ಬೆಂಗಳೂರು: ಬೇಸಿಗೆ ಕಾಲ ಬರುತ್ತಿದೆ, ಜತೆಜತೆಗೆ ಎಚ್3ಎನ್2, ಕೊವಿಡ್ 19 ಸೇರಿ, ವಿವಿಧ ಸ್ವರೂಪದ ಜ್ವರ, ಸೋಂಕುಗಳು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಹಾರ ಸೇವನೆಗೆ ಸಂಬಂಧಪಟ್ಟ ಮಾರ್ಗಸೂಚಿ (Dietary Advisory) ಬಿಡುಗಡೆ ಮಾಡಿದೆ. ಸಾಧ್ಯವಾದಷ್ಟು ತಾಜಾ ಆಗಿರುವ ಮತ್ತು ಸಂಸ್ಕರಿಸದ ಆಹಾರಗಳನ್ನೇ ಸೇವಿಸಿ ಎಂದು ಜನರಿಗೆ ಸಲಹೆ ನೀಡಿದೆ. ‘ಕೊವಿಡ್ 19 ಸವಾಲು ಒಡ್ಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಪ್ರತಿಯೊಬ್ಬರಲ್ಲೂ ರೋಗನಿರೋಧಕ ಶಕ್ತಿ ಹೆಚ್ಚಾಗಬೇಕು. ಇದಕ್ಕಾಗಿ ಎಲ್ಲರೂ ಆರೋಗ್ಯಕರ ಡಯೆಟ್ ಮತ್ತು ಜೀವನಶೈಲಿ ಅಭ್ಯಾಸ ಮಾಡಿಕೊಳ್ಳಬೇಕು’ ಎಂದು ರಾಜ್ಯ ಆರೋಗ್ಯ ಆಯುಕ್ತರ ಕಚೇರಿ ಬಿಡುಗಡೆ ಮಾಡಿದ ಮಾರ್ಗದರ್ಶಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರಿನಲ್ಲಿ ಕೊವಿಡ್ 19 ವೈರಸ್ನ 661 ಕೇಸ್ಗಳು ಸಕ್ರಿಯವಾಗಿವೆ. ಫೆಬ್ರವರಿಯಲ್ಲಿ 278 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 661ಕ್ಕೆ ಏರಿಕೆಯಾಗಿದೆ. ಇದರಲ್ಲಿ ಗಂಭೀರ ಸ್ವರೂಪದ ಕೇಸ್ ಸಂಖ್ಯೆ ಕಡಿಮೆಯಿದ್ದರೂ, ನಿರ್ಲಕ್ಷ್ಯ ವಹಿಸುವಂಥದ್ದಲ್ಲ. ಅದರ ಜತೆ ದೇಶಾದ್ಯಂತ ಕಾಡುತ್ತಿರುವ ಎಚ್3ಎನ್2 ಸೇರಿ, ಹಲವು ವೈರಸ್ಗಳೂ ಕಾಡುತ್ತಿವೆ. ಹೀಗಾಗಿ ಪ್ರತಿರೋಧಕ ವ್ಯವಸ್ಥೆ ಹೆಚ್ಚಿಸಿಕೊಳ್ಳಲು ಬಹುಮುಖ್ಯವಾಗಿ ನಮ್ಮ ದೇಹಕ್ಕೆ ಪೋಷಕಾಂಶಗಳು ಬೇಕು. ಅಲ್ಲದೆ, ದೇಹ ಹೈಡ್ರೇಟ್ ಆಗಿರಬೇಕು. ಹೀಗಾಗಿ ಸಮತೋಲಿತವಾದ ಆಹಾರಗಳನ್ನು ಸೇವಿಸಬೇಕು. ಇದರಿಂದ ಕೊವಿಡ್ 19 ಮತ್ತಿತರ ಸೋಂಕಿನ ಅಪಾಯ ಅತ್ಯಂತ ಕಡಿಮೆ ಇರುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಸಲಹೆ ಮೇರೆಗೆ 22ಕೆಜಿ ತೂಕ ಇಳಿಸಿಕೊಂಡ ಕೇಂದ್ರ ಸಚಿವ; ಆಯುರ್ವೇದ ಪದ್ಧತಿ ಅನುಸರಿಸಿ ಡಯೆಟ್
‘ತಾಜಾ ಆಗಿರುವ, ಸಂಸ್ಕರಣೆ ಮಾಡಿರದ ವಿವಿಧ ರೀತಿಯ ಆಹಾರಗಳನ್ನು ಸೇವಿಸಿ. ಈ ಮೂಲಕ ಅಗತ್ಯ ವಿಟಮಿನ್ಗಳು, ಖನಿಜಾಂಶಗಳು, ನಾರಿನಾಂಶ, ಪ್ರೋಟಿನ್, ಉತ್ಕರ್ಷಣ ನಿರೋಧಕಗಳನ್ನು ದೇಹಕ್ಕೆ ಪಡೆಯಿರಿ. ದೇಹದ ನಿರ್ಜಲೀಕರಣ ತಪ್ಪಿಸಲು ಸಾಕಷ್ಟು ನೀರು ಕುಡಿಯಬೇಕು. ಸಕ್ಕರೆ, ಕೊಬ್ಬು ಮತ್ತು ಉಪ್ಪಿನಾಂಶವುಳ್ಳ ಆಹಾರ ಸೇವೆಯನ್ನು ಕಡಿಮೆ ಮಾಡುವ ಮೂಲಕ ತೂಕ ಹೆಚ್ಚುವುದನ್ನು, ಹೃದಯ ಕಾಯಿಲೆಗಳು, ಸ್ಟ್ರೋಕ್, ಮಧುಮೇಹ ಮತ್ತು ಇತರ ಕೆಲವು ವಿಧದ ಕ್ಯಾನ್ಸರ್ನಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಿ’ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ‘ತಾಜಾ ತರಕಾರಿ, ಹಣ್ಣುಗಳು, ದ್ವಿದಳ ಧಾನ್ಯಗಳು, ಆಲೂಗಡ್ಡೆ, ಗೆಣಸಿನಂಥ ಬೇರು ತರಕಾರಿಗಳು, ಮಾಂಸ, ಮೀನು, ಮೊಟ್ಟೆ, ಹಾಲುಗಳನ್ನು ಸೇವಿಸಿ ಎಂದು ಸಲಹೆ ನೀಡಿದೆ
ಮಾಂಸವನ್ನು ತಿನ್ನಬಹುದು ಎಂದು ಹೇಳಿರುವ ಆರೋಗ್ಯ ಇಲಾಖೆ ಸಂಸ್ಕರಿಸಲ್ಪಟ್ಟಿರುವ ಕೆಂಪು ಮಾಂಸಗಳಿಗಿಂತಲೂ ಬಿಳಿ ಮಾಂಸ ಮತ್ತು ಮೀನನ್ನು ಬಳಕೆ ಮಾಡಿ. ಹಾಲು ಮತ್ತು ಹಾಲಿನ ಉತ್ಪನ್ನಗಳ ಉಪಯೋಗ ಜಾಸ್ತಿ ಇರಲಿ. ಫಾಸ್ಟ್ಫುಡ್, ಸ್ನ್ಯಾಕ್ಸ್, ಕರಿದ ಪದಾರ್ಥಗಳು, ಫಿಜ್ಜಾ, ಕುಕ್ಕೀಸ್ಗಳಂಥ ಆಹಾರಗಳ ಸೇವನೆಯನ್ನು ನಿಲ್ಲಿಸಿಬಿಡಿ ಎಂದೂ ಸಲಹೆ ನೀಡಿದೆ.