Site icon Vistara News

ಸಿದ್ದರಾಮೋತ್ಸವದಲ್ಲಿ ಡಿ.ಕೆ. ಶಿವಕುಮಾರ್‌ ಮಾಡಬೇಕಿದ್ದ ಭಾಷಣ ಲೀಕ್‌: ಸಿದ್ದುಗೆ ಹೇಳಿದರೇ ಬುದ್ಧಿ?

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಈಗಾಗಲೆ ಚರ್ಚೆ, ವಿವಾದ, ವಾಗ್ವಾದಕ್ಕೆ ಕಾರಣವಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್‌ ಅವರು ಮಾತನಾಡಲು ಸಿದ್ಧಪಡಿಸಿಟ್ಟುಕೊಂಡಿದ್ದರು ಎನ್ನಲಾದ ಭಾಷಣ ಲೀಕ್‌ ಆಗಿದೆ.

ಆಗಸ್ಟ್‌ 3ರಂದು ದಾವಣಗೆರೆಯಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು, ಕಾಂಗ್ರೆಸ್‌ನ ಪರಮೋಚ್ಛ ನಾಯಕ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದು ಕಾಂಗ್ರೆಸ್‌ನಲ್ಲಿ ಕೇಳಿಬರುತ್ತಿರುವ ಮಾತು. ಕಾಂಗ್ರೆಸ್‌ನನ್ನು ವ್ಯಕ್ತಪೂಜೆ ಇಲ್ಲ, ಇಲ್ಲಿ ಸಾಮೂಹಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಈ ಹಿಂದೆ ಹೇಳಿದ್ದರು.

ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಗಮಿಸುತ್ತಿದ್ದು, ಡಿ.ಕೆ. ಶಿವಕುಮಾರ್‌ ಭಾಷಣ ಸಹ ಇರಲಿದೆ. ಈ ಕಾರ್ಯಕ್ರಮಕ್ಕೆ ಶಿವಕುಮಾರ್‌ ತಂಡ ಭಾಷಣವನ್ನು ಸಿದ್ಧಪಡಿಸಿಕೊಂಡಿದ್ದು, ಅದನ್ನು ಅಚಾನಕ್ಕಾಗಿ ವಾಟ್ಸ್‌ಆಪ್‌ ಗುಂಪಿನ ಮೂಲಕ ಹಂಚಿಕೊಂಡಿದ್ದಾರೆ. ತಪ್ಪಿನ ಅರಿವಾದ ತಂಡ, ನಂತರ ಈ ಪೋಸ್ಟನ್ನು ಅಳಿಸಿಹಾಕಿದೆ. ಅಳಿಸುವ ವೇಳೆಗಾಗಲೇ ಅದರಲ್ಲಿರುವ ಪಠ್ಯ ಎಲ್ಲೆಡೆ ಹರಿದಾಡುತ್ತಿದೆ.

ಭಾಷಣದಲ್ಲಿ ಪ್ರಸ್ತಾಪ ಆಗಿರುವ ಪ್ರಮುಖ ಅಂಶಗಳು

* ಜೀವನ ಸಂಧ್ಯಾ ಕಾಲದಲ್ಲಿ ನಿಂತು ಹಿಂದಿನ ಅನುಭವ, ಸಾಧನೆಗಳನ್ನು ಮೆಲುಕು ಹಾಕುವ ಕ್ಷಣ.

*ಇದುವರೆಗೂ ಸಿದ್ದರಾಮಯ್ಯ ಅವರು ಜನ್ಮದಿನ ಆಚರಣೆ ಮಾಡಿಕೊಂಡಿರಲಿಲ್ಲ. ಆದರೆ 75 ವಸಂತಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ ಆಚರಿಕೊಳ್ಳಲೇಬೇಕಾದ ವಿಶೇಷ ಸಂದರ್ಭ

*ಈ ಸಮಯದಲ್ಲಿ ನಾವು ತ್ಯಾಗಕ್ಕೆ ಸಿದ್ಧವಾಗಿ ಪಕ್ಷ ಸಂಘಟಿಸಬೇಕು.

