ಮೈಸೂರು: ದೇವರಾಜ ಮಾರುಕಟ್ಟೆಯ ಪಾರಂಪರಿಕ ಕಟ್ಟಡ ನೆಲಸಮ ವಿರೋಧಿಸಿ ನಡೆದಿರುವ ಹೋರಾಟಕ್ಕೆ ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿಕೊಂಡಿದ್ದಾರೆ. ದೇವರಾಜ ಮಾರುಕಟ್ಟೆ ಮಳಿಗೆದಾರರು ಮತ್ತು ವ್ಯಾಪಾರಿಗಳಿಂದ ನಡೆದ ಮೆರವಣಿಗೆಗೆ ಚಿಕ್ಕಗಡಿಯಾರ ವೃತ್ತದಲ್ಲಿ ಅವರು ಚಾಲನೆ ನೀಡಿದರು.
ಮೈಸೂರು ಅರಮನೆ ಕಟ್ಟಿ 100 ವರ್ಷದ ಮೇಲಾಗಿದೆ ಎಂದು ಅರಮನೆ ಕೆಡವಿ ಬೇರೆ ಕಟ್ಟಲು ಆಗುತ್ತಾ? ಮೈಸೂರಿನ ಸಂಸ್ಕೃತಿಯು ಪಾರಂಪರಿಕ ಕಟ್ಟಡಗಳ ಜತೆ ಬೆರೆತಿದೆ. ನೂರು ವರ್ಷ ಆಗಿದೆ ಎಂದು ಕಟ್ಟಡಗಳನ್ನು ಒಡೆಯುತ್ತಾ ಹೋದರೆ ಪಾರಂಪರಿಕತೆ ಉಳಿಯುವುದಿಲ್ಲ. ಒಂದು ಪಾರಂಪರಿಕ ಕಟ್ಟಡ ಕೆಡವಿ ಅದೇ ಮಾದರಿಯಲ್ಲಿ ಮತ್ತೆ ಕಟ್ಟಿದರೂ ಆ ಕಟ್ಟಡಕ್ಕೆ ಹಳೇ ಇತಿಹಾಸ ಬರುವುದಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪಾರಂಪರಿಕ ಕಟ್ಟಡಗಳನ್ನು ಉಳಿಸುವ ಹೊಸ ತಜ್ಞರ ಸಮಿತಿ ರಚನೆ ಮಾಡಬೇಕು ಎಂದು ಒಡೆಯರ್ ಪ್ರತಿಪಾದಿಸಿದರು.
ಮೈಸೂರಿನ ಅನನ್ಯತೆ
ಜನರ ಅಭಿಪ್ರಾಯಗಳಿಗೆ, ಭಾವನಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ. ನಮ್ಮ ವಂಶದ ಖಾಸಗಿ ಆಸ್ತಿಗಳ ನವೀಕರಣ ಬೇರೆ ವಿಚಾರ, ಸಾರ್ವಜನಿಕರ ಸ್ವತ್ತಿನ ಕಟ್ಟಡಗಳದ್ದು ಬೇರೆ ವಿಚಾರ. ಅರಮನೆಯ ಆಸ್ತಿಯ ವಿಚಾರಕ್ಕೂ ಸಾರ್ವಜನಿಕರ ಸ್ವತ್ತಿನ ಪಾರಂಪರಿಕ ಕಟ್ಟಡಗಳಿಗೂ ಸಂಬಂಧ ಕಲ್ಪಿಸಬೇಡಿ. ಇದನ್ನು ಪರಿಶೀಲಿಸಿದ ಪ್ರತಿಯೊಬ್ಬ ತಜ್ಞರೂ ಇದನ್ನು ಸಂರಕ್ಷಣೆ ಮಾಡಬಹುದು ಎಂದಿದ್ದಾರೆ. ಸರಿಯಾಗಿ ಸಂರಕ್ಷಿಸಿದರೆ ಇನ್ನೂ ನೂರು ವರ್ಷ ಕಟ್ಟಡದನ್ನು ಉಳಿಸಬಹುದು. ನಮ್ಮ ಪೂರ್ವಜರೂ ನಾವೂ ಇದನ್ನು ನೋಡಿಕೊಂಡು ಬೆಳೆದಿದ್ದೇವೆ. ಇದೇ ನಮ್ಮ ಮೈಸೂರು ಕಲೆ, ಪಾರಂಪರಿಕತೆ. ಇದರಿಂದಲೇ ಮೈಸೂರಿಗೆ ಅನನ್ಯತೆ ಉಂಟಾಗಿದ್ದು, ನಮ್ಮ ಮುಂಬರುವ ಪೀಳಿಗೆಗೂ ಕಟ್ಟಡವನ್ನು ಉಳಿಸಬೇಕು. ನಾವು ಅನುಭವಿಸಿದ ಪರಂಪರೆಯ ರುಚಿ ಅವರಿಗೂ ಸಿಗಬೇಕು. ನಾವು ಕಟ್ಟಡ ರಕ್ಷಣೆಗಾಗಿ ಮಾತ್ರವಲ್ಲದೆ ಪರಂಪರೆ ಉಳಿಸಲೂ ಹೋರಾಟ ಮಾಡುತ್ತಿದ್ದೇವೆ ಎಂದು ಯದುವೀರ ಸ್ಪಷ್ಟಪಡಿಸಿದರು.
ದೇವರಾಜ ಮಾರುಕಟ್ಟೆ ಒಡೆಯಲು ಸೂಚಿಸಿರುವ ತಜ್ಞರ ಸಮಿತಿಯ ವರದಿ ಮೇಲೆ ನಮಗೆ ನಂಬಿಕೆ ಇಲ್ಲ. ನಿಜಕ್ಕೂ ಈ ಸಮಿತಿಯಲ್ಲಿ ಯಾರ್ಯಾರು ಇರಬೇಕಿತ್ತೋ ಅವರು ಇಲ್ಲ ಎಂದಿದ್ದಾರೆ ಯದುವೀರ್.
3 ವರ್ಷದಿಂದ ನಿಮ್ಮ ಜತೆಯಲ್ಲಿ ನಿಂತು ಹೋರಾಟ ಮಾಡಿದ್ದೇನೆ. ಹೋರಾಟದಲ್ಲಿ ಸದಾ ನಿಮ್ಮ ಜತೆ ಇರುತ್ತೇವೆ ಎಂದು ದೇವರಾಜ ಮಾರುಕಟ್ಟೆ ಬಾಡಿಗೆದಾರರಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಯ ನೀಡಿದರು. ವ್ಯಾಪಾರಸ್ಥರು ಅಂಗಡಿಗಳನ್ನು ಮಧ್ಯಾಹ್ನದವರೆಗೆ ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ದೇವರಾಜ ಮಾರುಕಟ್ಟೆ ನಮ್ಮ ವ್ಯಾಪ್ತಿಗೆ ಕೊಟ್ಟರೆ ನಾವೇ ಪುನಶ್ಚೇತನ ಮಾಡುತ್ತೇವೆಂಬ ಪ್ರಮೋದಾದೇವಿ ಒಡೆಯರ್ ಹೇಳಿಕೆಗೆ ಯದುವೀರ್ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಅದನ್ನು ಅವರ ಬಳಿಯೇ ಕೇಳಿ ಎಂದರು.
ಇದನ್ನೂ ಓದಿ: ಮೈಸೂರಿನ ರಾಜೇಂದ್ರ ವಿಲಾಸ ಅರಮನೆಯ ನವೀಕರಣ: ರಾಜಮಾತೆ ಪ್ರಮೋದಾದೇವಿ ಹೇಳಿದ್ದೇನು..?