ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಮತ್ತವರ ಕುಟುಂಬದವರ ಹತ್ಯೆಗೆ ಸಂಚು ರೂಪಿಸಲಾಗಿದ್ದು, ಅವರಿಗೆ ಜೀವ ಬೆದರಿಕೆ ಇದೆ. ಖರ್ಗೆ ಮತ್ತವರ ಕುಟುಂಬವನ್ನು ಸರ್ವನಾಶ ಮಾಡುತ್ತೇನೆ ಎಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ (Manikanta Rathod) ಅವರು ಬಿಜೆಪಿ ಮುಖಂಡರೊಬ್ಬರ ಜತೆ ಮಾತನಾಡಿರುವ ಆಡಿಯೊವನ್ನು ಶನಿವಾರ (ಮೇ 6) ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಈಗ ಮಣಿಕಂಠ ರಾಠೋಡ್ ವಿರುದ್ಧ ದೂರು ನೀಡಿದೆ.
ಲೋಕಸಭಾ ಮಾಜಿ ಸ್ಪೀಕರ್ ಮೀರಾ ಕುಮಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್, ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಕಾಂಗ್ರೆಸ್ ಮುಖಂಡರಾದ ರಾಮಲಿಂಗಾರೆಡ್ಡಿ , ಕೃಷ್ಣ ಭೈರೇಗೌಡ ಸೇರಿ ಇನ್ನಿತರ ಮುಖಂಡರಿಂದ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಇದನ್ನೂ ಓದಿ: ರೋಡ್ ಶೋ ವೇಳೆ ರಾಮಕೃಷ್ಣ ಮಠದ ಸ್ವಾಮೀಜಿಗಳಿಂದ ಪುಸ್ತಕ ಉಡುಗೊರೆ; ಭಕ್ತಿಯಿಂದ ಸ್ವೀಕರಿಸಿದ ಮೋದಿ
ರಾಠೋಡ್ ಮೇಲೆ ಪ್ರಕರಣಗಳು
ಮಣಿಕಂಠ ರಾಠೋಡ್ ವಿರುದ್ಧ ಹಲವು ಪ್ರಕರಣಗಳಿವೆ. ಮಣಿಕಂಠ ರಾಠೋಡ್ ಅವರು ಯಾದಗಿರಿ, ಕಲಬುರಗಿ ಜಿಲ್ಲೆಯಿಂದ ಗಡಿಪಾರು ಆಗಿದ್ದರು. ಅವರ ವಿರುದ್ಧ ಮೂರು ರಾಜ್ಯದಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳ ಆಹಾರ ಪದಾರ್ಥಗಳ ದುರ್ಬಳಕೆ ಮಾಡಿಕೊಂಡಿರುವ ಆರೋಪ ಇದೆ. 40ಕ್ಕೂ ಅಧಿಕ ಪ್ರಕರಣಗಳು ಮಣಿಕಂಠ ಮೇಲೆ ಇದೆ ಎಂದು ಆರೋಪ ಮಾಡಿದ್ದಾರೆ. ಈ ಹಿಂದೆ ಸಹ ಮಣಿಕಂಠ ರಾಠೋಡ್ ಮೇಲೆ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ದೂರು
ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಭಯೋತ್ಪಾದನೆಗೆ ಬೆಂಬಲ ನೀಡುತ್ತದೆ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಏನಿದು ಆಡಿಯೊ?
