Site icon Vistara News

Karnataka Election: ತಂದೆ ಇಲ್ಲದೆ 17 ವರ್ಷ ಆಗಿದೆ; ಡಿಕೆಶಿ ತಂದೆಯಂತೆ ನಿಂತು ಬೆಳೆಸಿದ್ದಾರೆ: ಐಶ್ವರ್ಯ ಮಹದೇವು

Aishwarya Mahadevu

ಮೈಸೂರು: ನನ್ನ ತಂದೆ ಮಂಚನಹಳ್ಳಿ ಮಹದೇವು ಶಾಸಕರಾಗಿದ್ದರು. ಅವರು ಇಲ್ಲವಾಗಿ 17 ವರ್ಷ ಆಗಿದೆ. ಎಲ್ಲರಿಗೂ ತಂದೆ ಇರುತ್ತಾರೆ, ತಂದೆಯೇ ಬೆಳೆಸುತ್ತಾರೆ. ನನಗೆ ತಂದೆ ಇಲ್ಲ. ಆಗಿನಿಂದ ಈಗಿನವರೆಗೂ ನನ್ನನ್ನು ತಂದೆ ರೀತಿ ಬೆನ್ನೆಲುಬಾಗಿ ನಿಂತು ಬೆಳೆಸುತ್ತಿರುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಎಂದು ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್ (Aishwarya Mahadevu) ಅವರು ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಏರ್ಪಡಿಸಿದ್ದ ಸಮಾವೇಶದಲ್ಲಿ ಹೇಳಿದರು.

ಸಾಲಿಗ್ರಾಮದಲ್ಲಿ ಏರ್ಪಡಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜಕೀಯ ಅಂದರೆ ಜವಾಬ್ದಾರಿ ಎಂದು ಡಿ.ಕೆ. ಶಿವಕುಮಾರ್‌ ಸಾಹೇಬರು ಹೇಳಿಕೊಟ್ಟಿದ್ದಾರೆ. ಒಂದೇ ಒಂದು ವೋಟ್ ಹಾಕಿದರೂ ಆ ಒಬ್ಬ ವ್ಯಕ್ತಿ ಪರವಾಗಿ ಇರಬೇಕು. ಈ ಕ್ಷೇತ್ರದಲ್ಲಿ ಏನಾಗಿದೆ ಎಂಬುದು ಗೊತ್ತಿದೆ. ಐದು ವರ್ಷಕ್ಕೊಮ್ಮೆ ಬರುತ್ತಾರೆ.
ಪಕ್ಷದಿಂದ ಪಕ್ಷಕ್ಕೆ ಹೋಗುತ್ತಾರೆ ಎಂದು ಹೇಳುವ ಮೂಲಕ ಕೆ.ಆರ್.‌ ನಗರ ಕಾಂಗ್ರೆಸ್‌ ಅಭ್ಯರ್ಥಿ ಆಕಾಂಕ್ಷಿ ಡಿ.ರವಿಶಂಕರ್‌ ಹೆಸರು ಹೇಳದೆ ವ್ಯಂಗ್ಯವಾಡಿದರು.

ಕಣ್ಣೀರಾದ ಐಶ್ವರ್ಯ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡುತ್ತಾ, ಮಹದೇವು ನನ್ನ ಸ್ನೇಹಿತ, ಅವನೊಂದಿಗೆ ನಾನೂ ಶಾಸಕನಾಗಿದ್ದೆ. ಈಗ ಮಹದೇವ್ ಇಲ್ಲ. ಅವನ ಮಗಳು ಐಶ್ವರ್ಯ ಇದ್ದಾಳೆ. ಆ ಹೆಣ್ಣು ಮಗಳಿಗೂ ಒಳ್ಳೆಯ ಭವಿಷ್ಯವಿದೆ. ಯಾರಿಂದಲೂ ಅದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ಹೀಗೆ ಹೇಳುತ್ತಿದ್ದಂತೆ ಐಶ್ವರ್ಯ ಮಹದೇವ್ ಅವರು ಆಸನದಿಂದ ಎದ್ದು ನಿಂತು ಕೈಮುಗಿದು ಕಣ್ಣೀರಿಟ್ಟರು.

