Site icon Vistara News

ಪುಸ್ತಕ ಆಗಲೇ ಪ್ರಿಂಟ್‌ ಆಗಿದೆ, ಈಗ ದೇವನೂರು ಕಥನ ತೆಗೆಯಲಾಗದು

ದೇವನೂರು ಕಥನ

ಮೈಸೂರು: ಹತ್ತನೇ ತರಗತಿಯ ಪಠ್ಯ ಪುಸ್ತಕಗಳು ಆಗಲೇ ಮುದ್ರಣವಾಗಿವೆ. ಹೀಗಾಗಿ ದೇವನೂರ ಮಹಾದೇವ ಅವರ ಕೋರಿಕೆಯಂತೆ ದೇವನೂರು ಕಥನ ಈ ಬಾರಿ ಪಠ್ಯದಿಂದ ತೆಗೆಯಲಾಗದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ.

ದೇವನೂರ ಮಹಾದೇವ ಅವರು ಹಿಂದೆಯೇ ಹೇಳಿದ್ದರೆ ಈ ಬಗ್ಗೆ ಚರ್ಚೆ ಮಾಡಬಹುದಿತ್ತು. ಆದರೆ, ಈಗಾಗಲೇ ಪಠ್ಯ ಪುಸ್ತಕ ಮುದ್ರಣವಾಗಿ ಮಕ್ಕಳ ಕೈಸೇರುವ ಹಂತ ಬಂದಿದೆ. ಈ ಸಂದರ್ಭದಲ್ಲಿ ಅದನ್ನು ತೆಗೆಯಲಾಗದು ಎಂದು ಸಚಿವರು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಪಠ್ಯ ಪುಸ್ತಕ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ದೇವನೂರು ಮಹಾದೇವ ಅವರು ರಾಜ್ಯ ಸರಕಾರಕ್ಕೆ ಪತ್ರ ಬರೆದು ಹತ್ತನೇ ತರಗತಿ ಪಠ್ಯದಲ್ಲಿರುವ ತಮ್ಮ ಕಥನವನ್ನು ತೆಗೆಯಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಶಿಕ್ಷಣ ಸಚಿವರು ಪ್ರತಿಕ್ರಿಯಿಸಿ, ʻʻವಾಸ್ತವ ಸ್ಥಿತಿಯನ್ನು ಹಿರಿಯ ಸಾಹಿತಿಗಳಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತೇನೆ. ತಾತ್ವಿಕ ಭಿನ್ನತೆ ನಮಗಿಲ್ಲ. ದೇವನೂರ ಅವರಿಗೆ ಇರಬಹುದು. ಇದನ್ನು ಮಾತನಾಡಿ ಬಗೆಹರಿಸುತ್ತೇನೆ,ʼʼ ಎಂದರು.

ಸಚಿವ ಬಿ.ಸಿ.ನಾಗೇಶ್

ಬದಲಾಯಿಸಿದ್ದು ನಿಜ!
ʻʻದೇವನೂರ ಹೇಳುತ್ತಿರುವುದು ಸತ್ಯದ ಮಾತುಗಳು. ನಾವು ಎಲ್ಲವನ್ನೂ ಬದಲಾವಣೆ ಮಾಡಿದ್ದೇವೆ. ಬ್ರಿಟಿಷರು ತಯಾರಿಸಿದ ಪಠ್ಯವೇ ಇತ್ತು. ನಾವು ಬಂದಮೇಲೆ ರಾಷ್ಟ್ರೀಯತೆಯನ್ನು ಸೇರಿಸಿದ್ದು, ವಾಜಪೇಯಿ ಅಧಿಕಾರಕ್ಕೆ ಬಂದ ಮೇಲೆ ರಸ್ತೆ, ಶಿಕ್ಷಣ, ರೈತ ಎಲ್ಲ ಅಭಿವೃದ್ಧಿ ಆಗಿದೆ. ನಾವು ಶಿಕ್ಷಣವನ್ನು ಮಾತ್ರ ಬದಲಾವಣೆ ಮಾಡಿಲ್ಲ. ನಾವು ರಸ್ತೆಯನ್ನು ಬದಲಾವಣೆ ಮಾಡಿದ್ದೇವೆ. ಅದರ ಬಗ್ಗೆ ಯೂ ಮಾತನಾಡಿ.ʼʼ ಎಂದು ಬಿ.ಸಿ. ನಾಗೇಶ್‌ ಚಾಟಿ ಬೀಸಿದ್ದಾರೆ.

