ಬೆಂಗಳೂರು: ಅನೇಕ ದಿನಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಡಿ.ಕೆ. ಶಿವಕುಮಾರ್ ವರ್ಸಸ್ ಸಿದ್ದರಾಮಯ್ಯ ಶೀತಲ ಯುದ್ಧಕ್ಕೆ ಕೊನೆ ಸಿಗಲಿದೆಯೇ ಎಂಬ ಆಶಾಭಾವನೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡಿದೆ.
ಇಬ್ಬರೂ ನಾಯಕರು ಶುಕ್ರವಾರ ಒಟ್ಟಿಗೆ ಸಾಕಷ್ಟು ಹೊತ್ತು ಮಾತನಾಡಿದ್ದಷ್ಟೆ ಅಲ್ಲದೆ ಉಪಾಹಾರ ಸೇವನೆ ಮಾಡಿ ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ. ಬೆಳಗ್ಗೆ ಸಿದ್ದರಾಮಯ್ಯ ಅವರ ಮನೆಗೆ ತೆರಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇಬ್ಬರೂ ಒಂದಾಗಿದ್ದೇವೆ ಎಂದರು.
ಸಿದ್ದರಾಮೋತ್ಸವದ ಡ್ಯಾಮೇಜ್
ಸಿದ್ದರಾಮಯ್ಯ ಅವರಿಗೆ 75 ವರ್ಷವಾಗುತ್ತಿರುವ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆದಿದೆ. ಈ ಕಾರ್ಯಕ್ರಮವನ್ನು ತಮ್ಮ ಆಪ್ತರು, ಅಭಿಮಾನಿಗಳು ಮಾಡುತ್ತಿದ್ದಾರೆ ಎಂದಿದ್ದ ಸಿದ್ದರಾಮಯ್ಯ, ಅತ್ತ ಕಡೆ ರಾಹುಲ್ ಗಾಂಧಿ ಅವರನ್ನು ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನವನ್ನೂ ನೀಡಿದ್ದರು. ನವದೆಹಲಿಯಲ್ಲಿ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡುವಾಗ ಜತೆಯಲ್ಲೆ ಇದ್ದರೂ, ಈ ಬಗ್ಗೆ ತಮಗೆ ಏನೂ ಗೊತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದರು.
ಈ ನಡುವೆ ಸುದೀರ್ಘವಾಗಿ ಪ್ರತಿಕ್ರಿಯೆ ನೀಡಿ, ನಮ್ಮ ಪಕ್ಷದಲ್ಲಿ ವ್ಯಕ್ತಿಪೂಜೆ ಮಾಡುವುದಿಲ್ಲ. ನಮ್ಮ ಕಾರ್ಯಕರ್ತರಿಗೂ ಇದನ್ನೇ ಹೇಳುತ್ತೇನೆ. ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿದ್ದಾರೆ, ಹೋಗುತ್ತೇವೆ ಎಂದಿದ್ದರು. ಆದರೆ ಗುರುವಾರವಷ್ಟೆ ಡಿ.ಕೆ. ಶಿವಕುಮಾರ್ ಮಾತಿನ ಧಾಟಿ ಬದಲಾಗಿತ್ತು.
ಸಿದ್ದರಾಮೋತ್ಸವಕ್ಕೆ ಎಲ್ಲರೂ ಹೋಗಬೇಕು ಎಂದು ತೀರ್ಮಾನ ಮಾಡಿದ್ದೇವೆ. ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಆಗಮಿಸಲಿದ್ದಾರೆ. ಇದು ನಮ್ಮ ಪಕ್ಷದ ಕಾರ್ಯಕ್ರಮ. ಪಕ್ಷದ ವೇದಿಕೆಯಲ್ಲೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿ ಅಚ್ಚರಿ ಮೂಡಿಸಿದ್ದರು.
ಇದನ್ನೂ ಓದಿ | ಸಿದ್ದರಾಮೋತ್ಸವ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ: ಡಿ.ಕೆ. ಶಿವಕುಮಾರ್ ಅಚ್ಚರಿಯ ಹೇಳಿಕೆ
ಕಾರ್ಯಕರ್ತರಲ್ಲಿ ಗೊಂದಲ
ಇಬ್ಬರೂ ನಾಯಕರು ಪರಸ್ಪರ ಗುದ್ದಾಡಿಕೊಳ್ಳುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅಷ್ಟೆ ಅಲ್ಲದೆ, ಈ ಭಿನ್ನಾಭಿಪ್ರಾಯದ ಲಾಭವನ್ನು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ನವರೂ ಪಡೆದುಕೊಳ್ಳುತ್ತಿದ್ದಾರೆ ಎಂಬ ಅನುಮಾನ ಕಾಂಗ್ರೆಸ್ ನಾಯಕರಿಗೆ ಮೂಡಿತ್ತು.
