Site icon Vistara News

Ram Janmabhoomi: ಹುಬ್ಬಳ್ಳಿ ಗಲಭೆ ಕೇಸ್; ಶ್ರೀಕಾಂತ ಪೂಜಾರಿಗೆ ಜಾಮೀನು ಮಂಜೂರು

Srikanth Poojari Hubballi riot Case

ಹುಬ್ಬಳ್ಳಿ: ಅಯೋಧ್ಯೆ ರಾಮಜನ್ಮಭೂಮಿ (Ram Janmabhoomi) ವಿಚಾರದಲ್ಲಿ 31 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣ (Rioting case) ಸಂಬಂಧ 2023ರ ಡಿಸೆಂಬರ್‌ 29ರಂದು ಬಂಧನಕ್ಕೊಳಗಾಗಿದ್ದ ಶ್ರೀಕಾಂತ್ ಪೂಜಾರಿಗೆ (Srikanth Poojary) ಜಾಮೀನು (Granted bail) ಮಂಜೂರಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು (1st Additional District Court Hubballi) ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಡಿಸೆಂಬರ್ 29ರಂದು ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು. ಇದು ರಾಜಕೀಯವಾಗಿ ತಿರುವು ಪಡೆದುಕೊಂಡು ಪರಸ್ಪರ ವಾಕ್ಸಮರಕ್ಕೆ ಕಾರಣವಾಗಿತ್ತು. ಅಲ್ಲದೆ, ಬಿಜೆಪಿಯಿಂದ “ನಾನು ಕರಸೇವಕ, ನನ್ನನ್ನೂ ಬಂಧಿಸಿ” ಅಭಿಯಾನ ಹಾಗೂ ಪ್ರತಿಭಟನೆಗಳು ನಡೆಯುತ್ತಲಿವೆ. ಈಗ ಶ್ರೀಕಾಂತ್‌ ಅವರಿಗೆ ಜಾಮೀನು ಮಂಜೂರಾಗಿದೆ.

ಏನಿದು ಪ್ರಕರಣ?

ಕರಸೇವೆಗೂ ಮುನ್ನ ಅಂದರೆ 1992ರ ಡಿಸೆಂಬರ್ 5ರಂದು ಹುಬ್ಬಳ್ಳಿಯೂ ಗಲಾಟೆಗಳು ನಡೆದಿದ್ದವು. ಈ ವೇಳೆ ಹುಬ್ಬಳ್ಳಿ ನಗರದಲ್ಲಿ ಸಂಭವಿಸಿದ್ದ ಗಲಭೆಯಲ್ಲಿ ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಆಗ ಹಜರೇಸಾಬ್‌ ಮಲಿಕ್‌ಸಾಬ್‌ ಅಂಗಡಿ ಎಂಬುವವರು ದೂರು ಸಲ್ಲಿಸಿದ್ದರು. ಆ ದೂರಿನ ಅನ್ವಯ ಮೂರನೇ ಆರೋಪಿಯಾಗಿರುವ ಶ್ರೀಕಾಂತ್‌ ವಿರುದ್ಧ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 143, 147, 436, 427 ಹಾಗೂ 149 ಅಡಿ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಈ ಪ್ರಕರಣದ ಸಂಬಂಧ ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿತ್ತು.

ಬಳಿಕ ಈ ಪ್ರಕರಣವನ್ನು ವಿಭಜಿಸಿ ಶ್ರೀಕಾಂತ್‌ ಮತ್ತಿತರರ ವಿರುದ್ಧ ಪ್ರತ್ಯೇಕ ಪ್ರಕರಣವನ್ನು ದಾಖಲು ಮಾಡಲಾಗಿತ್ತು ಎಂದು ಅರ್ಜಿದಾರರು ಸಲ್ಲಿಸಿರುವ ಮನವಿಯಲ್ಲಿ ಹೇಳಲಾಗಿದೆ. ಮುಂದುವರಿದು ಇತರೆ ಆರೋಪಿಗಳ ವಿರುದ್ಧದ ಮೂಲ ಪ್ರಕರಣವನ್ನು ಸತ್ರ ನ್ಯಾಯಾಲಯ ಇತ್ಯರ್ಥಪಡಿಸಿದ್ದು, ಆರೋಪಿಗಳನ್ನು ಖುಲಾಸೆಗಳಿಸಿತ್ತು. ಈ ಪ್ರಕರಣದ ದೂರು ಮತ್ತು ಎಫ್‌ಐಆರ್‌ ಅನ್ನು ನಾಶಪಡಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಒಟ್ಟಾರೆ ಈ ಪ್ರಕರಣದಲ್ಲಿ ಅಂದು 9 ಜನರ ವಿರುದ್ಧ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

