ಬೆಂಗಳೂರು: ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವೆ ಜೂನ್ 26ರಿಂದ ವಂದೇ ಭಾರತ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭವಾಗಲಿದೆ. (Vande Bharat Express) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. 490 ಕಿ.ಮೀಗಳ ಪ್ರಾಯೋಗಿಕ ಸಂಚಾರ ಸೋಮವಾರ ಶುರುವಾಗಿದೆ. ರೈಲಿನ ಬೋಗಿಗಳು ಚೆನ್ನೈನ ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಾಗಿದೆ. ಇದು ಕರ್ನಾಟಕಕ್ಕೆ ಎರಡನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಾಗಿದೆ.
ರೈಲಿನ ವೇಳಾಪಟ್ಟಿ ಹೀಗಿದೆ: ನೈಋತ್ಯ ರೈಲ್ವೆಯ ಪ್ರಕಾರ ಹೊಸ ಎಂಟು ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್, ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 5.45ಕ್ಕೆ ಹೊರಡಲಿದೆ. ಧಾರವಾಡಕ್ಕೆ ಮಧ್ಯಾಹ್ನ 12.45ಕ್ಕೆ ತಲುಪಲಿದೆ.
ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿಗೆ ಹೊರಡಲಿದೆ. ರಾತ್ರಿ 8.10ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ತಲುಪಲಿದೆ. ಮಂಗಳ ವಾರ ಹೊರತುಪಡಿಸಿ ವಾರದ ಉಳಿದೆಲ್ಲ ದಿನಗಳಲ್ಲೂ ವಂದೇ ಭಾರತ್ ಎಕ್ಸ್‌ಪ್ರೆಸ್, ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸಲಿದೆ. ವಂದೇ ಭಾರತ್ ರೈಲು ಬೆಂಗಳೂರು-ಧಾರವಾಡ ನಡುವೆ 7 ಗಂಟೆಗಳಲ್ಲಿ ಸಂಚರಿಸಲಿದೆ. ಇತರ ರೈಲುಗಳಿಗೆ 9-10 ಗಂಟೆ ಬೇಕಾಗುತ್ತದೆ.
#WATCH | Bengaluru, Karnataka: The trial run of Vande Bharat Express between Bengaluru to Dharwad railway stations started earlier this morning.
— ANI (@ANI) June 19, 2023
The train left Bengaluru at 5:45 AM today. pic.twitter.com/YO5KdstlJJ
ಕಳೆದ ನವೆಂಬರ್‌ನಲ್ಲಿ ಚೆನ್ನೈ-ಬೆಂಗಳೂರು-ಮೈಸೂರು ನಡುವೆ ವಂದೇಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಾಗಿತ್ತು. ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಯಶ್ವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ಸ್ವಲ್ಪ ಹೊತ್ತು ನಿಲ್ಲಲಿದೆ.
ಕೇಂದ್ರ ಸರ್ಕಾರವು ಮುಂದಿನ ಆರು ವರ್ಷದಲ್ಲಿ 80 ವಂದೇ ಭಾರತ್ ಸ್ಲೀಪರ್ ರೈಲುಗಳ ಉತ್ಪಾದನೆಗಾಗಿ ಗುತ್ತಿಗೆ ನೀಡಿದೆ. ಇದರಿಂದ ರೈಲು ಪ್ರಯಾಣಿಕರು ಮತ್ತಷ್ಟು ಉತ್ಕೃಷ್ಟ ಸೌಕರ್ಯಗಳನ್ನು, ಆಹ್ಲಾದಕರ ಪ್ರಯಾಣದ ಅನುಭವವನ್ನು ಪಡೆಯಲಿದ್ದಾರೆ. ತೀತಾಗಢ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಹಾಗೂ ಸರ್ಕಾರದ ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BHEL) ಸಂಸ್ಥೆಗಳು ರೈಲ್ವೆ ಇಲಾಖೆಗೆ ಮುಂದಿನ ಆರು ವರ್ಷದಲ್ಲಿ ಅತ್ಯಾಧುನಿಕ 80 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ತಯಾರಿಸಿ ಕೊಡಲಿವೆ. “2029ರ ವೇಳೆಗೆ 80 ವಂದೇ ಭಾರತ್ ರೈಲುಗಳ ನಿರ್ಮಾಣಕ್ಕಾಗಿ ರೈಲ್ವೆ ಇಲಾಖೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ” ಎಂದು ಎರಡೂ ಕಂಪನಿಗಳು ಜಂಟಿ ಪ್ರಕಟಣೆ ತಿಳಿಸಿವೆ.
