Site icon Vistara News

Inside Story: ರಾಜ್ಯಾದ್ಯಂತ ಸಿದ್ದರಾಮಯ್ಯ ಮಾಸ್‌ ಲೀಡರ್‌, ಆದರೆ ಸ್ವಕ್ಷೇತ್ರದಲ್ಲಿ ಗೆಲ್ಲಲು ಹರಸಾಹಸ! ಏಕೆ ಈ ಸ್ಥಿತಿ?

Despite Being A Mass Leader In Karnataka, Why Is Siddaramaiah Strggling To Win In Varuna?

ಸಿದ್ದರಾಮಯ್ಯ

| ಕುಸುಮಾ ಆಯರಹಳ್ಳಿ

ಸಿನೆಮಾ ನಟಿ ಮಾಲಾಶ್ರೀ ನೀಡಿದರೆಂದು ಹೇಳಲಾಗಿದ್ದ ಒಂದು ಹೇಳಿಕೆ ಆಗಿನ ಕಾಲಕ್ಕೆ ವಿವಾದವಾಗಿತ್ತು. “ನನ್ನ ಜೊತೆ ಒಂದು ಕೋತಿ ನಟಿಸಿದರೂ ಸಿನೆಮಾ ಗೆಲ್ಲುತ್ತದೆ” ಅಂದಿದ್ದರಂತೆ ಆಕೆ. ಅವತ್ತಿನ ಕಾಲಕ್ಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೂಡ ಇದೇ ಹೇಳಿಕೆಯನ್ನು ಹೋಲುವ ಸ್ಥಿತಿಯೊಂದಿತ್ತು. ಸಿದ್ದರಾಮಯ್ಯ ಹೆಸರಲ್ಲಿ ಯಾರು ಬಂದರೂ ಬರದಿದ್ದರೂ ಜನ ಓಟು ಒತ್ತುತ್ತಿದ್ದುದು ಸಿದ್ದರಾಮಯ್ಯಗೇ, ಗೆಲ್ಲುತ್ತಿದ್ದುದು ಸಿದ್ದರಾಮಯ್ಯ ಮಾತ್ರ! ಚಾಮುಂಡೇಶ್ವರಿ ಎರಡಾದಾಗ ಪರಿಸ್ಥಿತಿ ಬೇರೆಯಾಯ್ತು. ಸಿದ್ದರಾಮಯ್ಯರನ್ನು ಸೋಲಿಸಲೇಬೇಕೆಂದು ಅನೇಕ ರಾಜಕೀಯ ಸ್ಟ್ರಾಟೆಜಿಗಳು, ಆಂತರಿಕ ಒಪ್ಪಂದಗಳು ಕೆಲಸ ಮಾಡಿದವು. ಕಳೆದ ಚುನಾವಣೆಯಲ್ಲಿ ಮಗ ಯತೀಂದ್ರಗಾಗಿ ವರುಣವನ್ನು ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಣಕ್ಕಿಳಿದರು. ಅಲ್ಲಿ ಗೆಲುವು ಕಷ್ಟ ಎಂಬ ಲೆಕ್ಕಾಚಾರದಲ್ಲಿ ಬದಾಮಿಯಿಂದಲೂ ಕಣಕ್ಕಿಳಿದರು. ನಿರೀಕ್ಷೆಯಂತೆ ಚಾಮುಂಡೇಶ್ವರಿಯಲ್ಲಿ ಸೋತು, ಬದಾಮಿಯಲ್ಲಿ ಗೆದ್ದರು. ಈಗ ಮತ್ತೆ ವರುಣಾಗೆ ವಾಪಸಾಗಿದ್ದಾರೆ. ಆದರೆ ಈಗ ಪರಿಸ್ಥಿತಿ ಹಿಂದಿನ ಹಾಗಿಲ್ಲ. ಸಿದ್ದರಾಮಯ್ಯ ಬಂದು ಕೇಳಿದರೂ ಬರದಿದ್ದರೂ ಅವರನ್ನೆ ಗೆಲ್ಲಿಸುತ್ತೇವೆ ಅನ್ನುವ ಸ್ಥಿತಿಯಲ್ಲಿ ಜನರೂ ಇಲ್ಲ. ಇದಕ್ಕೆ ಹಲವು (Inside Story) ಕಾರಣಗಳು.

ಆರಂಭದ ದಿನಗಳಲ್ಲಿ ಕ್ಷೇತ್ರದ ಎಲ್ಲರ ನಾಯಕರಾಗಿದ್ದ ಸಿದ್ದರಾಮಯ್ಯ ಬರಬರುತ್ತಾ ಹಿಂದುಳಿದ ವರ್ಗಗಳ ನಾಯಕರಾದರು. ಪಕ್ಷ ಬದಲಿಸಿದ್ದು, ಮುಖ್ಯಮಂತ್ರಿಯಾದಾಗ ಹಿಂದುಳಿದ ವರ್ಗಗಳನ್ನು, ಅದರಲ್ಲೂ ಕುರುಬ ಸಮುದಾಯವನ್ನು ಹೆಚ್ಚು ಓಲೈಸಿದರು ಎಂಬ ಆರೋಪಗಳು ಬಂದದ್ದು ಇದೆಲ್ಲವೂ ಸಿದ್ದರಾಮಯ್ಯ “ಎಲ್ಲರ ನಾಯಕʼ ಆಗದಿರುವಂತೆ ಮಾಡಿದವು. ಈ ಎಲ್ಲ ಬದಲಾವಣೆಗಳೂ ಒಂದೇ ಸಲ ಅಲ್ಲ, ಕಾಲಾಂತರದಲ್ಲಿ ಆದದ್ದು. ಜಾತಿ ದಿನೇದಿನೇ ರಾಜಕೀಯದಲ್ಲಿ ನುಸುಳಿ, ಹೆಚ್ಚೆಚ್ಚು ಪ್ರಭಾವ ಬೀರುತ್ತಿರುವ ಒಟ್ಟಾರೆ ಬದಲಾವಣೆ ಕ್ಷೇತ್ರದ ಮೇಲೆ ಮತ್ತು ಸಿದ್ದರಾಮಯ್ಯರನ್ನು ಒಪ್ಪಿಕೊಂಡ ಜನರ ಮೇಲೂ ಆಗಿದೆ.