Ayodhya activists in Hubballi

ಮೂರು ದಶಕಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಹಿಂದು ಕಾರ್ಯಕರ್ತರು ಆ ವೇಳೆ ಕೆಲ ಕಾಲ ತಲೆಮರೆಸಿಕೊಂಡಿದ್ದರು. ಬಳಿಕ ಪ್ರಕರಣವು ಯಾವುದೇ ವಿಚಾರಣೆ ಕಾಣದೆ ಹಾಗೇ ಉಳಿದಿತ್ತು. ಪ್ರಕರಣ ತಿಳಿಯಾದಾಗ ಎಂದಿನಂತೆ ಎಲ್ಲರೂ ಮನೆಯಲ್ಲಿದ್ದರು.

ಶ್ರೀಕಾಂತ್‌ ಪರ ವಕೀಲರ ವಾದವೇನು?

ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಪ್ರಸ್ತುತ ಶ್ರೀಕಾಂತ್‌ ಅವರನ್ನು ಬಂಧಿಸಿರುವುದು ಕಾನೂನು ರೀತ್ಯಾ ಸಮರ್ಪಕವಾಗಿಲ್ಲ. ಎಫ್‌ಐಆರ್‌ ಮತ್ತಿತರ ದೂರಿನ ಪ್ರತಿ ಇಲ್ಲದಿದ್ದರೂ ಅವರನ್ನು ಡಿಸೆಂಬರ್‌ 29ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಹೀಗಾಗಿ ಅವರಿಗೆ ಈ ಪ್ರಕರಣದಲ್ಲಿ ಜಾಮೀನು ನೀಡಬೇಕು ಎಂದು ಶ್ರೀಕಾಂತ್‌ ಪರ ವಕೀಲರು ಮನವಿ ಮಾಡಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಈಗ ಜಾಮೀನು ಮಂಜೂರು ಮಾಡಿದೆ.

30 ವರ್ಷದ ಹಳೇ ಕೇಸ್

ಪ್ರಕರಣ ದಾಖಲಾದಾಗ ಆರೋಪಿತರು 30ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಈಗ ಅವರಿಗೆಲ್ಲ 65-70 ವರ್ಷಗಳಾಗಿವೆ. ಈಗ 31 ವರ್ಷಗಳ ಹಳೇ ಪ್ರಕರಣಕ್ಕೆ ಹುಬ್ಬಳ್ಳಿ ಪೊಲೀಸರು ಜೀವ ಕೊಟ್ಟಿದ್ದಾರೆ. ಹೀಗಾಗಿ ಹುಬ್ಬಳ್ಳಿ ಪೊಲೀಸರಿಂದ ಅಂದಿನ ಆರೋಪಿಗಳ ಏಕಾಏಕಿ ಹುಡುಕಾಟ ಆರಂಭವಾಗಿದೆ. 31 ವರ್ಷದ ಬಳಿಕ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ.

Ayodhya activists in Hubballi

ಇದನ್ನೂ ಓದಿ: N Ravikumar: ಮಂಗಳೂರು ಮೀನು ಮಾರುಕಟ್ಟೆಗೆ ಎನ್.‌ ರವಿಕುಮಾರ್‌ ಭೇಟಿ; ಸಮಸ್ಯೆ ಹೇಳಿಕೊಂಡ ಮಹಿಳಾ ಮೀನುಗಾರರು

ಉಳಿದ ಆರೋಪಿಗಳಿಗೆ ಹುಡುಕಾಟ

ಪ್ರಕರಣದ 3ನೇ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಪೊಲೀಸರು ಒಪ್ಪಿಸಿದ್ದರು. ಇನ್ನುಳಿದ ರಾಜು ಧರ್ಮದಾಸ್, ಶ್ರೀಕಾಂತ್ ಪೂಜಾರಿ, ಅಶೋಕ್ ಕಲಬುರಗಿ, ಷಣ್ಮುಖ ಕಾಟಗಾರ. ಗುರುನಾಥಸಾ ಕಾಟಿಗಾರ, ರಾಮಚಂದ್ರಸಾ ಕಲಬುರಗಿ ಹಾಗೂ ಅಮೃತ ಕಲಬುರಗಿ ಹುಡುಕಾಟಕ್ಕೆ‌ ಪೊಲೀಸರು ಮುಂದಾಗಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ. ರಾಮ ಜನ್ಮಭೂಮಿ (Ram Janmabhoomi) ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿರುವ ಹೊತ್ತಿನಲ್ಲಿ ರಾಜ್ಯದಲ್ಲಿ ಈಗ ಕರಸೇವಕರ ಬಂಧನಕ್ಕೆ ಮುಂದಾಗಿರುವ ಪ್ರಕರಣವು ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ.

Exit mobile version