ʻʻಪಠ್ಯ ಪುಸ್ತಕದ ಬಗ್ಗೆ ಮಾತನಾಡುತ್ತಿರುವವರು ವಿಷಯದ ಮೇಲೆ ಮಾತ ನಾಡುತ್ತಿದ್ದಾರಾ? ರಾಜಕೀಯದ ಮೇಲೆ ಮಾತನಾಡುತ್ತಿದ್ದಾರಾ? ಬರಗೂರು ರಾಮಚಂದ್ರಪ್ಪ ಪಠ್ಯ ಬದಲಾಯಿಸಿದ್ರೆ ಇವರ ವಿರೋಧವಿಲ್ಲ. ಆಗ ಒಂದೇ ಪಂಥದ ಪಠ್ಯ ಪುಸ್ತಕ ಸೇರಿದಾಗ ಅದು ತಪ್ಪಲ್ಲ ಅಲ್ವಾ? ಈಗ ಮಾತ್ರ ನಿಮಗೆ ಪಂಥಗಳು ಕಾಣುತ್ತಿದೆ. ನಮ್ಮ ಇಚ್ಛೆ ಪಂಥದಲ್ಲ. ನಾವು ಎಲ್ಲವನ್ನು ಒಪ್ಪಿ ಶ್ರೇಷ್ಠವಾದುದ್ದನ್ನು ಕೊಡುತ್ತಿದ್ದೇವೆ,ʼʼ ಎಂದು ಬಿ.ಸಿ. ನಾಗೇಶ್‌ ಟೀಕಿಸಿದ್ದಾರೆ.

ʻʻಕಾಂಗ್ರೆಸ್ ಯಾರ್ಯಾರ ಜತೆಗೋ ರಾಜಿ ಮಾಡಿಕೊಂಡು ರಾಜಕೀಯ ಮಾಡಿದೆ. ಆದರೆ ನಾವು ರಾಜಕೀಯ ಮಾಡಿರೋದು ಈ ಜನರಿಗಾಗಿ ಈ ನೆಲಕ್ಕಾಗಿ, ಇಲ್ಲಿನ ಸಂಸ್ಕೃತಿಗಾಗಿ. ಬೇರೆ ದೇಶಗಳಿಗೆ 400-500 ವರ್ಷಗಳ ಇತಿಹಾಸವೂ ಇಲ್ಲ. ಭಾರತಕ್ಕೆ 5-6 ಸಾವಿರ ವರ್ಷಗಳ ಇತಿಹಾಸ ಇದೆ. ನಾವು ಜ್ಞಾನ ಇಟ್ಟುಕೊಂಡು ಬೇರೆ ದೇಶಕ್ಕೆ ಹೋದವರು. ಬೇರೆಯವರಂತೆ ಪಿಸ್ತೂಲ್, ಕತ್ತಿ ಹಿಡಿದುಕೊಂಡು ಬಂದವರಲ್ಲʼʼ ಎಂದು ಬಿ.ಸಿ. ನಾಗೇಶ್‌ ಪ್ರತಿಪಾದಿಸಿದರು.

ಇದನ್ನೂ ಓದಿ: Textbook controversy: ತಮ್ಮ ಕಥನವನ್ನು ಪಠ್ಯದಲ್ಲಿ ಸೇರಿಸಲು ನಿರಾಕರಿಸಿದ ದೇವನೂರು

Exit mobile version