ವಿಧಾನಸಭೆ: ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಂಗಮಂದಿರ ನಿರ್ಮಾಣ ಮಾಡುವ ವಿಚಾರ ವಿಧಾನಸಭೆಯಲ್ಲಿ ಗುರುವಾರ ಒಂದಷ್ಟು ಹೊತ್ತು ಚರ್ಚೆಗೆ ಗ್ರಾಸವಾಯಿತು. ಸಂವಿಧಾನದ ಸಂಸ್ಥೆಗಳ ಕುರಿತು ಸ್ವತಃ ಸ್ಪೀಕರ್ ಕಾಗೇರಿ ಬೇಸರ ವ್ಯಕ್ತಪಡಿಸಿದ ಪ್ರಸಂಗವೂ ಜರುಗಿತು.
ದಾವಣಗೆರೆಯಲ್ಲಿ ರಂಗಮಂದಿರ ನಿರ್ಮಾಣ ನನೆಗುದಿಗೆ ಬಿದ್ದಿದೆ ಎಂದು ಬಿಜೆಪಿ ಶಾಸಕ ಎಸ್.ಎ. ರವೀಂದ್ರನಾಥ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್, ದಾವಣಗೆರೆ ರಂಗಮಂದಿರಕ್ಕೆ 2010ರಲ್ಲಿ ಮಂಜೂರು ನೀಡಿದಾಗ ಮೂರೂವರೆ ಕೋಟಿ ರೂ.ಗೆ ನಿರ್ಮಾಣ ಮಾಡಬೇಕಿತ್ತು. ನಂತರ ನಾಲ್ಕೂವರೆ ಕೋಟಿ ರೂ.ಗೆ ಹೆಚ್ಚಿಸಿ ಪ್ರಸ್ತಾವನೆ ಸಲ್ಲಿಸಿದರು. ಈ ಮೊತ್ತವನ್ನು ಇಲಾಖೆ ಹಂತಹಂತವಾಗಿ ನೀಡಿದೆ.
ಆದರೆ ಈಗ ಜಿಲ್ಲಾಧಿಕಾರಿಗಳು ಎಂಟೂವರೆ ಕೋಟಿ ರೂ. ಪ್ರಸ್ತಾವನೆ ಕಳಿಸಿದ್ದಾರೆ. ಸರ್ಕಾರದ ಪೂರ್ವಾನುಮತಿಯನ್ನು ಪಡೆದುಕೊಳ್ಳದೆ ಹೀಗೆ ಮಾಡಿದ್ದಾರೆ. ವೆಚ್ಚದ ಅಂದಾಜು ಡಬಲ್ ಆದಾಗ ಇಲಾಖೆಯಿಂದಲೇ ಕೊಡಬೇಕು ಎಂದರೆ ಕಷ್ಟ. ಹಣ ಸಹಾಯಕ್ಕಾಗಿ ಆರ್ಥಿಕ ಇಲಾಖೆಯನ್ನು ಸಂಪರ್ಕಿಸಿದ್ದೇವೆ ಎಂದರು.
ಇದನ್ನೂ ಓದಿ | ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ: ವಿದ್ಯುತ್ ಸಂಪರ್ಕ ಪಡೆಯಲು ʼಒಸಿʼ ಬೇಡ
ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಸಿ.ಟಿ. ರವಿ, ದಾವಣಗೆರೆಯ ಆ ರಂಗಮಂದಿರ ಡಿಸೈನ್ ಮಾಡಿದ ಇಂಜಿನಿಯರ್‌ಗೆ ವಿಶ್ವೇಶ್ವರಯ್ಯ ಪ್ರಶಸ್ತಿ ನೀಡಬೇಕು ಎಂದು ಗೇಲಿ ಮಾಡಿದರು. ನಾನು ಸಚಿವನಾಗಿದ್ದಾಗ ಅಲ್ಲಿಗೆ ಭೇಟಿ ನೀಡಿದ್ದೆ. ಅದನ್ನು ರಂಗಮಂದಿರದಂತೆ ಡಿಸೈನ್ ಮಾಡಿಲ್ಲ, ಗೋಡೌನ್ ರೀತಿ ಮಾಡಲಾಗಿದೆ. ರಂಗಮಂದಿರಕ್ಕೆ ಯಾವುದೇ ರೀತಿಯಲ್ಲಿ ಅದು ಸೂಕ್ತವಾಗಿಲ್ಲ. ಅದಕ್ಕೇ ಮತ್ತಷ್ಟು ಹಣ ಹಾಕಿದರೆ, ಅದನ್ನು ನಿರ್ಧಾರಿತ ಉದ್ದೇಶಕ್ಕೆ ಬಳಸಲು ಆಗುವುದಿಲ್ಲ. ಇನ್ನೂ ನಾಲ್ಕು ಕೋಟಿ ರೂ. ಕೊಟ್ಟರೂ ಯಾವುದೇ ಉಪಯೋಗ ಆಗುವುದಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ರವೀಂದ್ರನಾಥ್, ದಾವಣಗೆರೆಯಲ್ಲಿ ಗೋಡೌನ್‌ಗಳೇ ಹೆಚ್ಚಾಗಿವೆ. ಹಾಗಾಗಿ ಇದನ್ನೂ ಗೋಡೌನ್ ರೀತಿಯಲ್ಲೇ ಕಟ್ಟಿರಬಹುದು ಎಂದು ಹಾಸ್ಯಚಟಾಕಿ ಹಾರಿಸಿದರು. ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಮಾತನಾಡಿ, ಅಬ್ಬಕ್ಕ ಭವನದ ವಿಚಾರದಲ್ಲೂ ಇದೇ ರೀತಿ ವಿಳಂಬ ಮಾಡಿ ವೆಚ್ಚ ಹೆಚ್ಚಾಗುತ್ತಿದೆ ಎಂದರು.