*ಸಾಮಾನ್ಯವಾಗಿ ಎರಡು ರೀತಿ ಜನ ಇರುತ್ತಾರೆ. ಒಂದು ಕೆಲಸ ಮಾಡುವವರು, ಮತ್ತೊಂದು ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಳ್ಳುವವರು. ಮೊದಲ ಗುಂಪಿಗೆ ಸೇರಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ಏನು ಕೆಲಸ ಮಾಡಬೇಕೋ ಅದನ್ನು ಮಾಡೋಣ. ನಾವು ಯಾವ ಸ್ಥಾನಮಾನಕ್ಕೆ ಅರ್ಹರೋ ಅದನ್ನು ಪಕ್ಷ ನೀಡುತ್ತದೆ.

*ರಾಜೀವ್ ಗಾಂಧಿ ಅವರು ಕೂಡ ನಾಯಕರನ್ನು ಬೆಳೆಸುವ ವಿಚಾರವಾಗಿ ಹೇಳಿರುವ ಮಾತನ್ನು ನೆನಪಿಸಿಕೊಳ್ಳಬೇಕು. Good Leader One Who Creates Leaders Not a Followers ಎಂದು ಅವರು ಹೇಳಿದ್ದರು.

*ಈ ನಮ್ಮ ಹಿರಿಯರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕು.

*ಸಿದ್ದರಾಮಯ್ಯ ಅವರ ಹೋರಾಟದ ಹಾದಿ ಹಾಗೂ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮೆಲುಕು ಹಾಕುವ ವೇದಿಕೆ ಇದಾಗಿದೆ. ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಶಕ್ತಿ.

*ಸಾಮಾಜಿಕ ನ್ಯಾಯ ಹಾಗೂ ಜಾತ್ಯಾತೀತ ತತ್ವ ಪರ ಹೋರಾಟದ ಹಾದಿಯಲ್ಲಿ ಬೆಳೆದು ಬಂದ ಸಿದ್ದರಾಮಯ್ಯ ಇವತ್ತು ಈ ಮಟ್ಟ ತಲುಪಿದ್ದಾರೆ. ದಲಿತರು, ಶೋಷಿತ ವರ್ಗದವರು, ತುಳಿತಕ್ಕೆ ಒಳಗಾದವರ ಧ್ವನಿಯಾದವರು ಸಿದ್ದರಾಮಯ್ಯ.

*ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಆಗುವ ಮೊದಲು, ಅವರಿಗೆ ಸಿಎಂ ಆಗಲು ಅನೇಕ ಅವಕಾಶಗಳಿದ್ದರೂ ಅದನ್ನು ರಾಜಕೀಯ ಷಡ್ಯಂತ್ರಗಳಿಂದ ಕಸಿಯಲಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ಅವರ ಸಾಮರ್ಥ್ಯಕ್ಕೆ ತಕ್ಕ ಅವಕಾಶ, ಬೆಂಬಲ ನೀಡಿ ಮುಖ್ಯಮಂತ್ರಿಯನ್ನಾಗಿ ಮಾಡಿತು. ಅವರ ಸರ್ಕಾರ ಐದು ವರ್ಷ ಪೂರ್ಣಗೊಳಿಸಲು ಕಾಂಗ್ರೆಸ್ ಎಲ್ಲ ರೀತಿಯ ಬೆಂಬಲ ನೀಡಿದೆ.

*2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ 165 ಯೋಜನೆಗಳ ಪೈಕಿ ಶೇ.90 ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ.

