ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ (Dharwad News) ಹಾಡಹಗಲೇ ನಡು ರಸ್ತೆಯಲ್ಲೇ ಮೂವರ ಮೇಲೆ ಚಾಕುವಿನಿಂದ ಇರಿಯಲಾಗಿದೆ (Stabbing Case). ಈ ಇರಿತದ ಘಟನೆ ಎಷ್ಟು ಭೀಕರವಾಗಿದೆ ಎಂದರೆ ಇರಿತಕ್ಕೆ ಒಳಗಾದವರಲ್ಲಿ ಒಬ್ಬ ಯುವಕನ ಹೊಟ್ಟೆಯಲ್ಲೇ ಚೂರಿ ಕಚ್ಚಿಕೊಂಡಿದೆ.
ಧಾರವಾಡ ನಗರದ ಎಲ್ಐಸಿ ಬಳಿ ರಸ್ತೆ ಮೇಲೆ ಈ ಚೂರಿ ಇರಿತದ ವಿದ್ಯಮಾನ ನಡೆದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕಿರಣ, ಆಸೀಫ್ ಹಾಗೂ ಶಾನವಾಝ್ ಎಂಬುವವರೇ ಚಾಕು ಇರಿತಕ್ಕೆ ಒಳಗಾದವರು. ಇವರು ಒಬ್ಬರ ಯುವತಿ ಜತೆಗೆ ಧಾರವಾಡ ನಗರದ ಎಲ್ ಐ ಸಿ ಬಳಿ ರಸ್ತೆ ಮೇಲೆ ಹೋಗುತ್ತಿರುವಾಗ ಅವರ ಮೇಲೆ ದಾಳಿ ಮಾಡಲಾಗಿದೆ.
ಆಟೋದಲ್ಲಿ ಬಂದ ಆರು ಯುವಕರು ಈ ಮೂವರ ಮೇಲೆ ಏಕಾಎಕಿ ದಾಳಿ ಮಾಡಿದ್ದಾರೆ. ಆಟೋದಲ್ಲಿ ಬಂದಿದ್ದ ಆ ಆರು ಯುವಕರು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಸದ್ಯ ಗಂಭೀರ ಗಾಯಗೊಂಡ ಮೂವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೊನೆಯವನ ಹೊಟ್ಟೆಗೆ ಚಾಕು ಇರಿದ ನಂತರ ಅವಸರಲ್ಲಿ ಅದನ್ನು ತೆಗೆಯಲಾಗದೆ ದುಷ್ಕರ್ಮಿಗಳು ಅದನ್ನು ಹೊಟ್ಟೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಗಾಯಾಳು ಹೊಟ್ಟೆಯಲ್ಲೇ ಚಾಕು ಇದ್ದು, ಆತನ ಹೊಟ್ಟೆಯಲ್ಲಿ ಚಾಕು ಚುಚ್ಚಿದ ಸ್ಥಿತಿಯಲ್ಲೇ ಅವನ್ನ ಹುಬ್ಬಳ್ಳಿ ಕಿಮ್ಸ್ ಗೆ ರವಾನೆ ಮಾಡಲಾಗಿದೆ.
ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಹಾಗೂ ಕಾನೂನು ಸುವ್ಯವಸ್ಥೆ ಡಿಸಿಪಿ ರಾಜೀವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಕು ಇರಿದ ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.
ಇದು ಆ ಹುಡುಗರ ಜತೆಗಿದ್ದ ಯುವತಿಯ ವಿಚಾರದಲ್ಲಿ ನಡೆದ ಚೂರಿ ಇರಿತ ಪ್ರಕರಣ ಎಂದು ಕೆಲವರು ಹೇಳುತ್ತಿದ್ದಾರೆ. ಈ ಯುವತಿ ಚೂರಿಯಿಂದ ಇರಿದ ದುಷ್ಕರ್ಮಿಗಳಲ್ಲಿ ಒಬ್ಬನ ಗೆಳತಿಯಾಗಿದ್ದು ಆಕೆ ಈಗ ಈ ಹುಡುಗರ ಜತೆ ಇದ್ದುದನ್ನು ಸಹಿಸಲಾಗದೆ ದಾಳಿ ಮಾಡಿದ್ದಾರೆ ಎನ್ನುವುದು ಕೆಲವರು ಆಡುವ ಮಾತು.
ಇನ್ನೊಂದು ಮಾಹಿತಿ ಪ್ರಕಾರ, ಚೂರಿ ಇರಿತಕ್ಕೆ ಒಳಗಾದ ಯುವಕರಿಗೂ ಚೂರಿಯಿಂದ ಇರಿದು ಪರಾರಿಯಾದವರಿಗೂ ಹಿಂದಿನಿಂದಲೇ ದ್ವೇಷವಿದ್ದು, ಇದರ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಹುಡುಗಿ ಆ ಸಂದರ್ಭದಲ್ಲಿ ಅಲ್ಲಿ ಇದ್ದದ್ದು ಆಕಸ್ಮಿಕ ಎಂಬ ಅಭಿಪ್ರಾಯವಿದೆ.
ಈ ಘಟನೆ ಧಾರವಾಡದಲ್ಲಿ ಭಾರಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆಸ್ಪತ್ರೆ ವಠಾರಕ್ಕೆ ದೊಡ್ಡ ಮಟ್ಟದಲ್ಲಿ ಜನರು ಬಂದಿದ್ದರು. ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಿದ್ದಾರೆ. ಇದೀಗ ಚೂರಿಯಿಂದ ಇರಿದು ಪರಾರಿಯಾದವರ ಹುಡುಕಾಟಕ್ಕೆ ಪೊಲೀಸರು ಇಳಿದಿದ್ದಾರೆ.
ಇದನ್ನೂ ಓದಿ: Murder Case: ರೀಲ್ಸ್ ಸುಂದರಿಗೆ ಕಂಟಕವಾಯ್ತು ಮೊಬೈಲ್ ಗೀಳು; ಗಂಡನಿಂದ ಕೊಲೆ, ಹೆಣ ಸಾಗಿಸಿದ ತಂದೆ!