Site icon Vistara News

Dengue Fever: ಸೊಳ್ಳೆಗಳಿಂದ ದೂರವಿರಿ! ಹೆಚ್ಚುತ್ತಿರುವ ಡೆಂಗ್ಯೂ ಜ್ವರ, 15 ಸಾವಿರ ಪ್ರಕರಣ ದಾಖಲು

dengue flue

ಬೆಂಗಳೂರು: ಬದಲಾದ ವಾತಾವರಣದ ಪರಿಣಾಮ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು (Dengue Fever) ಹೆಚ್ಚಾಗಿ ವರದಿಯಾಗುತ್ತಿದೆ. 15 ಸಾವಿರದ ಗಡಿಯತ್ತ ಸಾಗುತ್ತಿದ್ದು, ಆತಂಕ ಮೂಡಿಸಿದೆ. ಆರೋಗ್ಯ ಇಲಾಖೆ (Health department) ಈ ವಿಚಾರದಲ್ಲಿ ಅಲರ್ಟ್‌ ಆಗಿದೆ.

ರಾಜ್ಯದಲ್ಲಿ ಡೆಂಗ್ಯೂ 14,955 ಪ್ರಕರಣಗಳು ದಾಖಲಾಗಿವೆ. ಒಂದು ತಿಂಗಳ ಅವಧಿಯಲ್ಲಿ 1,829 ಪ್ರಕರಣಗಳು ದೃಢಪಟ್ಟಿವೆ. ಈವರೆಗೆ ರಾಜ್ಯದ 31 ಜಿಲ್ಲೆಗಳಿಂದ 7,282 ಪ್ರಕರಣಗಳು ದೃಢಪಟ್ಟಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 7,673 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ರಾಜ್ಯದಲ್ಲಿ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಡೆಂಗ್ಯೂ ಜ್ವರ ಶಂಕಿತರ ತಪಾಸಣೆ ಮಾಡಲಾಗಿದೆ. ಕಳೆದ ವರ್ಷ ರಾಜ್ಯದಲ್ಲಿ 9,620 ಮಂದಿ ಡೆಂಗ್ಯೂ ಜ್ವರದಿಂದ ಬಳಲಿದ್ದರು. ಕಳೆದ ವರ್ಷ ಡೆಂಗ್ಯೂನಿಂದ 9 ಮಂದಿ ಬಲಿಯಾಗಿದ್ದರು ಕೂಡ. ಈ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಲ್ಕು ಸೇರಿ ಒಟ್ಟು ಒಂಬತ್ತು ಮಂದಿ ಮೃತಪಟ್ಟಿರುವುದು ಖಚಿತಪಟ್ಟಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 52,721 ಡೆಂಗ್ಯು ಶಂಕಿತರನ್ನು ತಪಾಸಣೆ ಮಾಡಲಾಗಿದೆ. ಅವರಲ್ಲಿ 33,326 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ಕಳೆದ ಒಂದು ತಿಂಗಳಲ್ಲಿ 839 ಮಂದಿಯಲ್ಲಿ ಡೆಂಗ್ಯು ದೃಢಪಟ್ಟಿದೆ. ಡೆಂಗ್ಯೂ ಜೊತೆಗೆ 28 ಜಿಲ್ಲೆಗಳಲ್ಲಿ ಚಿಕೂನ್‌ ಗುನ್ಯಾ ಪ್ರಕರಣಗಳೂ ಪತ್ತೆಯಾಗಿದ್ದು, ತಲೆನೋವು ಮೂಡಿಸಿದೆ. 60 ಸಾವಿರಕ್ಕೂ ಅಧಿಕ ಮಂದಿ ಚಿಕೂನ್‌ ಗುನ್ಯಾ ಶಂಕಿತರ ತಪಾಸಣೆ ಮಾಡಲಾಗಿದೆ.

ಸೊಳ್ಳೆಗಳನ್ನು ಆದಷ್ಟು ತಡೆಗಟ್ಟಲು ಸೂಚಿಸಲಾಗಿದೆ. ತೆರೆದ ಪ್ರದೇಶಗಳಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಹುಟ್ಟುತ್ತಿವೆ. ಇವುಗಳನ್ನು ನಿವಾರಿಸಬೇಕು. ಮನೆಗೆ ಹಾಗೂ ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಸುವುದು, ಮಾಸ್ಕಿಟೋ ರಿಪೆಲ್ಲೆಂಟ್‌ಗಳನ್ನು ಬಳಸಲು ಸೂಚಿಸಲಾಗಿದೆ.

ಜಿಲ್ಲೆ- ಪ್ರಕರಣಗಳು
ಕಲಬುರಗಿ- 662
ಮೈಸೂರು – 646
ಉಡುಪಿ – 635
ದಕ್ಷಿಣ ಕನ್ನಡ – 492
ಶಿವಮೊಗ್ಗ – 404
ತುಮಕೂರು – 315
ಚಿತ್ರದುರ್ಗ – 300

ಚಿಕೂನ್ ಗುನ್ಯಾ ಪ್ರಕರಣಗಳು
ಮೈಸೂರು – 196
ವಿಜಯಪುರ – 163
ಕಲಬುರಗಿ – 132
ಶಿವಮೊಗ್ಗದಲ್ಲಿ 125
ಒಟ್ಟು 1,481 ಮಂದಿ

Exit mobile version