Site icon Vistara News

Commission Politics : ಡಿಕೆಶಿ 15 ಪರ್ಸೆಂಟ್‌ ಕಮಿಷನ್ ಕೇಳಿಲ್ಲ;‌ ಬಿಬಿಎಂಪಿ ಗುತ್ತಿಗೆದಾರರು ಉಲ್ಟಾ!

BBMP Contractor Association president KT Manjunath and DCM DK Shivakumar infront of Vidhana soudha

ಬೆಂಗಳೂರು: ಬೆಂಗಳೂರಿನಲ್ಲಿ ಬಿಬಿಎಂಪಿ ವತಿಯಿಂದ ನಡೆದಿರುವ ಹಳೇ ಕಾಮಗಾರಿಗೆ ಬಿಲ್‌ ಪಾವತಿ (Payment of bills for old works) ಮಾಡಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು 15 ಪರ್ಸೆಂಟ್‌ ಕಮಿಷನ್‌ ಕೇಳಿದ್ದಾರೆ. ಅವರು ಕೇಳಿಲ್ಲವೆಂದಾದರೆ ಅವರೇ ನಂಬಿರುವ ತುಮಕೂರಿನ ನೊಣವಿನಕೆರೆಯ ಅಜ್ಜಯ್ಯನ (Ajjayya of Nonavinakere) ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದ ಬಿಬಿಎಂಪಿ ಗುತ್ತಿಗೆದಾರರು (BBMP Contractor Association) ಈಗ ಉಲ್ಟಾ ಹೊಡೆದಿದ್ದಾರೆ. ಡಿ.ಕೆ. ಶಿವಕುಮಾರ್‌ (DCM DK Shivakumar) ಅವರು ಯಾವುದೇ ಕಮಿಷನ್‌ ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಕಮಿಷನ್‌ ಪಾಲಿಟಿಕ್ಸ್‌ (Commission Politics) ಮತ್ತೊಂದು ಸ್ವರೂಪವನ್ನು ಪಡೆದುಕೊಂಡಿದೆ.

ಬಿಬಿಎಂಪಿ ಗುತ್ತಿಗೆದಾರರ ಸಂಘದ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದು, ಅಧ್ಯಕ್ಷ ಮಂಜುನಾಥ್ ಮಾತನಾಡಿ, ಕಮಿಷನ್ ಆರೋಪ ಮಾಡಿದ್ದ ಬಿಬಿಎಂಪಿ ಗುತ್ತಿಗೆದಾರರು ಈಗ ಯೂಟರ್ನ್ ಹೊಡೆದಿದ್ದಾರೆ. ನಮಗೆ ಯಾವುದೇ ರೀತಿಯ ಭಯ, ಒತ್ತಡ ಇಲ್ಲ. ನಮ್ಮ ಬಿಲ್ ಬರುವ ತನಕ ಹೋರಾಟ ಮುಂದುವರಿಸುತ್ತೇವೆ. ಕಮಿಷನ್ ಆರೋಪ ಮಾಡಿರೋದು ಮಧ್ಯವರ್ತಿಗಳು, ನಾವೂ ಯಾವುದೇ ರೀತಿ ಆರೋಪ ಮಾಡಿಲ್ಲ. ಯಾರೋ ಮಧ್ಯವರ್ತಿಗಳು ಈ ಕೆಲಸ ಮಾಡಿದ್ದಾರೆ. ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇವೆ. ಅವರು ಏನು ಸಲಹೆ ಕೊಡುತ್ತಾರೋ ನೋಡಬೇಕು. ಡಿಸಿಎಂ ಅವರ ಭೇಟಿ ಬಳಿಕ ಡೆಡ್‌ಲೈನ್ ಕೊಡುತ್ತೇವೆ. ಡೆಡ್‌ಲೈನ್ ಮೀರಿದರೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: HD Kumaraswamy : ಕಾಂಗ್ರೆಸ್‌ ಸಚಿವರ ಪಾಪದ ದುಡ್ಡಲ್ಲಿ ವಿದೇಶಕ್ಕೆ ಹೋಗಲಾ? ಎಚ್‌ಡಿಕೆ ಗರಂ