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹಾಗೂ ಬಿಜೆಪಿ ಮುಖಂಡ ರವಿ ಎಂಬುವವರು ಮಾತನಾಡಿದ್ದಾರೆನ್ನಲಾದ ಆಡಿಯೊ ಈಗ ಬಹಿರಂಗಗೊಳಿಸಲಾಗಿದೆ. ಇದರಲ್ಲಿ ನನ್ನ ಮೇಲೆ 44 ಕೇಸ್ ಇವೆ ಎಂದು ಹೇಳಿದವರು ಯಾರು? ಎಂದು ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ಮಣಿಕಂಠ ಕೇಳುತ್ತಾರೆ. ಅದಕ್ಕೆ ರವಿ, ನಾವು ಯಾರೂ ಈ ರೀತಿ ಆರೋಪ ಮಾಡುವುದಿಲ್ಲ. ಖರ್ಗೆ ಕಡೆಯವರು ಮಾತನಾಡುತ್ತಾರೆ ಎಂದು ಹೇಳುತ್ತಾರೆ. ಅದಕ್ಕೆ ಮಣಿಕಂಠ, ಹಾಗೆ ಮಾತನಾಡುವ ಖರ್ಗೆ ಕಡೆಯವರನ್ನೇ ಕೇಳು ಎಂದು ಹೇಳುತ್ತಾರೆ. ಆಗ ರವಿ, ಅವರ ಫೋನ್ ನಂಬರ್ ಕೊಡಿ, ಅವರ ಯಾರ ಫೋನ್ ನಂಬರ್ ಸಹ ಇಲ್ಲ. ನಾನು ನಿಮ್ಮ ಅಭಿಮಾನಿ ಇದ್ದೇನೆ. ನಮ್ಮ ಅಣ್ಣನ ಬಗ್ಗೆ ಏಕೆ ಹೀಗೆ ಮಾತನಾಡುತ್ತೀರೆಂದು ಅವರಿಗೂ ಕೇಳುತ್ತೇನೆ ಎಂದು ಹೇಳುತ್ತಾರೆ. ಅದಕ್ಕೆ ಮಣಿಕಂಠ, ನನ್ನ ಬಳಿ ಅವರ ಫೋನ್ ನಂಬರ್ ಇದ್ರೆ ಅವರು, ಅವರ ಹೆಂಡತಿ ಮಕ್ಕಳನ್ನು ಸಾಫ್ ಮಾಡುತ್ತೇನೆ. ಅದಕ್ಕೆ ನನ್ನ ಬಳಿ ಅವರ ಫೋನ್ ನಂಬರ್ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ರೋಡ್ ಶೋ ವೇಳೆ ರಾಮಕೃಷ್ಣ ಮಠದ ಸ್ವಾಮೀಜಿಗಳಿಂದ ಪುಸ್ತಕ ಉಡುಗೊರೆ; ಭಕ್ತಿಯಿಂದ ಸ್ವೀಕರಿಸಿದ ಮೋದಿ
ಆಗ ರವಿ, ಯಾರ ಹೆಂಡತಿ, ಮಕ್ಕಳನ್ನು ಸಾಫ್ ಮಾಡುತ್ತೀರಿ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಮಣಿಕಂಠ ರಾಠೋಡ, “ನೀನು ಯಾರ ಹೆಸರನ್ನು ತೆಗೆದುಕೊಂಡಿದ್ದೀಯಾ? ಎಂದು ಕೇಳಿದರು. ಆಗ ರವಿ, ಖರ್ಗೆ ಅವರದ್ದು ಅಣ್ಣಾ ಎಂದು ಉತ್ತರಿಸಿದ್ದಾರೆ. ಅದಕ್ಕೆ ಮಣಿಕಂಠ ರಾಠೋಡ, “ಹಾ ಅವರದ್ದೇ… ಅವರ ನಂಬರ್ ಇದ್ದರೆ ಅವರನ್ನು ಮತ್ತವರ ಕುಟುಂಬದವರನ್ನು ಸಾಫ್ ಮಾಡುತ್ತೇನೆ. ಅದಕ್ಕೇ ಅವರ ನಂಬರ್ ನನ್ನ ಬಳಿ ಇಲ್ಲ. ಖರ್ಗೆ ಅವರ ನಂಬರ್ ಇದ್ದರೆ ನಾನು ಬಾಯಿಗೆ ಬಂದ ಹಾಗೆ ಬಯ್ಯುತ್ತೇನೆ ಅಂತ ನಿನಗೆ ಹೇಳುತ್ತಿದ್ದೇನೆ” ಎಂದು ಉತ್ತರಿಸುತ್ತಾರೆ. ಈಗ ಈ ಆಡಿಯೊವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.