Site icon Vistara News

Death Mystery | ಚಂದ್ರಶೇಖರ್‌ ಸಾವಿನ ಸುತ್ತ ಹಲವು ಅನುಮಾನ; ಕಾರಣಕ್ಕಾಗಿ ಪೊಲೀಸರ ತೀವ್ರ ತನಿಖೆ!

ರೇಣುಕಾಚಾರ್ಯ

ದಾವಣಗೆರೆ: ಹೊನ್ನಾಳಿ ಹೊರ ವಲಯದ ಕಡದಕಟ್ಟೆ ಗ್ರಾಮ ಸಮೀಪ ಇರುವ ತುಂಗಾ ಮೇಲ್ದಂಡೆ ನಾಲೆಗೆ ಕಾರು ಸಮೇತ ಬಿದ್ದು ಮೃತಪಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರನ ಪುತ್ರ‌ ಚಂದ್ರಶೇಖರ್‌ (೨೪) ಸಾವಿನ ಬಗ್ಗೆ ಹಲವು ಅನುಮಾನಗಳು (Death Mystery) ಮೂಡಿವೆ. ಬಹುಮುಖ್ಯವಾಗಿ ಕಾರಿನ ಹಿಂಬದಿ ಸೀಟ್‌ನಲ್ಲಿ ಶವ ಪತ್ತೆಯಾಗಿರುವುದು ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಚಂದ್ರಶೇಖರ್‌ ಅವರೇ ಕಾರನ್ನು ಡ್ರೈವ್‌ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಅವರು ಅತಿ ವೇಗವಾಗಿ ಕಾರು ಚಲಾಯಿಸಿ ನಿಯಂತ್ರಣ ತಪ್ಪಿ ಕಾರು ನಾಲೆಗೆ ಹಾರಿ ಬಿದ್ದಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆದರೆ, ಚಂದ್ರಶೇಖರ್‌ ಅವರ ಶವವು ಹಿಂಬದಿ ಸೀಟ್‌ನಲ್ಲಿ ಹೇಗೆ ಬಂತು ಎಂಬುದೇ ಎಲ್ಲರ ಅನುಮಾನಕ್ಕೆ ಕಾರಣವಾಗಿದೆ. ಕಾರಣ, ಕಾರಿನ ಚಾಲನಾ ಸೀಟ್‌ನಲ್ಲಿ ಏರ್‌ ಬ್ಯಾಗ್‌ ಓಪನ್‌ ಆಗಿದೆ. ಸೀಟ್‌ ಬೆಲ್ಟ್‌ ಹಾಕಿದ್ದರಷ್ಟೇ ಅಪಘಾತದ ಸಂದರ್ಭದಲ್ಲಿ ಸೀಟ್‌ ಬೆಲ್ಟ್‌ ತೆರೆದುಕೊಳ್ಳುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಚಂದ್ರಶೇಖರ್‌ ಅವರು ಸೀಟ್‌ ಬೆಲ್ಟ್‌ ಹಾಕಿದ್ದರೆ ಚಾಲನಾ ಸೀಟ್‌ನಲ್ಲಿಯೇ ಇರಬೇಕಿತ್ತು. ಹೇಗೆ ಅವರ ಶವ ಹಿಂಬದಿ ಸೀಟ್‌ಗೆ ಹೋಗಿದೆ ಎಂಬ ಪ್ರಶ್ನೆ ಮೂಡಿದೆ.

