Site icon Vistara News

Sumalatha Ambareesh: ಸ್ಪರ್ಧೆ ಖಚಿತ ಎಂದ ಸುಮಲತಾ; ‌ಅವರು ಬಿಜೆಪಿಯೊಳಗೆ ಇರ್ತಾರೆ ಎಂದ ಜೋಶಿ

Sumalatha Ambareesh and Pralhad Joshi

ಹುಬ್ಬಳ್ಳಿ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಚಟುವಟಿಕೆ ಗರಿಗೆದರುತ್ತಿವೆ. ಈ ಮಧ್ಯೆ ಮಂಡ್ಯ ಲೋಕಸಭಾ ಕ್ಷೇತ್ರ (Mandya Lok Sabha constituency) ಎಲ್ಲರ ಕೇಂದ್ರ ಬಿಂದುವಾಗಿದ್ದು, ಸಂಸದೆ ಸುಮಲತಾ ಅಂಬರೀಷ್‌ (Sumalatha Ambareesh) ಅವರ ನಡೆ ಕುತೂಹಲಕ್ಕೆ ಕಾರಣವಾಗಿದೆ. ಅವರು ಕಾಂಗ್ರೆಸ್‌ನತ್ತ ವಲಸೆ ಹೋಗುತ್ತಾರೋ? ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಾರೋ ಎಂಬ ಪ್ರಶ್ನೆ ಮೂಡಿತ್ತು. ಆದರೆ, ಈ ಬಗ್ಗೆ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ (Pralhad Joshi) ಪ್ರತಿಕ್ರಿಯೆ ನೀಡಿದ್ದು, ಮಂಡ್ಯ ಸಂಸದೆ ಸುಮಲತಾ ಬಿಜೆಪಿಯೊಳಗೆ ಇರುತ್ತಾರೆ ಎಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಪ್ರಲ್ಹಾದ್‌ ಜೋಶಿ, ಸುಮಲತಾ ಅಂಬರೀಷ್‌ ಅವರು ಬಿಜೆಪಿಯಲ್ಲಿ ಇರುತ್ತಾರೆ ಎಂದಷ್ಟೇ ಪ್ರತಿಕ್ರಿಯಿಸಿದರು.

ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ಆದರೆ, ಯಾವುದೇ ಟಿಕೆಟ್ ಹಂಚಿಕೆ ಬಗ್ಗೆ ತೀರ್ಮಾನ ಆಗಿಲ್ಲ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.

ಬಿಜೆಪಿ ರಾಜ್ಯ ಘಟಕ ಮತ್ತು ಜೆಡಿಎಸ್ ರಾಜ್ಯ ಘಟಕದೊಂದಿಗೆ ಇಷ್ಟರಲ್ಲೇ ಹೈಕಮಾಂಡ್ ಮಾತುಕತೆ ನಡೆಸಲಿದೆ. ಬಳಿಕವೇ ಟಿಕೆಟ್ ಹಂಚಿಕೆಯಾಗಲಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

ಸೀಟು ಹಂಚಿಕೆ ಸರಿಯಾಗೇ ಆಗುತ್ತದೆ

ಎಚ್.ಡಿ. ಕುಮಾರಸ್ವಾಮಿ ಅವರು ಯಾವುದಕ್ಕೆ ತಮ್ಮ ವರಿಷ್ಠರನ್ನು ಭೇಟಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ, ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳ ನಡುವೆ ಸೀಟು ಹಂಚಿಕೆ ಸರಿಯಾಗೇ ಆಗುತ್ತದೆ. ತಮಗೆ ಆ ವಿಶ್ವಾಸವಿದೆ ಎಂದು ಪ್ರತಿಕ್ರಿಯಿಸಿದರು.

ಸ್ಪರ್ಧೆ ಖಚಿತ ಎಂದಿರುವ ಸುಮಲತಾ!

ಈ ಬಾರಿ ಲೋಕಸಭೆಗೆ ನನ್ನ ಸ್ಪರ್ಧೆ ಖಚಿತ ಎಂದು ಶುಕ್ರವಾರ (ಫೆ. 23) ಮಂಡ್ಯದಲ್ಲಿ ಸಂಸದೆ ಸುಮಲತಾ ಹೇಳಿದ್ದಾರೆ. ಮಂಡ್ಯದಿಂದಲೇ ಸ್ಪರ್ಧೆ ಮಾಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೆ ನಕ್ಕು ಹೊರಟಿದ್ದಾರೆ. ಹೀಗಾಗಿ ಸುಮಲತಾ ಅವರು ಬಿಜೆಪಿಯಿಂದ ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರಾ? ಅಥವಾ ಮಂಡ್ಯದಲ್ಲೇ ಮಾಡಲಿದ್ದಾರಾ ಎಂಬ ಕುತೂಹಲ ಹೆಚ್ಚಾಗಿದೆ.

ಬಿಜೆಪಿ ಟಿಕೆಟ್‌ ಸಿಗದಿದ್ರೆ ಪ್ಲ್ಯಾನ್‌ ಬಿ ರೆಡಿ ಎಂದಿದ್ದ ಸುಮಲತಾ ಅಂಬರೀಷ್‌

ಮಂಡ್ಯ ಲೋಕಸಭಾ ಕ್ಷೇತ್ರದ (Mandya Lokasabha ticket) ಟಿಕೆಟನ್ನು ಬಿಜೆಪಿಗೆ ಕೊಡಬೇಕು ಎಂದು ನಾನು ಕೇಳಿದ್ದೇನೆ. ಮೈತ್ರಿ ಅಭ್ಯರ್ಥಿಯಾಗಿ (BJP-JDS Candidate) ನಾನು ಚುನಾವಣೆ ಕಣಕ್ಕಿಳಿಯಬೇಕು ಎಂಬ ಇರಾದೆ ಹೊಂದಿದ್ದೇನೆ. ಮೈತ್ರಿ ಟಿಕೆಟ್‌ ಸಿಗದೆ ಹೋದರೆ ಮುಂದೇನು ಎನ್ನುವುದನ್ನು ಸಮಯ ಬಂದಾಗ ಹೇಳ್ತೇನೆ. ಯಾಕೆಂದರೆ ಚುನಾವಣೆಯಲ್ಲಿ ಇರಬೇಕೇ? ಬೇಡವೇ ಎಂದು‌ ನಿರ್ಧರಿಸುವವಳು ನಾನಲ್ಲ. ಜನ ನಿರ್ಧಾರ ಮಾಡಬೇಕು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್‌ ಹೇಳಿದ್ದರು.

ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಮಾಧ್ಯಮದವರೊಂದಿಗೆ ಈಚೆಗೆ ಮಾತನಾಡಿದ್ದ ಸುಮಲತಾ, ಬಿಜೆಪಿ ವರಿಷ್ಠರನ್ನ ಭೇಟಿ ಮಾಡಿದಾಗ ನಾನು ಜನರಲ್ ಆಗಿ ಮಾತಾಡಿದ್ದೀನಿ‌. ನಾನು ನನಗಾಗಿ ಯಾವತ್ತೂ ಟಿಕೆಕ್‌ ಕೇಳಿಲ್ಲ ಕೇಳೋದು ಇಲ್ಲ. ಆದ್ರೆ ಜಿಲ್ಲೆಯಲ್ಲಿ ಬಿಜೆಪಿಗೆ ಚೆನ್ನಾಗಿದೆ. ನಮ್ಮ‌ ಪಕ್ಷಕ್ಕೆ ಟಿಕೆಟ್ ಕೊಟ್ಟಿದ್ದೆ ಆದ್ರೆ ಪಕ್ಷ ಸಂಘಟನೆಗೆ ಅನುಕೂಲವಾಗುತ್ತೆ ಎಂದು ಹೇಳಿದ್ದೇನೆ. ಆದರೆ ಏನ್ಮಾಡ್ತಾರೋ ನೋಡೋಣ ಎಂದು ಹೇಳಿದ್ದರು.

ʻʻನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ. ಇಲ್ಲಿಗೆ ಬಂದರೆ ಅಂಬರೀಶ್ ನನ್ನ ಜತೆ ಇರ್ತಾರೆ ಎಂಬ ಭಾವನೆ ಇದೆ. ಅಂಬರೀಶ್‌ಗೆ ಎಲ್ಲ ಕಡೆ ಅಭಿಮಾನಿಗಳಿದ್ದರೂ ಅವರು ಮಂಡ್ಯ ಬಿಟ್ಟು ಹೋಗಲಿಲ್ಲ. ನಾನ್ಯಾಕೆ ಈಗ ಹೋಗಲಿ?
ಬಿಜೆಪಿಗೆ ಮಂಡ್ಯ ಉಳಿಸಿಕೊಳ್ಳಿ ಎಂದು ಹೇಳಿದ್ದೀನಿ ಪಾಸಿಟಿವ್ ಆಗಿದ್ದಾರೆ. ಅವರು ಮಂಡ್ಯವನ್ನು ಬಿಜೆಪಿ ಉಳಿಸಿಕೊಳ್ಳದಿದ್ದರೆ ನಾನು ಪಕ್ಷೇತರವಾಗಿ ನಿಂತುಕೊಳ್ಳಬೇಕೇ ಎಂದು ಆಗ ನಿರ್ಧಾರ ಮಾಡ್ತೇನೆ ಎಂದವರು ಹೇಳಿದ್ದರು.

ʻʻನಾನು ಪಕ್ಷೇತರ ಸಂಸದೆಯಾಗಿರುವುದರಿಂದ ನಾನು ಅಧಿಕೃತವಾಗಿ ಪಕ್ಷ ಸೇರಲಾಗುವುದಿಲ್ಲ. ನನಗೆ ಜೆ.ಪಿ ನಡ್ಡಾ ಅವರೇ ನನಗೆ ಬಾಹ್ಯ ಬೆಂಬಲ ಕೊಡಿ ಎಂದಿದ್ದರು. ಪಕ್ಷ ಸೇರುವವರೆಗೆ ನಾನಾಗಿ ಪಕ್ಷದ‌‌ ಕಚೇರಿಗೆ ಹೋಗಲು ಆಗುವುದಿಲ್ಲ. ಆದರೆ, ಪಕ್ಷ ಕರೆದಾಗ ನಾನು ಹೋಗುತ್ತೇನೆ ಎಂದು ಸುಮಲತಾ ಹೇಳಿದ್ದರು.

ಇದನ್ನೂ ಓದಿ: Hindu Temples: ಹಿಂದೂ ದೇಗುಲದ ಹಣವು ಮುಂದೂ ಆ ಸಮುದಾಯಗಳ ಅಭಿವೃದ್ಧಿಗೇ ಬಳಕೆ: ಸಿಎಂ ಸಿದ್ದರಾಮಯ್ಯ

ಬಿಜೆಪಿಯಲ್ಲಿ ಸುಮಲತಾ ಅವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆಯಾ ಎಂಬ ಪ್ರಶ್ನೆಗೆ, ಷಡ್ಯಂತ್ರ ಅನ್ನೋದು ದೊಡ್ಡ ಮಾತು ಆದ್ರೆ ಸಣ್ಣ ಪುಟ್ಟ ವಿಚಾರಗಳು ಇರುತ್ತವೆ ಎಂದು ಸುಮಲತಾ ಹೇಳಿದ್ದರು.

Exit mobile version