಿ ಮಾಜಿ ಶಾಸಕ ಎಸ್.ಎ. ರವೀಂದ್ರನಾಥ್ ಲೋಕಿಕೆರೆ ನಾಗರಾಜ್‌ಗೆ ಸಾಥ್ ನೀಡಿದ್ದು, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಏನು?
ಎಸ್.ಎ.ರವೀಂದ್ರನಾಥ್ (ಬಿಜೆಪಿ): 76,540 | ಎಸ್.ಎಸ್.ಮಲ್ಲಿಕಾರ್ಜುನ್ (ಕಾಂಗ್ರೆಸ್): 72,469 | ಎಂ. ಆನಂದಪ್ಪ (ಜೆಡಿಎಸ್) 5,381 | ಗೆಲುವಿನ ಅಂತರ: 4,071
ಚನ್ನಗಿರಿ: ಸ್ವಾಭಿಮಾನ
ವರ್ಸಸ್ ಕಾಂಗ್ರೆಸ್
ಅಡಕೆ ನಾಡು ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಸ್ವಾಭಿಮಾನ ವರ್ಸಸ್ ಕಾಂಗ್ರೆಸ್ ನಡುವೆ ಸಮರ ಏರ್ಪಟ್ಟಿದೆ. ಹಾಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪುತ್ರನ ಲೋಕಾಯುಕ್ತ ಪ್ರಕರಣ ಬಿಜೆಪಿಗೆ ಸಂಕಷ್ಟ ತಂದೊಡ್ಡಿದೆ.
ಚನ್ನಗಿರಿಯಲ್ಲಿ ಚುನಾವಣೆಗೂ ಮುನ್ನ ಬಿಜೆಪಿ ಗೆಲುವು ಅಂತಾನೇ ಭಾವಿಸಲಾಗಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಾಡಾಳ್ ಕುಟುಂಬಕ್ಕೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ್ ಮಾಡಾಳ್ ಸ್ವಾಭಿಮಾನದ ಭಾವುಟ ಹಾರಿಸಿ ಕಣಕ್ಕಿಳಿದಿದ್ದಾರೆ.
ಇಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ಎಸ್. ಶಿವಕುಮಾರ್ ಲೆಕಕ್ಕಷ್ಟೇ. ಕಾಂಗ್ರೆಸ್‌ನಿಂದಹೊಸ ಅಭ್ಯರ್ಥಿ ಬಸವರಾಜ್ ವಿ ಶಿವಗಂಗಾ ಅಖಾಡದಲ್ಲಿದ್ದಾರೆ. ವಿರೂಪಾಕ್ಷಪ್ಪರ ಮನೆಯ ಮೇಲಿನ ಲೋಕಾಯುಕ್ತ ದಾಳಿ ಪ್ರಕರಣ ಕಾಂಗ್ರೆಸ್‌ಗೆ ಫ್ಲಸ್ ಎನ್ನಲಾಗ್ತಿದೆ. ಆದರೆ, ಮಲ್ಲಿಕಾರ್ಜುನ್ ಹಾರಿಸಿರುವ ಸ್ವಾಭಿಮಾನದ ಭಾವುಟವೂ ಜೋರಾಗಿದೆ. ಹೀಗಾಗಿ ಇಲ್ಲಿ ಕಾಂಗ್ರೆಸ್ ವರ್ಸಸ್ ಸ್ವಾಭಿಮಾನದ ಫೈಟ್ ಜೋರಾಗಿದೆ. ಜೆಡಿಎಸ್ ಅಭ್ಯರ್ಥಿಯಾಗಿ ರೈತ ನಾಯಕ ತೇಜಸ್ವಿ ಪಟೇಲ್ ಕಣಕ್ಕಿಳಿದಿದ್ದು, ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಏನು?
ಮಾಡಾಳ್ ವಿರೂಪಾಕ್ಷಪ್ಪ (ಬಿಜೆಪಿ): 73,794 | ವಡ್ನಾಳ್ ರಾಜಣ್ಣ (ಕಾಂಗ್ರೆಸ್): 48,014 | ಡಿ.ರಮೇಶ್ (ಜೆಡಿಎಸ್) : 29,106 | ಗೆಲುವಿನ ಅಂತರ : 25,780
ಮಾಯಕೊಂಡ: ರಾಷ್ಟ್ರೀಯ
ಪಕ್ಷಗಳಿಗೆ ಪಕ್ಷೇತರರ ಕಾಟ
ಮಾಯಕೊಂಡ ಎಸ್ಸಿ ಮೀಸಲು ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಸ್ವಪಕ್ಷೀಯರೇ ಮಗ್ಗಲ ಮುಳ್ಳಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಬಸವಂತಪ್ಪಗೆ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ, ಈಗ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಸವಿತಾ ಬಾಯಿ ಸವಾಲೊಡ್ಡುತ್ತಿದ್ದಾರೆ.
ಇನ್ನು ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಗೆ ಪಕ್ಷೇತರ ಅಭ್ಯರ್ಥಿ ಪುಷ್ಪಾ ವಾಗೀಶ್ ಅಡ್ಡಿಯಾಗಿದ್ದಾರೆ. ಪುಷ್ಪಾ ವಾಗೀಶ್ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿದ್ದು, ಅದು ಬಿಜೆಪಿಗೆ ಸ್ಪಲ್ಪ ಮಟ್ಟಿಗೆ ಡ್ಯಾಮೇಜ್ ಮಾಡಲಿದೆ.
ಜೆಡಿಎಸ್ ಅಭ್ಯರ್ಥಿ ಎಚ್.ಆನಂದಪ್ಪ ʻಇಬ್ಬರ ಜಗಳ ಮೂರನೇಯವರಿಗೆ ಲಾಭʼ ಎಂಬ ಮಾತಿನಂತೆ, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿನ ಪೈಪೋಟಿಯ ಲಾಭ ಮಾಡಿಕೊಳ್ಳಲು ಓಡಾಡುತ್ತಿದ್ದಾರೆ. ಕಳೆದ ಬಾರಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದರು. ಇದು ಎಸ್ಸಿ ಮೀಸಲು ಕ್ಷೇತ್ರವಾದರೂ ಇಲ್ಲಿ ಲಿಂಗಾಯತ ಸಮುದಾಯ ಯಾರ ಕೈ ಹಿಡಿಯತ್ತೋ ಅವರು ಶಾಸಕರಾಗುತ್ತಾರೆ. ಈ ಬಾರಿ ಬೋವಿ, ಲಂಬಾಣಿ, ಮಾದಿಗ ಸಮುದಾಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಏನು?
ಎನ್. ಲಿಂಗಣ್ಣ (ಬಿಜೆಪಿ) : 50,556 | ಕೆ.ಎಸ್.ಬಸವಂತಪ್ಪ (ಕಾಂಗ್ರೆಸ್) : 44,098 | ಎಚ್.ಆನಂದಪ್ಪ (ಪಕ್ಷೇತರ) : 27, 321 | ಗೆಲುವಿನ ಅಂತರ: 6,458
ಹೊನ್ನಾಳಿ : ಹೋರಿ ರೇಣು
ವರ್ಸಸ್ ಡಿಜಿಎಸ್ ಫೈಟ್
ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಹಳೇ ಕಲಿಗಳು ರಣಕಣದಲ್ಲಿದ್ದಾರೆ. ಬಿಜೆಪಿಯಿಂದ ಎಂ.ಪಿ.ರೇಣುಕಾಚಾರ್ಯ, ಕಾಂಗ್ರೆಸ್‌ನಿಂದ ಡಿ. ಜಿ. ಶಾಂತನಗೌಡ ಕಣಕ್ಕಿಳಿದಿದ್ದಾರೆ. ಇಬ್ಬರೂ ಕೂಡ ಶಾಸಕರಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.
