ವಿಧಾನಸಭೆ: ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪೇ ಸಿಎಂ ಅಭಿಯಾನದ ಕುರಿತು ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ಕುಡಚಿ ಶಾಸಕ ಪಿ. ರಾಜೀವ್ ಈ ವಿಚಾರವನ್ನು ಪ್ರಸ್ತಾಪಿಸಿದರು.
ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಕೆಲ ರಾಜಕೀಯ ಘಟನೆಗಳು, ಕರ್ನಾಟಕ ಅಧಃಪತನಕ್ಕೆ ಹೋಗುತ್ತಿದೆಯೇ ಎನ್ನುವ ಭಾವನೆ ಮೂಡಿಸುತ್ತಿವೆ. ಅತಿವೃಷ್ಟಿ ಪ್ರದೇಶಗಳನ್ನು ವೀಕ್ಷಣೆ ಮಾಡಲು ತೆರಳಿದಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಯಿತು. ಈ ಘಟನೆಯನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಖಂಡಿಸಿದರು. ಯಾವುದೇ ಪಕ್ಷದವರ ಮೇಲಾಗಲಿ ಈ ರೀತಿ ಮಾಡಬಾರದು ಎಂದರು. ಅದಕ್ಕೇ ಅವರು ಅಷ್ಟು ದೊಡ್ಡ ವ್ಯಕ್ತಿ ಎಂದು, ಪೇ ಸಿಎಂ ಘಟನೆಯನ್ನು ಸಮರ್ಥನೆ ಮಾಡಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕ ಪ್ರಿಯಾಂಕ್ ಖರ್ಗೆ ಸೇರಿ ಅನೇಕರನ್ನು ಪರೋಕ್ಷವಾಗಿ ಟೀಕಿಸಿದರು.
ಅವರ ಬಳಿ ಸಾಕ್ಷಿ ಇದ್ದರೆ ಪೊಲೀಸ್ ದೂರು ನೀಡಬೇಕಿತ್ತೇ ಹೊರತು ಯಾವುದೇ ರಾಜಕಾರಣಿ, ಸಾಹಿತಿ ಮುಂತಾದವರಿಗೆ ಕಪ್ಪು ಮಸಿ ಬಳಿಯುವುದು, ಅವಮಾನಿಸುವಂತಹ ಕೆಲಸ ಮಾಡಬಾರದು. ಪೇ ಸಿಎಂ ಎನ್ನುವುದನ್ನು ಅಭಿಯಾನವಾಗಿ ಮಾಡುತ್ತಿರುವುದಾಗಿ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಅವರು ಒಪ್ಪಿಕೊಂಡಿದ್ದಾರೆ ಎಂದರು.
ಈ ಸಮಯದಲ್ಲಿ ಎದ್ದುನಿಂತ ಕಾಂಗ್ರೆಸ್‌ನ ಕೃಷ್ಣಬೈರೇಗೌಡ ಮುಂತಾದವರು, ರಾಜಕಾರಣದಲ್ಲಿರುವವರು ಸಹಿಸಿಕೊಳ್ಳಬೇಕು. ನೀವು 10% ಸರ್ಕಾರ ಎಂದು ಬ್ರ್ಯಾಂಡ್ ಮಾಡಿದ್ದಿರಲ್ಲ, ಅದಕ್ಕೆ ಏನು ಸಾಕ್ಷಿ ಇತ್ತು? ಎಂದು ಪ್ರಶ್ನಿಸಿದರು. ಈ ಸಮಯದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.
ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಸಾರ್ವಜನಿಕ ಕ್ಷೇತ್ರದಲ್ಲಿರುವವರು ಸೀಜರನ ಹೆಂಡತಿ ಇದ್ದಹಾಗೆ ಎಂದರು. ಸಾರ್ವಜನಿಕ ಕ್ಷೇತ್ರದಲ್ಲಿರುವವರು ಎಲ್ಲ ಅನುಮಾನಗಳಿಂದ, ಆಪಾದನೆಗಳಿಂದ ಮುಕ್ತವಾಗಿರಬೇಕು ಎನ್ನುವುದಕ್ಕೆ ಉದಾಹರಣೆಯಾಗಿ ಬಳಸುವ ವಾಕ್ಯವನ್ನು ಬಳಸಿದ ಮಾಧುಸ್ವಾಮಿ, ಆದರೆ ಇದೀಗ ಸುಖಾಸುಮ್ಮನೆ ಕೆಸರೆರೆಚಾಟ ನಡೆಯುತ್ತಿದೆ. ಇಂದು ಒಬ್ಬರಿ ಮಾಡಿದವರು ನಾಳೆ ಮತ್ತೊಬ್ಬರಿಗೆ ಮಾಡುತ್ತಾರೆ. ಒಬ್ಬರು ಮತ್ತೊಬ್ಬರ ಜತೆ ಮಾತನಾಡುವುದೇ ಕಷ್ಟ ಎನ್ನುವ ಸ್ಥಿತಿ ಇದೆ.
ನನ್ನ ಆಡಿಯೊ ಇತ್ತೀಚೆಗೆ ಬಹಿರಂಗವಾಗಿತ್ತು. ನಾನೇನೊ ಒಬ್ಬರ ಹತ್ತಿರ ಮಾತನಾಡಿದ್ದೆ. ಅದನ್ನೆ ಎಲ್ಲೆಡೆ ಹರಿಬಿಡಲಾಯಿತು. ನಾವೆಲ್ಲರೂ ಸಾರ್ವಜನಿಕವಾಗಿ ಬೆತ್ತಲಾಗುತ್ತಿದ್ದೇವೆ. ಸ್ವತಃ ಮುಖ್ಯಮಂತ್ರಿಗಳನ್ನು ಈ ಸ್ಥಿತಿಗೆ ತಂದು ನಿಲ್ಲಿಸಿರುವುದು ಬೇಸರ ತಂದಿದೆ. ಇಷ್ಟು ಅಧಃಪತನಕ್ಕೆ ಇಳಿದಿರುವ ನಮ್ಮ ವಿರುದ್ಧ ಅತ್ಯಂತ ಕೀಳಾಗಿ ಮಾತನಾಡಿಕೊಳ್ಳುವ ಸ್ಥಿತಿ ಬಂದಿದೆ. ಇನ್ನೂ ಎಷ್ಟು ಆಳಕ್ಕೆ ಇಳಿಯಬೇಕು?
ಯಾರೊ ಒಬ್ಬರು ನನ್ನ ಖಾತೆಗೆ ಹಣ ಕಳಿಸಿ ಮಾಧುಸ್ವಾಮಿ ಹಣ ತೆಗೆದುಕೊಂಡಿದ್ದಾರೆ ಎಂದರೆ ಏನಾಗಬೇಕು? ಸಿಎಂ ವಿರುದ್ಧ ಅಪಪ್ರಚಾರವನ್ನು ವಿರೋಧಿಸಿ ಕೆಲವರು ದೂರು ನೀಡಿದ್ದಾರೆ, ಪೊಲೀಸರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತಿದ್ದಾರೆ. ಇನ್ನು ಮುಂದೆ ಇಂಥದ್ದಕ್ಕೆಲ್ಲ ಕಡಿವಾಣ ಹಾಕಲೇಬೇಕಾಗಿದೆ. ನಾವು ಜನರ ಕೆಲಸ ಮಾಡುವುದಕ್ಕೆ ಬಂದಿದ್ದೇವೆ, ಪರಸ್ಪರರ ವಿರುದ್ಧ ಕೆಸರೆರೆಚಾಡುವುದರಲ್ಲಿ ಅರ್ಥವಿಲ್ಲ. ನಾವು ಕಾಂಗ್ರೆಸ್, ಇನ್ನೊಂದು ಪಕ್ಷ ಎಂದು ನೋಡುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.
ಇದನ್ನೂ ಓದಿ | ರಾಜಕೀಯದಲ್ಲಿ QR ಕೋಡ್ ಕದನ: ಕಾಂಗ್ರೆಸ್‌ನ ʼPay CMʼಗೆ ಉತ್ತರವಾಗಿ ಭಾರತ್ ಜೋಡೊ ಪೋಸ್ಟರ್ ಹರಿಬಿಟ್ಟ BJP