ಚಿಕ್ಕಮಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ರಾಜಕೀಯ ನಾಯಕರು ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ದೇವಸ್ಥಾನಗಳಿಗೆ ಭೇಟಿ ನೀಡುವುದು, ವಿಶೇಷ ಪೂಜೆ ಪುನಸ್ಕಾರಗಳಲ್ಲಿ ತೊಡಗಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಈಗ ಶೃಂಗೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುಟುಂಬದಿಂದ ಚಂಡಿಕಾ ಯಾಗವನ್ನು ನೆರವೇರಿಸಲಾಗಿದೆ.
ಶೃಂಗೇರಿ ಮಠದ ಯಾಗ ಮುಗಿಯುವವರೆಗೆ ಅಲ್ಲಿಯೇ ಇದ್ದ ಡಿ.ಕೆ. ಶಿವಕುಮಾರ್ ದಂಪತಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಅಧಿಕಾರಕ್ಕಾಗಿ ರಾಜ-ಮಹಾರಾಜರು ನಡೆಸುತ್ತಿದ್ದ ಯಾಗ ಇದಾಗಿದೆ. 15 ಋತ್ವಿಜರಿಂದ ಯಾಗ ನಡೆದಿದೆ. ಖ್ಯಾತ ಜ್ಯೋತಿಷಿ, ರಾಜಗುರು ಸಿ.ಎಸ್. ದ್ವಾರಕಾನಾಥ್ ಅವರು ಈ ಯಾಗದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: Amit Shah: ಇಂದು ರಾಜ್ಯಕ್ಕೆ ಮತ್ತೆ ಅಮಿತ್ ಶಾ; ಮೈಸೂರು, ಚಾಮರಾಜನಗರದಲ್ಲಿ ರಣತಂತ್ರ
ಜನಸೇವೆಗೆ ಅವಕಾಶಕ್ಕಾಗಿ ಬೇಡಿಕೊಂಡಿದ್ದೇನೆ: ಡಿಕೆಶಿ
ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ 141 ಸ್ಥಾನವನ್ನು ಗೆಲ್ಲಲಿದೆ. ಕಾರ್ಯಕರ್ತರು ಸ್ಪೂರ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ದೇವರ ಅನುಗ್ರಹ ಸಹ ಕಾಂಗ್ರೆಸ್‌ಗೆ ಒಲಿದಿದ್ದು, ನಮಗೆ ಹೊಸ ಶಕ್ತಿ ಬಂದಿದೆ. ಬಿಜೆಪಿಯವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಉಪಯೋಗವನ್ನು ಪಡೆದುಕೊಂಡು ಹಾಗೇ ಬಿಟ್ಟುಬಿಟ್ಟರು. ಅವರ ಕಣ್ಣಲ್ಲಿ ನೀರು ಹಾಕಿಸಿದರು. ಈ ಬಾರಿ ಅದರ ಫಲ ಅವರಿಗೆ ಸಿಗಲಿದೆ ಎಂದು ಯಾಗದ ಬಳಿಕ ಡಿ.ಕೆ. ಶಿವಕುಮಾರ್ ಹೇಳಿದರು.
ವರುಣ ಕ್ಷೇತ್ರಕ್ಕೂ ನಾನು ಪ್ರಚಾರ ಮಾಡಲು ಹೋಗುತ್ತೇನೆ. ಇನ್ನೂ ಸಮಯ ನಿಗದಿಯಾಗಿಲ್ಲ. ವರುಣ ಮಾತ್ರವಲ್ಲ, ಯಾರೇ, ಎಲ್ಲಿಗೇ ಕರೆದರೂ ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ಶಾಸಕರು, ಮಂತ್ರಿಗಳು ಸಾಕ್ಷಿ ಬಿಟ್ಟು ಹೋಗಿದ್ದಾರೆ ಎಂದು ಡಿಕೆಶಿ ಹೇಳಿದರು.
ಅಧಿಕಾರಕ್ಕಾಗಿ ಪ್ರಾರ್ಥನೆ- ಡಿ.ಕೆ. ಶಿವಕುಮಾರ್
ಮನಸ್ಸಿನ ಶಾಂತಿ, ನೆಮ್ಮದಿ, ರಾಜ್ಯದಲ್ಲಿ ಪಕ್ಷ ಅಧಿಕಾರ ಬರಬೇಕು, ಜನಸೇವೆಗೆ ಅವಕಾಶಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ದೇವರಲ್ಲಿ ಈ ಸಂಬಂಧ ಬೇಡಿಕೊಂಡಿದ್ದೇನೆ. ನಾವು ಅಧಿಕಾರಕ್ಕೆ ಬರುವುದರಲ್ಲಿ ಎರಡು ಮಾತಿಲ್ಲ ಎಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Tumkur Siddaganga Mutt: ತುಮಕೂರಿನ ಸಿದ್ದಗಂಗಾ ಮಠ ಸೇರಿ ಶಾಖಾ ಮಠಗಳ ಉತ್ತರಾಧಿಕಾರಿಗಳಿಗೆ ಪಟ್ಟಾಭಿಷೇಕ
ಎಲ್ಲ ಕಡೆ ದೇವರ ದರ್ಶನ ಮಾಡಿದ್ದೇನೆ. ಆಶೀರ್ವಾದವಾಗಿದೆ. ದೇವರ ಸನ್ನಿದಿಯಿಂದಲೇ ಪ್ರಚಾರ ಕೂಡ ಆರಂಭವಾಗುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲರೂ ಪ್ರಚಾರ ಮಾಡುತ್ತಾರೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ದೇವೇಗೌಡರಿಂದ ನಡೆದಿದ್ದ ಚಂಡಿಕಾ ಯಾಗ
2018ರ ವಿಧಾನಸಭಾ ಚುನಾವಣೆ ವೇಳೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬ 11 ದಿನಗಳ ಕಾಲ ಶೃಂಗೇರಿ ಶಾರದಾ ಪೀಠದಲ್ಲಿ ಚಂಡಿಕಾ ಯಾಗವನ್ನ ನಡೆಸಿದ್ದರು. ಈಗ ಡಿ.ಕೆ. ಶಿವಕುಮಾರ್ ಕೂಡ ಅದೇ ಹಾದಿಯನ್ನು ಹಿಡಿದಿದ್ದಾರೆ.