ಮೈಸೂರು: ಸಂವಿಧಾನ ಧ್ವಂಸವೇ ಆರ್‌ಎಸ್‌ಎಸ್‌ನ ಮೂಲ ಉದ್ದೇಶವಾಗಿದೆ. ಇದರ ಜತೆಗೆ ಚಾತುರ್ವರ್ಣ ಸಮಾಜ ನಿರ್ಮಾಣ, ಮನುಧರ್ಮ ಶಾಸ್ತ್ರದ ಮರು ಜಾರಿ, ಆರ್ಯನ್ ತಳಿಯೇ ಶ್ರೇಷ್ಠ ಎಂಬ ಭಾವನೆಯ ಬಿತ್ತನೆ ಅದರ ಗುರಿಯಾಗಿದೆ ಎಂದು ಸಾಹಿತಿ ದೇವನೂರು ಮಹಾದೇವ ಟೀಕಿಸಿದ್ದಾರೆ.
ʻಆರ್‌ಎಸ್‌ಎಸ್: ಆಳ ಮತ್ತು ಅಗಲʼ ಎಂಬ ಕೃತಿಯನ್ನು ದೇವನೂರು ಮಹಾದೇವ ರಚಿಸಿದ್ದು, 68 ಪುಟಗಳ ಈ ಕೃತಿ ಸಂಪೂರ್ಣವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತ ಟೀಕೆ, ನಕಾರಾತ್ಮಕ ವರ್ಣನೆಗಳಿಗೆ ಮೀಸಲಾಗಿದೆ. ಆರು ಭಾಗ ಹೊಂದಿರುವ ಕಿರು ಹೊತ್ತಿಗೆಯ ಮೂಲಕ ಅವರು ಸಾಕಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಸುಳ್ಳೇ ಆರ್‌ಎಸ್‌ಎಸ್‌ನ ಮನೆ ದೇವರು. ಹಿಂದೂ ಪರ ಸಂಘಟನೆಯವರು ಊರಿಗೆ ಹೊಕ್ಕ ಕಳ್ಳರು. ಪ್ರಧಾನಿ ನರೇಂದ್ರ ಮೋದಿ ಉತ್ಸವ ಮೂರ್ತಿ ಮಾತ್ರ. ಮೂಲದೇವರು ನಾಗಪುರದ ಗರ್ಭಗುಡಿಯಲ್ಲಿದೆ. ಇಂದಿರಾ ಗಾಂಧಿ ಕೇವಲ ಆಡಳಿತಾತ್ಮಕ ಸರ್ವಾಧಿಕಾರಿ ಆಗಿದ್ದರೆ, ಮೋದಿ ಸರ್ವ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಆರ್‌ಎಸ್‌ಎಸ್ ಏಕ ಧರ್ಮ, ಏಕ ದೇಶ, ಏಕಭಾಷೆ, ಏಕ ನಾಯಕತ್ವದಲ್ಲಿ ನಂಬಿಕೆ ಇಟ್ಟಿದೆ. ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಮಾಡಬೇಕು ಎಂಬುದು ಅದರ ಭೂತ ಚೇಷ್ಟೆಯಾಗಿದೆ. ರಾಜ್ಯಗಳ ಅಸ್ತಿತ್ವವನ್ನೇ ಬುಡಮೇಲು ಮಾಡಿ ಕೇಂದ್ರವನ್ನು ಸರ್ವಾಧಿಕಾರಿ ಮಾಡುವುದಕ್ಕಾಗಿ ಜಿಎಸ್‌ಟಿ ಜಾರಿಗೊಳಿಸಲಾಗಿದೆ ಎಂದಿದ್ದಾರೆ.
ಹಿಂದೂಪರ ಸಂಘಟನೆಗಳ ಸದಸ್ಯರು ದೇವಸ್ಥಾನ ಜೀರ್ಣೋದ್ಧಾರ, ಭಜನೆ ಮುಂತಾದ ವೇಷಗಳಲ್ಲಿ ಮನೆಮನೆಗೆ ಬರುತ್ತಾರೆ. ಅವರ ಬಗ್ಗೆ ಎಚ್ಚರಿಕೆ ಇರಬೇಕು. ಜನ ಸರ್ಕಾರವನ್ನು ಪ್ರಶ್ನೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ಹಿಂದೂ- ಮುಸ್ಲಿಂ ದ್ವೇಷ ಹರಡಿ ಅವರ ಗಮನವನ್ನು ಆಡಳಿತದ ವೈಫಲ್ಯಗಳಿಂದ ಇತರ ಕಡೆಗೆ ಹರಿಸಲಾಗುತ್ತಿದೆ. ಪ್ರಜೆಗಳ ಹೊಟ್ಟೆಗೆ ದ್ವೇಷದ ಆಹಾರ ನೀಡಲಾಗುತ್ತಿದೆ. ಇದೆಲ್ಲದಕ್ಕೂ ಪ್ರೀತಿ, ಸಹನೆ, ನ್ಯಾಯ ಮಾತ್ರ ಪರಿಹಾರ ಎಂದು ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
ಪಾಕಿಸ್ತಾನವನ್ನು ಶಾಶ್ವತ ಶತ್ರುರಾಷ್ಟ್ರವಾಗಿ ಬಿಂಬಿಸುತ್ತ ಇಲ್ಲಿ ಸಣ್ಣಪುಟ್ಟ ಗಲಾಟೆಗಳಾದರೂ ಅದಕ್ಕೆಲ್ಲಾ ಪಾಕಿಸ್ತಾನವೇ ಕಾರಣವೆಂದು ಪ್ರಚಾರ ಮಾಡುತ್ತಾ, ಪರಸ್ಪರ ಎತ್ತಿಕಟ್ಟುತ್ತಾ, ಸಮಾಜದಲ್ಲಿ ಭೀತಿ ವಾತಾವರಣ ಉಂಟುಮಾಡುತ್ತಾ, ಕೆಲವು ಸಲ ತಾವೇ ಗಲಾಟೆ ಮಾಡಿ ಅದನ್ನು ಮುಸ್ಲಿಮರ ಮೇಲೆ ಆರೋಪಿಸುತ್ತಾ, ಎಲ್ಲರ ನೆಮ್ಮದಿ ಕೆಡಿಸಿ ಉಂಟಾದ ಗೊಂದಲ, ಅನುಮಾನ, ದ್ವೇಷದ ವಾತಾವರಣದಲ್ಲಿ ಬಿಜೆಪಿ ಅಧಿಕಾರಕ್ಕೂ ಬಂದಿದೆ ಎಂದು ಆರೋಪಿಸಿದ್ದಾರೆ.
ಈ ಕೃತಿಯನ್ನು ಎಡ ಪಂಥೀಯ ಸಂಘಟನೆಗಳು ಉಚಿತವಾಗಿ ಹಂಚುತ್ತಿವೆ. ಆರ್‌ಎಸ್‌ಎಸ್‌ನ ವರ್ಚಸ್ಸಿಗೆ ಭಂಗ ತರುವುದೇ ಈ ಕೃತಿಯ ಮೂಲ ಉದ್ದೇಶವಾಗಿದೆ ಎಂದು ಸಂಘ ಪರಿವಾರದ ಮುಖಂಡರು ದೂರಿದ್ದಾರೆ.