ಬೆಂಗಳೂರು: ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಮುಂದೊಂದು ದಿನ ನೀವೆಲ್ಲರೂ ಡಿ.ಕೆ. ಶಿವಕುಮಾರ್ ಸಹ ಆಗಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿಶ್ವ ತಂಬಾಕು ವಿರೋಧಿ ದಿನದ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಜಾಥಾ ಉದ್ಘಾಟಿಸಿ ಮಾತನಾಡಿದರು. ನನಗೆ 60 ತುಂಬಿದ್ದರೂ ವಿದ್ಯಾರ್ಥಿಗಳನ್ನು ನೋಡಿದ್ರೆ ಸ್ಪೂರ್ತಿ ಬರುತ್ತೆ. ಇಂದು ವಿಶ್ವಕ್ಕೆ ಜಾಗೃತಿ ಮೂಡಿಸುವ ದಿನ. ಬೆಂಗಳೂರಿನಲ್ಲಿ ಓದಿರುವ ವಿದ್ಯಾರ್ಥಿಗಳು ಅಂತಾರಾಷ್ಟ್ರಿಯ ಮಟ್ಟದಲ್ಲಿ ಹೆಸರು ಪಡೆದಿದ್ದಾರೆ.
ಇಲ್ಲಿ ಕುಳಿತಿರುವ ವಿದ್ಯಾರ್ಥಿಗಳು ಏನ್ ಬೇಕಾದ್ರೂ ಆಗಬಹುದು. ಮುಂದೊಂದು ದಿನ ಡಿ.ಕೆ. ಶಿವಕುಮಾರ್ ಕೂಡ ಆಗಬಹುದು. ನಾನು ಟೇಪ್ ಕಟ್ ಮಾಡಿ ಹೋಗೋದಕೆ ಬಂದಿಲ್ಲ. ನಾನು ನಿಮ್ಮ ಜತೆ ಹೆಜ್ಜೆ ಹಾಕೋದಕ್ಕೆ ಬಂದಿದ್ದೇನೆ, ಯಾರೂ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲ. ಡ್ರಗ್ಸ್ ನಿಂದ ದೂರ ಉಳಿಯಿರಿ. ಡ್ರಗ್ಸ್ ನಿಂದ ಇತ್ತೀಚೆಗೆ ಚಲನಚಿತ್ರ ನಟ ನಟಿಯರು, ದೊಡ್ಡವರ ಮಕ್ಕಳ ಕಥೆ ಏನಾಯ್ತು ಅನ್ನೋದು ನಿಮಗೆಲ್ಲ ಗೊತ್ತಿದೆ. ನೀವು ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವವರು. ಹೀಗಾಗಿ ಡ್ರಗ್ಸ್‌ನಂತಹ ಮಾದಕ ವಸ್ತುಗಳಿಂದ ದೂರ ಇರಿ ಎಂದು ತಿಳಿಸಿದರು.
ಇದನ್ನೂ ಓದಿ: Drugs case: ಗಾಂಜಾ ಸಾಗಾಟಕ್ಕೆ ಪೆಡ್ಲರ್‌ಗಳ ಮಾಸ್ಟರ್ ಪ್ಲ್ಯಾನ್; ರೈಲು ಬೋಗಿ ಅಡಿಯಲ್ಲಿ ಬಚ್ಚಿಟ್ಟ ಕಿಡಿಗೇಡಿಗಳು
ಚಾಲನೆ ನೀಡಿದ ಬಳಿಕ ಮಕ್ಕಳ ಜತೆಗೆ ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೂ ಕಾಲ್ನಡಿಗೆಯಲ್ಲಿ ಡಿ.ಕೆ. ಶಿವಕುಮಾರ್ ತೆರಳಿದರು.