ಬೆಂಗಳೂರು: ಸರಸರನೆ ಹರಿಯುತ್ತ ಬುಸುಗುಟ್ಟವ ಹಾವು ಕಂಡರೆ ಭಯಪಡದವರು ಕಡಿಮೆ. ನಗರ ವಾಸಿಗಳಿಗೆ ಬೇಸಿಗೆ ಕಾಲದಲ್ಲಿ ನಾಗರ ಪ್ರತ್ಯಕ್ಷವಾದರೆ, ಗ್ರಾಮೀಣ ಭಾಗದಲ್ಲಿ ಆಗಿಂದಾಗ್ಗೆ ಅತಿಥಿಯಾಗಿರುವ ಹಾವುಗಳಲ್ಲಿ ಶೇ. 1% ವಿಷಕಾರಿಯಾದವು. ನಾಗರಹಾವು, ಕೊಳಕ ಮಂಡಲದಂತಹ ಹಾವುಗಳು ಹಾಗೂ ಇನ್ನಿತರೆ ವಿಷ ಜಂತುಗಳ ವಿಷಕ್ಕೆ ಪ್ರತಿವಿಷ ಉತ್ಪಾದನೆ ಮಾಡಲು, ದೇಶದ ಮೊಟ್ಟಮೊದಲ ಪ್ರತಿವಿಷ ಸಂಶೋಧನಾ ಕೇಂದ್ರವನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸ್ಥಾಪಿಸಲಾಗುತ್ತದೆ.
ಇದನ್ನೂ ಓದಿ | ವಿಷಕಾರಿ ಹಾವು ಕಚ್ಚಿ ಶಾಲಾ ಬಾಲಕ ಸಾವು
ದೇಶದಲ್ಲಿ ಪ್ರತಿವರ್ಷ ಸರಾಸರಿ 58 ಸಾವಿರ ಸಾವು ಹಾವುಗಳ ಕಡಿತದಿಂದ ಸಂಭವಿಸುತ್ತಿದ್ದು, 1.37 ಲಕ್ಷದಷ್ಟು ಮಂದಿ ಅಂಗವೈಕಲ್ಯಕ್ಕೆ ಒಳಗಾಗುತ್ತಿರುವುದು ಆತಂಕ ಹೆಚ್ಚಿಸಿದೆ. ವೈವಿಧ್ಯಮಯ ಜೀವ ಪರಿಸರವನ್ನು ಹೊಂದಿರುವ ಭಾರತದಲ್ಲಿ ಹಾವು ಕಡಿತದ ಪ್ರಕರಣಗಳು ಹೆಚ್ಚಾಗಿವೆ. ಇಂತಹ ಸಂದರ್ಭಗಳಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ, ಔಷಧಿ ಕೊರತೆಯಿಂದಲೂ ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಿವೆ.
ಹೀಗೆ ಹಾವು ಮತ್ತಿತರ ಜಂತುಗಳ ವಿಷಕ್ಕೆ ಪ್ರತಿವಿಷ ಉತ್ಪಾದನೆ ಮಾಡಲು ರಾಜ್ಯದ ರಾಜಧಾನಿಯಲ್ಲಿ ಪ್ರತಿವಿಷ ಸಂಶೋಧನಾ ಕೇಂದ್ರ ನಿರ್ಮಾಣವಾಗುತ್ತಿದೆ. 16 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಈ ಕೇಂದ್ರವು ಕಾರ್ಯಾರಂಭ ಮಾಡಲಿದ್ದು, ಒಟ್ಟು 7 ಕೋಟಿ ರೂ. ವೆಚ್ಚದಲ್ಲಿ ಮುಂದಿನ ಐದು ವರ್ಷಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ. ಈ ಕೇಂದ್ರವು ದೇಶದಲ್ಲಿ ಪ್ರಮುಖವಾಗಿ ಹಾವಿನ ಕಡಿತದಿಂದ ಸಂಭವಿಸುತ್ತಿರುವ ರೈತರ ಸಾವಿನ ಪ್ರಮಾಣವನ್ನು ತಗ್ಗಿಸಲು ನೆರವಾಗಲಿದೆ.