ಇದೆಲ್ಲವನ್ನೂ ಕೇಳುತ್ತಿದ್ದ ಸ್ಪೀಕರ್ ಕಾಗೇರಿ, ಅಧಿಕಾರಿಗಳ ವಿರುದ್ಧ ಗರಂ ಆದರು. ಸಮಾಜದ ಸ್ಥಿತಿ ಹೇಗಿದೆ ಎಂದರೆ, ಶಾಸಕಾಂಗದವರು ಮಾತ್ರ ಎಲ್ಲದಕ್ಕೂ ಹೊಣೆಗಾರ ಎನ್ನಲಾಗುತ್ತದೆ. ಕಾರ್ಯಾಂಗದವರು ಯಾವುದಕ್ಕೂ ಹೊಣೆಗಾರರಲ್ಲ ಎಂಬ ಸ್ಥಿತಿ ಇದೆ. ಮಾಧ್ಯಮಗಳು, ಸಾರ್ವಜನಿಕರ ನಡುವೆ ನಾವೇ ಅಪರಾಧಿಗಳಾಗಿದ್ದೇವೆ. ಅಧಿಕಾರಿಗಳು ಮಾತ್ರ ಅತ್ಯಂತ ಸೇಫ್ ಆಗಿ ಕೆಲಸ ಮಾಡಿ ನಿವೃತ್ತ ಆಗುತ್ತಾರೆ. ಅವರಿಗೆ ಯಾವುದೇ ಹಂತದಲ್ಲಿ ಉತ್ತರದಾಯಿತ್ವವೇ ಇಲ್ಲ. ಬ್ರಿಟಿಷರು ಬಿಟ್ಟು ಹೋಗಿದ್ದನ್ನು ಯಾರಾದರೂ ಮುಂದುವರಿಸಬೇಕಲ್ಲ ಹಾಗಾಗಿ ನಾವಿದ್ದೇವೆ ಎಂದು ಒಬ್ಬರು ಅಧಿಕಾರಿ ಹೇಳಿದ್ದರು. ಸಂವಿಧಾನಬದ್ಧವಾದ ಜವಾಬ್ದಾರಿಗಳನ್ನು ಮರೆತು ಸುಮ್ಮನಿದ್ದಾರೆ.
ಚುನಾವಣೆ ಸುಧಾರಣೆಗಳಲ್ಲಿ ಕಾರ್ಯಾಂಗದ ಜವಾಬ್ದಾರಿಯೂ ಇದೆ. ಆದರೆ ಈ ವಿಷವರ್ತುಲದಲ್ಲಿ ನಾವು ಮಾತ್ರ ಸಿಕ್ಕಿಕೊಂಡಿದ್ದೇವೆ. ಯಾರ ಹಣವನ್ನು ಯಾರು ವೆಚ್ಚ ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಕೊನೆಯದಾಗಿ ಮಾತನಾಡಿದ ಸುನಿಲ್ ಕುಮಾರ್, ಭವಿಷ್ಯದಲ್ಲಿ ರಂಗಮಂದಿರಗಳ ನಿರ್ಮಾಣ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಸದ್ಯ 15 ಜಿಲ್ಲೆಯಲ್ಲಿ ರಂಗಮಂದಿರ ನಿರ್ಮಾಣವಾಗಬೇಕಿದೆ. ಆರರಲ್ಲಿ ಪ್ರಗತಿಯಲ್ಲಿದ್ದು, ಉಳಿದ ಕಡೆ ಆರಂಭವಾಗಬೇಕಿದೆ.
ದಾವಣಗೆರೆಯಷ್ಟೆ ಅಲ್ಲದೆ, ಬೇರೆ ಬೇರೆ ರಂಗಮಂದಿರಗಳಲ್ಲೂ ಹೀಗೆಯೇ ಮೂರ್ನಾಲ್ಕು ಪಟ್ಟು ಹೆಚ್ಚಳ ಮಾಡಲಾಗಿದೆ. ಹಾಗಾಗಿ ಈಗ ಇಲಾಖೆಯಿಂದ ನಿರ್ಧಾರ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾ ರಂಗಮಂದಿರಕ್ಕೆ ಮೂರು ಕೋಟಿ ರೂ., ತಾಲೂಕು ರಂಗಮಂದಿರಕ್ಕೆ ಒಂದು ಕೋಟಿ ರೂ. ನೀಡುತ್ತೇವೆ. ಉಳಿದ ಮೊತ್ತವನ್ನು ಸ್ಥಳೀಯವಾಗಿ ಹೊಂದಿಸಿಕೊಳ್ಳಬೇಕು ಎಂದು ತೀರ್ಮಾನಿಸಿದ್ದೇವೆ. ಆದರೆ ದಾವಣಗೆರೆ ರಂಗಮಂದಿರದ ಕುರಿತು ರವೀದ್ರನಾಥ್ ಅವರ ಜತೆ ಚರ್ಚಿಸುತ್ತೇನೆ, ಸಿ.ಟಿ. ರವಿ ಅವರು ಹೇಳಿದ ವಿಚಾರದಲ್ಲೂ ಚಿಂತನೆ ನಡೆಸಿ ತೀರ್ಮಾನಿಸುತ್ತೇವೆ ಎಂದರು.
ಇದನ್ನೂ ಓದಿ | ದಲಿತರು ಇಂಗ್ಲಿಷ್ ಕಲಿಯಬಾರದೆ?: ಸುನಿಲ್ ಕುಮಾರ್‌ಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ ಸುರಿಮಳೆ