ಬೆಂಗಳೂರು: ಸ್ವಾತಂತ್ರ್ಯವೀರ ಸಾವರ್ಕರ್ ವಿಚಾರದಲ್ಲಿ ಕಾನೂನು ಬದ್ಧವಾಗಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಹಾವೇರಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಪ್ರವಾಸ ಮಾಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ತಲುಪಿದ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಕಾನೂನು ಬದ್ಧವಾಗಿ ತನಿಖೆ ನಡೆಸುತ್ತೇವೆ. ಆದರೆ ಈ ವಿಚಾರವನ್ನು ವಿರೋಧ ಪಕ್ಷಗಳು ಎಷ್ಟರ ಮಟ್ಟಿಗೆ ರಾಜಕೀಯಕ್ಕೆ ಕೊಂಡೊಯ್ಯಬೇಕು ಎನ್ನುವುದನ್ನು ಅವರು ನಿರ್ಧಾರ ಮಾಡಬೇಕು ಎಂದರು.
ಕಾಂಗ್ರೆಸ್‌ಗೆ ವಿರೋಧವಾಗಿ ಗಣೇಶೋತ್ಸವದಲ್ಲಿ ಸಾವರ್ಕರ್ ಭಾವಚಿತ್ರ ಬಳಸುವ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ಯಾವುದಾದರೂ ವೈಚಾರಿಕತೆಯನ್ನು ವೈಚಾರಿಕತೆಯಿಂದಲೇ ವಿರೋಧಿಸಬೇಕು, ಪ್ರತಿಪಾದಿಸಬೇಕು. ಸಾವರ್ಕರ್ ಅವರನ್ನು ಇಂದಿರಾ ಗಾಂಧಿಯವರು ಶ್ರೇಷ್ಠ ಪುತ್ರ ಎಂದಿದ್ದರು. ಕೆಲವರಿಗೆ ಅವರ ಕುರಿತು ನಂಬಿಕೆ ಇದೆ, ಕೆಲವರಿಗೆ ವಿರೋಧ ಇದೆ. ಯಾವ ವೇದಿಕೆಯಲ್ಲಿ, ಯಾವ ರೀತಿ ಇದನ್ನು ಪ್ರಕಟಿಸಬೇಕು ಎನ್ನುವುದು ಅವರವರ ಜವಾಬ್ದಾರಿ. ಹಾಗಿದ್ದಾಗ ಭಿನ್ನಾಭಿಪ್ರಾದಲ್ಲೂ ಎಲ್ಲರೂ ಕೆಲಸ ಮಾಡಬಹುದು. ಅದರ ಬದಲಿಗೆ ಬೀದಿಗೆ ಎಳೆದು ತರುವುದು, ಕಾನೂನು ಸುವ್ಯವಸ್ಥೆಗೆ ತೊಂದರೆ ಮಾಡುವಂತೆ ಆಗಬಾರದು ಎಂದರು.
ಕಳಸಾ ಬಂಡೂರಿ ನನೆಗುದಿಗೆ ಬಿದ್ದಿದೆ ಎಂಬ ಕುರಿತು ಪ್ರತಿಕ್ರಿಯಿಸಿ, ನನೆಗುದಿಗೆ ಬಿದ್ದಿಲ್ಲ. ಫಾರೆಸ್ಟ್ ಕ್ಲಿಯರೆನ್ಸ್ ಅಂತಿಮ ಘಟ್ಟದಲ್ಲಿದೆ, ಸಿಡಬ್ಲ್ಯುಸಿಯಲ್ಲೂ ಅಂತಿಮ ಘಟ್ಟದಲ್ಲಿದೆ, ಇವೆರಡೂ ಕ್ಲಿಯರ್ ಆದ ಕೂಡಲೆ ಮುಂದುವರಿಯುತ್ತದೆ ಎಂದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಶಿಗ್ಗಾಂವಿಗೆ ಬೊಮ್ಮಾಯಿ ತೆರಳಿದರು. ಶಿಗ್ಗಾಂವಿ ಮತ್ತು ಸವಣೂರಿನಲ್ಲಿ ವಕೀಲರ ಸಂಘಗಳ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಹಾವೇರಿ ನ್ಯಾಯಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ವಕೀಲರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಲಿದ್ದಾರೆ.
ಸಂಜೆ 5.30ಕ್ಕೆ ಹಾವೇರಿಯ ಪ್ರವಾಸಿ ಮಂದಿರದ ಬಳಿ ನಿರ್ಮಿಸಲಾಗಿರುವ ಸಂಚಾರಿ ಪೊಲೀಸ್ ಠಾಣೆಯ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಈ ಎಲ್ಲ ಕಾರ್ಯಕ್ರಮಗಳ ನಂತರ ಸಂಜೆ ಹಾವೇರಿಯಿಂದ ರಸ್ತೆ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಿಶೇಷ ವಿಮಾನದ ಮೂಲಕ ಮರಳಲಿದ್ದಾರೆ.
ಇದನ್ನೂ ಓದಿ | ಸಿದ್ದರಾಮಯ್ಯ ಮಜಾವಾದಿ, ಆರ್‌ಎಸ್‌ಎಸ್ ಎಂದರೆ ಅರ್ಥವಾಗಲ್ಲ: ಸಿ ಟಿ ರವಿ