ಹಾವೇರಿ: ಶಂಕಿತ ಡೆಂಗ್ಯೂ ಜ್ವರಕ್ಕೆ (Dengue fever) ಜಿಲ್ಲೆಯಲ್ಲಿ 9 ವರ್ಷದ ಮಗು ಬಲಿಯಾಗಿದೆ. ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದ ದ್ಯಾಮಪ್ಪ ಬನ್ನಿಹಟ್ಟಿ ಎಂಬುವವರ ಪುತ್ರಿ ದಿವ್ಯ ದ್ಯಾಮಪ್ಪ ಮೃತ ಮಗು. ಕಳೆದ 12 ದಿನಗಳ ಹಿಂದೆ ಜ್ವರದಿಂದ ಬಳುತ್ತಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮಗು ಕೊನೆಯುಸಿರೆಳೆದಿದೆ.
ಶುಕ್ರವಾರ ತಡರಾತ್ರಿ ಬೆಂಗಳೂರಿನ ಅಂಜನಾಪುರದ 11 ವರ್ಷದ ಬಾಲಕ ಗಗನ್ ಶಂಕಿತ ಡೆಂಗ್ಯೂ ಜ್ವರದಿಂದ ಸಾವಿಗೀಡಾಗಿದ್ದ. ಇದರ ಬೆನ್ನಲ್ಲೇ ಬ್ಯಾಡಗಿ ತಾಲೂಕಿನಲ್ಲಿ 9 ವರ್ಷದ ಬಾಲಕಿ ಮೃತಪ್ಟಿದ್ದಾಳೆ. ರಾಜ್ಯದಲ್ಲಿ ಶುಕ್ರವಾರ 155 ಡೆಂಗ್ಯೂ ಕೇಸ್‌ಗಳು ಪತ್ತೆಯಾಗಿದ್ದವು. ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 107 ಹೊಸ ಕೇಸ್‌ಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟಾರೆ 343 ಸಕ್ರಿಯ ಡೆಂಗ್ಯೂ ಪ್ರಕರಣಗಳು ಇವೆ. ಡೆಂಗ್ಯೂ ಸೋಂಕಿನಿಂದ ಜನವರಿಯಿಂದ ಈವರೆಗೆ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಮಾಹಿತಿ ನೀಡಿತ್ತು.
ನೆನ್ನೆ 899 ಮಂದಿಗೆ ಡೆಂಗ್ಯೂ ಟೆಸ್ಟ್ ನಡೆಸಿದ್ದು, ಈ ಪೈಕಿ 155 ಮಂದಿಗೆ ಸೋಂಕು ದೃಢವಾಗಿತ್ತು. ಬೆಂಗಳೂರಿನಲ್ಲಿ 107, ಚಿತ್ರದುರ್ಗ 10, ದಾವಣಗೆರೆ 4, ಶಿವಮೊಗ್ಗ 9, ಉತ್ತರ ಕನ್ನಡ 2, ವಿಜಯನಗರ 4, ಹಾಸನ 16 ಉಡುಪಿಯಲ್ಲಿ 3 ಕೇಸ್‌ಗಳು ಪತ್ತೆಯಾಗಿದ್ದವು. 343 ಸಕ್ರಿಯ ಪ್ರಕರಣಗಳ ಪೈಕಿ 142 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಸನದಲ್ಲಿ ಒಂದು ವಾರದಲ್ಲಿ ನಾಲ್ವರು ಬಾಲಕಿಯರ ಸಾವು
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ದೊಡ್ಡಳ್ಳಿ ಗ್ರಾಮದಲ್ಲಿ ಬಾಲಕಿಯೊಬ್ಬಳು ಶುಕ್ರವಾರ ಮೃತಪಟ್ಟಿದ್ದಳು. ರಮೇಶ್-ಅಶ್ವಿನಿ ದಂಪತಿಯ ಪುತ್ರಿ ಸಮೃದ್ಧಿ (8) ಮೃತಪಟ್ಟ ಬಾಲಕಿ. ಕಳೆದ ಮೂರ್ನಾಲ್ಕು ದಿನಗಳಿಂದ ಈಕೆ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಮೂರು ದಿನದ ಹಿಂದೆ ಹಿಮ್ಸ್‌ಗೆ ದಾಖಲಾಗಿದ್ದಳು. ಬಾಲಕಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಮೈಸೂರಿನ ಅಪೋಲೊ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಮೃದ್ಧಿ ಸಾವನ್ನಪ್ಪಿದ್ದಳು.
ಇದನ್ನೂ ಓದಿ | Dengue Fever: ಡೆಂಗ್ಯುಗೆ ಕೋವಿಡ್ ಮಾದರಿ ಉಚಿತ ಚಿಕಿತ್ಸೆ ಕೊಡಿ, ಮೆಡಿಕಲ್ ಎಮರ್ಜೆನ್ಸಿ ಘೋಷಿಸಿ: ಡಾ. ಮಂಜುನಾಥ್
ಇದರಿಂದ ಒಂದು ವಾರದಲ್ಲಿ ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯುವಿಗೆ ನಾಲ್ವರು ಬಾಲಕಿಯರು ಬಲಿಯಾದಂತಾಗಿದೆ. ಹೊಳೆನರಸೀಪುರ ತಾಲ್ಲೂಕಿನಲ್ಲೇ ಮೂವರು ಬಾಲಕಿಯರು ಮೃತಪಟ್ಟಿದ್ದಾರೆ. ಅರಕಲಗೂಡು ಮೂಲದ ಒಂದು ಹಾಗು ಹೊಳೆನರಸೀಪುರ ಮೂಲದ ಮೂರು ಕಂದಮ್ಮಗಳು ಸಾವಿಗೀಡಾಗಿವೆ. ಮೂರೂ ಮಕ್ಕಳೂ ತೀವ್ರ ಜ್ವರದಿಂದ ಬಳಲಿದ್ದವು. ಜುಲೈ 1ರಂದು ಅರಕಲಗೂಡು ಮೂಲದ ಅಣ್ಣಪ್ಪಶೆಟ್ಟಿ ಹಾಗು ಪದ್ಮ ದಂಪತಿ ಪುತ್ರಿ ಅಕ್ಷತಾ (13) ಸಾವಿಗೀಡಾಗಿದ್ದಾಳೆ. ಜೂನ್ 30ರಂದು ಹೊಳೆನರಸೀಪುರ ತಾಲ್ಲೂಕಿನ ಹಳ್ಳಿ ಮೈಸೂರು ಮೂಲದ ವರ್ಷಿಕಾ(8) ತೀವ್ರ ಜ್ವರದಿಂದ ಬಳಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಬುಧವಾರ ಹೊಳೆನರಸೀಪುರ ತಾಲೂಕಿನ ಕಲಾಶ್ರೀ ಜಿ.ಎಲ್ (11) ನಿಧನ ಹೊಂದಿದ್ದಳು. ಈಕೆ ಹೊಳೆನರಸೀಪುರ ತಾಲ್ಲೂಕಿನ ಗುಡ್ಡೇನಹಳ್ಳಿ ಗ್ರಾಮದ ಲೋಕೇಶ್ ಮತ್ತು ತನುಜ ಎಂಬವರ ಪುತ್ರಿ.