ಕಳೆದ ವಾರ ಸುದ್ದಿಗೋಷ್ಠಿ ನಡೆಸಿದ ಬಳಿಕ ಸರ್ಕಾರ ತನಿಖೆಗೆ ಆದೇಶ ನೀಡಿದೆ. ಎಸ್‌ಐಟಿ ತಂಡದ (SIT team) ಮೂಲಕ ತನಿಖೆಗೆ ಮುಂದಾಗಿದೆ. ಅವತ್ತು ಕೆಲ ಗುತ್ತಿಗೆದಾರರು ಆವೇಶದಿಂದ ನನ್ನ ಜತೆ ಕೂಗಾಡಿದ್ದರು. ನಾವು ಹೀಗೆ ಇದ್ದರೆ ಬಿಲ್ ಬರಲ್ಲ ಅಂತಾ ಕೆಲವರು ಒತ್ತಡ ತಂದಿದ್ದಾರೆ. ಆದರೆ, ನಾವು ಎಲ್ಲಿಯೂ ಗಲಾಟೆ ಮಾಡದೇ ಮನವಿ ನೀಡಿದ್ದೇವೆ. ಬೆಂಗಳೂರಿನ 28 ಜನ ಶಾಸಕರಿಗೆ ಮನವಿ ನೀಡುತ್ತೇವೆ ಎಂದು ಹೇಳಿದ್ದೆವು. ಚುನಾವಣೆ ವೇಳೆ ಅವರಿಗೆ ನಾವು ಕೆಲಸ ಮಾಡಿದ್ದೇವೆ. ಆದರೆ, ಇದೀಗ ಅದು ರಾಜಕೀಯ ತಿರುವು ಪಡೆದುಕೊಂಡಿದೆ. ಈ ಘಟನೆಯಿಂದ ನಾವು ಬಿಜೆಪಿ ಪರ ಎಂಬ ಚರ್ಚೆಯಾಗಿದೆ. ಆದರೆ, ನಾವು ಯಾವ ಪಕ್ಷದ ಪರವೂ ಅಲ್ಲ. ನಮ್ಮ ಹಕ್ಕನ್ನು ಕೇಳೋಕೆ ಹೋಗಿದ್ದೇವಷ್ಟೇ. ಅದಾಗಿಯೇ ರಾಜಕೀಯ ಬಣ್ಣ ಪಡೆದುಕೊಂಡಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ನಮಗೂ ಅದಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. ಅವರು ರಾಜ್ಯ ಗುತ್ತಿಗೆದಾರರ ಸಂಘ, ನಾವೂ ಬಿಬಿಎಂಪಿ ವ್ಯಾಪ್ತಿಯಾಗಿದ್ದೇವೆ. ಈ ಹಿಂದೆ ಕೆಂಪಣ್ಣ ಅವರು ಬಿಜೆಪಿ ಮೇಲೆ ಕಮಿಷನ್ ಆರೋಪ ಮಾಡಿದ್ದರು. ಅವರು ಕಮಿಷನ್ ಆರೋಪ ಮಾಡಿದ್ದಾಗ ನಾವೂ ಬೆಂಬಲ ನೀಡಿದ್ದೆವು. ಈಗ ನಮ್ಮ ಹೋರಾಟಕ್ಕೆ ಫೋನ್ ಮೂಲಕ ಬೆಂಬಲ ನೀಡಿದ್ದಾರೆ. ಹಾಗಾದರೆ ಅಂದು ನಾವು ಕಾಂಗ್ರೆಸ್ ಪರ ಇದ್ದೆವು ಎಂದು ಅರ್ಥವಾ? ನಾವು ಯಾರ ಬಳಿಯೂ ಕಮಿಷನ್ ಪ್ರಸ್ತಾಪ ಮಾಡಿಲ್ಲ. ನಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದೇವೆ. ಯಾರ ಮೇಲೆಯೂ ನಾವೂ ಆರೋಪ ಮಾಡಿಲ್ಲ. ಈಗಾಗಲೇ ಕಾಮಗಾರಿಗಳ ಬಗ್ಗೆ ಪರಿಶೀಲನೆ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಧ್ಯೆ ಪ್ರವೇಶಿಸಬೇಕು‌ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್‌ ಆಗ್ರಹಿಸಿದರು.