ಇತ್ತ ಬಹಳ ಹಿಂದಿನಿಂದಲೂ ಸುತ್ತೂರು ಮಠದಂತಹ ಪ್ರಭಾವೀ ಲಿಂಗಾಯತ ಕೇಂದ್ರದೊಂದಿಗೆ, ಅನೇಕ ಲಿಂಗಾಯತ ಕುಟುಂಬಗಳೊಂದಿಗೆ ಸಿದ್ದರಾಮಯ್ಯ ಅವರದ್ದು ಅತ್ಯಂತ ಆತ್ಮೀಯ ಒಡನಾಟ. ವರುಣಾ ನಾಲೆ ದೇವರಾಜ ಅರಸು ಅವರ ಕನಸೇ ಆದರೂ ವರುಣ ನಾಲೆ ಬರುವಲ್ಲಿ ಸಿದ್ದರಾಮಯ್ಯ ಪ್ರಯತ್ನದ್ದು ದೊಡ್ಡ ಪಾಲಿದೆ. ವರುಣಾ ನಾಲೆಯ ನೀರು ಪರಿಣಾಮಕಾರಿಯಾಗಿ ಇವತ್ತಿಗೂ ಸರಬರಾಜೇನೂ ಆಗುತ್ತಿಲ್ಲ. ಎಷ್ಟೋ ಕೈಕಾಲುವೆಗಳು ಮುಚ್ಚಿಯೇ ಹೋಗಿವೆ. ಆದರೆ, ವರುಣಾ ನಾಲೆಯ ನೀರು ಅಂತರ್ಜಲದ ಹೆಚ್ಚಳವೂ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಅನೇಕ ರೈತರಿಗೆ ಸಹಾಯಮಾಡಿದೆ. ನಾಲೆಯ ನೀರಿನ ಕಾರಣಕ್ಕಾಗಿಯೇ ಕ್ಷೇತ್ರದ ಜನರ, ವಿಶೇಷವಾಗಿ ಹೆಂಗಸರ ಓಟುಗಳು ಸಿದ್ದರಾಮಯ್ಯಗೆ ಮಿಸ್ ಆಗುತ್ತಲೇ ಇರಲಿಲ್ಲ. ಅನ್ನಭಾಗ್ಯದಂತಹ ಜನಪ್ರಿಯ ಯೋಜನೆಗಳೂ ಸಿದ್ದರಾಮಯ್ಯ ಅವರಿಗೆ ಎಲ್ಲ ಕಡೆಯಂತೆ ಇಲ್ಲಿಯೂ ಒಳ್ಳೆಯ ಹೆಸರು ತಂದುಕೊಟ್ಟಿದ್ದು ಸುಳ್ಳಲ್ಲ. ಆದರೆ ಇವತ್ತಿನ ಲೆಕ್ಕಾಚಾರಗಳೇ ಬೇರೆ.

ವರುಣದಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ

ಸಿದ್ದರಾಮಯ್ಯಗೆ ಅಹಂಕಾರ, ಅವರು ಲಿಂಗಾಯತ ವಿರೋಧಿ…

ಇದು ನಿಜವೋ ಸುಳ್ಳೋ ಎಂಬುದು ಬೇರೆ ಮಾತು. ಬಸವಣ್ಣನ ಫೋಟೋವನ್ನು ಸರಕಾರೀ ಕಚೇರಿಗಳಲ್ಲಿ ಇಡುವಂತೆ ಮಾಡಿದ್ದು ನಾನು ಅಂತ ಸಿದ್ದರಾಮಯ್ಯ ಎಷ್ಟೇ ಹೇಳಿಕೊಂಡು ತಿರುಗಾಡಿದರೂ ಸಿದ್ದರಾಮಯ್ಯ ವೀರಶೈವ ಲಿಂಗಾಯತ ಹೆಸರಿನಲ್ಲಿ ಸಮುದಾಯವನ್ನು ಒಡೆಯಲು ನೋಡಿದರು ಎಂಬುದು ಈ ಆರೋಪದ ಅತ್ಯಂತ ಬಲವಾದ ಕಾರಣ. ಲಿಂಗಾಯತ ಮತ್ತು ವೀರಶೈವ ಬಿಡಿ, ಯಾವುದೇ ಸಮುದಾಯದ ಒಳಪಂಗಡಗಳೊಳಗೆ ನೂರೆಂಟು ಉಪಪಂಗಡಗಳಲ್ಲಿ ಎಷ್ಟೇ ಕಿತ್ತಾಟವಿದ್ದರೂ ರಾಜಕೀಯವಾಗಿ ಮಾತ್ರ ಸದಾ ಒಟ್ಟಾಗಿಯೇ ಶಕ್ತಿ ಪ್ರದರ್ಶಿಸುವುದು ವಾಡಿಕೆ ಮತ್ತು ಅನಿವಾರ್ಯದ ನಡೆ. ಆದರೆ, ಲಿಂಗಾಯತ, ವೀರಶೈವ ಹೆಸರಿನ ಗದ್ದಲಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಅನ್ನುವುದು ಮಾತ್ರ ಜನರನ್ನು ತಲುಪಿಕೊಂಡ ಸುದ್ದಿ. ಅದು ಸಿದ್ದು ಸ್ವಕ್ಷೇತ್ರವನ್ನೂ ತಲುಪಿದೆ. ಸಿದ್ದರಾಮಯ್ಯ ಜಿಎಲ್‌ಬಿ (ಗೌಡ, ಲಿಂಗಾಯತ, ಬ್ರಾಹ್ಮಣ) ಫೈಲುಗಳನ್ನು ದೂರವೇ ಇಡುತ್ತಾರೆ ಎಂಬುದು ಕೂಡ ಗಾಳಿಯಲ್ಲಿ ತೇಲಿ ಮನೆಮನೆ ತಲುಪಿದ ಸುದ್ದಿ.

ಹಳೇ ಮೈಸೂರು ಭಾಗದ ಹಳೆಯ ಬೇಡಿಕೆ!

ಪ್ರಭಾವೀ ಮಠಗಳಿದ್ದೂ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯವಿದ್ದೂ ಹಳೆ ಮೈಸೂರು ಭಾಗವನ್ನು ಪ್ರತಿನಿಧಿಸುವ ಪ್ರಭಾವೀ ಲಿಂಗಾಯತ ನಾಯಕ ಕಳೆದ ಮೂರು ದಶಕಗಳಲ್ಲಿ ಇಲ್ಲಿ ಸಿಕ್ಕಿಲ್ಲ. ಹಿಂದೆ ರಾಜಶೇಖರಮೂರ್ತಿ, ಈಚಿನ ಮಹದೇವಪ್ರಸಾದ್‍ ಬಂದು ಹೋದರೂ ಅವರ್ಯಾರೂ ಅಷ್ಟು ಪ್ರಬಲವಾದ ಮತ್ತು ಸಿದ್ದರಾಮಯ್ಯ ಮಟ್ಟದ ನಾಯಕರಲ್ಲ. ಜೊತೆಗೆ ಬೇಕೆಂದೇ ಇಲ್ಲಿ ದುರ್ಬಲ ಅಭ್ಯರ್ಥಿಗಳನ್ನು ನಿಲ್ಲಿಸಲಾಗುತ್ತದೆ ಎಂಬ ಗುಲ್ಲು ಕೂಡ ಎಷ್ಟೋ ದಶಕಗಳಿಂದ ಇದ್ದೇ ಇತ್ತು. ಮತ್ತು ಒಳಗೇ ಹೊಗೆಯಾಡುತ್ತಿತ್ತು. ಈ ಸ್ಪೇಸ್ ಎಷ್ಟರಮಟ್ಟಿಗೆ ಇತ್ತೆಂದರೆ ಕಾಪು ಸಿದ್ದಲಿಂಗಸ್ವಾಮಿ ಇಲ್ಲಿ ಲಿಂಗಾಯತ ಸಮುದಾಯದ ಒಬ್ಬ ಸಣ್ಣ ನಾಯಕರಾಗಿ ಗುರುತಿಸಿಕೊಳ್ಳಲು ಜಾಗ ಮಾಡಿಕೊಡುವಷ್ಟು.