ನಾಲೆಯ ಸೇತುವೆಯ ಕೆಳಗೆ ಕಾರು ಪತ್ತೆಯಾಗಿದೆ. ಆದರೆ, ಸೇತುವೆಯ ಯಾವ ಭಾಗಕ್ಕೂ ಹಾನಿಯಾಗಿಲ್ಲ. ಕಾರು ಕೆಳಗೆ ಬೀಳಬೇಕೆಂದರೆ ಸೇತುವೆಯ ತಡೆಗೋಡೆಗಾದರೂ ಹೊಡೆದು ಬೀಳಬೇಕಿತ್ತು. ಇಲ್ಲ ಅಂತಹ ಯಾವುದೇ ಕರುಹುಗಳೂ ಪತ್ತೆಯಾಗಿಲ್ಲ. ಅಲ್ಲದೆ, ಸುತ್ತಮುತ್ತಲು ಸಹ ಕಾರು ಹಾಗೇ ಹೋದ ಬಗ್ಗೆಯೂ ಕಂಡುಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಸೇತುವೆಯ ಸುತ್ತಮುತ್ತಲ ಪ್ರದೇಶದಲ್ಲಿ ಕಾರಿನ ಬಿಡಿಭಾಗಗಳು ಪತ್ತೆಯಾಗಿರುವುದರಿಂದ ಅಲ್ಲಿ ಯಾವುದಾದರೂ ಜಾಗದಲ್ಲಿ ಗುದ್ದಿ ಹೋಗಿ ನಾಲೆಗೆ ಬಿದ್ದಿರಬಹುದೇ ಎಂಬ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ | Missing Case | ರೇಣುಕಾಚಾರ್ಯ ತಮ್ಮನ ಮಗ ಶವವಾಗಿ ಪತ್ತೆ, ಕಾರಿನ ಸಹಿತ ತುಂಗಾ ಮೇಲ್ದಂಡೆ ನಾಲೆಗೆ ಬಿದ್ದು ಸಾವು

ಕಾರಿನಲ್ಲಿ ಇಬ್ಬರು ಇದ್ದರೇ?
ಇನ್ನು ನ್ಯಾಮತಿ ವರೆಗೆ ಕಾರು ಹೋಗಿರುವುದು ಸಿಸಿ ಟಿವಿಯಲ್ಲಿ ಪತ್ತೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿದಾಗ ಚಂದ್ರಶೇಖರ್‌ ಕಾರಿನಲ್ಲಿ ಇನ್ನೊಬ್ಬರು ಇರುವುದು ಗೊತ್ತಾಗಿತ್ತು. ಹೀಗಾಗಿ ಕಾರಿನಲ್ಲಿ ಇದ್ದ ಇನ್ನೊಬ್ಬರು ಯಾರು? ಅವರು ಬಳಿಕ ಎಲ್ಲಿ ಹೋದರು? ಅವರೂ ನಾಲೆಯಲ್ಲಿ ಬಿದ್ದಿದ್ದಾರೆಯೇ? ಇಲ್ಲವೇ ದಾರಿ ಮಧ್ಯೆಯೇ ಇಳಿದು ಹೋಗಿದ್ದಾರೆಯೇ? ಎಂಬಿತ್ಯಾದಿ ಅಂಶಗಳ ಬಗ್ಗೆಯೂ ಪೊಲೀಸರಿಗೆ ಅನುಮಾನ ಮೂಡಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಂಬ್ಯುಲೆನ್ಸ್‌ನಲ್ಲಿ ಶವ ರವಾನೆ
ಕ್ರೇನ್‌ ಮೂಲಕ ಕಾರನ್ನು ಮೇಲಕ್ಕೆತ್ತಲಾಗಿದ್ದು, ಕಾರಿನಲ್ಲಿ ಏರ್‌ ಬ್ಯಾಗ್‌ ಓಪನ್‌ ಆಗಿತ್ತು. ಮುಂಭಾಗದ ಗಾಜು ಒಡೆದು ಹೋಗಿದ್ದಲ್ಲದೆ, ಕಾರು ತೀವ್ರವಾಗಿ ನಜ್ಜುಗುಜ್ಜಾಗಿತ್ತು. ಇದರಲ್ಲಿ ಕೊಳೆತ ಸ್ಥಿತಿಯಲ್ಲಿ ಚಂದ್ರಶೇಖರ್‌ ಶವ ಪತ್ತೆಯಾಗಿದೆ. ಶವವನ್ನು ಹೊರಗೆ ತೆಗೆದಿರುವ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಆಂಬ್ಯುಲೆನ್ಸ್‌ ಮೂಲಕ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಶವವನ್ನು ರವಾನೆ ಮಾಡಿದ್ದಾರೆ.

ಸ್ಥಳಕ್ಕೆ ಎಫ್‌ಎಸ್‌ಎಲ್‌ ತಂಡ ಆಗಮನ
ಕಾರು ಪತ್ತೆಯಾಗಿರುವ ತುಂಗಾ ಮೇಲ್ದಂಡೆ ಪ್ರದೇಶಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ತಜ್ಞರ ತಂಡ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆಗೆ ಮುಂದಾಗಿದೆ. ಕಾರು ಸೇರಿದಂತೆ ಘಟನಾ ಸ್ಥಳದ ಸುತ್ತಮುತ್ತ ಪರಿಶೀಲನೆ ನಡೆಸಲಿದೆ.

