ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್ ಪಕ್ಷ ಇನ್ನೂ ಜೀವಂತವಾಗಿದ್ದು, ಬಿಜೆಪಿಯರು ಕಾರಿನ ಮೇಲೆ ಮೊಟ್ಟೆ ಹೊಡೆದರು, ಕಪ್ಪು ಬಾವುಟ ತೋರಿಸಿದರು ಎಂಬ ಮಾತ್ರಕ್ಕೆ ನಾವೂ ಅದೇ ರೀತಿ ಮಾಡುವ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, ವಿಜಯಪುರದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾರ್ವಕರ್ ಫೋಟೋ ಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿದರು. ಈ ವಿಚಾರವಾಗಿ ಬೊಮ್ಮಾಯಿ ಅವರು ಉತ್ತರ ನೀಡಬೇಕು. ರಾಜ್ಯದಲ್ಲಿ ಶಾಂತಿ ಕಾಪಾಡಬೇಕಿರುವುದು ಬೊಮ್ಮಾಯಿ ಅವರ ಜವಾಬ್ದಾರಿ.
ದೇಶದಲ್ಲಿ ಕಾಂಗ್ರೆಸಿಗರು ಇನ್ನೂ ಬದುಕಿದ್ದಾರೆ. ನಾವು ನಮ್ಮ ಕಾರ್ಯಕರ್ತರಿಗೆ ಪ್ರಚೋದನಕಾರಿ ಹೇಳಿಕೆ ನೀಡಿ, ಅವರನ್ನು ಎತ್ತಿ ಕಟ್ಟಿ, ಕಪ್ಪು ಬಾವುಟ ಹಿಡಿಯಿರಿ ಎಂದು ಹೇಳುವ ಅಗತ್ಯವಿಲ್ಲ. ಶಾಂತಿ, ಸೌಹಾರ್ದತೆ, ಅಹಿಂಸಾ ತತ್ವವನ್ನು ಮಹಾತ್ಮಾ ಗಾಂಧಿ ಅವರು ನಮಗೆ ಕಲಿಸಿಕೊಟ್ಟಿದ್ದಾರೆ. ನಮ್ಮ ನಾಯಕರು ಹಾಗೂ ದೇಶದ ಪ್ರಥಮ ಪ್ರಧಾನಮಂತ್ರಿಗಳ ಹೆಸರು, ಫೋಟೋವನ್ನೇ ಈ ಸರ್ಕಾರ ಕೈಬಿಟ್ಟಿದೆ. ಅದಕ್ಕೆ ಜನರು ಆಗಸ್ಟ್ 15ರಂದು ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ಆಗಮಿಸಿ ಅವರಿಗೆ ಉತ್ತರ ನೀಡಿದ್ದಾರೆ. ನಂತರ ಪ್ರಧಾನಮಂತ್ರಿಗಳು ನೆಹರೂ ಅವರ ಹೆಸರು ಸ್ಮರಿಸಿದ್ದಾರೆ. ಇತಿಹಾಸವನ್ನು ಯಾರೂ ತಿರುಚಲು ಸಾಧ್ಯವಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಶಾಂತಿ ಭಂಗ ಪ್ರಕರಣಗಳು ಹೆಚ್ಚಾಗುತ್ತಿದ್ದರೆ, ಕಾನೂನು ಸುವ್ಯವಸ್ಥೆ ಏನಾಗಬೇಕು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ನಾಯಕರಿಗೆ ಯಾರೋ ಕಪ್ಪು ಬಾವುಟ ಪ್ರದರ್ಶಿಸಿ, ಮೊಟ್ಟೆ ಹೊಡೆದು, ಧಿಕ್ಕಾರ ಕೂಗಿದರು ಎಂಬುದು ಮುಖ್ಯವಲ್ಲ. ಅಧಿಕಾರದಲ್ಲಿ ಇದ್ದಾಗ ನಾವು ಜನರಿಗೆ ಏನು ಕೊಡುಗೆ ನೀಡಿದ್ದೇವೆ ಎಂಬುದು ಮುಖ್ಯ. ಸಿದ್ದರಾಮಯ್ಯ ಅವರು ಕೇವಲ ಒಬ್ಬ ನಾಯಕರಲ್ಲ. ಅವರಿಗೆ ಸಂವಿಧಾನದ ಮೂಲಕ ವಿರೋಧ ಪಕ್ಷದ ನಾಯಕರ ಜವಾಬ್ದಾರಿ ನೀಡಲಾಗಿದೆ. ಹಳ್ಳಿಗಳಿಗೆ, ನೆರೆ ಪ್ರದೇಶಕ್ಕೆ ಹೋಗಿ ಜನರಿಗೆ ಧ್ವನಿಯಾಗುವುದು ಅವರ ಕರ್ತವ್ಯ. ಆ ಕರ್ತವ್ಯ ಮಾಡಬಾರದು, ಮಾಡಿದರೆ ಕಪ್ಪು ಬಾವುಟ ಪ್ರದರ್ಶಿಸುತ್ತೇನೆ, ಮೊಟ್ಟೆ ಹೊಡೆಯುತ್ತೇವೆ ಎನ್ನುವುದು ಸರಿಯಲ್ಲ. ನೀವು ಕೇವಲ ಮೊಟ್ಟೆಯಲ್ಲ, ಏನಾದರೂ ಹೊಡೆಯಿರಿ. ಆದರೆ ಅದೇ ಕೆಲಸವನ್ನು ಬೇರೆ ಪಕ್ಷದವರು ಮಾಡಿದರೆ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಯೋಚಿಸಿ ಎಂದರು.