ವಿಜಯೇಂದ್ರ ಹುಟ್ಟಿಸಿದ ಸಂಚಲನ

ವರುಣಾದಲ್ಲಿ ಕಳೆದ ಬಾರಿ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂಬುದು ದೊಡ್ಡ ಸಂಚಲನವನ್ನೆ ಉಂಟು ಮಾಡಿತ್ತು. ಯಡಿಯೂರಪ್ಪ ಮಗ ಎಂಬುದರ ಹೊರತಾಗಿಯೂ ವಿಜಯೇಂದ್ರಗೆ ತನ್ನದೇ ವರ್ಚಸ್ಸಿದೆ. ಲಿಂಗಾಯತ ಸಮುದಾಯ ತನ್ನ ನಾಯಕ ಎಂದು ಒಪ್ಪಿಕೊಂಡ ಯಡಿಯೂರಪ್ಪ ಅವರ ಮಗ ವಿಜಯೇಂದ್ರರೇ ಬರುತ್ತಾರೆಂಬುದು ಹಲವು ವರ್ಷಗಳ ಕೊರತೆಗೆ ಸಿಕ್ಕ ದೊಡ್ಡ ತುಂಬುವಿಕೆಯಂತೆ ಕಾಣಿಸಿತ್ತು. ಆದರೆ ವಿಜಯೇಂದ್ರ ಇಲ್ಲಿ ಬರಲಿಲ್ಲ. ಪಕ್ಷದ ಕಾರ್ಯಕರ್ತರು ಮತ್ತು ಸಮುದಾಯ ನಾಯಕರು ದೊಡ್ಡಮಟ್ಟದ ಆಕ್ರೋಶ ವ್ಯಕ್ತಪಡಿಸಿದ್ದರು. ಮತ್ತು ವಿಜಯೇಂದ್ರ ಬಗ್ಗೆ ಈ ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. “ಈ ವಿಜಯೇಂದ್ರ ಬರುತ್ತಾರೆ ಅಂತ ಬೇರೆಯವರೂ ಮುಂದೆ ಬರದೇ ಕಾಯುತ್ತಿದ್ದಾರೆ. ಅವರು ತಮ್ಮ ನಿರ್ದಾರ ಬೇಗ ಹೇಳಲಿ” ಅಂತ ಬಿಜೆಪಿಯ ಕಾರ್ಯಕರ್ತರು ಮತ್ತು ಲಿಂಗಾಯತ ಟಿಕೆಟ್ ಆಕಾಂಕ್ಷಿಗಳು ಹೇಳಿಕೊಂಡು ಓಡಾಡುತ್ತಿದ್ದರು. ಒಂದು ವೇಳೆ ವಿಜಯೇಂದ್ರ ಬಂದಿದ್ದರೆ ಖಂಡಿತಾ ಗೆಲ್ಲುತ್ತಿದ್ದರು ಕೂಡ. ಆದರೆ ಈ ಬಾರಿಯೂ ವಿಜಯೇಂದ್ರ ಇಲ್ಲಿ ಬರಲಿಲ್ಲ. ಸಮುದಾಯ ಮತ್ತು ಪಕ್ಷದ ಜನ ಮತ್ತೆ ಉಸಿರಿನ ಬಿಸಿ ಏರಿಸಿಕೊಂಡರೂ, ನಿಟ್ಟುಸಿರು ಬಿಟ್ಟದ್ದು ಮಾತ್ರ ಸಿದ್ದರಾಮಯ್ಯ! ಆದರೆ….

ವರುಣ ಕ್ಷೇತ್ರದಲ್ಲಿ ವಿ.ಸೋಮಣ್ಣ ಅವರ ಪ್ರಚಾರಕ್ಕೆ ಬಸವರಾಜ ಬೊಮ್ಮಾಯಿ ಸಾಥ್

ಸೋಮಣ್ಣ ಎಂಬ ಹೊಸ ಅಸ್ತ್ರ!

ಬಹುಶಃ ಸ್ವತಃ ಸಿದ್ದರಾಮಯ್ಯಗೆ ಕೂಡ ಸೋಮಣ್ಣ ತನ್ನ ವಿರುದ್ಧ ಸ್ಪರ್ಧಿಸಬಹುದು ಎಂಬ ಸಣ್ಣ ನಿರೀಕ್ಷೆಯೂ ಇರಲಿಲ್ಲ. ಅದು ಸೋಮಣ್ಣನಿಗೂ ಇರಲಿಲ್ಲ ಬಿಡಿ. ಹಿಂದೆ ಇದೇ ಸೋಮಣ್ಣನೇ ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರ ಮಾಡಿದವರು, ಏಟು ತಿಂದವರು, ದೇವಲಾಪುರದಲ್ಲಿ ಬಟ್ಟೆ ಹರಿಯುವಂತೆ ಹೊಡೆತ ತಿಂದವರು. ಆದರೆ ರಾಜಕೀಯದ ಆಟದಲ್ಲಿ ಅದೇ ಸೋಮಣ್ಣ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವಂತಾಯ್ತು. ಬಿಜೆಪಿ ಮಾಡಿರುವ ಅತ್ಯುತ್ತಮ ಸ್ಟ್ರಾಟೆಜಿಗಳಲ್ಲೊಂದು ವರುಣಾದಲ್ಲಿ ಸೋಮಣ್ಣನನ್ನು ನಿಲ್ಲಿಸಿದ್ದು.

