Site icon Vistara News

Demand for Bride | 200 ಒಕ್ಕಲಿಗ ವಧುಗಾಗಿ 10 ಸಾವಿರಕ್ಕೂ ಹೆಚ್ಚು ಒಕ್ಕಲಿಗ ವರರ ಸಾಲು!

mandya boys 4

ಮಂಡ್ಯ: ನಮ್ಮ ಮಗನಿಗೆ ಮದುವೆ ಮಾಡಲು ನಿಶ್ಚಯ ಮಾಡಿಕೊಂಡಿದ್ದೇವೆ. ಆದರೆ, ಸೂಕ್ತ ವಧುವೇ ಸಿಕ್ತಿಲ್ಲ, ನಿಮಗೆ ಯಾರಾದರೂ ಗೊತ್ತಿದ್ದಾರೆಯೇ? ಎಂದು ಕೇಳುವುದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಅಂತೆಯೇ ವಧುವನ್ನು ಹುಡುಕಿ ಹುಡುಕಿ ಸಾಕಾಗಿ ವಧು-ವರರ ವೇದಿಕೆ, ಮ್ಯಾಟ್ರಿಮೊನಿ ಮೊರೆ ಹೋಗುವುದೂ ಉಂಟು. ಈ ಹಿಂದೆ ಬ್ರಾಹ್ಮಣ ಸಮುದಾಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ವಧುವಿನ ಕೊರತೆ (Demand for Bride) ಸಮಸ್ಯೆ ಈಗ ಒಕ್ಕಲಿಗ ಸಮುದಾಯವನ್ನೂ ಕಾಡಿದೆ. ಭಾನುವಾರ ಮಂಡ್ಯದಲ್ಲಿ ನಡೆದ ರಾಜ್ಯ ಮಟ್ಟದ ವಧು ವರರ ಸಮಾವೇಶದಲ್ಲಿ ಇಂಥದ್ದೊಂದು ಸಂಗತಿ ಬಹಿರಂಗಗೊಂಡಿದೆ.

Demand for Bride

ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಭಾನುವಾರ ರಾಜ್ಯ ಮಟ್ಟದ ವಧು-ವರ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಧು ಹಾಗೂ ವರರ ಕಡೆಯಿಂದ ಅರ್ಜಿ ಆಹ್ವಾನ ಮಾಡಲಾಗಿತ್ತು. ಜತೆಗೆ ಅವರ ಉಪಸ್ಥಿತಿಯಲ್ಲಿ ಹೊಂದಾಣಿಕೆ ಕೈಗೂಡುತ್ತದೆಯೇ ಎಂದೂ ನೋಡುವ ಉದ್ದೇಶವನ್ನು ಹೊಂದಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿತ್ತು. ಆದರೆ, ಇದಕ್ಕೆ ೨೦೦ ಮಂದಿ ಒಕ್ಕಲಿಗ ಕನ್ಯೆಯರು ಅರ್ಜಿ ಸಹಿತ ಬಂದರೆ, ೧೦ ಸಾವಿರಕ್ಕೂ ಹೆಚ್ಚು ವರರು ಅರ್ಜಿ ಹಿಡಿದು ಬಂದಿದ್ದಾರೆ.

Demand for Bride

ಕ್ಯೂ ನಿಂತ ಸಾವಿರಾರು ಮಂದಿ
ರಾಜ್ಯ ಮಟ್ಟದ ಸಮಾವೇಶ ಇದಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಧುಗಳು ಬರಲಿದ್ದಾರೆಂಬ ಯೋಚನೆಯಲ್ಲಿದ್ದ ವರ ಹಾಗೂ ಪೋಷಕರು ಆದಿಚುಂಚನಗಿರಿಗೆ ದಾಂಗುಡಿ ಇಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಜನ ಒಬ್ಬೊಬ್ಬರಾಗಿ ಸೇರುತ್ತಾ ಸೇರುತ್ತಾ ಸಾವಿರಾರು ಮಂದಿ ಆಗಿದ್ದಾರೆ. ಇದನ್ನು ಕಂಡು ಆಯೋಜಕರು ತಲೆ ಮೇಲೆ ಕೈಹೊತ್ತುಕೊಳ್ಳುವಂತಾಗಿತ್ತು. ಸಾಲಿನಲ್ಲಿ ಕೆಲಕಾಲ ನೂಕುನುಗ್ಗಲಾಗಿದ್ದು, ಜನಜಾತ್ರೆಯೇ ಸೇರಿಕೊಂಡಂತಾಗಿತ್ತು.