ಈ ಬಾರಿ ರೇಣುಕಾಚಾರ್ಯ ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವೆ, ಅನೇಕ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋದರೆ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಇದು ನನ್ನ ಕಡೆಯ ಚುನಾವಣೆ ಎಂದು ಜನರ ಮುಂದೆ ಹೋಗುತ್ತಿದ್ದಾರೆ. ಇಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಿದ್ದು, ಡಿ.ಜಿ. ಶಾಂತನಗೌಡ ಲಿಂಗಾತರ ಸಮುದಾಯಕ್ಕೆ ಸೇರಿದವರು. ರೇಣುಕಾಚಾರ್ಯ ವೀರಶೈವ ಲಿಂಗಾಯತದಲ್ಲಿ ಜಂಗಮರು.
ಇತ್ತ ಕುರುಬ ಸಮುದಾಯವೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಎಂಪಿಆರ್ ಮತ್ತು ಡಿಜಿಎಸ್ ನಡುವೆ ನೇರ ಹಣಾಹಣಿ ನಡೆಯಲಿದೆ. ಜೆಡಿಎಸ್ ಅಭ್ಯರ್ಥಿ ಕೊನೆ ಕ್ಷಣದಲ್ಲಿ ನಾಮಪತ್ರ ವಾಪಸ್ ತೆಗೆದುಕೊಂಡು ಇವರಿಬ್ಬರ ಪೈಪೋಟಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಏನು?
ಎಂ.ಪಿ.ರೇಣುಕಾಚಾರ್ಯ (ಬಿಜೆಪಿ) : 80,624| ಡಿ. ಜಿ. ಶಾಂತನಗೌಡ (ಕಾಂಗ್ರೆಸ್) : 76,391 | ಗೆಲುವಿನ ಅಂತರ: 4,233
ಜಗಳೂರು: ಕಾಂಗ್ರೆಸ್‌ಗೆ
ಪಕ್ಷೇತರರದ್ದೇ ಸವಾಲು!
ಜಗಳೂರು ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲು ವಿಧಾನಸಭಾ ಕ್ಷೇತ್ರ. ಇಲ್ಲಿ ಈ ಮೊದಲು ಇಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಫೈಟ್ ಇತ್ತು. ಕಾಂಗ್ರೆಸ್ ಮಾಜಿ ಶಾಸಕ ಎಚ್.ಪಿ. ರಾಜೇಶ್ ಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರವಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಬಿ.ದೇವೇಂದ್ರಪ್ಪಗೆ ಮಗ್ಗಲ ಮುಳ್ಳಾಗಿದ್ದಾರೆ.
ಇನ್ನೂ ಬಿಜೆಪಿ ಹಾಲಿ ಶಾಸಕ ಎಸ್.ವಿ.ರಾಮಚಂದ್ರ ಈ ಬಾರಿಯೂ ಕಣಕ್ಕಿಳಿದಿದ್ದು, ಸದ್ಯದ ಮಟ್ಟಿಗೆ ತ್ರಿಕೋನ ಸ್ಪರ್ಧೆಯಂತಿದೆ ಕ್ಷೇತ್ರ. ಎಚ್.ಪಿ.ರಾಜೇಶ್ ಹೊರತು ಪಡಿಸಿ, ಮತ್ತಿಬ್ಬರೂ ಆರ್ಥಿಕವಾಗಿ ಬಲಿಷ್ಠರಾಗಿರುವುದರಿಂದ ಈ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯಲಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇಲ್ಲಿ ಜೆಡಿಎಸ್ ಅಭ್ಯರ್ಥಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಏನು?