ಉಲ್ಟಾಪಲ್ಟಾ ಆದ ಲೆಕ್ಕಾಚಾರಗಳು

ಟಿಕೆಟ್ ಘೋಷಣೆಯಾದಾಗ ಸ್ವತಃ ಸೋಮಣ್ಣ ತಬ್ಬಿಬ್ಬಾಗಿದ್ದರು. ಇದೇನು ಹೀಗಾಗೋಯ್ತು ಅಂತ ಆಪ್ತರೊಂದಿಗೆ ದುಃಖ ತೋಡಿಕೊಂಡಿದ್ದರು. ʼಈ ಸೋಮಣ್ಣನನ್ನು ಪಾಪ ಒಂದ್ ಕಡೆ ಬಲಿಕೊಟ್ಟಿದ್ರಾಗಿತ್ತು ಬಿಜೆಪಿ. ಎರಡೆರಡು ಕಡೆ ಬಲಿ ಕಾ ಬಕ್ರಾ ಮಾಡಿಹಾಕಿದ್ದಾರೆ’ ಅಂತ ರಾಜಕೀಯ ವಿಶ್ಲೇಷಕರು, ಪತ್ರಕರ್ತರು ಮಾತಾಡುತ್ತಿದ್ದರು. ಆದರೆ ನಿಧಾನಕ್ಕೆ ಸೋಮಣ್ಣ ಕಣಕ್ಕಿಳಿದದ್ದು ಮತ್ತು ಅವರ ಕಡಿಮೆ ಅವಧಿಯ ಪ್ರಚಾರದ ರೀತಿ ಜನ ಸೋಮಣ್ಣನನ್ನು ಜನ ಮತ್ತು ಸಿದ್ದರಾಮಯ್ಯ ಸೀರಿಯಸ್ ಆಗಿ ತಗೊಳ್ಳುವಂತೆ ಮಾಡಿತು. ಸಿದ್ದರಾಮಯ್ಯ ವ್ಯಕ್ತಿತ್ವದಲ್ಲಿ ಇಲ್ಲದ, ಅತಿವಿನಯ, ಅತಿಬಾಗುವಿಕೆ ಸೋಮಣ್ಣನ ಅಸ್ತ್ರವಾಯ್ತು. ಅಬ್ಬರ ಮಾಡಿ ಉಪಯೋಗವಿಲ್ಲ ಅಂತ ಬಹುಬೇಗ ಅರಿತುಕೊಂಡ ಸೋಮಣ್ಣ, ಅದಾಗಲೇ ಜನಸಂಪರ್ಕವಿರುವ ಕಾಪು ತರದ ನಾಯಕರನ್ನು ಭೇಟಿಮಾಡಿ “ಅಣ್ಣಾ ನೀನೇ ನನ್ನ ಪಾಲಿನ ದೇವರು, ಕೈ ಬಿಡಬೇಡಪ್ಪ” ಅಂತ ಕೈಮುಗಿದರು. ತಮ್ಮ ಹಳೆಯ ಸಂಬಂಧಗಳ ಕೊಂಡಿ ಹುಡುಕುತ್ತಾ ಕ್ಷೇತ್ರದ ಅರ್ಧ ಲಿಂಗಾಯತರ ನೆಂಟ ಅನಿಸಿಕೊಂಡರು. ಈ ಭಾಗದಲ್ಲಿ ಎಲ್ಲ ಜಾತಿಯವರೂ ಬಲವಾಗಿ ನಂಬುವ, ಎಲ್ಲರ ಮನೆದೇವರಾದ ಮಲೆಮಹದೇಶ್ವರ ಮತ್ತು ಚಾಮುಂಡೇಶ್ವರಿಯನ್ನು ಬಿಡದೇ ಹಿಡಕೊಂಡರು. ಪ್ರತಿಊರಲ್ಲೂ ಇರುವ ಗ್ರಾಮದೇವತೆಯರೂ ಎಲ್ಲ ಜಾತಿಗೂ ದೈವ, ಹಾಗಾಗಿ, ಊರೂರ ಮಾರಮ್ಮನಿಗೆ ಕೈಕೈ ಮುಗಿದರು. ಕಂಡಕಂಡವರನ್ನೆಲ್ಲ ಅಪ್ಪಾ, ಅಣ್ಣಾ, ಅವ್ವಾ ಅಂತಲೇ ಮತ ಯಾಚಿಸುತ್ತಾ ಹೋದರು. ಉಸ್ತುವಾರಿಯಾಗಿ ಓಡಾಡಿದ್ದದ್ದು, ಹಳೆಯ ನಂಟುಗಳೂ ಸೇರಿಕೊಂಡವು.

ಇತ್ತ ಹಲವು ದಶಕಗಳ ಲಿಂಗಾಯತ ಪ್ರತಿನಿಧಿಸುವಿಕೆಯ ಕೊರತೆಗೆ ಸಿಕ್ಕ ಸೋಮಣ್ಣ ಅವರ ವಿನಯ ಜನರನ್ನು ಕರಗಿಸುತ್ತಾ ಹೋಗುತ್ತಿದ್ದರೆ ಅತ್ತ ಸಿದ್ದರಾಮಯ್ಯ ಲಿಂಗಾಯತ ಸಿಎಂ ಬೊಮ್ಮಾಯಿಯ ದುರಾಡಳಿತವನ್ನು ಬೈದದ್ದನ್ನು ಪಟ್ ಅಂತ ಹಿಡಿಕೊಂಡೇ ಬಿಡ್ತು ಬಿಜೆಪಿ. ಸಿದ್ದರಾಮಯ್ಯ ಲಿಂಗಾಯತರನ್ನು ಭ್ರಷ್ಟ್ರರು ಅಂತ ಬೈದರು ಅನ್ನುವ ಮಾತು, ಹಳ್ಳಿಹಳ್ಳಿಗಳನ್ನು ತಲುಪಿಕೊಂಡುಬಿಟ್ಟಿತು. ನಾನು ಹೇಳಿದ್ದು ಹಾಗಲ್ಲ ಅನ್ನುವ ವಿವರ ಎಷ್ಟು ಜನರನ್ನು ತಲುಪಿತೋ ಇಲ್ಲವೋ. ಸಿದ್ದರಾಮಯ್ಯ ಹಿಂದೊಮ್ಮೆ ಗುರುಸ್ವಾಮಿ ಎಂಬ ಅಭ್ಯರ್ಥಿಯ ವಿರುದ್ಧ ಸೋತಿದ್ದರು. ಬಿಜೆಪಿಯ ಹೆಸರು ಮನೆಮನೆ ತಲುಪಿಯೇ ಇಲ್ಲದಿದ್ದ ಕಾಲದಲ್ಲಿ. ಆಗಲೂ ಸಿದ್ದರಾಮಯ್ಯ ಸೋತದ್ದು ಚುನಾವಣೆಯ ಹಿಂದಿನ ದಿನ ಲಿಂಗಾಯತರನ್ನು ಬೈದರು ಎಂಬ ಕಾರಣಕ್ಕೇ! ಫೋನು ವಾಟ್ಸ್‌ಆಪ್‍ಗಳಿಲ್ಲದ ಆ ಕಾಲದಲ್ಲಿಯೇ ಬೈಕುಗಳಲ್ಲಿ ಊರೂರು ತಲುಪಿ ಲಿಂಗಾಯತರಿಗೆಲ್ಲ ಸುದ್ದಿ ಮುಟ್ಟಿಸಲಾಗಿತ್ತು. ಈ ಹಳೆಯ ಪಾಠವನ್ನು ಸಿದ್ದರಾಮಯ್ಯ ಯಾಕೆ ಮರೆತರೋ!