Demand for Bride

ಇದನ್ನೂ ಓದಿ | Suicide | 2ನೇ ಮದುವೆ ರದ್ದು; ಮೊದಲ ಪತ್ನಿಯೊಂದಿಗೆ ಯೋಧ ಆತ್ಮಹತ್ಯೆ

ವೇದಿಕೆ ಹತ್ತಲು ವಧುವಿನ ಪೋಷಕರ ಹಿಂದೇಟು
ಈ ವೇಳೆ ವರ ಹಾಗೂ ಆತನ ಪೋಷಕರು ವೇದಿಕೆ ಹತ್ತಿ ತಮ್ಮ ನೌಕರಿ, ಮನೆತನದ ಸಹಿತ ಎಲ್ಲ ವಿವರಗಳನ್ನು ನೀಡುತ್ತಿದ್ದರು. ಆದರೆ, ೧೦ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವರರು ಇರುವುದನ್ನು ಕಂಡ ವಧುವಿನ ಪೋಷಕರು ವೇದಿಕೆ ಹತ್ತಲು ಹಿಂದೇಟು ಹಾಕಿದ್ದು ಕಂಡುಬಂತು. ಅಂಜಿಕೆಯಿಂದಲೇ ಕೆಲವರು ವಿವರಗಳನ್ನು ಹಂಚಿಕೊಂಡರು ಎನ್ನಲಾಗಿದೆ.

ಟ್ರಾಫಿಕ್‌ ಜಾಮ್
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ, ಸಮಾಜ ಸಂಪರ್ಕ ವೇದಿಕೆ (ರಿ) ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಸಮಾವೇಶ ನಡೆದಿದೆ. ಬೆಳಗ್ಗೆ ೯.೩೦ಕ್ಕೆ ಸಮಾವೇಶ ಪ್ರಾರಂಭಗೊಂಡಿತ್ತು. ಆದರೆ, ಅಪಾರ ಪ್ರಮಾಣದಲ್ಲಿ ಜನ ಸೇರಿದ್ದರಿಂದ ಮಧ್ಯಾಹ್ನ ೨.೩೦ರ ವರೆಗೂ ಸಮಾವೇಶ ನಡೆದಿದೆ. ಇಷ್ಟೊಂದು ಜನರ ನಿರೀಕ್ಷೆ ಇಲ್ಲದೇ ಇದ್ದಿದ್ದರಿಂದ ಏಕಾಏಕಿ ಜನರು ಹೆಚ್ಚಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚುಂಚನಗಿರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಸವಾರರು ಸಹ ಪರದಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡುವುದಾಗಿ ಇದೇ ವೇಳೆ ಆಯೋಜಕರು ತಿಳಿಸಿದ್ದಾರೆ.

ಇದನ್ನೂ ಓದಿ | ನನ್ನ ಪತಿ ರಾತ್ರಿ 9ಗಂಟೆವರೆಗೂ ಸ್ನೇಹಿತರೊಂದಿಗೇ ಇರಲಿ, ನಾನು ತೊಂದರೆ ಕೊಡುವುದಿಲ್ಲ; ಮದುವೆ ದಿನ ಒಪ್ಪಂದಕ್ಕೆ ಸಹಿ ಹಾಕಿದ ವಧು

Exit mobile version