ಬೆಂಗಳೂರು: ಬೆಂಗಳೂರಿನ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರದಲ್ಲೇ ಮೆಗಾ ಯೋಜನೆಯೊಂದನ್ನು ಘೋಷಿಸಲಿದೆ. ಈ ಕುರಿತು, ಬೆಂಗಳೂರು ಅಭಿವೃದ್ಧಿ ಹೊಣೆಯನ್ನೂ ಹೊತ್ತಿರುವ (Brand Bengaluru) ಡಿಸಿಎಂ ಡಿ.ಕೆ. ಶಿವಕುಮಾರ್ ಮುನ್ಸೂಚನೆ ನೀಡಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಕುರಿತು ಈಗಾಗಲೆ ತಜ್ಞರ ಜತೆಗೆ ಸಭೆ ನಡೆಸಿ ಸಾರ್ವಜನಿಕರಿಂದಲೂ ಅಭಿಪ್ರಾಯಗಳಿಗೆ ಕರೆ ನೀಡಲಾಗಿದೆ. ಇದರ ಜತೆಗೆ ಬೆಂಗಳೂರಿನ ವಿವಿಧ ಸಂಘ ಸಂಸ್ಥೆಗಳೊಂದಿಗೆ ವಿಧಾನಸೌಧದಿಂದ ವರ್ಚುವಲ್ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದಾರೆ.
ನಂತರ ಮಾಧ್ಯಮಗಳ ಜತೆಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಬೆಂಗಳೂರು ಅಭಿವೃದ್ಧಿ ಬಗ್ಗೆ ನಾನು ಈ ಹಿಂದೆ ಕೆಲ ಪ್ರಮುಖರು, ದೊಡ್ಡ ಕಂಪನಿಗಳ ಜೊತೆ ಸಭೆ ಮಾಡಿದ್ದೆ. ಸಂಸತ್ ಸದಸ್ಯರು ಶಾಸಕರ ಜೊತೆ ಸಭೆ ಮಾಡಿದೆ. ಸಾರ್ವಜನಿಕರ ಬಳಿಯೂ ಅಭಿಪ್ರಾಯ ಕೇಳಿದ್ದೆ. 30 ಸಾವಿರ ಜನ ಅಭಿಪ್ರಾಯ ತಿಳಿಸಿದ್ದಾರೆ. ಕೆಲ ಸಂಘಸಂಸ್ಥೆಗಳ ಅಭಿಪ್ರಾಯ ಸಲಹೆ ಬಗ್ಗೆ ಮಾತನಾಡಿದ್ದೇನೆ.
ಟ್ರಾಫಿಕ್, ಲೇಕ್, ಆಪ್ಟಿಕಲ್ ಫೈಬರ್ ಕನೆಕ್ಷನ್ ಸೇರಿದಂತೆ 6 ರಿಂದ 7 ವಿಚಾರಗಳ ಬಗ್ಗೆ ಅಭಿಪ್ರಾಯ ಕೇಳಿದ್ದೇನೆ. ವಾರ್ಡ್ ಮಟ್ಟದಲ್ಲೇ ನಮ್ಮ ಸಮಸ್ಯೆಗಳ ಬಗ್ಗೆ ಕೇಳಬೇಕು ಅಂತಾ ಹೇಳಿದ್ದಾರೆ. ಪಾರ್ಕಿಂಗ್, ಫುಟ್‌ಪಾತ್ ಒತ್ತುವರಿ ಆಗುತ್ತಿದೆ, ಗಾರ್ಬೇಜ್ ಸಮಸ್ಯೆ ಬಗ್ಗೆ ಸಲಹೆ ನೀಡಿದ್ದಾರೆ. ಮಕ್ಕಳ ಅಭಿಪ್ರಾಯ ಕೇಳುವಂತೆ ಸಲಹೆ ಕೇಳಿದ್ದಾರೆ. ಈಗಾಗಲೇ ಈ ಬಗ್ಗೆ ಡಿಬೆಟ್ ಕಾರ್ಯಕ್ರಮಕ್ಕೂ ತೀರ್ಮಾನ ಮಾಡಲಾಗಿದೆ. ಹೈಸ್ಕೂಲ್ ಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರು ನಗರಕ್ಕೆ ಸಿಲಿಕಾನ್ ಸಿಟಿ, ಐಟಿಬಿಟಿ ಅಂತ ಅನೇಕ ಹೆಸರು ಬಂದಿದೆ. ಹೀಗಿದ್ದರೂ ಕೆಲ ವಿಚಾರದಲ್ಲಿ ಹಿಂದೆ ಇದ್ದೇವೆ. ಸಂಪೂರ್ಣ ಆಸ್ತಿಗಳ ದಾಖಲೆಗಳನ್ನ ಡಿಜಿಟಲೀಕರಣ ಮೂಲಕ ಮನೆ ಬಾಗಿಲಿಗೆ ತಲುಪಿಸುವಂತೆ ಮಾಡುವ ಯೋಚನೆ ಮಾಡಿದ್ದೇವೆ. ಮೊದಲು ಎಲ್ಲ ದಾಖಲೆಗಳನ್ನ ಸ್ಕ್ಯಾನ್ ಮಾಡಿಸುತ್ತೇವೆ. ಯಾರು ಬೇಕಾದರೂ ದಾಖಲೆ ನೋಡಬಹುದೆಂಬ ಕಾರಣಕ್ಕೆ ಯೋಚನೆ ಮಾಡಿದ್ದೇವೆ. ಸಮಯಮಿತಿಯಲ್ಲಿ ಯೋಜನೆ ಜಾರಿ ಮಾಡ್ತೇವೆ ಎಂದರು.
ಇದನ್ನೂ ಓದಿ: Brand Bangalore: ಬೆಂಗಳೂರು ಬ್ರ್ಯಾಂಡ್ ಅಭಿವೃದ್ಧಿಗೆ ಸಮಿತಿ; ಗಣ್ಯರ ಜತೆ ಸಭೆ ನಡೆಸಿದ ಡಿಕೆಶಿ
ಕೆರೆ ಒತ್ತುವರಿ ಬಗ್ಗೆ ಜನಾಭಿಪ್ರಾಯ ತಿಳಿಸಿದ್ದಾರೆ. ಸರ್ಜಾರಿ ಆಸ್ತಿ ಜತೆಗೆ ತಮ್ಮ ಆಸ್ತಿ ಕಾಪಾಡುವಂತೆ ಕೆಲವರು ಮುಂದೆ ಬಂದಿದ್ದಾರೆ. ನಾನು ಯಾರನ್ನೂ ನಂಬೋದಿಲ್ಲ. ಕಣ್ಣಾರೆ ಎಲ್ಲವನ್ನ ಕಂಡಿದ್ದೇನೆ. ನಾನು ಯಾರ ಮೇಲೂ ದುಬಾರಿ ಟ್ಯಾಕ್ಸ್ ಹಾಕಲು ಯೋಚನೆ ಮಾಡಿಲ್ಲ. ಟ್ಯಾಕ್ಸ್ ಕಟ್ಟದವರನ್ನು ಮ್ಯಾಪಿಂಗ್ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಕೆಲವರು ಪ್ರಾಪರ್ಟಿ ಟ್ಯಾಕ್ಸ್ ಕಟ್ಟದೆ ಕಳ್ಳರಾಗಿದ್ದಾರೆ, ಅಂತಹವರನ್ನ ನ್ಯಾಯದಡಿ ಕಟ್ಟುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ತಿಳಿಸಿದರು.
ಈ ತಿಂಗಳ ಕೊನೆಯಲ್ಲಿ ಬೆಂಗಳೂರು ಸ್ವಚ್ಛತೆ ವಿಚಾರದಲ್ಲಿ ಮೇಜರ್ ಬದಲಾವಣೆ ತರಲಿದ್ದೇವೆ. ಈಗ ಅದರ ಬಗ್ಗೆ ಹೇಳೋದಿಲ್ಲ ಮುಂದೆ ಹೇಳ್ತೇನೆ. ಅನೇಕ ಕಡೆ ವ್ಯಾಪಾರಿಗಳು ಫುಟ್‌ಪಾತ್‌ಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅನೇಕ ಅಪಘಾತಗಳು ಇದರಿಂದಲೇ ಆಗುತ್ತಿವೆ. ಅವರ ಜೀವನ ಗಮನದಲ್ಲಿಟ್ಟುಕೊಂಡೇ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ ಎಂದರು.