ಸಿದ್ದರಾಮಯ್ಯ ಪರ ಶಿವರಾಜ್‌ ಕುಮಾರ್‌ ಸೇರಿ ಹಲವು ಸ್ಟಾರ್‌ಗಳ ಪ್ರಚಾರ

ಬಿಜೆಪಿಯ ರಣತಂತ್ರ!

ಇಡೀ ದೇಶಕ್ಕೆ ದೇಶವೇ ಮೋದಿ ಮೇನಿಯಾದಲ್ಲಿ ತೇಲಿ ಮುಳುಗಿ ಈಜುತ್ತಾ ಇದ್ದ ಸಮಯದಲ್ಲಿ ದಕ್ಷಿಣದಿಂದ ಮೋದಿ ವಿರುದ್ಧ, ಬಿಜೆಪಿ ವಿರುದ್ಧ ತೊಡೆ ತಟ್ಟಿನಿಂತ ದಕ್ಷಿಣದ, ಕರ್ನಾಟಕದ ಅತ್ಯಂತ ಪ್ರಭಾವೀ ರಾಜಕಾರಣಿ ಸಿದ್ದರಾಮಯ್ಯ. ಡಿ ಕೆ ಶಿವಕುಮಾರ್‌ರಂತಹ ಅವರದೇ ಪಕ್ಷದ ನಾಯಕರಿಗಿಂತಲೂ ಸಿದ್ದರಾಮಯ್ಯ ಜನರಿಗೆ ಹೆಚ್ಚು ಆಪ್ತ ಅನಿಸುವ, ಪ್ರಬಲ, ಜನಪ್ರಿಯ ಮತ್ತು ವರ್ಚಸ್ವೀ ನಾಯಕ. ಬಿಜೆಪಿಗೆ ಕರ್ನಾಟಕದಲ್ಲಿ ಕಾಂಗ್ರೆಸ್‍ ಮಣಿಸುವುದು ಎಷ್ಟು ಮುಖ್ಯವೋ ಸಿದ್ದರಾಮಯ್ಯರನ್ನು ಮಣಿಸುವುದು ಅಷ್ಟೇ ಮುಖ್ಯವಾದಂತಿದೆ. ಸಿದ್ದರಾಮಯ್ಯರನ್ನು ಸೋಲಿಸಲೇಬೇಕೆಂದು ನಿರ್ಧರಿಸಿರುವಂತಿದೆ ಕೇಂದ್ರ ಬಿಜೆಪಿ ನಾಯಕರು. ವರುಣಾ ಪ್ರಚಾರದ ವೇಳೆ ಅಮಿತ್ ಶಾ “ನೀವು ಸೋಮಣ್ಣನನ್ನು ಗೆಲ್ಲಿಸಿ, ಅವರನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತೇವೆ” ಎಂದು ಹೇಳಿ ಹೋಗಿದ್ದಾರೆ. ಈ ಮಾತು, “ಸೋಮಣ್ಣ ಗೆದ್ದರೆ ಸಿಎಂ ಮಾಡ್ತಾರಂತೆ” ಅನ್ನುವ ಅರ್ಥದಲ್ಲಿ ತಲುಪಿ, ಇಡೀ ಹಳೆ ಮೈಸೂರಿನಲ್ಲಿ ಈಗಿರುವ ಏಕೈಕ ಪ್ರತಿನಿಧಿ ಸೋಮಣ್ಣ ಸೋತರೆ ನಮಗೆ ರೆಪ್ರೆಸೆಂಟೇಷನ್ನೇ ಇಲ್ಲದಂತಾಗುತ್ತದೆ ಅನ್ನುವ ಲೆಕ್ಕಾಚಾರದ ಜೊತೆ ಸಿಎಮ್ಮೇ ಆಗಿಬಿಡ್ತಾರೆ ಅನ್ನೋ ಆಸೆಯೂ ಸೇರಿ, ಲಿಂಗಾಯತರೆಲ್ಲ ಸೋಮಣ್ಣ ಸೋಮಣ್ಣ ಅನ್ನಲು ಶುರುಮಾಡಿದ್ದಾರೆ.

