ಬೆಂಗಳೂರು: ಕರ್ನಾಟಕ ಸರ್ಕಾರ ಮತ್ತು ನೊವೊ ನಾರ್ಡಿಸ್ಕ್ ಎಜುಕೇಶನ್ ಫೌಂಡೇಶನ್ (ಎನ್ಎನ್ಇಎಫ್), ರಾಜ್ಯದಲ್ಲಿ ಮಧುಮೇಹ ಮತ್ತು ಬೊಜ್ಜು ಹೊಂದಿರುವ ಜನರಿಗೆ ಶಿಕ್ಷಣ, ಚಿಕಿತ್ಸೆ ಮತ್ತು ಆರೈಕೆಯ ಮಟ್ಟವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಒಟ್ಟಾಗಿ ಕಾರ್ಯನಿರ್ವಹಣೆ ಮಾಡಲು ಪ್ರತಿಜ್ಞೆ ಮಾಡಿವೆ.
ಮಧುಮೇಹ ಮತ್ತು ಬೊಜ್ಜು ನಿಯಂತ್ರಣಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ 3 ಸೆಂಟರ್ ಆಫ್ ಎಕ್ಸಲೆನ್ಸ್(ಶ್ರೇಷ್ಠತಾ ಕೇಂದ್ರ) ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಮತ್ತು ನೊವೊ ನಾರ್ಡಿಸ್ಕ್ ಎಜುಕೇಶನ್ ಫೌಂಡೇಶನ್ ನಡುವಿನ ಒಪ್ಪಂದಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಹಿ ಹಾಕಿದ್ದಾರೆ.
ಇದನ್ನೂ ಓದಿ | Modi In Bengaluru | ಕುಲ ಕುಲ ಕುಲವೆಂದು ಹೊಡೆದಾಡದಿರಿ ಎನ್ನುತ್ತಲೇ ʼಗೌಡʼರ ಕೋಟೆಯ ಮೇಲೆ ಕಣ್ಣಿಟ್ಟ ನರೇಂದ್ರ ಮೋದಿ
ಈ ವೇಳೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರವು ಕಳೆದ 2 ವರ್ಷಗಳಿಂದ ಅತ್ಯಂತ ಕ್ರಿಯಾಶೀಲವಾಗಿದೆ. ಸಾಂಕ್ರಾಮಿಕ ರೋಗದ ನಂತರ ರಾಜ್ಯ ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಅವಲೋಕಿಸಿದಾಗ ಮಧುಮೇಹ ಮತ್ತು ಬೊಜ್ಜು ಗಂಭೀರ ಸ್ವರೂಪದ್ದಾಗಿದ್ದು, ಈ ರೋಗಗಳು ಸೈಲೆಂಟ್ ಕಿಲ್ಲರ್ಸ್ ಎಂಬುದನ್ನು ಅರಿತುಕೊಂಡಿದ್ದೇವೆ ಎಂದರು.
ನೊವೊ ನಾರ್ಡಿಸ್ಕ್ ಎಜುಕೇಶನ್ ಫೌಂಡೇಶನ್ ನಂತಹ ಜಾಗತಿಕ ಮಟ್ಟದ ಸಂಸ್ಥೆಯು ಬೆಂಗಳೂರಿನಲ್ಲಿ ಭಾರತದ ತನ್ನ ಕೇಂದ್ರ ಕಚೇರಿಯನ್ನು ಸ್ಥಾಪಿಸಿರುವುದು ಸಂತಸ ತಂದಿದೆ. ಮಧುಮೇಹ ಮತ್ತು ಬೊಜ್ಜಿನಿಂದ ಉಂಟಾಗುವ ತೊಡಕುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಸಂಸ್ಥೆಯು ಕೆಲಸ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ. ಈ ಸಂಸ್ಥೆಯು ಕೆಲವು ಪರಿಣತಿ ಮತ್ತು ಜ್ಞಾನವನ್ನು ಕರ್ನಾಟಕದೊಂದಿಗೆ ಹಂಚಿಕೊಳ್ಳಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.
