Site icon Vistara News

Coronavirus | ರಾಜ್ಯದಲ್ಲಿದೆ ಎಂಟೂವರೆ ಲಕ್ಷ ಡೋಸ್‌: ಆಸ್ಪತ್ರೆಗಳಲ್ಲಿ ಸಿದ್ಧತೆ ಪರಿಶೀಲಿಸಿದ ಸಚಿವ ಡಾ. ಸುಧಾಕರ್‌

Tipu Sultan issue I know former Prime Minister Deve Gowda Dont know who was Urigowda Nanjegowda say Dr Sudhakar

ಹುಬ್ಬಳ್ಳಿ: ಕೋವಿಡ್‌ (coronavirus) ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಕೈಗೊಂಡ ʼಮಾಕ್‌ ಡ್ರಿಲ್‌ʼ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಪರಿಶೀಲನೆ ನಡೆಸಿದರು. ಜನರು ಸರ್ಕಾರದ ಕ್ರಮಗಳೊಂದಿಗೆ ಕೈ ಜೋಡಿಸಿ ಮುನ್ನೆಚ್ಚರಿಕೆ ಕ್ರಮ ಪಾಲಿಸಬೇಕು. ರಾಜ್ಯದಲ್ಲಿ ಎಂಟೂವರೆ ಲಕ್ಷ ಡೋಸ್‌ ಲಸಿಕೆ ಲಭ್ಯವಿದ್ದು, ಎಲ್ಲರೂ 3ನೇ ಡೋಸ್‌ ಪಡೆಯಬೇಕು ಎಂದು ಈ ಸಂದರ್ಭದಲ್ಲಿ ಸುಧಾಕರ್‌ ಮನವಿ ಮಾಡಿದರು.

ಹುಬ್ಬಳ್ಳಿ ಮೆಡಿಕಲ್‌ ಕಾಲೇಜಿನಲ್ಲಿ ಮಾತನಾಡಿದ ಸಚಿವ ಡಾ. ಸುಧಾಕರ್‌, ಕೋವಿಡ್‌ನ ಬಿಎಫ್‌ 7 ವೈರಸ್‌ ಕೂಡ ಓಮೈಕ್ರಾನ್‌ನ ಮತ್ತೊಂದು ರೂಪ. ಹೊಸ ವೈರಾಣು ವೇಗವಾಗಿ ಹರಡಿದರೂ ರೋಗ ತೀವ್ರತೆ ಇಲ್ಲ. ವಿವಿಧ ಅನಾರೋಗ್ಯಗಳಿಗೆ ಒಳಗಾದವರಲ್ಲಿ ಮಾತ್ರ ರೋಗದ ತೀವ್ರತೆ ಕಂಡುಬಂದಿದೆ ಎಂದು ಹೊರ ದೇಶಗಳಲ್ಲಿ ವರದಿಯಾಗಿದೆ. ಇದಕ್ಕಾಗಿಯೇ ಮಾರ್ಗಸೂಚಿಯಲ್ಲಿ ಅಂತಹ ಜನವರ್ಗಕ್ಕೆ ಎಚ್ಚರ ನೀಡಲಾಗಿದೆ. ವೃದ್ಧರು ಹಾಗೂ ಇತರೆ ಆರೋಗ್ಯ ಸಮಸ್ಯೆ ಇರುವವರು, ಗರ್ಭಿಣಿಯರು, ಮಕ್ಕಳು ಜನಸಂದಣಿ ಇರುವ ಪ್ರದೇಶಕ್ಕೆ ಹೋಗಬಾರದು ಎಂದು ಸೂಚನೆ ನೀಡಲಾಗಿದೆ. ಹಾಗೆಯೇ ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಲು ಸೂಚಿಸಲಾಗಿದೆ. ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಎಚ್ಚರ ವಹಿಸಲಾಗಿದೆ ಎಂದರು.

ಪ್ರತಿ ಆಸ್ಪತ್ರೆಗಳಲ್ಲಿ 50-60 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ 200 ವೆಂಟಿಲೇಟರ್‌ಗಳು, ಪರಿಣತ ವೈದ್ಯರ ತಂಡ, ಸಿಬ್ಬಂದಿ ಇದ್ದಾರೆ. ಔಷಧಿಯ ದಾಸ್ತಾನು ಕೂಡ ಇದೆ. 40 ಕೆಎಲ್‌ನ ಎರಡು ಟ್ಯಾಂಕ್‌ಗಳಿವೆ. ಒಂದನೇ ಮತ್ತು ಎರಡನೇ ಕೋವಿಡ್‌ ಅಲೆಯ ವೇಳೆ ಕಿಮ್ಸ್‌ ಆಸ್ಪತ್ರೆ ಬಹಳ ಯಶಸ್ವಿಯಾಗಿ ಕೆಲಸ ಮಾಡಿದೆ. ಇನ್ನು ಮುಂದೆಯೂ ಜನರಿಗೆ ಉತ್ತಮ ಸೇವೆ ನೀಡಲಿದೆ ಎಂದರು.