ಹಿಂದುಳಿದ ವರ್ಗಗಳ ಒಳೇಟುಗಳು

ಅತ್ತ ಲಿಂಗಾಯತರ ಓಟುಗಳು ಒಟ್ಟಾಗುತ್ತಿದ್ದರೆ ಶ್ರೀನಿವಾಸ ಪ್ರಸಾದ್‍ ಅವರು ಸಿದ್ದರಾಮಯ್ಯ ವಿರುದ್ಧ ಹಿಂದುಳಿದ ಸಮುದಾಯಗಳನ್ನು ಒಟ್ಟುಗೂಡಿಸುತ್ತಿರುವುದು, ಧ್ರುವನಾರಾಯಣ್ ಮರಣ ಇದೆಲ್ಲವೂ ಬೇರೆ ಜಾತಿಗಳ ಓಟುಗಳನ್ನೂ ದಿಕ್ಕಾಪಾಲು ಮಾಡುತ್ತಿವೆ. ಮುಖ್ಯವಾಗಿ ಜಾತ್ಯತೀತವಾಗಿ ಸಿದ್ದರಾಮಯ್ಯ ಬಗ್ಗೆ ಒಲವು ಹೊಂದಿದ್ದ, ಸಿದ್ದರಾಮಯ್ಯ ನಮ್ಮ ಭಾಗದ ಹುಲಿ ಅನ್ನುತ್ತಿದ್ದ ಹೆಂಗಸರ ಓಟುಗಳು ಈ ಸಲ ನಿರ್ಣಾಯಕವಾಗುತ್ತಿವೆ. “ಸಿದ್ದರಾಮಯ್ಯ ಸೋಲುತ್ತಾರೆ” ಎಂಬ ಪ್ರಚಾರ ಹೆಚ್ಚು ಹೊಡೆತ ಕೊಡುತ್ತಿದೆ. “ಅಯ್ಯೋ ಹೇಗೂ ಸೋಲ್ತಾರಂತೆ, ಅವರಿಗ್ಯಾಕೆ ಓಟು ಹಾಕೋದು?” ಅಂತ ಪಡಸಾಲೆಗಳ ಮೇಲೆ ಹೆಂಗಸರು ಮಾತಾಡಲು ಶುರು ಮಾಡಿದ್ದಾರೆ.

ಯುವ ಸಮುದಾಯದ ಮೋದಿ ಮೇನಿಯಾ…

ಲಿಂಗಾಯತರನ್ನು ಬೈದರು ಎಂಬ ಪ್ರಚಾರ, ಸೋತೇ ಹೋಗುತ್ತಾರೆಂಬ ಪ್ರಚಾರ, ಇದರ ಮೇಲೆ ಬಜರಂಗದಳದ ಬ್ಯಾನ್ ಮಾತು ಮತ್ತು ಮೋದಿಯ ರೋಡ್‍ಶೋ ಯುವ ಮನಸ್ಸುಗಳನ್ನು ಪ್ರಭಾವಿಸುತ್ತಿದೆ. ಹಿಂದುಳಿದ ವರ್ಗಗಳ ಬಗ್ಗೆ ಇನ್ನಿಲ್ಲದ ಕಾಳಜಿಯಿಂದ ದುಡಿಯುತ್ತಿರುವ, ಅವರ ಹಕ್ಕುಗಳಿಗಾಗಿ, ಮೀಸಲಾತಿಗಾಗಿ, ಭವಿಷ್ಯಕ್ಕಾಗಿ ತರ್ಕಬದ್ಧ ವಾದ ಮಂಡಿಸುವ ಸಿದ್ದರಾಮಯ್ಯಗಿಂತ ರಾಷ್ಟ್ರೀಯತೆಯ ಮಾತಾಡುವ ಪಕ್ಷ ಅದೇ ಯುವಕರನ್ನು ಮೋಡಿ ಮಾಡುತ್ತಿದೆ. ಸಿದ್ದರಾಮಯ್ಯಗೆ ಅವರಿಗೆಲ್ಲ ಅರ್ಥಮಾಡಿಸಲು ಸಮಯ, ಪರಿಸ್ಥಿತಿ ಎರಡೂ ಒದಗುತ್ತಿಲ್ಲ.

ಸೋಮಣ್ಣ ಹಾಗೂ ಪ್ರತಾಪ್‌ ಸಿಂಹ ಪ್ರಚಾರ

ಸಿದ್ದರಾಮಯ್ಯ ಸೋಲುತ್ತಾರಾ?

ನಾನು ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗಬಾರದು, ಕರ್ನಾಟಕವನ್ನೆಲ್ಲ ಸುತ್ತಿ ಹೆಚ್ಚು ಸೀಟು ತರಬಾರದು ಅಂತ ನನ್ನನ್ನಿಲ್ಲಿ ಹೀಗೆ ಕಟ್ಟಿಹಾಕೋ ಪ್ಲಾನ್ ಮಾಡಿದ್ದಾರೆ ಅಂತ ಸ್ವತಃ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲೋ ಹೋಗದೇ ಕ್ಷೇತ್ರದತ್ತ ಗಮನ ಕೇಂದ್ರೀಕರಿಸಬೇಕೆಂಬ ಸ್ಥಿತಿ ಗೆಲುವು ಸುಲಭವಲ್ಲ ಎಂಬುದನ್ನು ಅವರೇ ಒಪ್ಪಿಕೊಂಡಂತೆ ಆಗಿದೆ. ಕಳೆದ‌ ವಾರವೆಲ್ಲ ಅವರ ಆಪ್ತರೂ ಅದೇ ಸಲಹೆ ನೀಡಿದ್ದಾರೆ. ಹಾಗಾಗಿಯೇ ಸಿನೆಮಾ ಮಂದಿ ವರುಣಾದಲ್ಲಿ ಪ್ರಚಾರಕ್ಕಿಳಿದಿದ್ದಾರೆ.