ಎಸ್. ವಿ. ರಾಮಚಂದ್ರ (ಬಿಜೆಪಿ): 78,948 | ಎಚ್.ಪಿ.ರಾಜೇಶ್ (ಕಾಂಗ್ರೆಸ್): 49,727 | ಬಿ.ದೇವೇಂದ್ರಪ್ಪ (ಜೆಡಿಎಸ್): 13,401 | ಗೆಲುವಿನ ಅಂತರ : 29, 221
ಹರಿಹರ: ತ್ರೀಕೋನ ಸ್ಪರ್ಧೆ
ಹರಿಹರ ವಿಧಾನಸಭಾ ಕ್ಷೇತ್ರ ದಾವಣಗೆರೆ ಜಿಲ್ಲೆಯಲ್ಲಿ ಪ್ರತಿಬಾರಿಯೂ ತ್ರಿಕೋನ ಫೈಟ್ ಇರುವಂತಹ ಕ್ಷೇತ್ರ. ಇಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸಮಬಲದ ಹೋರಾಟ ನಡೆಸಿಕೊಂಡು ಬಂದಿವೆ. 2008ರಲ್ಲಿ ಬಿಜೆಪಿ ಗೆಲವು, 2013 ರಲ್ಲಿ ಜೆಡಿಎಸ್ ಗೆಲವು, 2018 ರಲ್ಲಿ ಕಾಂಗ್ರೆಸ್ ಗೆಲುವು. ಹೀಗೆ ಕ್ಷೇತ್ರದ ಜನ ಮೂರು ಪಕ್ಷಗಳಿಗೂ ಆಶೀರ್ವಾದ ಮಾಡಿದ್ದಾರೆ.
ಈ ಬಾರಿಯೂ ಕೂಡ ತ್ರಿಕೋನ ಸ್ಪರ್ಧೆ ಇದೆ. ಕಾಂಗ್ರೆಸ್ ಹಾಲಿ ಶಾಸಕ ಎಸ್.ರಾಮಪ್ಪಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿ ಹೊಸ ಅಭ್ಯರ್ಥಿ ಶ್ರೀನಿವಾಸ್ ನಂದಿ ಕಣಕ್ಕಿಳಿದಿದ್ದಾರೆ, ಎಸ್. ರಾಮಪ್ಪ ಪಕ್ಷ ನಿಷ್ಠೆ ಎಂದು ಕಾಂಗ್ರೆಸ್‌ನಲ್ಲೇ ಉಳಿದುಕೊಂಡು ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆ.
ಬಿಜೆಪಿಯಿಂದ ಮಾಜಿ ಶಾಸಕ ಬಿ.ಪಿ.ಹರೀಶ್, ಜೆಡಿಎಸ್‌ನಿಂದ ಎಚ್.ಎಸ್.ಶಿವಶಂಕರ್ ಕಣಕ್ಕಿಳಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕುರುಬ ಸಮುದಾಯಕ್ಕೆ ಸೇರಿದ್ದು, ಪ್ರಬಲ ಸ್ವಾಮೀಜಿಯೊಬ್ಬರು ಹಿಂದಿದ್ದಾರೆ ಎನ್ನಲಾಗಿದೆ. ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ವರಿಷ್ಠ ಜೆ ಪಿ ನಡ್ಡಾ ಹೀಗೆ ಅನೇಕ ನಾಯಕರು ಪ್ರಚಾರ ನಡೆಸಿದ್ದಾರೆ. ವಿವಿಧ ಮಠಗಳ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದಾರೆ.
ಇನ್ನು ಜೆಡಿಎಸ್ ಅಭ್ಯರ್ಥಿ ಶಿವಶಂಕರ್ ಪಂಚಮಸಾಲಿ ಮತಗಳ ಜೊತೆ ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದ್ದು, ತ್ರಿಕೋನ ಸ್ಪರ್ಧೆಯಲ್ಲಿ ಯಾರು ಗೆಲುವಿನ ಹಾರ ಹಾಕಿಕೊಳ್ಳುತ್ತಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಕಳೆದ ಬಾರಿಯ ಫಲಿತಾಂಶ ಏನು?
ಎಸ್.ರಾಮಪ್ಪ (ಕಾಂಗ್ರೆಸ್): 64,801 | ಬಿ.ಪಿ.ಹರೀಶ್ (ಬಿಜೆಪಿ): 57,541 | ಎಚ್.ಎಸ್.ಶಿವಶಂಕರ್ (ಜೆಡಿಎಸ್): 38,204 | ಗೆಲುವಿನ ಅಂತರ : 7,260
ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆ ಕ್ಷೇತ್ರ ಸಮೀಕ್ಷೆ : ಬಿಜೆಪಿಗೆ ಪ್ರಾಬಲ್ಯ ಉಳಿಸಿಕೊಳ್ಳುವ ಸವಾಲು