ಟಫ್‌ ರೂಲ್ಸ್‌ ಅಲ್ಲ, ಟಫ್‌ ಮೈಂಡ್‌ ಬೇಕು
ಸರ್ಕಾರ ಟಫ್‌ ರೂಲ್ಸ್‌ಗಳನ್ನು ಮಾಡುವ ಬದಲು ಜನರು ಟಫ್‌ ಮೈಂಡೆಡ್‌ ಆಗಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಜನರನ್ನು ರಕ್ಷಣೆ ಮಾಡಲು ಈಗಾಗಲೇ ಸರ್ಕಾರ ದೃಢಸಂಕಲ್ಪ ಮಾಡಿದೆ. ಅದೇ ರೀತಿ, ಜನರು ಕೂಡ ರೋಗವನ್ನು ಎದುರಿಸುವ ದೃಢ ಸಂಕಲ್ಪ ಮಾಡಿ ಮುನ್ನೆಚ್ಚರಿಕೆ ಕ್ರಮ ಪಾಲಿಸಬೇಕು ಎಂದು ಸಚಿವರು ಕಿವಿಮಾತು ಹೇಳಿದರು. ವಿದೇಶದಿಂದ ಬರುವವರನ್ನು ವಿಮಾನ ನಿಲ್ದಾಣದಲ್ಲಿ ರಾಂಡಮ್‌ ಪರೀಕ್ಷೆ ಮಾಡಲಾಗುತ್ತಿದೆ. ಎರಡು-ಮೂರು ದಿನಗಳಲ್ಲಿ ಹೆಚ್ಚು ಪ್ರಕರಣ ಕಂಡುಬಂದರೆ ನಿರ್ದಿಷ್ಟ ದೇಶಗಳ ಪ್ರಯಾಣಿಕರಿಗೆ ಪರೀಕ್ಷೆ ಮಾಡಲಾಗುವುದು ಎಂದರು.

ಧಾರವಾಡ ಜಿಲ್ಲಾಸ್ಪತ್ರೆಗೆ ಭೇಟಿ
ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಮಾತನಾಡಿದ ಸಚಿವ ಸುಧಾಕರ್‌, ಇಲ್ಲಿ ಆರೋಗ್ಯ ಸಿಬ್ಬಂದಿ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಿದರೂ ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ನಮ್ಮ ಸಿಬ್ಬಂದಿ ಮಾಡಲಿದ್ದಾರೆ. ಕೋವಿಡ್‌ ಚಿಕಿತ್ಸೆಗೆ ಪೂರಕವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಯಾವೆಲ್ಲ ರೀತಿಯ ಕ್ರಮ ವಹಿಸಬೇಕೆಂದು ಪರಿಶೀಲಿಸಿ ಸೂಚಿಸಲಾಗುವುದು ಎಂದರು.

ಕಳೆದ ಎರಡು ವರ್ಷಗಳಿಗಾಗಿ 10 ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿತ್ತು. ಈಗ ಅಂತಹ ಅಗತ್ಯ ಇಲ್ಲ. ಆದರೆ ಸೋಂಕಿತರ ಸಂಖ್ಯೆ ಹೆಚ್ಚಾದರೆ ತಾತ್ಕಾಲಿಕವಾಗಿ ಸಿಬ್ಬಂದಿಯನ್ನು ನೇಮಿಸಲಾಗುವುದು. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಅನೇಕ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ. ಆದರೆ ಅವರನ್ನು ಖಾಯಂ ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ. ಆದರೆ ಯಾರನ್ನೂ ಕೆಲಸದಿಂದ ತೆಗೆದುಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಯಾವುದೇ ಚಟುವಟಿಕೆಗೆ ನಿರ್ಬಂಧ ವಿಧಿಸಿಲ್ಲ. ಆದರೆ ಮಾಸ್ಕ್‌ ಧರಿಸುವುದು, ಮೂರನೇ ಡೋಸ್‌ ಪಡೆಯುವುದು, ಒಳಾಂಗಣ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳುವುದು ಮೊದಲಾದ ಕ್ರಮಗಳಿಗೆ ಸೂಚನೆ ನೀಡಲಾಗಿದೆ. ಈಗ ದೇಶದಲ್ಲಿ ಆರ್ಥಿಕ ಪುನಶ್ಚೇತನ ಆಗುತ್ತಿದೆ. ಆದ್ದರಿಂದ ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಯಾವುದೇ ಚಿಂತನೆ ಇಲ್ಲ. ಜೀವವೂ ಮುಖ್ಯ ಹಾಗೂ ಜೀವನವೂ ಮುಖ್ಯವಾಗುವಂತೆ ಕ್ರಮ ವಹಿಸಲಾಗುತ್ತಿದೆ ಎಂದರು.

ಲಸಿಕೆ ಕೊರತೆ ಇಲ್ಲ
ರಾಜ್ಯದಲ್ಲಿ ಎಂಟೂವರೆ ಲಕ್ಷ ಡೋಸ್‌ ಕೋವಿಡ್‌ ಲಸಿಕೆ ಲಭ್ಯವಿದೆ. ಇನ್ನೂ 20-25 ಲಕ್ಷ ಡೋಸ್‌ ತರಿಸಲಾಗುವುದು. ಕೇಂದ್ರ ಸರ್ಕಾರ ಲಸಿಕೆ ನೀಡಲು ತಯಾರಿದೆ. ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಲಸಿಕಾಕರಣದ ಪ್ರಮಾಣ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ | iNCOVACC | ಮೂಗಿನ ಮೂಲಕ ತೆಗೆದುಕೊಳ್ಳುವ ಕೋವಿಡ್ 19​ ಲಸಿಕೆಗೆ ದರ ನಿಗದಿ; ಒಂದು ಡೋಸ್​ಗೆ 800 ರೂಪಾಯಿ

Exit mobile version