ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೃಷ್ಟಿಸಿದ ಹಿಂದೂ ವಿವಾದ ತಣಿಯುವ ಮೊದಲೇ ಕಾಂಗ್ರೆಸ್‌ಗೆ ಈಗ ಟಿಪ್ಪು ಅಗ್ನಿ ಪರೀಕ್ಷೆ ಎದುರಾಗಿದೆ. ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ಸ್ಥಾಪಿಸುವುದಾಗಿ ಶಾಸಕ ತನ್ವೀರ್ ಸೇಠ್ ಘೋಷಿಸಿರುವ ಬೆನ್ನಿಗೇ ಸಿದ್ದರಾಮಯ್ಯ, ಎಂ.ಬಿ. ಪಾಟೀಲ್, ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್‌ನ ಕೆಲವು ಕಾಂಗ್ರೆಸ್ ನಾಯಕರು ಟಿಪ್ಪು ಪ್ರತಿಮೆ ಪರವಾಗಿ ಮಾತನಾಡಿದ್ದಾರೆ. ಇದು ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.
ಸಿದ್ದು, ಎಂ.ಬಿ. ಪಾಟೀಲ್ ಹೇಳಿದ್ದೇನು?
“ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ಮಾಡಿದರೆ ತಪ್ಪೇನು” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ತನ್ವಿರ್ ಸೇಠ್ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ. “ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಕೂಡ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದಾರೆ. ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆ ಇರುವಂತೆ, ಟಿಪ್ಪು ಪ್ರತಿಮೆಯೂ ಇದ್ದರೆ ತಪ್ಪೇನು” ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ. “ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪಿಸುವುದರಲ್ಲಿ ತಪ್ಪೇನಿದೆ” ಎಂದು ಮತ್ತೊಬ್ಬ ನಾಯಕ ಚಲುವರಾಯಸ್ವಾಮಿ ಅವರು ತನ್ವಿರ್ ಸೇಠ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ
ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣಕ್ಕೆ ಕಾಂಗ್ರೆಸ್ ನಾಯಕರು ಉತ್ಸಾಹ ತೋರಿರುವುದನ್ನು ಬಿಜೆಪಿ ವಿರೋಧಿಸಿದೆ. “ಕರ್ನಾಟಕದಲ್ಲಂತೂ ಕಾಂಗ್ರೆಸ್‌ನವರಿಗೆ ಟಿಪ್ಪು ಪ್ರತಿಮೆ ಸ್ಥಾಪಿಸಲು ಬಿಡುವುದಿಲ್ಲ. ಅವರು ಬೇರೆ ಎಲ್ಲಾದರೂ ಹೋಗಿ ನಿರ್ಮಿಸಬೇಕು” ಎಂದು ಸಚಿವ ಡಾ. ಅಶ್ವತ್ಥ್ ನಾರಾಯಣ್ ವ್ಯಂಗ್ಯವಾಡಿದ್ದಾರೆ. ಮತ್ತೊಂದೆಡೆ, “ಟಿಪ್ಪು ಪ್ರತಿಮೆ ಸ್ಥಾಪಿಸಿದರೆ ಅದನ್ನು ಕಿತ್ತೆಸೆಯುತ್ತೇವೆ” ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಕೈ ನಾಯಕರಿಗೆ ಚೆಲ್ಲಾಟ, ಡಿಕೆಶಿ ಪರದಾಟ
ಹಿಂದುತ್ವ, ಟಿಪ್ಪು ಸುಲ್ತಾನ್ ಸೇರಿ ಹಲವು ವಿಷಯಗಳ ಕುರಿತು ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಂಕಟ ತಂದಿತ್ತಿವೆ. ಇದೇ ಕಾರಣಕ್ಕೆ ನಾಯಕರನ್ನು ನಿಯಂತ್ರಿಸುವ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಅಲವತ್ತುಕೊಂಡಿದ್ದಾರೆ.
“ನನ್ನ ಮತ್ತು ನಿಷ್ಠಾವಂತ ಕಾರ್ಯಕರ್ತರ ಶ್ರಮ ವ್ಯರ್ಥ ಮಾಡಬೇಡಿ. ಅನಗತ್ಯ ಹೇಳಿಕೆ ನೀಡುವವರನ್ನು ನಿಯಂತ್ರಿಸಿ” ಎಂದು ಉಭಯ ನಾಯಕರ ಬಳಿ ಡಿಕೆಶಿ ಅಳಲು ತೋಡಿಕೊಂಡಿದ್ದಾರೆ. “ರಾತ್ರಿ ನಿದ್ದೆಯನ್ನೂ ಮಾಡದೆ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿದ್ದೇನೆ. ಭಾರತ್ ಜೋಡೋ ಯಾತ್ರೆಯು ಫಲ ನೀಡುತ್ತಿರುವ ಹಾಗೂ ಚುನಾವಣೆ ಸಮೀಪಿಸುತ್ತಿರುವ ಇಂತಹ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಬಾರದು ಎಂಬುದು ತಿಳಿಯುವುದಿಲ್ಲವೇ? ದಯವಿಟ್ಟು ಇಂತಹ ಹೇಳಿಕೆಗಳಿಗೆ ಬ್ರೇಕ್ ಹಾಕಿ” ಎಂಬುದಾಗಿ ಪಕ್ಷದ ವರಿಷ್ಠರ ಬಳಿ ಡಿಕೆಶಿ ಮನವಿ ಮಾಡಿದ್ದಾರೆ.
ನಾವೇ ಅಸ್ತ್ರಗಳನ್ನು ಕೊಟ್ಟಂತೆ
ಸತೀಶ್ ಜಾರಕಿಹೊಳಿ ಕ್ಷಮಾಪಣೆ ವಿಳಂಬವಾದ ಕುರಿತು ಕೂಡ ಡಿಕೆಶಿ ಅವರು ನಾಯಕರ ಬಳಿ ಪ್ರಸ್ತಾಪಿಸಿದ್ದಾರೆ. “ಬಿಜೆಪಿಗೆ ನಾವೇ ಅಸ್ತ್ರಗಳನ್ನು ಕೊಟ್ಟಂತಾಗುತ್ತಿದೆ. ಹಿಂದು ಕುರಿತು ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ ಕೂಡಲೇ ಕ್ಷಮಾಪಣೆ ಕೇಳಬೇಕಿತ್ತು. ಆದರೆ, ಇದೇ ವಿಚಾರವನ್ನು ಬಿಜೆಪಿಯು ದೊಡ್ಡದು ಮಾಡಿದ ಬಳಿಕ ವಿಷಾದ ವ್ಯಕ್ತಪಡಿಸಲಾಯಿತು. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ರಣತಂತ್ರ ರೂಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಒಂದಲ್ಲ ಒಂದು ಹೇಳಿಕೆಗಳಿಂದ ಸುದ್ದಿಯಾಗುತ್ತಿರುವುದು ಮುಖ್ಯಮಂತ್ರಿ ಕನಸು ಹೊತ್ತು ಪಕ್ಷ ಸಂಘಟನೆಯಲ್ಲಿ ತೊಡಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ನುಂಗಲಾರದ ತುತ್ತಾಗಿದೆ.
ಇದನ್ನೂ ಓದಿ | ಹುಬ್ಬಳ್ಳಿ-ಧಾರವಾಡ ಪಾಲಿಕೆ ಕಚೇರಿಯಲ್ಲಿ ಟಿಪ್ಪು ಜಯಂತಿ; ಸರ್ಕಾರದ ನಿಯಮ ಉಲ್ಲಂಘಿಸಿ ಆಚರಣೆ