ಬೆಂಗಳೂರು: ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಗಾಂಧಿ ಕುಟುಂಬದ ರಬ್ಬರ್ ಸ್ಟಾಂಪ್ ಎನ್ನುವುದಾದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಏನು? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ಪ್ರಜಾಪ್ರಭುತ್ವ ಉಳಿಸಲು ಶ್ರಮಿಸಿದೆ. ಇದಕ್ಕೆ ಈಗ ಪಕ್ಷದ ಆಂತರಿಕ ಚುನಾವಣೆ ಸಾಕ್ಷಿ. ನಾವು ದೇಶ ಹಾಗೂ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಂಡಿದ್ದೇವೆ.
24 ವರ್ಷಗಳ ನಂತರ ಪಕ್ಷದಲ್ಲಿ ಚುನಾವಣೆ ನಡೆದಿದೆ. ನಾನು ಈ ಸಂದರ್ಭದಲ್ಲಿ ಮೊದಲು ಸೋನಿಯಾ ಗಾಂಧಿ ಅವರಿಗೆ ರಾಜ್ಯದ ಜನತೆ ಪರವಾಗಿ, ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಕೃತಜ್ಞತೆ ಸಲ್ಲಿಸಬಯಸುತ್ತೇನೆ. ಬಹಳ ಕಷ್ಟಕಾಲದಲ್ಲಿ ಅವರು ಪಕ್ಷದ ಜವಾಬ್ದಾರಿ ವಹಿಸಿಕೊಂಡು, ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿ, 10 ವರ್ಷಗಳ ಆಳ್ವಿಕೆಗೆ ಕಾರಣರಾಗಿದ್ದರು. ಆ ಮೂಲಕ ದೇಶಕ್ಕೆ ಶಕ್ತಿ ತುಂಬಿ ಬದಲಾವಣೆ ತಂದರು.
ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹಿನ್ನಡೆ ಅನುಭವಿಸಿದಾಗ ರಾಹುಲ್ ಗಾಂಧಿ ಅವರು ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನ ತ್ಯಜಿಸಿದರು. ಆಗ ನಮ್ಮ ಕಾರ್ಯಕಾರಿ ಸಮಿತಿ ಸದಸ್ಯರು ಒತ್ತಾಯ ಮಾಡಿದಾಗ ಅವರಿಗೆ ಎಷ್ಟೇ ಸಮಸ್ಯೆ ಇದ್ದರೂ ಸೋನಿಯಾ ಗಾಂಧಿ ಅವರು ಮತ್ತೆ ಪಕ್ಷದ ಜವಾಬ್ದಾರಿ ವಹಿಸಿಕೊಂಡು, ಈಗ ಈ ಚುನಾವಣೆ ನಡೆಸಿದ್ದಾರೆ ಎಂದರು.
ನಿಜಲಿಂಗಪ್ಪನವರ ನಂತರ ದೇಶದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗರು ಆಯ್ಕೆಯಾಗಿರುವುದು ನಮ್ಮ ಪಾಲಿಗೆ ಭಾಗ್ಯ. ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ನಿಯಮ ಇರುವ ಹಿನ್ನೆಲೆಯಲ್ಲಿ ಖರ್ಗೆ ಅವರು ಚುನಾವಣೆಗೆ ಸ್ಪರ್ಧಿಸುವ ಮುನ್ನ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ಈ ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಎಂದರು.
ಖರ್ಗೆ ಅವರು ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಆಗಿರುತ್ತಾರೆ ಎಂಬ ಬಿಜೆಪಿ ಟೀಕೆ ಬಗ್ಗೆ ಪ್ರಶ್ನಿಸಿದಾಗ, ಬಿಜೆಪಿಯಲ್ಲಿ ನಡ್ಡಾ ಅವರನ್ನು ಏನೆಂದು ಕರೆಯಬೇಕು?. ಅವರು ಚುನಾವಣೆಯಲ್ಲಿ ಗೆದ್ದಿದ್ದರಾ? ಅಮಿತ್ ಶಾ ಯಾವ ರಾಜ್ಯದವರು? ಹೇಗೆ ಆಯ್ಕೆಯಾದರು? ಎಂದು ಪ್ರಶ್ನಿಸಿದರು.
ಖರ್ಗೆ ಅವರಿಗೆ ಅವರದೇ ಆದ ಅನುಭವವಿದೆ. ನಾನು ಅಧ್ಯಕ್ಷನಾದ ನಂತರ ಎಲ್ಲ ಹಿರಿಯ ನಾಯಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಪಕ್ಷಬೇಧ ಮರೆತು ಹಲವು ಹಿರಿಯ ನಾಯಕರನ್ನು ಭೇಟಿ ಮಾಡಿದರು. ಪಕ್ಷದ ಕಷ್ಟ ಕಾಲದಲ್ಲಿ ಗಾಂಧಿ ಕುಟುಂಬ ಅಧ್ಯಕ್ಷ ಸ್ಥಾನ ವಹಿಸಿಕೊಂಡು 20 ವರ್ಷಗಳ ಕಾಲ ನಿಭಾಯಿಸಿದೆ. ಅವರ ಅನುಭವಗಳನ್ನು ನಿರಾಕರಿಸಲು ಸಾಧ್ಯವೇ? ಕೆಲವು ಸಂದರ್ಭದಲ್ಲಿ ಸಲಹೆ ಪಡೆಯಬೇಕಾಗುತ್ತದೆ. ನಾನು ಕೂಡ ಕೆಲವು ಸಂದರ್ಭಗಳಲ್ಲಿ ಅಲ್ಲಂ ವೀರಭದ್ರಪ್ಪ, ದೇಶಪಾಂಡೆ, ವೀರಪ್ಪ ಮೋಯ್ಲಿ, ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರ ಅಭಿಪ್ರಾಯ ಪಡೆಯುತ್ತೇನೆ. ನೀವು ನಿಮ್ಮ ಮನೆಯಲ್ಲಿ ವಯಸ್ಸಾದ ತಂದೆ ತಾಯಿಯನ್ನು ಹೊರಹಾಕುತ್ತೀರಾ? ಅದೇ ರೀತಿ ಕಾಂಗ್ರೆಸ್ ಕುಟುಂಬದಲ್ಲೂ ನಾವು ಹಿರಿಯರ ಸಲಹೆ ಪಡೆದು ನಮ್ಮ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದರು
ಖರ್ಗೆ ಅವರ ಆಯ್ಕೆ ಕರ್ನಾಟಕದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ‘ನಿಷ್ಠೆ, ಸಮಾಜ, ಹಿರಿತನ, ಪ್ರಜಾಪ್ರಭುತ್ವ ವ್ಯವಸ್ಥೆ. ಯಾವುದೇ ಕಪ್ಪು ಚುಕ್ಕೆ ಇಲ್ಲದ ರಾಜಕಾರಣಿ ರಾಜ್ಯಕ್ಕೆ ಸಿಕ್ಕಿರುವುದು ಶಕ್ತಿಯಲ್ಲವೇ? ಕೇವಲ ರಾಜ್ಯ ಅಥವಾ ದಕ್ಷಿಣ ಭಾರತಕ್ಕೆ ಮಾತ್ರವಲ್ಲ ಅಖಂಡ ಭಾರತಕ್ಕೆ ಖರ್ಗೆಯವರ ಆಯ್ಕೆಯಿಂದ ಶಕ್ತಿ ಬರುತ್ತದೆ’ ಎಂದರು.
ಖರ್ಗೆ ಅವರು ರಾಜ್ಯದಲ್ಲಿ ಮೂರನೇ ಶಕ್ತಿ ಕೇಂದ್ರ ಆಗುತ್ತಾರಾ ಎಂಬ ಪ್ರಶ್ನೆಗೆ, ‘ಮೂರನೇ ಶಕ್ತಿ ಕೇಂದ್ರ ಯಾಕೆ? ಎಐಸಿಸಿ ಅಧ್ಯಕ್ಷರು ಎಂದರೆ ಅದು ಒಂದೇ ಶಕ್ತಿ ಕೇಂದ್ರ’ ಎಂದರು. ಖರ್ಗೆ ಅವರು ಅಧ್ಯಕ್ಷರಾದ ನಂತರ ಶಿವಕುಮಾರ್ ಶಕ್ತಿಶಾಲಿಯಾಗಿದ್ದಾರಾ ಎಂಬ ಪ್ರಶ್ನೆಗೆ, ‘ಡಿ.ಕೆ. ಶಿವಕುಮಾರ್ ಮಾತ್ರವಲ್ಲ ಪಕ್ಷದ ಎಲ್ಲ ಕಾರ್ಯಕರ್ತರೂ ಹೆಚ್ಚು ಶಕ್ತಿಶಾಲಿ ಆಗಿದ್ದಾರೆ’ ಎಂದು ಹೇಳಿದರು.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಖರ್ಗೆ ಅವರಿಗೆ ಹೆಚ್ಚಿನ ಶಕ್ತಿ ಇರಲಿದೆಯೇ ಎಂಬ ವಿಚಾರವಾಗಿ ಕೇಳಿದಾಗ, ‘ಅವರು ವಿರೋಧ ಪಕ್ಷದ ನಾಯಕರಾಗಿದ್ದ ಹಿನ್ನೆಲೆಯಲ್ಲಿ ಅವರು ಪಕ್ಷದ ಚುನಾವಣಾ ಸಮಿತಿಯಲ್ಲಿ ಸ್ಥಾನ ಪಡೆದಿದ್ದರು. ಈಗ ಉನ್ನತ ಸ್ಥಾನ ಪಡೆದಿದ್ದಾರೆ. ಹೀಗಾಗಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಈ ಹಿಂದೆಯೂ ಅವರ ಅಭಿಪ್ರಾಯಕ್ಕೆ ಅವಕಾಶ ಇತ್ತು. ಈಗಲೂ ಇದೆ’ ಎಂದರು.
ಪ್ರಿಯಾಂಕಾ ಗಾಂಧಿ ಆಗಮಿಸಬಹುದು
ರಾಯಚೂರಿನ ಭಾರತ ಜೋಡೋ ಯಾತ್ರೆಗೆ ಪ್ರಿಯಾಂಕಾ ಗಾಂಧಿ ಅವರು ಆಗಮಿಸುತ್ತಾರಾ ಎಂಬ ಪ್ರಶ್ನೆಗೆ, ‘ಭಾರತ ಜೋಡೋ ಯಾತ್ರೆಗಾಗಿ ಸೋನಿಯಾ ಗಾಂಧಿ ಅವರು ಮೂರು ದಿನಗಳ ಕಾಲ ರಾಜ್ಯದಲ್ಲಿ ವಾಸ್ತವ್ಯ ಹೂಡಿ ಇಲ್ಲೇ ದಸರಾ ಹಬ್ಬ ಆಚರಿಸಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಪಾದಯಾತ್ರೆ ಮಾಡಿದ್ದು, ಇನ್ನು ಎರಡು ದಿನಗಳ ಕಾಲ ಹೆಜ್ಜೆ ಹಾಕಲಿದ್ದಾರೆ. ಅವರ ಜತೆಗೆ ಪ್ರಿಯಾಂಕ ಗಾಂಧಿ ಅವರು ಕೂಡ ಹೆಜ್ಜೆ ಹಾಕಲಿದ್ದಾರೆ ಎಂಬ ವಿಶ್ವಾಸ ನನಗಿದೆ’ ಎಂದು ಶಿವಕುಮಾರ್ ಹೇಳಿದರು.
2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸವಾಲು ಖರ್ಗೆ ಅವರಿಗಿದೆಯೇ ಎಂಬ ಪ್ರಶ್ನೆಗೆ, ‘ಕೇವಲ ನಮ್ಮ ರಾಜ್ಯ ಮಾತ್ರವಲ್ಲ ದೇಶದ ಎಲ್ಲ ರಾಜ್ಯಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸವಾಲು ಇದೆ. ಕರ್ನಾಟಕ ಕೂಡ ದೇಶದ ಭಾಗ’ ಎಂದರು.
ಇದನ್ನೂ ಓದಿ | Bharat Jodo | ಕಾಂಗ್ರೆಸ್ ಸಮಾವೇಶದಲ್ಲಿ ಚೇರ್ ಪಾಲಿಟಿಕ್ಸ್; ಡಿ.ಕೆ. ಶಿವಕುಮಾರ್ ಬೇಸರ