ಸೋಮಣ್ಣನನ್ನು ಜಾತಿ ಪ್ರತಿಷ್ಠೆಯಾಗಿ ಸ್ವೀಕರಿಸಿರುವ “ಲಿಂಗಾಯತರನ್ನು ಕೆಣಕಿದರೆ ಹುಷಾರ್” ಎಂಬ ಸಂದೇಶ ಕೊಡಲು ಸಿದ್ಧವಾಗಿರುವ ಸಮುದಾಯದ ಹಿಂದೆಂದೂ ಇಲ್ಲದ ಒಗ್ಗಟ್ಟನ್ನು ಮುರಿಯುವುದು ಕಷ್ಟವಿದೆ.

ಏನೇ ಲೆಕ್ಕಾಚಾರಗಳಿದ್ದರೂ ಹಳೆ ಹುಲಿ ಸಿದ್ದರಾಮಯ್ಯನನ್ನು ಕ್ಷೇತ್ರದ ಜನ ಕೈ ಬಿಟ್ಟುಬಿಡುತ್ತಾರಾ? ಯತೀಂದ್ರನನ್ನೆ ಹೆಚ್ಚು ಕಡಿಮೆ 50 ಸಾವಿರ ಓಟುಗಳ ಅಂತರದಲ್ಲಿ ಗೆಲ್ಲಿಸಿದವರು ಸಿದ್ದರಾಮಯ್ಯನನ್ನು ಸುಲಭವಾಗಿ ಸೋಲಿಸ್ತಾರಾ ಅಂದುಕೊಂಡರೂ, ಸೋಮಣ್ಣ ಅವರ ಜಾತಿ ಮತ್ತು ಅಣ್ಣಾ ಅಪ್ಪಾ ಮಾದೇಶ್ವರ, ಚಾಮುಂಡವ್ವ ಅಂತ ಕೈಮುಗಿಯುವಿಕೆ ಮತ್ತು ಸಿದ್ದರಾಮಯ್ಯಗೆ ಉದ್ದೇಶವಿದ್ದೋ ಇಲ್ಲದೆಯೋ ಲಿಂಗಾಯತ ವಿರೋಧಿ ಆರೋಪ ಮತ್ತು ಮೋದಿ, ರಾಷ್ಟ್ರೀಯತೆಯ ಲೆಕ್ಕಾಚಾರಗಳು ಸಿದ್ದರಾಮಯ್ಯ ಸೋಲು ಗೆಲುವನ್ನು 50-50ಕ್ಕೆ ತಂದು ನಿಲ್ಲಿಸಿವೆ.

ಇದನ್ನೂ ಓದಿ: Karnataka Election: ಸಿದ್ದರಾಮಯ್ಯ ಪರ ಶಿವಣ್ಣ ಪ್ರಚಾರ, ಪ್ರತಾಪ್‌ ಸಿಂಹ, ಸೋಮಣ್ಣ ಅಸಮಾಧಾನ

ಸಿದ್ದರಾಮಯ್ಯ ವರುಣಾದಲ್ಲಿ ಗೆಲುವು ಸುಲಭ ಅಂತ ಒಂದೇ ಕ್ಷೇತ್ರ ಆರಿಸಿಕೊಂಡರು. ಕಾಂಗ್ರೆಸ್ ಸೋಲುವುದೋ ಗೆಲ್ಲುವುದೋ, ಆದರೆ ಸಿದ್ದರಾಮಯ್ಯ ತರದ ಗಟ್ಟಿ ದನಿಯ ನಾಯಕರು ವಿಧಾನಸಭೆಗೆ ಬೇಕು. ಆದರೆ ಸಿದ್ದರಾಮಯ್ಯರನ್ನು ಸೋಲಿಸಲು ಯಾವ್ಯಾವುದೋ ಸಂಗತಿಗಳೆಲ್ಲ ಕಾಲಕ್ಕೆ ಕಾದಿದ್ದಂತೆ ಒಟ್ಟು ಸೇರಿಕೊಂಡಿವೆ. ಚುನಾವಣೆಯ ಹಿಂದಿನ ದಿನವೂ ಇಲ್ಲಿ ಯಾವ ಮ್ಯಾಜಿಕ್ ಬೇಕಾದರೂ ನಡೆಯಬಹುದು, ನಡೆಯದಿರಲೂಬಹುದು. ಆದರೆ ಪಕ್ಷ, ಸಿದ್ಧಾಂತಗಳಾಚೆ ರಾಜ್ಯದ ಅತ್ಯಂತ ಜನಪ್ರಿಯ ನಾಯಕನೊಬ್ಬನಿಗೆ ತನ್ನ ಒಂದು ಕ್ಷೇತ್ರವನ್ನು ಅನಾಯಾಸವಾಗಿ ಗೆಲ್ಲಲಾರದ ಸ್ಥಿತಿಗೆ ಏನು ಹೇಳುವುದು!

Exit mobile version