ಮಂಡ್ಯ: ಜಿಲ್ಲಾಡಳಿತದಿಂದ ನಿಷೇಧಾಜ್ಞೆ ಹೇರಿದರೂ ಶ್ರೀರಂಗಪಟ್ಟಣ ಚಲೋ ನಡೆಸುವುದಾಗಿ ಹಿಂದುಪರ ಸಂಘಟನೆಗಳಿಂದ ಶುಕ್ರವಾರ ಜಿಲ್ಲೆಯಲ್ಲಿ ಕರಪತ್ರಗಳನ್ನು ಹಂಚಲಾಗಿದೆ. ಜಾಮಿಯಾ ಮಸೀದಿ ಇರುವ ಸ್ಥಳದಲ್ಲಿ ಹನುಮಾನ್ ದೇವಸ್ಥಾನವಿದ್ದು, ಮಸೀದಿಯನ್ನು ತೆರವುಗೊಳಿಸಬೇಕು ಎಂಬುದು ಸಂಘಟನೆಗಳ ಆಗ್ರಹ. ಶನಿವಾರ(ಜೂನ್ 4) ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ಚುರುಕಿನ ಸಿದ್ಧತೆ ಮಾಡುತ್ತಿದ್ದು, ಪೊಲೀಸರು ಕರಪತ್ರ ಹಂಚಬಾರದು ಎಂದು ತಿಳಿಸಿದ್ದರೂ ಹೋರಾಟ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮುಖಂಡರು ತಿಳಿಸಿದ್ದಾರೆ.
ಐವರಿಗಿಂತ ಹೆಚ್ಚು ಜನರು ಒಂದೆಡೆ ಗುಂಪು ಸೇರಬಾರದು, ಯಾವುದೇ ಪ್ರತಿಭಟನೆ ಅಥವಾ ಮೆರವಣಿಗೆ ನಡೆಸಬಾರದು ಎಂದು ಜಿಲ್ಲಾಧಿಕಾರಿ ಎಸ್. ಆಶ್ವಥಿ ತಿಳಿಸಿದ್ದಾರೆ. ಜೂನ್ 3ರಂದು ಸಂಜೆ 6ರಿಂದ ಜೂನ್ 5ರವರೆಗೆ ಶ್ರೀರಂಗಪಟ್ಟಣ ಪುರಸಭೆಯಿಂದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಿರುವ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಶನಿವಾರದ ಸಂತೆಯನ್ನು ಮುಂದೂಡಲಾಗಿದೆ.
ಇದನ್ನೂ ಓದಿ | ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿನ ಮದರಸಾ ಖಾಲಿ ಮಾಡಿಸಲು ಆಗ್ರಹ
ಮಸೀದಿಯಲ್ಲಿ ವಿದ್ಯಾರ್ಥಿಗಳ ವಾಸ್ತವ್ಯ: ಪುರಾತತ್ವ ಇಲಾಖೆಗೆ ಸೇರಿದ ಜಾಮಿಯಾ ಮಸೀದಿಯಲ್ಲಿ ವಿದ್ಯಾರ್ಥಿಗಳು ಅಕ್ರಮವಾಗಿ ವಾಸ್ತವ್ಯವಿದ್ದಾರೆ. ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯದ ಯುವಕರು ಮಸೀದಿಯಲ್ಲಿ ವಾಸ ಮಾಡುತ್ತಿದ್ದಾರೆ ಎಂಬ ಹಿಂದು ಸಂಘಟನೆಗಳ ಆರೋಪಕ್ಕೆ ಇದೀಗ ಪುರಾವೆಗಳು ಸಿಕ್ಕಿವೆ. ಮಸೀದಿ ಒಳಗೆ ಯುವಕರು ವಾಸ್ತವ್ಯವಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಾನೂನು ಉಲ್ಲಂಘಿಸಿ ಜಾಮಿಯಾ ಮಸೀದಿಯಲ್ಲಿ ಮದರಸಾ ನಡೆಸಲಾಗುತ್ತಿದೆ. ಮಸೀದಿ ಕಂಬಗಳ ಮೇಲೆ ನಾಗಬಂದ, ಹಿಂದೂ ದೇವರ ಆಕೃತಿಗಳು ಕಂಡುಬಂದಿವೆ. ಇದು ಮೂಲ ಆಂಜನೇಯ ಸ್ವಾಮಿ ದೇಗುಲವಾಗಿದೆ. ಹೀಗಾಗಿ ಮಸೀದಿಯ ವಿಡಿಯೋಗ್ರಫಿ ಸರ್ವೇ ಮಾಡಬೇಕು, ಒಳಗೆ ವಾಸ್ತ್ವ್ಯ ಇರುವವರನ್ನು ತೆರವುಗೊಳಿಸಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.
ಇದನ್ನೂ ಓದಿ | ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವೇನಿದೆ? ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್