ಕೋಲಾರ: ಬಂಗಾರಪೇಟೆ ಮಾಜಿ ಶಾಸಕ, ಮೂರು ಬಾರಿ ವಿಧಾನಸಭೆ ಪ್ರವೇಶಿಸಿದ್ದ ಸಿ.ವೆಂಕಟೇಶಪ್ಪ (Former MLA C Venkateshappa) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ (Heart Attack). ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕೋಲಾರ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ (Death News).
ಕೋಲಾರ ಜಿಲ್ಲೆಯ ಬಂಗಾರಪೇಟೆ (Bangarapet MLA) ತಾಲ್ಲೂಕು ಬುವನಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿದ್ದ ಸಿ. ವೆಂಕಟೇಶಪ್ಪ ಅವರಿಗೆ 73 ವರ್ಷ. ನವೆಂಬರ್ 9ರಂದು ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಮತ್ತು ಕುಟುಂಬಿಕರು ಸಂಭ್ರಮದಿಂದ ಆಚರಿಸಿದ್ದರು.
ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ರವಾನೆ ಮಾಡಿ ಅಲ್ಲೇ ಅಂತ್ಯಕ್ರಿಯೆ ನಡೆಯಲಿದೆ. ವೆಂಕಟೇಶಪ್ಪ ಮನೆಯ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನೂರಾರು ಬೆಂಬಲಿಗರು ಮತ್ತು ಸಾರ್ವಜನಿಕರು ಮೃತರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉದ್ಘಾಟನೆ ಮಾಡಲಿರುವ ಯರಗೋಳ್ ಡ್ಯಾಂ ಸಮೀಪವೇ ವೆಂಕಟೇಶಪ್ಪ ಅವರ ಗ್ರಾಮವಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಕೂಡಾ ಮೃತರ ಅಂತಿಮ ದರ್ಶನ ಪಡೆಯುವ ಸಾಧ್ಯತೆ ಇದೆ.
ಇದನ್ನು ಓದಿ: Death News: ಹಿರಿಯ ಸಾಹಿತಿ ಪ್ರಾಜ್ಞ ಬಸವಣ್ಯಪ್ಪ ನಿಧನ
ಮೂರು ಬಾರಿ ವಿಧಾನಸಭೆಗೆ ಆಯ್ಕೆ
1978, 1983, 1999ರಲ್ಲಿ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಈಗಿನ ಬಂಗಾರಪೇಟೆ ಅಂದರೆ ಆಗ ಅದು ಬೇತಮಂಗಲ ಕ್ಷೇತ್ರವಾಗಿತ್ತು. ಹಾಗಾಗಿ ಅವರು ಹಿಂದಿನ ಬೇತಮಂಗಲ ಶಾಸಕರಾಗಿದ್ದರು.
ಮಾಜಿ ಶಾಸಕ ಸಿ.ವೆಂಕಟೇಶಪ್ಪ ಅವರು ದೇವರಾಜ ಅರಸು, ಗುಂಡೂರಾವ್ ಹಾಗೂ ಎಸ್.ಎಂ ಕೃಷ್ಣ ಕಾಲದಲ್ಲಿ ವಿಧಾನಸೌಧದ ಮೆಟ್ಟಿಲು ಹತ್ತಿದ್ದರು. ನೇರ ಹಾಗೂ ತಮ್ಮ ನಿಷ್ಠುರ ನಡೆಗೆ ಹೆಸರಾದ ಶಾಸಕ ವೆಂಕಟೇಶಪ್ಪ ಅವರು ಒಮ್ಮೆ ಪಕ್ಷದ ವಿರುದ್ಧ ಬಂಡುಕೋರನಾಗಿಯೂ ಕಣಕ್ಕಿಳಿದು ಗೆದ್ದಿದ್ದರು. ಬಳಿಕ ಮತ್ತೆ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.
ಎರಡು ಬಾರಿ ಕಾಂಗ್ರೆಸ್ ಹಾಗೂ ಒಂದು ಬಾರಿ ಬಂಡಾಯ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದು ಅವರ ವಿಶೇಷ.