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಸ್ಥಳಕ್ಕೆ ಚಂದ್ರಶೇಖರ್‌ ತಂದೆ ಎಂ.ಪಿ. ರಮೇಶ್‌, ದೊಡ್ಡಪ್ಪ, ಶಾಸಕ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಕುಟುಂಬಸ್ಥರು ಭೇಟಿ ನೀಡಿದ್ದು, ಆಕ್ರಂದನ ಮುಗಿಲುಮುಟ್ಟಿದೆ. “ನಿನ್ನ ಸಾವಿಗೆ ನಾನೇ ಕಾರಣ ಚಂದ್ರೂ… ನೀನು ನನ್ನ ಮಗ ಕಣೋ.. ಚಂದ್ರೂ ನನ್ನನ್ನೂ ಕರೆದುಕೊಂಡು ಬಿಡೋ…” ಎಂದೆಲ್ಲಾ ರೇಣುಕಾಚಾರ್ಯ ಗೋಳಿಟ್ಟಿದ್ದಾರೆ.

ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದ ಚಂದ್ರಶೇಖರ್
ಎಂ.ಪಿ.ರೇಣುಕಾಚಾರ್ಯ‌ ಸಹೋದರ ಎಂ.ಪಿ.ರಮೇಶ್ ಅವರ ಮೊದಲನೇ ಪತ್ನಿಯ ಪುತ್ರ ಚಂದ್ರಶೇಖರ್ ಅವರು ಶಿವಮೊಗ್ಗದಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪೂರೈಸಿದ್ದರು. ಆದರೆ, ದೊಡ್ಡಪ್ಪನ ಜತೆ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಇವರು, ರೇಣುಕಾಚಾರ್ಯ ಅವರ ರಾಜಕೀಯ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಅಲ್ಲದೆ, ಈ ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ | Missing case | ಅಧ್ಯಾತ್ಮದ ಕಡೆ ಹೆಚ್ಚು ಒಲವು ಹೊಂದಿದ್ದ ಚಂದ್ರಶೇಖರ್

ಸುರಹೊನ್ನೆಯಿಂದ ಮುಂದಿನ ಸುಳಿವಿರಲಿಲ್ಲ
ಭಾನುವಾರ (ಅ.೩೦) ರಾತ್ರಿ ಚಂದ್ರಶೇಖರ್ ಕಾರು ಶಿವಮೊಗ್ಗ-ನ್ಯಾಮತಿ ಮಧ್ಯೆ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿವಮೊಗ್ಗದಿಂದ ಬಂದ ಕಾರು ಸುರಹೊನ್ನೆ ಬಳಿ ಹಾದು ಹೋಗಿರುವುದು ಕಂಡುಬಂದಿದೆ. ಆದರೆ, ಸುರಹೊನ್ನೆಯಿಂದ ಹೊನ್ನಾಳಿಗೆ ಹೋಗಿರುವ ಬಗ್ಗೆ ಸುಳಿವು ಸಿಕ್ಕಿರಲಿಲ್ಲ.

ಚಂದ್ರಶೇಖರ್ ತೆಗೆದುಕೊಂಡು ಹೋಗಿದ್ದ ವೈಟ್‌ ಕ್ರೆಟಾ ಕಾರು ಭಾನುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸುರಹೊನ್ನೆ ಬಳಿ ಹಾದು ಹೋಗಿರುವ ವಿಡಿಯೊ ಮಾತ್ರ ಲಭ್ಯವಾಗಿತ್ತು. ಸುರಹೊನ್ನೆ ಬಳಿ ಎರಡು ಕಾರು ಜತೆಯಲ್ಲಿ ಹಾದು ಹೋಗಿವೆ. ಒಂದು ಕಾರು ಚಂದ್ರಶೇಖರ್ ಅವರದ್ದು ಎನ್ನಲಾಗಿದ್ದು, ಇನ್ನೊಂದು ಕಾರು ಯಾರದ್ದು ಎಂಬುವುದರ ಬಗ್ಗೆಯೂ ತನಿಖೆ ನಡೆದಿತ್ತು. ಸುರಹೊನ್ನೆಯಿಂದ ಹೊನ್ನಾಳಿಗೆ ಕಾರು ಬಂದ ಬಗ್ಗೆ ಯಾವುದೇ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಹಲವು ಅನುಮಾನ ಮೂಡಿತ್ತು.