ಶಿವಮೊಗ್ಗ ಜಿಲ್ಲೆಗೆ ಯಾರಾದರೂ ಬಂಡವಾಳ ಹೂಡಿಕೆದಾರರು ಬರುತ್ತಿದ್ದಾರಾ? ಕೊಡಗು ಭಾಗದ ಜನರು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದ್ದು, ಪ್ರತಿ ವರ್ಷ ಮಳೆಕಾಲಕ್ಕೆ ಅವರ ಆಸ್ತಿಗಳು ನಾಶವಾಗುತ್ತಿವೆ. ಜನ ನರಳುತ್ತಿರುವಾಗ ಇವರು ಈ ರೀತಿ ಮಾಡಿದರೆ ಏನು ಮಾಡಬೇಕು? ಈ ಭಾಗದ ಅಭಿವೃದ್ಧಿ ಬಗ್ಗೆ ಸರ್ಕಾರ ಚರ್ಚೆ ಮಾಡಲಿ. ಈ ವಿಚಾರವನ್ನು ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಆಗಸ್ಟ್ 26 ರಂದು ಕೊಡಗು ಎಸ್‌ಪಿ ಕಚೇರಿಗೆ ಮುತ್ತಿಗೆ ಹೋರಾಟ ಪಕ್ಷದ ವತಿಯಿಂದ ನಡೆಯುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ನಮಗೆ ಎಸ್‌ಪಿ ಮುಖ್ಯವಲ್ಲ. ಸಂವಿಧಾನಬದ್ಧವಾಗಿ ನೀಡಿರುವ ನಾಯಕರ ಕರ್ತವ್ಯಕ್ಕೆ ಸರ್ಕಾರ ಅಡ್ಡಿ ಮಾಡಲು ಮುಂದಾಗಿದೆ. ಎಸ್‌ಪಿ ಕೇವಲ ನೆಪ ಮಾತ್ರ. ಈ ಕಪ್ಪು ಬಾವುಟ ಪ್ರತಿಭಟನೆ ಸರ್ಕಾರದ ಪ್ರಾಯೋಜಿತದಿಂದ ಆಗಿದೆ. ಹೀಗಾಗಿ ಈ ಹೋರಾಟ ಸರ್ಕಾರದ ವಿರುದ್ಧವೇ ಹೊರತು, ಅಧಿಕಾರಿ ವಿರುದ್ಧ ಅಲ್ಲ ಎಂದರು.
ಸಿದ್ದರಾಮಯ್ಯ ಅವರು ಮಾಂಸ ಸೇವಿಸಿ ದೇವಾಲಯಕ್ಕೆ ತೆರಳಿದ ವಿಚಾರ ಹಾಗೂ ಬಾಳೆ ಹೊನ್ನೂರು ಮಠದಲ್ಲಿ ಸ್ವಾಮೀಜಿ ಬಳಿ ನೀಡಿದ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ವಿಚಾರವಾಗಿ ನೀವು ಸಿದ್ದರಾಮಯ್ಯ ಅವರ ಬಳಿ ಮಾತನಾಡಬೇಕು. ಅವರು ಹಾಗೂ ಸ್ವಾಮೀಜಿಗಳ ನಡುವೆ ಆದ ಸಂಭಾಷಣೆ ವಿಚಾರ ನನಗೆ ತಿಳಿದಿಲ್ಲ. ಆ ಸಮಯದಲ್ಲಿ ನಾನು ಇರಲಿಲ್ಲ. ಈ ಬಗ್ಗೆ ನನಗೆ ಯಾರೂ ತಿಳಿಸಿಲ್ಲ. ಮಾಧ್ಯಮಗಳ ಮಾಹಿತಿ ಅಷ್ಟೇ ನನ್ನ ಬಳಿ ಇದೆ. ಮುಂದಿನ ದಿನಗಳಲ್ಲಿ ನಾವು ಸಭೆ ಕರೆದಾಗ ಈ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಮೊದಲು ರಾಜ್ಯದ ಸ್ವಾಭಿಮಾನ, ಜನರ ಬದುಕಿನಲ್ಲಿ ದಿನನಿತ್ಯ ಆಗುತ್ತಿರುವ ನೋವು ತಪ್ಪಿಸಿ, ರಾಜ್ಯದಲ್ಲಿ ಶಾಂತಿ ಸ್ಥಾಪಿಸಲಿ. ಇದೆಲ್ಲದರ ವಿಚಾರವಾಗಿ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊರಬೇಕು’ ಎಂದು ತಿಳಿಸಿದರು.
ಇದನ್ನೂ ಓದಿ | Non Veg | ಸಿದ್ದರಾಮಯ್ಯ ಮಾಂಸದೂಟ ಮಾಡಿಲ್ಲ; ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