ನವ ದೆಹಲಿ: ಅಕ್ರಮ ಆಸ್ತಿ ಸಂಪಾದನೆ, ಸರ್ಕಾರದ ತೆರಿಗೆ ವಂಚನೆ ಸೇರಿ ಅನೇಕ ಆರೋಪಗಳನ್ನು ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶುಕ್ರವಾರ ನವ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯದ(ಇ.ಡಿ.) ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾದರು. ಈಗಾಗಲೆ ದೆಹಲಿ ನ್ಯಾಯಾಲಯ ನೀಡಿರುವ ಜಾಮೀನನ್ನು ಮುಂದುವರಿಸಬೇಕು ಎಂದು ಡಿ.ಕೆ. ಶಿವಕುಮಾರ್ ಪರ ವಕೀಲರು ಮನವಿ ಮಾಡಿದರು. ಆದರೆ ಇದಕ್ಕೆ ಇ.ಡಿ. ಪರ ವಕೀಲರು ವಿರೋಧ ವ್ಯಕ್ತಪಡಿಸಿದರು.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಜಾರಿ ನಿರ್ದೇಶನಾಲಯ ಡಿ.ಕೆ.ಶಿವಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ನವ ದೆಹಲಿಯಲ್ಲಿ ಕೊನೆಗೆ ಬಂಧಿಸಿ ತಿಹಾರ್ ಜೈಲಿಗೆ ಕಳಿಸಿತ್ತು. ತನಿಖೆ ಪೂರ್ಣಗೊಳಿಸಿರುವ ಇ.ಡಿ ಜೂನ್ ಕೊನೆಯ ವಾರದಲ್ಲಿ ದೋಷಾರೋಪ ಪಟ್ಟಿಯನ್ನು ದೆಹಲಿಯಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ಇದನ್ನೂ ಓದಿ | ಡಿಕೆಶಿಗೆ ಮತ್ತೆ ಇಡಿ ಸಂಕಷ್ಟ; ಚಾರ್ಜ್‌ಶೀಟ್‌ನಲ್ಲಿ ಏನೆಲ್ಲಾ ಮಾಹಿತಿ ಇದೆ ಗೊತ್ತಾ?
ಆರೋಪ ಪಟ್ಟಿ ಸಲ್ಲಿಕೆ ನಂತರ ಜುಲೈ 1ರಂದು ವಿಚಾರಣೆಗೆ ಹಾಜರಾಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ನೀಡಿತ್ತು. ಕೆಪಿಸಿಸಿ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ರಾಜ್ಯ ವಿಧಾನಸಭೆ ಚುನಾವಣೆ ಕುರಿತು ಚರ್ಚೆ ನಡೆಸಲು ಮೂರು ದಿನದಿಂದ ನವ ದೆಹಲಿಯಲ್ಲಿ ಉಳಿದುಕೊಂಡಿರುವ ಡಿ.ಕೆ. ಶಿವಕುಮಾರ್ ಶುಕ್ರವಾರ ವಿಚಾರಣೆಗೆ ಹಾಜರಾದರು.
ಡಿ.ಕೆ. ಶಿವಕುಮಾರ್ ಅವರ ಜತೆಗೆ ಇನ್ನಿತರ ಆರೋಪಿಗಳಾದ ಸಚಿನ್ ನಾರಾಯಣ್, ಸುನೀಲ್ ಶರ್ಮಾ, ಆಂಜನೇಯ ಹಾಗೂ ರಾಜೇಂದ್ರ ಹಾಜರಾದರು. ಡಿ.ಕೆ. ಶಿವಕುಮಾರ್ ಪರ ವಕೀಲ ದಯಾ ಕೃಷ್ಣನ್ ವಾದ ಮಂಡಿಸಿದರು. ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಸಂಬಂಧಿಸಿದ ದಾಖಲೆಗಳನ್ನು ಪೆನ್‌ಡ್ರೈವ್‌ನಲ್ಲಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೆ ದೆಹಲಿ ನ್ಯಾಯಾಲಯ ನೀಡಿರುವ ಜಾಮೀನನ್ನು ಮುಂದುವರಿಸಬೇಕು ಎಂದು ಕೋರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇ.ಡಿ. ಪರ ವಕೀಲರು, ದೆಹಲಿ ನ್ಯಾಯಾಲಯ ಜಾಮೀನು ನೀಡಿರುವುದನ್ನು ಇ.ಡಿ. ನ್ಯಾಯಾಲಯ ಮುಂದುವರಿಸಬಾರದು ಎಂದರು.
ಇದಕ್ಕೆ ಪ್ರತಿ ವಾದ ಮಂಡಿಸಿದ ಡಿ.ಕೆ. ಶಿವಕುಮಾರ್ ಪರ ವಕೀಲರು, ಈ ಹಿಂದೆ ಬೇರೆ ಪ್ರಕರಣಗಳಲ್ಲಿ ಇ.ಡಿ. ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಉದಾಹರಣೆಗಳಿವೆ ಎಂದು ಹೇಳಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ, ಜುಲೈ 30ಕ್ಕೆ ವಿಚಾರಣೆಯನ್ನು ಮುಂದೂಡಿತು.
ಇದನ್ನೂ ಓದಿ | ರಾಹುಲ್‌ಗೆ ಇಂದೂ ಇ.ಡಿ ಅಗ್ನಿ ಪರೀಕ್ಷೆ: ನಾಲ್ಕನೇ ಬಾರಿ ವಿಚಾರಣೆಯ ಬಿಸಿ