ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮೂಡಾ ನಿವೇಶನ ಹಂಚಿಕೆ ಹಗರಣ ಸೇರಿ ರಾಜ್ಯ ಸರ್ಕಾರದ ಹಲವು ಭ್ರಷ್ಟಾಚಾರಗಳ ವಿರುದ್ಧ ಆಗಸ್ಟ್ 3ರಿಂದ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ (BJP Padayatra) ನಡೆಸಲು ಬಿಜೆಪಿ ಹಾಗೂ ಜೆಡಿಎಸ್ ತೀರ್ಮಾನಿಸಿವೆ. ಇದರ ಬೆನ್ನಲ್ಲೇ, ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರು ದಿಢೀರನೆ ಸುದ್ದಿಗೋಷ್ಠಿ ನಡೆಸಿದ್ದು, “ಪಾದಯಾತ್ರೆ ನಡೆಸಲು ಮುಂದಾಗಿರುವ ಬಿಜೆಪಿ ಹಾಗೂ ಜೆಡಿಎಸ್‌ಗೆ ಕಾಂಗ್ರೆಸ್ ಸರಣಿ ಪ್ರಶ್ನೆಗಳ ಸವಾಲು ಒಡ್ಡುತ್ತಿದೆ. ಪ್ರತಿ ಹೆಜ್ಜೆಗೂ ಬಿಜೆಪಿ ಹಾಗೂ ಜೆಡಿಎಸ್ ಉತ್ತರಿಸಿ ಮುಂದೆ ಹೋಗಬೇಕು” ಎಂದು ಹೇಳಿದ್ದಾರೆ.
“ಬಿಜೆಪಿ ಹಾಗೂ ಜೆಡಿಎಸ್ ಒಗ್ಗೂಡಿ ಪಾದಯಾತ್ರೆ ನಡೆಸಲು ತೀರ್ಮಾನಿಸಿವೆ. ಇಷ್ಟು ದಿನ ಪಾದಯಾತ್ರೆಗೆ ಬೆಂಬಲ ನೀಡಲ್ಲ ಎಂದು ಜೆಡಿಎಸ್ ಹೇಳುತ್ತಿತ್ತು. ಈಗ ಎರಡೂ ಪಕ್ಷಗಳು ಒಗ್ಗೂಡಿ ಪಾದಯಾತ್ರೆ ಮಾಡುತ್ತಿವೆ. ಅವರ ಪಾದಯಾತ್ರೆಗೆ ನಮ್ಮ ಅಭ್ಯಂತರ ಇಲ್ಲ. ಆದರೆ, ನಗರದಲ್ಲಿ ಟ್ರಾಫಿಕ್ ಜಾಮ್ ದೃಷ್ಟಿಯಿಂದ ಅವರು ಪಾದಯಾತ್ರೆ ಮಾಡುವಂತಿಲ್ಲ. ಇನ್ನು, ಬಿಜೆಪಿ ಹಾಗೂ ಜೆಡಿಎಸ್ ಹಗರಣಗಳ ಕುರಿತು ನಾಳೆಯಿಂದ ನಮ್ಮ ಸಚಿವರು, ಶಾಸಕರು ಪ್ರಶ್ನೆ ಕೇಳುತ್ತಾರೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೆಜ್ಜೆ ಇಟ್ಟಲ್ಲೆಲ್ಲ ಪ್ರಶ್ನೆ ಕೇಳುತ್ತೇವೆ. ಅವುಗಳಿಗೆ ಅವರು ಉತ್ತರಿಸಿಯೇ ಮುಂದೆ ಹೋಗಬೇಕು” ಎಂದು ಡಿಸಿಎಂ ಹೇಳಿದರು.