ಸಂಶೋಧನಾ ಕೇಂದ್ರ ಹೇಗಿರಲಿದೆ?
ಹಾವಿನ ವಿಷ ಹಾಗೂ ಮತ್ತಿತರ ಜಂತುಗಳ ವಿಷಗಳಿಗೆ ಪ್ರತಿವಿಷ ಉತ್ಪಾದಿಸಲು ನೆರವಾಗುವ ಪ್ರತಿವಿಷ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಐಟಿಬಿಟಿ ಸಚಿವ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸೋಮವಾರ ಬೆಂಗಳೂರು ಹೆಲಿಕ್ಸ್ ಬಯೋಟೆಕ್ ಪಾರ್ಕ್‌ನ ಐಬಿಎಬಿ ಸಂಸ್ಥೆಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ರಾಜ್ಯ ಸರಕಾರದ ಐಟಿಬಿಟಿ ಇಲಾಖೆಯ ಕರ್ನಾಟಕ ನಾವೀನ್ಯತಾ ಮತ್ತು ತಂತ್ರಜ್ಞಾನ ಸಂಸ್ಥೆ (ಕಿಟ್ಸ್), ಐಬಿಎಬಿ (ಇನ್ಸ್‌ಟಿಟ್ಯೂಟ್ ಆಫ್ ಬಯೋ ಇನ್‌ಫಾರ್ಮ್ಯಾಟಿಕ್ಸ್ ಅಂಡ್ ಅಪ್ಲೈಡ್ ಬಯೊಟೆಕ್ನಾಲಜಿ) ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ಸಹಭಾಗಿತ್ವದಡಿ ಈ ನೂತನ ಸಂಶೋಧನಾ ಕೇಂದ್ರವು ಅಸ್ತಿತ್ವಕ್ಕೆ ಬರುತ್ತಿದೆ. ಇಂತಹ ಒಂದು ಕೇಂದ್ರವು ಭಾರತದಲ್ಲೇ ಮೊತ್ತಮೊದಲನೆಯದಾಗಿದೆ.
ಉದ್ದೇಶಿತ ಸಂಶೋಧನಾ ಕೇಂದ್ರದಲ್ಲಿ ಸರ್ಪಾಗಾರ, ಸಂಶೋಧನಾ ಪ್ರಯೋಗಾಲಯ, ವಿಷ ಸಂಗ್ರಹಣಾ ವ್ಯವಸ್ಥೆ, ಇನ್‌ಕ್ಯುಬೇಷನ್ ಸೌಲಭ್ಯ ಮತ್ತು ಡಿಜಿಟಲ್ ಲೈಬ್ರರಿ ಇರಲಿದೆ. ಇಲ್ಲಿನ ಸರ್ಪಾಗಾರದಲ್ಲಿ 23 ಪ್ರಭೇದಗಳಿಗೆ ಸೇರಿದ 500ಕ್ಕೂ ಹೆಚ್ಚು ಬಗೆಯ ವಿಷಯುಕ್ತ ಜಂತುಗಳನ್ನು ಅಧ್ಯಯನದ ಸಲುವಾಗಿ ಇಡಲಾಗುವುದು. ಜತೆಗೆ, ಭಾರತೀಯ ಉಪಖಂಡದಲ್ಲಿರುವ ವಿಷಪೂರಿತ ಚೇಳುಗಳು ಮತ್ತು ಜೇಡರ ಹುಳುಗಳು ಕೂಡ ಇಲ್ಲಿನ ಸರ್ಪಾಗಾರದಲ್ಲಿ ಇರಲಿವೆ. ಪ್ರತಿವಿಷ ಚಿಕಿತ್ಸೆಯಲ್ಲಿ ಸಂಶೋಧನೆ ನಡೆಸುವ ಆಸಕ್ತಿ ಇರುವ ನವೋದ್ಯಮಗಳಿಗೆ ಇಲ್ಲಿನ ಇನ್‌ಕ್ಯುಬೇಷನ್ ಕೇಂದ್ರದಿಂದ ಪ್ರೋತ್ಸಾಹ ಒದಗಿಸಲಾಗುವುದು.
ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥನಾರಾಯಣ, ಈ ಕೇಂದ್ರವು ಅತ್ಯಾಧುನಿಕ ವೈಜ್ಞಾನಿಕ ತಂತ್ರಜ್ಞಾನಗಳ ಮೂಲಕ ಪ್ರತಿವಿಷ ಥೆರಪಿಗಳನ್ನು ಅಭಿವೃದ್ಧಿ ಪಡಿಸಲಿದೆ. ಜತೆಗೆ, ಹಾವು ಕಡಿತಕ್ಕೆ ಇರುವ ಸಾಂಪ್ರದಾಯಿಕ ಚಿಕಿತ್ಸೆಗಳ ಪರಿಣಾಮಕಾರತೆಯನ್ನೂ ಸುಧಾರಿಸಲಿದೆ. ನೂತನ ಕೇಂದ್ರವು ವನ್ಯಜೀವಿ ವಿಧಿವಿಜ್ಞಾನ ಸಂಶೋಧನೆ, ಜೈವಿಕ ತಂತ್ರಜ್ಞಾನ ನಾವೀನ್ಯತೆ, ಹಾವು ಕಡಿತ ಕುರಿತು ಅರಿವು ಮತ್ತು ಜನಸಂಪರ್ಕ, ಜತೆಗೆ ಈ ವಲಯದಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ಅರಣ್ಯ ಇಲಾಖೆಗೂ ನೆರವು ನೀಡಲಿದೆ.
ಸಂಶೋಧನಾ ಕೇಂದ್ರವು ಕಂಡುಹಿಡಿಯಲಿರುವ ಸಂಶೋಧನಾ ಫಲಿತಾಂಶಗಳನ್ನು ತ್ವರಿತ ಗತಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಇದರಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸುಧಾರಣೆಯ ಜತೆಗೆ ರಾಜ್ಯದ ಜೈವಿಕ ಆರ್ಥಿಕತೆಯೂ ಬಲಗೊಳ್ಳಲಿದೆ. ಇದಕ್ಕೆ ಪೂರಕವಾಗಿ, ಪ್ರಮುಖ ಪ್ರತಿವಿಷ ಉತ್ಪಾದನಾ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ೈಐಎಸ್‌ಸಿಯ ಡಾ. ಕಾರ್ತಿಕ್ ಸುಣಗಾರ್, ಪರಿಸರದಲ್ಲಿ ಹಾವಿನಂತಹ ಸರೀಸೃಪಗಳಿಗೂ ಪ್ರಮುಖ ಸ್ಥಾನವಿದೆ. ಆದರೆ, ಅವುಗಳ ಕಡಿತದಿಂದ ಉಂಟಾಗುವ ಸಾವುನೋವುಗಳನ್ನು ಆದಷ್ಟೂ ಕಡಿಮೆ ಮಾಡುವಂತಹ ಜೀವರಕ್ಷಕ ಪ್ರತಿವಿಷಗಳು ಅತ್ಯಗತ್ಯ. ಈ ನಿಟ್ಟಿನಲ್ಲಿ ಈಗ ಇರುವ ತೀವ್ರ ಕೊರತೆಯನ್ನು ಹೋಗಲಾಡಿಸುವುದು ನೂತನ ಕೇಂದ್ರದ ಗುರಿಯಾಗಿದೆ ಎಂದರು.
ಇದನ್ನೂ ಓದಿ | ಮನೆಯ ಗೇಟಿನ ಪೋಸ್ಟ್ ಬಾಕ್ಸ್ ಒಳಗೆ ಬೆಚ್ಚಗೆ ಮಲಗಿತ್ತು ತೋಳದ ಹಾವು!