ಪ್ರತಿದಿನ ಬಿಜೆಪಿ ನಾಯಕರು ಕಾಂಗ್ರೆಸ್ ಭಿನ್ನಮತದ ಹೇಳಿಕೆ ನೀಡುತ್ತ ಗೊಂದಲ ಮೂಡಿಸುತ್ತಿದ್ದು, ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ದಿಢೀರ್ ಉಪಾಹಾರ ಕಾರ್ಯಕ್ರಮ ಏರ್ಪಡಿಸಿಕೊಂಡ ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ತಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂಬ ಸಂದೇಶವನ್ನು ಈ ಮೂಲಕ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜಕೀಯ ಸಂದೇಶ ಇದೆ
ಉಪಾಹಾರ ಭೇಟಿಯ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನನ್ನ ಹುಟ್ಟುಹಬ್ಬವನ್ನು ಪಕ್ಷದವರೇ ಮಾಡುತ್ತಾ ಇದ್ದಾರೆ. ನಮ್ಮ ಪಕ್ಷದ ಆರ್. ವಿ. ದೇಶಪಾಂಡೆ ಇದಕ್ಕೆ ಅಧ್ಯಕ್ಷ, ರಾಯರೆಡ್ಡಿಯೂ ಜತೆಗಿದ್ದಾರೆ. ಪಕ್ಷದ ವೇದಿಕೆ ಅಲ್ಲದೇ ಇದ್ದರೂ ಪಕ್ಷದವರೇ ಮಾಡುತ್ತಾ ಇದ್ದಾರೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಬಿ. ಕೆ. ಹರಿಪ್ರಸಾದ್, ಡಿ. ಕೆ. ಶಿವಕುಮಾರ್, ಮುನಿಯಪ್ಪ ಅವರನ್ನೂ ಆಹ್ವಾನಿಸಿದ್ದೇನೆ.
ನಾನು ಇದನ್ನು ಸಿದ್ದರಾಮೋತ್ಸವ ಎಂದು ಕರೆದಿಲ್ಲ. ಇದು ನನ್ನ ೭೫ ನೇ ಹುಟ್ಟುಹಬ್ಬದ ಹಿನ್ನಲೆ ಅಮೃತ ಮಹೋತ್ಸವ. ಇದು ನನ್ನ ಜೀವನದ ಮೈಲ್ ಸ್ಟೋನ್. ಅದಕ್ಕೆ ಅಮೃತ ಮಹೋತ್ಸವ ಎಂದು ಕರೆದಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಪಕ್ಷದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ. ನೀವು ಮಾತ್ರ ಹೇಳುತ್ತಾ ಇರೋದು ಎಂದರು. ಇದರಲ್ಲಿ ರಾಜಕೀಯ ಸಂದೇಶ ಇದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ರಾಜಕೀಯ ಸಂದೇಶ ಇದ್ದೇ ಇರುತ್ತದೆ. ನಾನು ಸನ್ಯಾಸಿ ಅಲ್ಲ, ಡಿ. ಕೆ. ಶಿವಕುಮಾರ್ ಸಹ ಸನ್ಯಾಸಿ ಅಲ್ಲ. ರಾಹುಲ್ ಗಾಂಧಿಯವರೂ ಸನ್ಯಾಸಿ ಅಲ್ಲ. ನಮ್ಮ ಕಾಲದ ಸಾಧನೆಯನ್ನೂ ತೋರಿಸುತ್ತೇವೆ ಎದರೆ ಅದರಲ್ಲಿ ರಾಜಕೀಯ ಇದ್ದೇ ಇದೆ ಎಂದು ಹೇಳಿದರು.
ಸಭೆಯ ಮಾಹಿತಿ ನೀಡಿದೆ
ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ಪಕ್ಷದ ಪದಾಧಿಕಾರಿಗಳ ಸಭೆಯನ್ನು ಗುರುವಾರ ನಡೆಸಲಾಗಿದೆ. ಮುಂದೆ ಸಂಘಟನೆಯ ವಿಚಾರ ಹಾಗೂ ಗುರುವಾರದ ಸಭೆಯ ಕುರಿತು ಮಾಹಿತಿ ನೀಡಲು ಇಲ್ಲಿಗೆ ಬಂದಿದ್ದೇನೆ. ಸಿದ್ದರಾಮಯ್ಯ ಅವರು ಸಹ ಕೆಲವು ಸಲಹೆ ನೀಡಿದ್ದಾರೆ. ಇದೇ ವಿಷಯವನ್ನು ಚರ್ಚೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ | ಸಿದ್ದರಾಮೋತ್ಸವ ಕೇವಲ ಜನುಮ ದಿನ ಕಾರ್ಯಕ್ರಮವೆ? srlopcm75ನಲ್ಲಿದೆ ಈ ಒಗಟಿಗೆ ಉತ್ತರ!