*ಪ್ರಣಾಳಿಕೆ ಹೊರತಾಗಿಯೂ ಇಂದಿರಾ ಕ್ಯಾಂಟೀನ್, ವಿದ್ಯಾ ಸಿರಿ, ರೈತರ ಸಾಲ ಮನ್ನಾ ಮತ್ತಿತರ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಕೀರ್ತಿ ಕಾಂಗ್ರೆಸ್ ಸರ್ಕಾರದ್ದು. ಇಂತಹ ಜನಪರ ಯೋಜನೆಗಳು ಹಾಗೂ ದಕ್ಷ ಆಡಳಿತ ನೀಡಲು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯ. ಹೀಗಾಗಿ ಕಾಂಗ್ರೆಸ್ ಪಕ್ಷದ ಮೇಲೆ ಜನರ ಒಲವು, ನಿರೀಕ್ಷೆ ಹೆಚ್ಚಿದೆ.

*ಅಧಿಕಾರದ ಲಕ್ಷ್ಮಿ ಕಾಂಗ್ರೆಸ್ ಮನೆ ಬಾಗಿಲಿಗೆ ಬಂದು ನಿಂತಿದ್ದಾಳೆ. ಆಕೆಯನ್ನು ಒಳಗೆ ಬರ ಮಾಡಿಕೊಳ್ಳುವ ಜವಾಬ್ದಾರಿ ನಮ್ಮದು. ಹೀಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರೋಣ.

*ಹಿಂದೆ ನನ್ನನ್ನು ಮಂತ್ರಿ ಮಾಡಿದ್ದು ಕಾಂಗ್ರೆಸ್. ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದು ಕಾಂಗ್ರೆಸ್. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್. ಈಗ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿರುವುದು ಕಾಂಗ್ರೆಸ್. ಬಿ ಕೆ ಹರಿಪ್ರಸಾದ್ ಅವರನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿರುವುದು ಕಾಂಗ್ರೆಸ್. ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿರುವುದು ಕಾಂಗ್ರೆಸ್. ಎಂ ಬಿ ಪಾಟೀಲ್ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ಕಾಂಗ್ರೆಸ್. ಹೀಗೆ ಎಲ್ಲರನ್ನು ಬೆಳೆಸಿದ್ದು ಕಾಂಗ್ರೆಸ್.

*ನಮ್ಮನ್ನು ಬೆಳೆಸಿದ ಕಾಂಗ್ರೆಸ್ ಪಕ್ಷಕ್ಕೆ ಈಗ ನಾವೆಲ್ಲರೂ ಋಣ ತೀರಿಸಬೇಕಿದೆ. ಎಲ್ಲ ನಾಯಕರು ತಮ್ಮ, ತಮ್ಮ ಸಮುದಾಯಗಳನ್ನು ಸಂಘಟಿಸಿ ಪಕ್ಷಕ್ಕೆ ನೆರವಾಗಬೇಕು. ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಎಲ್ಲ ಧರ್ಮ, ಜಾತಿ, ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದಕ್ಕೇ ನಾನು ಹೇಳುವುದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಧರ್ಮದವರು, ಎಲ್ಲ ಜಾತಿಯವರು, ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ ಎಂದು.

*ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ, ಬೆಲೆ ಏರಿಕೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಕಂಡು ರಾಜ್ಯದ ಜನ ಬೇಸತ್ತಿದ್ದಾರೆ. ಈ ಅವಕಾಶವನ್ನು ಬಳಸಿಕೊಳ್ಳುವತ್ತ ನಾವು ಗಮನಹರಿಸಬೇಕೆ ಹೊರತು ಇತರೆ ವಿಚಾರಗಳತ್ತ ಅಲ್ಲ.

*ನಾವೆಲ್ಲರೂ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರೋಣ. ಆ ಮೂಲಕ ಪಕ್ಷ ಹಾಗೂ ರಾಜ್ಯದ ಜನರ ಋಣ ತೀರಿಸೋಣ.

ಇದನ್ನೂ ಓದಿ | ಸಿದ್ದರಾಮೋತ್ಸವ ಮಾಡಬೇಡಿ, ಸಿದ್ದರಾಮೇಶ್ವರ ಉತ್ಸವ ಮಾಡಿ: ಸಿಎಂ ಬೊಮ್ಮಾಯಿ

Exit mobile version