ಐಶ್ವರ್ಯ ನನ್ನ ತೀರ್ಮಾನಕ್ಕೆ ಬಿಟ್ಟಿದ್ದಾಳೆ- ಡಿಕೆಶಿ

ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದಿಂದ ಐಶ್ವರ್ಯ ಮಹದೇವು ಅರ್ಜಿ ಹಾಕಿದ್ದಳು. ಅಣ್ಣ, ನಾನು ಅರ್ಜಿ ಹಾಕಿರೋದು ನಿಜ. ನೀವು ಏನೇ ತೀರ್ಮಾನ ಕೈಗೊಂಡರೂ ಸರಿ ಅಂತ ಹೇಳಿದ್ದಾಳೆ. ಹೀಗಾಗಿ ಈಗ ಒಂದೇ ಅರ್ಜಿ ಉಳಿದುಕೊಂಡಿದೆ. ಅದು ರವಿಶಂಕರ್‌ದ್ದಾಗಿದೆ. ಅವರನ್ನು ಗೆಲ್ಲಿಸಿ ನನ್ನೊಂದಿಗೆ ವಿಧಾನಸೌಧಕ್ಕೆ ಕಳುಹಿಸಿಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳುವ ಮೂಲಕ ಈ ಕ್ಷೇತ್ರಕ್ಕೆ ಟಿಕೆಟ್‌ ಘೋಷಣೆ ಮಾಡಿದರು.

ರೈತರ ಆದಾಯ ಡಬಲ್‌ ಎಲ್ಲಾಯ್ತು?

ಮೈಸೂರಿನಲ್ಲಿ ಮೈಸೂರು ಪಾಕು, ‌ಮಂಡ್ಯದಲ್ಲಿ ಬೆಲ್ಲ, ಶಿವಮೊಗ್ಗದಲ್ಲಿ ಅಡಿಕೆ ಹಾರ, ಹಣ್ಣಿನ ಹಾರಗಳನ್ನು ಹಾಕಿದ್ದರು. ಕೆ.ಆರ್.ನಗರದಲ್ಲಿ ಇತಿಹಾಸ ಸೇರುವ ಭತ್ತದ ಹಾರ ಹಾಕಲಾಗಿದೆ. ಈ ಭೂಮಿಯ ಭತ್ತ ವಿಶೇಷವಾದುದು. ಇದನ್ನು ಸರ್ಕಾರ ಬಿತ್ತನೆ ಭತ್ತವಾಗಿ ಖರೀದಿ ಮಾಡುತ್ತದೆ. ವಿಶೇಷ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ನಿಮಗೆಲ್ಲರಿಗೂ ಧನ್ಯವಾದವನ್ನು ಹೇಳಬಯಸುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಹಿಂದಿನ ಬಜೆಟ್ ಬಗ್ಗೆ ಉತ್ತರ ಕೊಡುವಂತೆ ಕೇಳಿದ್ದೇನೆ. ರೈತರ ಆದಾಯ ಡಬಲ್ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ, ಅವರು ಆದಾಯವನ್ನು ಡಬಲ್‌ ಮಾಡಿಕೊಂಡರು ಎಂದು ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಕೃಷಿ ಗೊಬ್ಬರ, ದಿನನಿತ್ಯದ ಪದಾರ್ಥಗಳ ಬೆಲೆ ಹೆಚ್ಚಳವಾಗಿದೆ. ಸ್ವಿಸ್ ಬ್ಯಾಂಕ್‌ನಲ್ಲಿದ್ದ ಕಪ್ಪು ಹಣ ಯಾರಿಗಾದರೂ ಬಂತಾ? ನಾವು ಶೇಕಡಾ 95ರಷ್ಟು ಭರವಸೆ ಈಡೇರಿಸಿದ್ದೆವು. ಆದರೂ ಸೋತಿದ್ದೇವೆ ಎಂದು ಡಿಕೆಶಿ ಬೇಸರ ವ್ಯಕ್ತಪಡಿಸಿದರು.