ಎಸ್‌ಐಟಿ ತನಿಖೆ ವಿರುದ್ಧ ಮಂಜುನಾಥ್ ಅಸಮಾಧಾನ

ತನಿಖೆ ಮಾಡಿದ ಬಳಿಕ ಬಿಲ್ ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುವುದು ಸರಿಯಲ್ಲ. ಈ ನಡೆಗೆ ನಮ್ಮ ಒಪ್ಪಿಗೆ ಇಲ್ಲ. 28 ತಿಂಗಳ ಬಾಕಿಗೆ ಒಂದು ಪಿರಿಯಡ್ ಇದೆ. ಉಪ ಮುಖ್ಯಮಂತ್ರಿಗಳಿಗೆ ಮಾಹಿತಿ ಕೊರತೆ ಇದೆ. ಅಧಿಕಾರಿಗಳು ಸರಿಯಾಗಿ ಮಾಹಿತಿ ಒದಗಿಸುತ್ತಿಲ್ಲ. ನಮಗಿರುವ ಮಾಹಿತಿ ಪ್ರಕಾರ ಪಾಲಿಕೆ ಮುಖ್ಯ ಆಯುಕ್ತರು ಏನೂ ಮಾತನಾಡುತ್ತಿಲ್ಲ. ಡಿಸಿಎಂ ಜತೆ ಕಮಿಷನರ್ ಏನೂ ಮಾತನಾಡುತ್ತಿಲ್ಲ. ಅವರು ನಮಗೆ ಮನವಿ ಮಾಡಿ ಎಂದು ಸಲಹೆ ಕೊಡುತ್ತಾರೆ ಎಂಬುದಾಗಿ ಮಂಜುನಾಥ್‌ ಹೇಳಿದರು.

ಇದನ್ನೂ ಓದಿ: Karnataka Politics : ಮೇಲ್ಮನೆ ನಾಮನಿರ್ದೇಶನ; ಡಿಕೆಶಿ ವಿರೋಧಕ್ಕೆ ಉಮಾಶ್ರೀ ಔಟ್?

ಅಜ್ಜಯ್ಯನ ಮೇಲೆ ಆಣೆ ವಿಚಾರ ಹಿಂಪಡೆಯುವೆ: ಗುತ್ತಿಗೆದಾರ ಹೇಮಂತ್

ಇನ್ನು ಕಮಿಷನ್‌ ವಿಚಾರವಾಗಿ ಡಿ.ಕೆ. ಶಿವಕುಮಾರ್‌ ಅವರು ನೊಣವಿನಕೆರೆ ಅಜ್ಜಯ್ಯನ ಮೇಲೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದ ಗುತ್ತಿಗೆದಾರ ಹೇಮಂತ್ ಮಾತನಾಡಿ, ನಾನು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ಉಪ ಮುಖ್ಯಮಂತ್ರಿ ವಿರುದ್ಧ ನಾನು ಭಾವುಕನಾಗಿ ಹೇಳಿಕೆ ಕೊಟ್ಟೆ. ಅಜ್ಜಯ್ಯನ ಮೇಲೆ ಆಣೆ ಮಾಡಲಿ ಅನ್ನೋ ಹೇಳಿಕೆ ಹಿಂಪಡೆಯುತ್ತೇನೆ. ಅವತ್ತು ಎಸ್‌ಐಟಿ ತನಿಖೆ ಅನ್ನೋ ಮಾಹಿತಿ ಬಂತು. ಅದರಿಂದ ಭಾವುಕನಾಗಿ ಆ ರೀತಿ ಹೇಳಿಕೆ ನೀಡಿದೆ. ಅದನ್ನು ಇಟ್ಟುಕೊಂಡು ವಿಪಕ್ಷ ನಾಯಕರು ಬಳಸಿಕೊಳ್ಳುತ್ತಿದ್ದಾರೆ. ದಯವಿಟ್ಟು ನನ್ನ ಹೇಳಿಕೆಯನ್ನು ಇಲ್ಲಿಗೆ ಬಿಟ್ಟುಬಿಡಿ. ಎಲ್ಲರೂ ಆಣೆ ಮಾಡೋ ಅವಶ್ಯಕತೆ ಇಲ್ಲ. ಅಲ್ಲದೆ, ನನ್ನ ಹೇಳಿಕೆ ತಪ್ಪು ಎಂದು ಎಲ್ಲರೂ ಹೇಳಿದರು. ನನ್ನ ಕಷ್ಟಗಳಿಂದ ಭಾವುಕನಾಗಿ ಹೇಳಿಕೆ ನೀಡಿದ್ದೆ. ಅಜ್ಜಯ್ಯನ ಮೇಲೆ ಆಣೆ ಮಾಡಲಿ ಅನ್ನೋದಕ್ಕೆ ಯಾವುದೇ ಒತ್ತಡ ಇರಲಿಲ್ಲ. ಈ ಬಗ್ಗೆ ನಾನು ಡಿಕೆಶಿ ಅವರ ಬಳಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.

Exit mobile version