ರೈಲಿನ ವಿಶೇಷತೆ ಏನು? ವಂದೇ ಭಾರತ್ ರೈಲಿನಲ್ಲಿ ಸ್ವಯಂಚಾಲಿತ ಬಾಗಿಲುಗಳಿರುತ್ತವೆ. ಮನರಂಜನೆಯ ಉದ್ದೇಶಕ್ಕೆ ಹಾಟ್ ಸ್ಪಾಟ್ ವೈ-ಫೈ ಸೌಲಭ್ಯ ಸಿಗುತ್ತದೆ. ಸೀಟುಗಳು ಸುಖಾಸೀನ ಕಲ್ಪಿಸುತ್ತವೆ. ಎಲ್ಲ ಶೌಚಾಲಯಗಳು ಬಯೊ-ವಾಕ್ಯೂಮ್ ಮಾದರಿಯದ್ದಾಗಿದೆ. ಅಡುಗೆ ಕೋಣೆಯೂ ಇದ್ದು, ಬಿಸಿ ಊಟ, ಬಿಸಿ ಮತ್ತು ತಣ್ಣೀರು ವಿತರಣೆಯ ಸೌಲಭ್ಯವಿದೆ. ಪ್ರತಿ ಬೋಗಿಯಲ್ಲೂ ವೈ-ಫೈ ಕಂಟೆಂಟ್ ಸಿಗುತ್ತದೆ. ಪ್ರತಿ ಕೋಚ್‌ನಲ್ಲೂ 32 ಇಂಚಿನ ಸ್ಕ್ರೀನ್ ಇರುತ್ತದೆ. ವೀಕ್ಷಕರಿಗೆ ನ್ಯೂಸ್ ಹಾಗೂ ಇನ್ಫೋಟೈನ್‌ಮೆಂಟ್ ದೊರೆಯುತ್ತದೆ. ವಿಕಲಚೇತನರಿಗೆ ಸೀಟ್ ಹ್ಯಾಂಡಲ್, ಬ್ರೈಲ್ ಲಿಪಿಯಲ್ಲಿ ಸೀಟಿನ ಸಂಖ್ಯೆ, 180 ಡಿಗ್ರಿ ಸುತ್ತುವ ಆಸನಗಳು ಎಕ್ಸಿಕ್ಯುಟಿವ್ ಬೋಗಿಗಳಲ್ಲಿ ಲಭ್ಯ. ವಂದೇ ಭಾರತ್ ಎಕ್ಸ್‌ಪ್ರೆಸ್ 392 ಟನ್ ಭಾರವಿದೆ. 16 ಬೋಗಿಗಳನ್ನು ಒಳಗೊಂಡಿದೆ. ಒಟ್ಟು ಸೀಟುಗಳ ಸಾಮರ್ಥ್ಯ 1128 ಆಗಿದೆ.
ಟಿಕೆಟ್ ದರ ಎಷ್ಟು?
ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವೆ ಜೂನ್ 26ರಿಂದ ಆರಂಭವಾಗಲಿರುವ ವಂದೇ ಭಾರತ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರತಿ ಪ್ರಯಾಣಿಕರಿಗೆ ಏಕಮುಖ ಸಂಚಾರಕ್ಕೆ 1205 ರೂ. ಹಾಗೂ ಏಸಿ ಚೇರ್ ಕಾರ್ ಕ್ಲಾಸ್‌ನಲ್ಲಿ 2395 ರೂ. ಟಿಕೆಟ್ ದರ ಇರಬಹುದು ಎಂದು ಮೂಲಗಳು ತಿಳಿಸಿವೆ. ಟಿಕೆಟ್ ದರವು ಕೇಟರಿಂಗ್ ಶುಲ್ಕವನ್ನು ಒಳಗೊಂಡಿದೆ.
ಇದನ್ನೂ ಓದಿ: Vande Bharat Trains: 6 ವರ್ಷದಲ್ಲಿ 80 ವಂದೇ ಭಾರತ್ ಸ್ಲೀಪರ್ ರೈಲು ತಯಾರಿ; 24 ಸಾವಿರ ಕೋಟಿ ರೂ. ಟೆಂಡರ್ ಯಾರಿಗೆ?