ಎಚ್‌.ವಿಶ್ವನಾಥ್ ಇರುವವರಲ್ಲಿ ಪ್ರಜ್ಞಾವಂತ ನಾಯಕರಾಗಿದ್ದಾರೆ. ಅವರು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲ ಕಡೆ ಹೋಗಿ ಬಂದರು. ಈಗ ಸಾಯುವುದರೊಳಗೆ ಕಾಂಗ್ರೆಸಿಗನಾಗಿ ಸಾಯಬೇಕು ಎಂದಿದ್ದಾರೆ. ಅವರೇನು‌ ದಡ್ಡರೆ? ಅವರದ್ದೇ ಆದ ರಹಸ್ಯ, ಸ್ವಾರಸ್ಯ ಎರಡೂ ಇದೆ ಎಂದು ಶಿವಕುಮಾರ್‌ ಹೇಳಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ನನ್ನ‌ನ್ನು ಜೋಡೆತ್ತು ಎಂದು ಕರೆದರು. ಆದರೆ, ನಾನು ಅವರಿಗೆ ಮೋಸ ಮಾಡಿದ್ದೆನಾ? ಸ್ಥಳೀಯವಾಗಿ ಏನೇ ಅಂದರೂ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಬಂದು ಅವರ ಮಗ ನಿಖಿಲ್‌ ಕುಮಾರಸ್ವಾಮಿ ಪರ ಮಂಡ್ಯದಲ್ಲಿ ಭಾಷಣ ಮಾಡಿದ್ದರು. ಆದರೆ, ಜನ ಗೆಲ್ಲಿಸಲಿಲ್ಲ. ಅದಕ್ಕೆ ನಾವೇನು ಮಾಡುವುದು? ಮಾಜಿ ಸಿಎಂ ಸಿದ್ದರಾಮಯ್ಯ ಸಾಧ್ಯವಿಲ್ಲ ಎಂದರೂ ನಾವು ಕೈಜೋಡಿಸಿದೆವು. ಆದರೆ ನೀವು ಉಳಿಸಿಕೊಂಡಿರಾ ಎಂದು ಎಚ್‌ಡಿಕೆ ಅವರನ್ನು ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು.

ಇದನ್ನೂ ಓದಿ: ಈ ಐಟಿ ಕಂಪನಿಯಲ್ಲಿ ಕೆಲಸದ ಅವಧಿ ಮುಗಿದ ಮೇಲೆ ಕಂಪ್ಯೂಟರ್​ ಎಚ್ಚರಿಕೆ ನೀಡುತ್ತದೆ!; ಶಟ್​ಡೌನ್​​ಗೆ 10 ನಿಮಿಷ ಮಾತ್ರ ಟೈಮ್​

ನಾನು ಇಲ್ಲಿ ಯಾರ ವಿರುದ್ಧವೂ ಮಾತನಾಡಲು ಬಂದಿಲ್ಲ. ನಾನು ಈ ಮನೆ ಮಗನಾಗಿದ್ದೇನೆ. ನನಗೂ ಒಂದು ಅವಕಾಶ ಕೊಡಿ. ನೀವೆಲ್ಲರೂ ಸೇರಿ ವಿಧಾನಸೌಧದ ಮೂರನೇ ಮಹಡಿ ಹತ್ತಲು ಶಕ್ತಿ ಕೊಡಿ. ಕೋವಿಡ್‌ನಿಂದ ನಿಮ್ಮ ಬದುಕು ಕಷ್ಟ ಆಯ್ತು. ಆಗ ಮೋದಿ ಜಾಗಟೆ ಬಾರಿಸಿ ಅಂದ್ರು. ಅದರಿಂದ ನಿಮ್ಮ ಕಷ್ಟ ದೂರ ಆಯ್ತಾ? ನಿಮ್ಮ ಕಷ್ಟ ದೂರ ಆಗಬೇಕು ಅಂದ್ರೆ ಜೆಡಿಎಸ್‌ಗೆ ಮತ ಹಾಕಬೇಡಿ. ನಿಮ್ಮ ಬದುಕು ಹಸನಾಗಲು ಕಾಂಗ್ರೆಸ್‌ಗೆ ಮತ ಹಾಕಿ.
ಕಮಲ ಕೆರೆಯಲ್ಲಿ ಇದ್ದರೇ ಚೆನ್ನ. ತೆನೆ ಹೊಲದಲ್ಲಿದ್ದರೇ ಚೆನ್ನ. ಹಾಗೇ ಕೈ ಅಧಿಕಾರದಲ್ಲಿ ಇದ್ದರೇ ಚೆನ್ನ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

Exit mobile version