ಎನ್ಎನ್ಇಎಫ್‌ನ ವ್ಯವಸ್ಥಾಪಕ ಟ್ರಸ್ಟಿ ವಿಕ್ರಾಂತ್ ಶ್ರೋತ್ರಿಯಾ ಮಾತನಾಡಿ, ಮಧುಮೇಹ ಮತ್ತು ಬೊಜ್ಜು ಭಾರತದಲ್ಲಿ ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಮುಂದುವರಿದಿದೆ. ಇವುಗಳನ್ನು ನಿರ್ವಹಣೆ ಮಾಡುವುದು ದಿನನಿತ್ಯದ ಕೆಲಸವಾಗಿದೆ. ಆದ್ದರಿಂದ ನಾವು ರಾಜ್ಯ ಮತ್ತು ಪ್ರಾಥಮಿಕ ಆರೈಕೆ ಹಂತದಲ್ಲಿ ಇನ್ಸುಲಿನ್ ನಂತಹ ಚಿಕಿತ್ಸೆಗಳಿಗೆ ಉತ್ತಮ ಪ್ರವೇಶವನ್ನು ಖಚಿತಪಡಿಸಿಕೊಳ್ಳಬೇಕು. ಇಂದು ಆರೋಗ್ಯವು ರಾಷ್ಟ್ರೀಯ ಆದ್ಯತೆಯಾಗಿದೆ ಮತ್ತು ಕರ್ನಾಟಕವು ಈ ಮಹತ್ವದ ವಿಷಯದಲ್ಲಿ ಮುನ್ನಡೆಯುವುದನ್ನು ನೋಡಲು ಸ್ಫೂರ್ತಿದಾಯಕವಾಗಿದೆ. ಎನ್ಎನ್ಇಎಫ್ ನಮ್ಮ ವಿವಿಧ ಕಾರ್ಯಕ್ರಮಗಳ ಮೂಲಕ ರೋಗಿಗಳ ಕೇಂದ್ರಿತ ಚೌಕಟ್ಟನ್ನು ರಚಿಸಲು ಇತರ ರಾಜ್ಯ ಸರ್ಕಾರಗಳೊಂದಿಗೆ ಪಾಲುದಾರಿಕೆಯನ್ನು ನಾವು ಎದುರು ನೋಡುತ್ತಿದ್ದೇವೆ ಎಂದರು.
ಆರೋಗ್ಯ ರಕ್ಷಣೆ ಮತ್ತು ಸುಸ್ಥಿರತೆಯ ಅಗತ್ಯತೆಗಳ ಬಗ್ಗೆ ರಾಯಲ್ ಡ್ಯಾನಿಶ್ ಎಂಬೆಸ್ಸಿಯ ರಾಯಭಾರಿ ಫ್ರೆಡ್ಡಿ ಸ್ವೇನ್ ಮಾತನಾಡಿ, ದೀರ್ಘಕಾಲಿಕ ಕಾಯಿಲೆಗಳ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅರ್ಥಪೂರ್ಣವಾದ ಪರಿಣಾಮ ಬೀರಲು ನಾವು ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡುತ್ತಿದ್ದೇವೆ. ಎನ್ಎನ್ಇಎಫ್ ಮತ್ತು ಕರ್ನಾಟಕ ಸರ್ಕಾರದ ಒಪ್ಪಂದವು ರಾಜ್ಯದಲ್ಲಿ ಮಧುಮೇಹ ಮತ್ತು ಬೊಜ್ಜಿನಿಂದ ಬಳಲುತ್ತಿರುವ ಜನರ ಆರೈಕೆಗೆ ಉತ್ತಮ ಅವಕಾಶವನ್ನು ಕಲ್ಪಿಸುವ ಮಹತ್ತರವಾದ ಪ್ರಗತಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ, ವೈದ್ಯರು ಮತ್ತು ರೋಗಿಗಳಿಗೆ ಶಿಕ್ಷಣ
