ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election 2023) ಕೆಲವೇ ದಿನಗಳು ಬಾಕಿ ಇರುವಾಗಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿ ಇರುವವರ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. “ಕರ್ನಾಟಕದಲ್ಲಿ ನಾನು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಕಾಂಕ್ಷಿಗಳು” ಎಂದು ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ.
ನ್ಯೂಸ್ 18ಗೆ ನೀಡಿದ ಸಂದರ್ಶನ ನೀಡುವ ವೇಳೆ ಸಿದ್ದರಾಮಯ್ಯ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. “ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆ ಜಗಳ ಇಲ್ಲ. ನೂತನವಾಗಿ ಆಯ್ಕೆಯಾದ ಶಾಸಕರು ಹಾಗೂ ಕಾಂಗ್ರೆಸ್ ಹೈಕಮಾಂಡ್ ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ತೀರ್ಮಾನ ಮಾಡುತ್ತದೆ” ಎಂದು ಹೇಳಿದ್ದಾರೆ.
ಮೋದಿ ಮ್ಯಾಜಿಕ್ ರಾಜ್ಯದಲ್ಲಿ ನಡೆಯಲ್ಲ
ಕರ್ನಾಟಕದಲ್ಲಿ ಮೋದಿ ಸತತವಾಗಿ ಚುನಾವಣೆ ಪ್ರಚಾರದಲ್ಲಿ ಕೈಗೊಳ್ಳುತ್ತಿರುವ ಕುರಿತು ಮಾತನಾಡಿದ ಅವರು, “ಕರ್ನಾಟಕದಲ್ಲಿ ಮೋದಿ ಮ್ಯಾಜಿಕ್ ನಡೆಯಲ್ಲ. ಮೋದಿ ಅವರು ಪಂಜಾಬ್, ದೆಹಲಿ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶದಲ್ಲೇಕೆ ಮೋದಿ ಮ್ಯಾಜಿಕ್ ನಡೆಯಲಿಲ್ಲ? ಎಲ್ಲ ರಾಜ್ಯಗಳಲ್ಲೂ ಮೋದಿ ಮ್ಯಾಜಿಕ್ ನಡೆಯಲ್ಲ? ಮೋದಿ ಅಲೆಯೂ ಇಲ್ಲ, ಸುನಾಮಿಯೂ ಇಲ್ಲ. ಹಾಗೊಂದು ವೇಳೆ ಅಷ್ಟೊಂದು ಅಲೆ ಇದ್ದರೆ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಸರ್ಕಾರವೇ ಇರುತ್ತಿತ್ತು” ಎಂದರು.
ಕೋಲಾರದಿಂದ ಏಕೆ ಸ್ಪರ್ಧೆ ಇಲ್ಲ?
ಕೋಲಾರದಿಂದ ಸ್ಪರ್ಧಿಸುವುದಾಗಿ ಭರವಸೆ ನೀಡಿ, ಕೊನೆಗೆ ವರುಣಾದತ್ತ ಮುಖ ಮಾಡಿದ ಕುರಿತು ಕೂಡ ಸಿದ್ದರಾಮಯ್ಯ ಉತ್ತರ ನೀಡಿದರು. “ಹೈಕಮಾಂಡ್ ಒಪ್ಪಿದರೆ ನಾನು ಕೋಲಾರದಿಂದ ಸ್ಪರ್ಧಿಸುತ್ತೇನೆ ಎಂದು ಕೋಲಾರದ ಜನರಿಗೆ ಭರವಸೆ ನೀಡಿದ್ದೆ. ಅದರಂತೆ ಹೈಕಮಾಂಡ್ ಸೂಚಿಸಿದ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ನಾನು ಎಂದಿಗೂ ಎರಡು ಕ್ಷೇತ್ರ ಕೊಡಿ ಎಂಬುದಾಗಿ ಹೈಕಮಾಂಡ್‌ಅನ್ನು ಕೇಳಿರಲಿಲ್ಲ” ಎಂದು ಹೇಳಿದರು.
ಆಪರೇಷನ್ ಹಸ್ತ ಇಲ್ಲ
“ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರು ಸ್ವಯಂಪ್ರೇರಿತರಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಹಾಗೂ ನಾವು ಅವರನ್ನು ಸ್ವಾಗತಿಸಿದ್ದೇವೆ. ಸ್ವಯಂ ಪ್ರೇರಿತರಾಗಿ ನಮ್ಮ ಪಕ್ಷಕ್ಕೆ ಬಂದರೆ ಅದು ಆಪರೇಷನ್ ಹಸ್ತ ಆಗುವುದಿಲ್ಲ. ಬಿಜೆಪಿಯ ವರ್ತನೆಯಿಂದ ಬೇಸತ್ತು ಅವರು ನಮ್ಮ ಪಕ್ಷ ಸೇರ್ಪಡೆಯಾಗಿದ್ದಾರೆ” ಎಂದು ಹೇಳಿದ್ದಾರೆ. ಹಾಗೆಯೇ, ವಿಧಾನಸಭೆ ಚುನಾವಣೆಯಲ್ಲಿ 150 ಸೀಟು ಗೆಲ್ಲುವ ಗುರಿ ಇದೆ. ರಾಜ್ಯ ನಾಯಕತ್ವದ ಮೇಲೆ ರಾಹುಲ್ ಗಾಂಧಿ ಅವರಿಗೆ ವಿಶ್ವಾಸವಿದೆ ಎಂದು ಕೂಡ ಹೇಳಿದರು.
ಇದನ್ನೂ ಓದಿ: Karnataka Election 2023: ವರುಣದಲ್ಲಿ ಸೋಮಣ್ಣ ಹರಕೆಯ ಕುರಿ; ಇದಕ್ಕೆಲ್ಲ ಬಿ.ಎಲ್. ಸಂತೋಷ್ ಕಾರಣವೆಂದ ಸಿದ್ದರಾಮಯ್ಯ