Site icon Vistara News

Self Harming : ಅನಾರೋಗ್ಯದಿಂದ ಬೇಸತ್ತು ಕ್ರಿಮಿನಾಶಕ ಸೇವಿಸಿ ದಂಪತಿ ಆತ್ಮಹತ್ಯೆ; ಸಾಲಗಾರರ ಕಾಟಕ್ಕೆ ಹೆದರಿ ವ್ಯಕ್ತಿ ನಾಪತ್ತೆ

Self Harming

ದಾವಣಗೆರೆ: ಅನಾರೋಗ್ಯದ ಕಾರಣಕ್ಕೆ ದಂಪತಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಷಣ್ಮುಖಪ್ಪ (65) ಹಾಗೂ ಇಂದ್ರಮ್ಮ (50) ಆತ್ಮಹತ್ಯೆಗೆ ಶರಣಾದ ‌ದಂಪತಿ. ದಾವಣಗೆರೆಯ ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಕ್ರಿಮಿನಾಶಕ ಸೇವಿಸಿ ತೀವ್ರ ಅಸ್ವಸ್ಥಗೊಂಡ ದಂಪತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಪತಿ ಷಣ್ಮುಖಪ್ಪ ಮೃತಪಟ್ಟರೆ, ಇಂದ್ರಮ್ಮ ಚಿಕಿತ್ಸೆ ಫಲಿಸದೇ ಮಂಗಳವಾರ ಬೆಳಗ್ಗೆ ಅಸುನೀಗಿದ್ದಾರೆ.

ಇಬ್ಬರು ದಂಪತಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು. ಮಕ್ಕಳಿಲ್ಲದೆ ಇಳಿ ವಯಸ್ಸಿನಲ್ಲಿ ನಮ್ಮ ಆರೈಕೆ ಮಾಡುವರು ಯಾರೆಂದು ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಸಾಲಗಾರರ ಕಾಟಕ್ಕೆ ಹೆದರಿ ವ್ಯಕ್ತಿ ನಾಪತ್ತೆ

ಸಾಲಗಾರರ ಕಾಟಕ್ಕೆ ಹೆದರಿ ವ್ಯಕ್ತಿಯೊಬ್ಬ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಮೈಸೂರಿನ ಹುಣಸೂರು ತಾಲೂಕಿನ ಕುಟ್ಟುವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಆಟೋ ಡ್ರೈವರ್ ಪ್ರಸಾದ್ (37) ನಾಪತ್ತೆಯಾದವರು. ನನ್ನ ಸಾವಿಗೆ ಫೈನಾನ್ಸ್ ಮಧು, ಟೆಂಪೋ ಕಿರಣ್ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಪ್ರಸಾದ್ ನಾಪತ್ತೆಯಿಂದಾಗಿ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಸದ್ಯ ಈ ಸಂಬಂಧ ಬಿಳಿಕೆರೆ ಪೊಲೀಸರು ಮಿಸ್ಸಿಂಗ್‌ ಕೇಸ್‌ ದಾಖಲಾಗಿದ್ದು, ಪ್ರಸಾದ್‌ಗಾಗಿ ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ: Road Accident : ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್‌ಗೆ ಯುವಕ ಬಲಿ

ತಡೆಗೋಡೆಗೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ತಡೆಗೋಡೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವ್ಯಕ್ತಿಯ ಗುರುತು ಪತ್ತೆ ಆಗಿಲ್ಲ. ಬೆಂಗಳೂರಿನ ಯಶವಂತಪುರದಿಂದ ತುಮಕೂರು ರಸ್ತೆ ಮಾರ್ಗವಾಗಿ ಹೋಗು ರಸ್ತೆಯ ತಡೆ ಗೋಡೆಗೆ ಅಪರಿಚಿತ ವ್ಯಕ್ತಿ ನೇಣು ಬೀಗಿದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಯಶವಂತಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಡಿದ ಮತ್ತಿನಲ್ಲಿ ರಾಜಕಾಲುವೆಗೆ ಬಿದ್ದು ಯುವಕ ಸಾವು

ಕುಡಿದ ಮತ್ತಿನಲ್ಲಿ ರಾಜಕಾಲುವೆಗೆ ಬಿದ್ದು ಯುವಕನೊರ್ವ ಮೃತಪಟ್ಟಿದ್ದಾನೆ. ಚಿತ್ರದುರ್ಗ ನಗರದ ಮಟನ್‌ ಮಾರ್ಕೇಟ್ ರಸ್ತೆ ಬಳಿ ಘಟನೆ ನಡೆದಿದೆ. ಫಿರೋಜ್ ಖಾನ್ (28) ಮೃತ ದುರ್ದೈವಿ. ಫಿರೋಜ್ ಖಾನ್ ಗೋಪಾಲಪುರ ರಸ್ತೆ ನಿವಾಸಿಯಾಗಿದ್ದು, ಕಂಠ ಪೂರ್ತಿ ಕುಡಿದು ಆಕಸ್ಮಿಕವಾಗಿ ರಾಜಕಾಲುವೆಗೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಚಿತ್ರದುರ್ಗ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version