ಮಧುಮೇಹ ಹಾಗೂ ಬೊಜ್ಜು ಸಮಸ್ಯೆ ಹೊಂದಿರುವ ಜನರ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುವ ಕ್ರಿಯಾಯೋಜನೆಯನ್ನು ರಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ನೊವೊ ನಾರ್ಡಿಸ್ಕ್ ಸಂಸ್ಥೆ ಒಗ್ಗಟ್ಟಾಗಿ ಕೆಲಸ ಮಾಡುತ್ತವೆ. ಪ್ರಸ್ತಾವಿತ ಕ್ರಿಯಾ ಯೋಜನೆಯು ಕರ್ನಾಟಕದ ವೈದ್ಯಕೀಯ ಕಾಲೇಜುಗಳಾದ್ಯಂತ ಬಹು ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸುವುದು ಹಾಗೂ ಇಂತಹ ಸಮಸ್ಯೆಗಳ ಬಗ್ಗೆ ವೈದ್ಯರು ಮತ್ತು ರೋಗಿಗಳಿಗೆ ಶಿಕ್ಷಣ ನೀಡುವುದು ಈ ಒಪ್ಪಂದದ ಉದ್ದೇಶವಾಗಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ- 5 ಪ್ರಕಾರ ಅಧಿಕ ತೂಕ ಅಥವಾ ಬೊಜ್ಜು (BMI =25.0 kg/m2) ಹೊಂದಿರುವ ಮಹಿಳೆಯರ ಶೇಕಡಾವಾರು ಪ್ರಮಾಣವು 2015-16ರಲ್ಲಿ ಶೇ.23.3 ರಿಂದ 2019-20 ರಲ್ಲಿ ಶೇ.30.1ಕ್ಕೆ ಹೆಚ್ಚಳವಾಗಿದೆ. ಇದೇ ಸಮಯದಲ್ಲಿ ಪುರುಷರಲ್ಲಿ ಶೇ.22.1 ರಿಂದ ಶೇ.30.9ಕ್ಕೆ ಹೆಚ್ಚಳವಾಗಿದೆ. ಮಕ್ಕಳಲ್ಲಿ ಇದರ ಪ್ರಮಾಣ ಶೇ.3.2ವರೆಗೆ ಏರಿಕೆಯಾಗಿದೆ. ಅಲ್ಲದೇ, ಭಾರತದಲ್ಲಿ ಶೇ.67 ರಷ್ಟು ಜನರು ಅಧಿಕ ತೂಕ ಅಥವಾ ಬೊಜ್ಜಿನೊಂದಿಗೆ ಟೈಪ್ 2 ಡಯಾಬಿಟಿಸ್ (ಟಿ2ಡಿ) ಸಮಸ್ಯೆಯಲ್ಲಿದ್ದರೆ, ಸುಮಾರು ಶೇ.57 ರಷ್ಟು ಜನರು ಡಯಾಬಿಟಿಸ್ ಇದ್ದರೂ ಅದಕ್ಕೆ ಚಿಕಿತ್ಸೆ ಪಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಡಯಾಬಿಟಿಸ್ ಮತ್ತಿತರೆ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು, ಡಯಾಬಿಟಿಸ್ ಆರೈಕೆಯನ್ನು ಮಾಡುವುದು ಮತ್ತು ರೋಗಿಗಳಿಗೆ ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಕಾರ್ಯ ನಡೆಯಲಿದೆ.
ಇದನ್ನೂ ಓದಿ | Modi in Bengaluru | ಡಬ್ಬಲ್ ಎಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಲಾಭ; ಮತ್ತೆ ಮೋದಿ ಪ್ರತಿಪಾದನೆ