ಪ್ರತಿ ಊರಿನಲ್ಲೂ ಸಭೆ
“ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಪ್ರಶ್ನೆ ಕೇಳುವ ಅಭಿಯಾನವನ್ನು ಶುಕ್ರವಾರದಿಂದಲೇ (ಆಗಸ್ಟ್ 2) ಆರಂಭಿಸುತ್ತೇವೆ. ನಾಳೆ ಬೆಳಗ್ಗೆ 11 ಗಂಟೆಗೆ ಬಿಡದಿಯಲ್ಲಿ ಸಭೆ ಮಾಡುವ ಮೂಲಕ ಪ್ರಶ್ನೆಗಳನ್ನು ಕೇಳುತ್ತೇವೆ. ಇನ್ನು ಆಗಸ್ಟ್ 3ರಂದು ರಾಮನಗರ, 4ರಂದು ಚನ್ನಪಟ್ಟಣ, 5ರಂದು ಮದ್ದೂರು, 6ಕ್ಕೆ ಮಂಡ್ಯ, 7 ಹಾಗೂ 9ರಂದು ಮೈಸೂರಿನಲ್ಲಿ ಸಭೆ ನಡೆಸಿ, ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಅವರ ಹಗರಣಗಳ ಕುರಿತು ಪ್ರಶ್ನೆ ಕೇಳುತ್ತೇವೆ. ಅವುಗಳಿಗೆ ಅವರು ಉತ್ತರಿಸಬೇಕು” ಎಂದು ತಿಳಿಸಿದರು.
ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ?
“ಬಿಜೆಪಿ ಅಧಿಕಾರದಲ್ಲಿದ್ದಾಗ ಏನೆಲ್ಲ ಹಗರಣ ಮಾಡಿದರು ಎಂಬುದರ ಕುರಿತು ಪ್ರತಿಯೊಂದು ಸಭೆಯಲ್ಲೂ ಪ್ರಶ್ನೆಗಳನ್ನು ಕೇಳುತ್ತೇವೆ. ಅವರ ಹಗರಣಗಳ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ಪ್ರತಿಯೊಂದು ಸಭೆಯಲ್ಲೂ ಕಾಂಗ್ರೆಸ್ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ನಮ್ಮ ಪ್ರತಿ ಪ್ರಶ್ನೆಗಳಿಗೆ ಅವರು ಉತ್ತರಿಸಿಯೇ ಮುಂದೆ ಹೆಜ್ಜೆ ಇಡಬೇಕು. ಬಿಜೆಪಿಯವರು ಏನು ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ” ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಆಗಸ್ಟ್ 3ಕ್ಕೆ ಪಾದಯಾತ್ರೆ ಆರಂಭ
ಪಾದಯಾತ್ರೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಹಿತಿ ನೀಡಿದ್ದಾರೆ. “ಆಗಸ್ಟ್ 3ರ ಶನಿವಾರ ಬೆಳಗ್ಗೆ 8.30ಕ್ಕೆ ನೈಸ್ ರೋಡ್ ಜಂಕ್ಷನ್‌ನಿಂದ ಪಾದಯಾತ್ರೆ ಪ್ರಾರಂಭ ಆಗುತ್ತದೆ. ರಾಜ್ಯದ ಎಲ್ಲ ಬಿಜೆಪಿ ಹಾಗೂ ಜೆಡಿಎಸ್ ಸಂಸದರು, ಶಾಸಕರು ಇರುತ್ತಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಕುಮಾರಸ್ವಾಮಿ ಅವರು ಕೂಡ ಬಂದು ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಂದೋಲನ ಮಾಡುತ್ತಿದ್ದೇವೆ. ಇದನ್ನು ಯಶಸ್ವಿಗೊಳಿಸುತ್ತೇವೆ” ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದನ್ನೂ ಓದಿ: BJP Padayatra: ಬಿಜೆಪಿ ಪಾದಯಾತ್ರೆಗೆ ಎಚ್‌ಡಿಕೆ ಸಾಥ್; ಪ್ರೀತಂ ಗೌಡ ಭಾಗಿ ಆಗ್ತಾರಾ? ವಿಜಯೇಂದ್ರ ಹೇಳಿದ್ದಿಷ್ಟು