ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಲಾರಿ ಹಾಗೂ ಖಾಸಗಿ ಬಸ್ ಡಿಕ್ಕಿಯಾಗಿ ಸೋಮವಾರ ತಡ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ 8 ಮಂದಿ ಸಾವಿಗೀಡಾಗಿದ್ದಾರೆ. ಈ ದುರ್ಘಟನೆಯಲ್ಲಿ 6 ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾದರೆ, ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಹುಬ್ಬಳ್ಳಿಯ ತಾರಿಹಾಳ ಬೈಪಾಸ್‌ನಲ್ಲಿ ರಾತ್ರಿ 12.40 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಗಾಯಗೊಂಡಿರುವ 26 ಮಂದಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲ್ಲಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ನ್ಯಾಷನಲ್ ಟ್ರಾವೆಲ್ಸ್ ಬಸ್ ಮತ್ತು ಅಕ್ಕಿಯ ಮೂಟೆಗಳನ್ನು ಹೇರಿಕೊಂಡು ಸಂಚರಿಸುತ್ತಿದ್ದ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿತು.
ಬಸ್ ಚಾಲಕ ಟ್ರ್ಯಾಕ್ಟರ್‌ನ್ನು ಓವರಟೇಕ್ ಮಾಡಲು ಹೋಗಿ ಎದುರುಗಡೆಯಿಂದ ಬಂದ್ ಲಾರಿಗೆ ಡಿಕ್ಕಿ ಹೊಡೆಸಿದ್ದಾನೆ. ಬಸ್‌ನಲ್ಲಿ ನಿದ್ದೆಗೆ ಜಾರಿದ್ದ ಜನರು ಕಣ್ತೆರೆಯುವಷ್ಟರಲ್ಲಿ ಬಸ್ ಮಗುಚಿ ಬಿದ್ದಿದೆ. ಅಪಘಾತ ಸಂಭವಿಸುತ್ತಿದ್ದ ಹಾಗೇ ಬೈಪಾಸ್ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಕಮೀಷನರ್ ಲಾಬುರಾಮ್ ನೇತೃತ್ವದ ಪೊಲೀಸರ ತಂಡ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಮೃತದೇಹಗಳನ್ನು ಕಿಮ್ಸ್ ಶವಗಾರಕ್ಕೆ ಸಾಗಿಸಲಾಗಿದೆ.
ಅಪಘಾತ ರಭಸಕ್ಕೆ ಬಸ್ ಮತ್ತು ಲಾರಿ ಸಂಪೂರ್ಣ ನುಜ್ಜುಗುಜ್ಜಾಗಿವೆ. ಸ್ಥಳದಲ್ಲೇ 6 ಜನ ಮೃತಪಟ್ಟರೆ, ಆಸ್ಪತ್ರೆಯಲ್ಲಿ ಇಬ್ಬರು ಕೊನೆಯುಸಿರು ಎಳೆದಿದ್ದಾರೆ. ಅಪಘಾತವಾದ ವಾಹನಗಳನ್ನು ತೆರವುಗೊಳಿಸಿ ರಸ್ತೆ ನಸುಕಿನ ಜಾವ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಳುಗಳ ನರಳಾಟ ಮುಗಿಲು ಮುಟ್ಟಿತ್ತು. ೨೨ ಜನ ಗಾಯಳುಗಳ ಪೈಕಿ ಹತ್ತು ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಐದು ಜನರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಗಾಯಗೊಂಡವರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆಸ್ಪತ್ರೆಗೆ ಭೇಟಿ ನೀಡಿದ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಗಾಯಳುಗಳ ಆರೋಗ್ಯ ವಿಚಾರಿಸಿದ್ದಾರೆ. ಸೂಕ್ತ ಚಿಕಿತ್ಸೆಯ ಭರವಸೆ ನೀಡಿದ್ದಾರೆ.
ಲಾರಿ ಚಾಲಕ, ಕ್ಲೀನರ್ ಸೇರಿದಂತೆ ಮೂವರು ಮೃತರಾಗಿದ್ದಾರೆ. ಖಾಸಗಿ ಬಸ್‌ನಲ್ಲಿದ್ದ 5 ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಮೃತಪಟ್ಟ ಎಂಟು ಜನರ ಪೈಕಿ ನಾಲ್ವರು ಕನ್ನಡಿಗರಾಗಿದ್ದು, ಇನ್ನುಳಿದ ನಾಲ್ವರು ಮಹಾರಾಷ್ಟ್ರ ಮೂಲದವರು. ನ್ಯಾಷನಲ್ ಟ್ರಾವೆಲ್ಸ್‌ನ ಚಾಲಕರಾದ ಅತಾವುಲ್ಲಾ ಖಾನ್(40) ಹಾಗೂ ನಾಗರಾಜ ಆಚಾರ್(56) ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿಗಳು. ಮೃತ ಮತ್ತೋರ್ವ ಪ್ರಯಾಣಿಕ ಮಹಮ್ಮದ್ ದಯಾನ್‌ಬೇಗ್(17) ಮೈಸೂರು ನಿವಾಸಿ. ಇಚಲಕರಂಜಿಯ ಬಾಬಾಸೋ ಚೌಗಲೇ(59) ಕೊಲ್ಹಾಪುರದ ಅಕ್ಷಯ ದವರ್(28) ಅಕೀಫ್(40) ಮಸ್ತಾನ್, ಅಫಾಕ್( 41).
ನ್ಯಾಷನಲ್ ಟ್ರಾವೆಲ್ಸ್‌ನ KA 51 AA 7146 ನಂಬರ್‌ನ ಬಸ್ ಮತ್ತು MH 16 AY6916 ನಂಬರ್‌ನ ಲಾರಿ ನಡುವೆ ಅಪಘಾತ ಸಂಭವಿಸಿದೆ. ಬಸ್ ಚಾಲಕನ ನಿರ್ಲಕ್ಷ್ಯ ಮತ್ತು ಅತಿಯಾದ ವೇಗವೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದ್ದು,
ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ.