ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ 75 ನೇ ವರ್ಷದ ಹುಟ್ಟುಹಬ್ಬ ಕಾಂಗ್ರೆಸ್ ಪಕ್ಷದ್ದೇ ಕಾರ್ಯಕ್ರಮ ಎಂಬ ಅಚ್ಚರಿಯ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ನವದೆಹಲಿಯಲ್ಲಿ ಇತ್ತೀಚೆಗೆ ರಾಹುಲ್ ಗಾಂಧಿಯವರ ಜತೆ ಸಭೆ ನಡೆಸಿದ್ದರು. ಸತತ ಎರಡು ದಿನ ನಡೆದ ಸಭೆಯ ನಡುವೆ, 75ನೇ ವರ್ಷದ ಕಾರ್ಯಕ್ರಮಕ್ಕೆ ಆಗಮಿಸುವಂತೆ ರಾಹುಲ್ ಗಾಂಧಿ ಅವರನ್ನು ಸಿದ್ದರಾಮಯ್ಯ ಆಹ್ವಾನಿಸಿದ್ದಾಗಿ ತಿಳಿಸಿದ್ದರು.
ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರ ಆಪ್ತರೆಲ್ಲರೂ ಸೇರಿ ಉತ್ಸವ ಆಚರಿಸುತ್ತಿದ್ದಾರೆ. ನಮ್ಮನ್ನೂ ಕರೆದಿದ್ದಾರೆ, ಹೋಗುತ್ತೇವೆ. ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿರುವ ಬಗ್ಗೆ ನಮಗೆ ಗೊತ್ತಿಲ್ಲ ಎಂದಿದ್ದರು.
ಶೃಂಗೇರಿ ಮಠದ ಕಿರಿಯ ಸ್ವಾಮೀಜಿ ಶ್ರೀ ವಿಧುಶೇಖರ ಭಾರತಿಯವರು ತಮ್ಮ ಮನೆಗೆ ಭೇಟಿ ನೀಡಿ ತೆರಳಿದ ನಂತರ ದೀರ್ಘವಾಗಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ನಾವು ವ್ಯಕ್ತಿಪೂಜೆ ಮಾಡುವುದಿಲ್ಲ. ಸಿದ್ಧಾಂತಕ್ಕೆ ಅನುಗುಣವಾಗಿ ಪಕ್ಷ ನಡೆಯುತ್ತದೆ. ಕಾರ್ಯಕರ್ತರಿಗೂ ಇದನ್ನೇ ಹೇಳುತ್ತೇನೆ ಎಂದಿದ್ದರು.
ಆದರೆ ಇದೀಗ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮೋತ್ಸವಕ್ಕೆ ಎಲ್ಲರೂ ಹೋಗಬೇಕು ಎಂದು ತೀರ್ಮಾನ ಮಾಡಿದ್ದೇವೆ. ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಆಗಮಿಸಲಿದ್ದಾರೆ. ಇದು ನಮ್ಮ ಪಕ್ಷದ ಕಾರ್ಯಕ್ರಮ. ಪಕ್ಷದ ವೇದಿಕೆಯಲ್ಲೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ | ಸಿದ್ದರಾಮೋತ್ಸವ ಕೇವಲ ಜನುಮ ದಿನ ಕಾರ್ಯಕ್ರಮವೆ? srlopcm75ನಲ್ಲಿದೆ ಈ ಒಗಟಿಗೆ ಉತ್ತರ!