ನಾಪತ್ತೆಗೂ ಮುನ್ನ ವಿನಯ್‌ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು
ಕಳೆದ ಭಾನುವಾರ ಚಂದ್ರಶೇಖರ್‌ ಶಿವಮೊಗ್ಗದ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದರು. ಜತೆಗೆ ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಹೊನ್ನಾಳಿಗೆ ಬಂದಿದ್ದರು ಎಂದು ತಿಳಿದು ಬಂದಿತ್ತು. ಆ ಬಳಿಕ ಭಾನುವಾರ ಸಂಜೆ ನಾಪತ್ತೆಯಾದವರು ಇನ್ನೂ ಸಿಕ್ಕಿಲ್ಲ. ಹೊನ್ನಾಳಿಯಲ್ಲಿ ಸೋಮವಾರ (ಅ.31) ಫೋನ್‌ ಸ್ವಿಚ್ಡ್‌ ಆಫ್‌ ಆಗಿತ್ತು. ನಂತರ ಇದುವರೆಗೂ ಫೋನ್‌ ಆನ್‌ ಆಗಿಲ್ಲ. ಆದರೆ, ಅಧ್ಯಾತ್ಮದ ಬಗ್ಗೆ ಚಂದ್ರಶೇಖರ್‌ ಅವರಿಗೆ ಒಲವಿದ್ದು, ಅವರು ಮೈಸೂರು ಇಲ್ಲವೇ ಚಾಮರಾಜನಗರ ಅರಣ್ಯ ಭಾಗದಲ್ಲಿ ಇದ್ದಾರೆಂಬ ಶಂಕೆ ಮೇರೆಗೂ ತನಿಖೆ ನಡೆದಿತ್ತು.

ಸಿಪಿಐ ದೇವರಾಜ್ ನೇತೃತ್ವದ ತಂಡ
ಮಣಿಪಾಲ ಠಾಣೆಯ ಸಿಪಿಐ ದೇವರಾಜ್ ಅವರನ್ನು ಈ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸರು ಕರೆಸಿಕೊಂಡಿದ್ದರು. ಈ ಮೊದಲು ಹೊನ್ನಾಳಿಯಲ್ಲಿ‌ ಇವರು ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಿಂಗಳ ಹಿಂದಷ್ಟೇ ವರ್ಗಾವಣೆಯಾಗಿ ಮಣಿಪಾಲ್ ಠಾಣೆಗೆ ಹೋಗಿದ್ದರು. ದಾವಣಗೆರೆಯಲ್ಲಿ ಡಿಸಿಐಬಿ ಬ್ರಾಂಚ್‌ನಲ್ಲಿ ವಿವಿಧ ಪ್ರಕರಣಗಳನ್ನು ನಿರ್ವಹಿಸಿದ್ದ ದೇವರಾಜ್ ಅವರನ್ನು ಪುನಃ ಕರೆಸಿಕೊಳ್ಳಲಾಗಿದ್ದು, ಅವರ ನೇತೃತ್ವದಲ್ಲಿ ತಂಡವೊಂದನ್ನು ರಚನೆ ಮಾಡಲಾಗಿತ್ತು. ಈಗ ತುಂಗಾ ಮೇಲ್ದಂಡೆ ನಾಲೆ ಬಳಿ ಕಾರಿನ ಬಿಡಿಭಾಗಗಳು ಪತ್ತೆಯಾಗಿದ್ದು, ನಾಲೆಗೆ ಬಿದ್ದಿರುವ ಶಂಕೆ ಮೇರೆಗೆ ಹುಡುಕಾಟ ನಡೆದಿತ್ತು.

ಇದನ್ನೂ ಓದಿ | ಬಿಜೆಪಿ ಮುಖಂಡನ ಜತೆ ಗಲಾಟೆ, ಹಲ್ಲೆ; ಶಾಸಕ ರೇಣುಕಾಚಾರ್ಯ ವಿರುದ್ಧ ಆರೋಪ

Exit mobile version