ಕನಕಪುರ: “ನಾನು ಮಾತ್ರ ಮಂತ್ರಿಯಾಗಿ, ಶಾಸಕರುಗಳಿಗೆ ಅಧಿಕಾರ (MLAs and karyakartas) ಸಿಗದಿದ್ದರೆ ತಪ್ಪಲ್ಲವೇ? ಎಲ್ಲರಿಗೂ ಅವಕಾಶ ಸಿಕ್ಕೇ ಸಿಗುತ್ತದೆ. ನಿಗಮ ಮಂಡಳಿಗಳಲ್ಲಿ (Boards and Corporaions) ಶಾಸಕರು ಹಾಗೂ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivaukumar) ಅವರು ತಿಳಿಸಿದರು.
ಕನಕಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡುವ ವೇಳೆ, ‘ನಿಗಮ ಮಂಡಳಿ ನೇಮಕಾತಿ ಯಾವಾಗ ಹಾಗೂ ಯಾರಿಗೆಲ್ಲಾ ಅವಕಾಶ ನೀಡಲಾಗುತ್ತದೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, “ಎಲ್ಲಾ ಶಾಸಕರು ಕೇಳುತ್ತಿಲ್ಲ. 20- 25 ಜನರು ಕೇಳುತ್ತಿದ್ದಾರೆ. ಅದರಲ್ಲಿ 15 ಜನರಿಗೆ ಅವಕಾಶ ನೀಡುತ್ತೇವೆ, ಮಿಕ್ಕ ಸ್ಥಾನಗಳನ್ನು ಕಾರ್ಯಕರ್ತರಿಗೆ ನೀಡಲಿದ್ದು ಅವರಿಗೆ ಎರಡುವರೆ ವರ್ಷ ಅವಕಾಶ ನೀಡುತ್ತೇವೆ. ನಮ್ಮ ಶಾಸಕರು ಹಾಗೂ ಕಾರ್ಯಕರ್ತರಿಗೆ ಅಧಿಕಾರ ಹಾಗೂ ಅವಕಾಶ ಕೊಡುತ್ತೇವೆ, ಮಾಧ್ಯಮಗಳಿಗೆ ಅವಸರ ಏಕೆ? ಶಾಸಕರುಗಳು ನಮ್ಮ ನಾಯಕರುಗಳಲ್ಲವೇ?” ಎಂದರು.
ಕನಕಪುರಕ್ಕಿಂತ ರಾಮನಗರವೇ ನನ್ನ ಮೊದಲ ಆಧ್ಯತೆ
ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋಧಿ ಹೋರಾಟಗಾರರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ರಾಮನಗರದ ಪಿಎಲ್ಡಿ ಕಟ್ಟಡವನ್ನು ಕೆಡವಿ ಜಿಲ್ಲಾ ಆಸ್ಪತ್ರೆ ಕಟ್ಟಿಸಿದಾಗ ದಳ- ಬಿಜೆಪಿಯವರು ಯಾರೂ ಬರಲಿಲ್ಲ ಏಕೆ? ಇಂತಹ ಧೈರ್ಯ ಮಾಡಿದ ಪರಿಣಾಮ ಅತ್ಯುತ್ತಮ ಜಿಲ್ಲಾ ಆಸ್ಪತ್ರೆ ರಾಮನಗರದಲ್ಲಿ ಆಗಿದೆ. ನನ್ನ ಮೊದಲ ಆದ್ಯತೆ ಕನಕಪುರಕ್ಕಲ್ಲ, ರಾಮಮನಗರಕ್ಕೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಬಜೆಟ್ನಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಎಂದು ಸೇರಿಸಿದ್ದರು. ಆನಂತರ ಯೋಜನೆ ಕಾರ್ಯಗತಗೊಂಡು, ಟೆಂಡರ್ ಆಗಿ ಭೂಮಿ ಪೂಜೆ ಒಂದು ಬಾಕಿ ಇತ್ತು. ರಾಮನಗರಕ್ಕೆ ಏನು ಬರಬೇಕೊ ಅದು ಬರಬೇಕು. ಕನಕಪುರಕ್ಕೆ ಏನು ಬರಬೇಕು ಅದೂ ಬರಬೇಕು. ರಾಮನಗರಕ್ಕೆ ಬರಬಾರದು ಎಂದು ಹೇಳಿದವರು ಯಾರು? ಈಗ ಪ್ರಸ್ತಾವನೆಯಾಗಿರುವ ಕಾಲೇಜು ರಾಮನಗರದಿಂದ 3 ಕಿಲೋ ಮೀಟರ್ ದೂರದಲ್ಲಿದೆ ಮತ್ತು ರಾಮನಗರದಲ್ಲಿ ವಿಶ್ವವಿದ್ಯಾಲಯ ಇರಲಿದೆ. ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಇರಬೇಕು ಎನ್ನುವ ನಿಯಮವಿರುವ ಕಾರಣ ಅದನ್ನು ಕನಕಪುರದ ಬಳಿ ಮಾಡಲಾಗುತ್ತಿದೆ.ʼʼ ಎಂದರು.
ಕನಕಪುರದಲ್ಲಿ ತಾಯಿ- ಮಗು ಆಸ್ಪತ್ರೆ ಉದ್ಘಾಟನೆ ವೇಳೆ ನಾನು ಮಾತನಾಡಿರುವ ಮಾತುಗಳನ್ನು ಇನ್ನೊಮ್ಮೆ ಕೇಳಿ ಮತ್ತು ಕುಮಾರಸ್ವಾಮಿ ಅವರು ಬಜೆಟ್ ಭಾಷಣದ ವೇಳೆ ಮಾತನಾಡಿರುವ ಮಾತುಗಳು, ಸಿದ್ದರಾಮಯ್ಯ ಅವರು ಬಜೆಟ್ ಭಾಷಣದ ವೇಳೆಯ ಮಾತುಗಳನ್ನು ಕೇಳಿ ಯಾರು ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಸತ್ಯ ತಿಳಿಯುತ್ತದೆ ಎಂದರು ಶಿವಕುಮಾರ್.
ʻʻಕನಕಪುರದಲ್ಲಿ ಇದ್ದ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಹಾಕಲಾಯಿತು, ಆಗ ಯಡಿಯೂರಪ್ಪ- ಬೊಮ್ಮಾಯಿ ಅವರು ಸ್ಥಳಾಂತರ ಮಾಡಿಕೊಡುತ್ತೇವೆ ಎಂದಿದ್ದರು, ಈ ವಿಚಾರದಲ್ಲಿ ಬಿಜೆಪಿ- ದಳದವರು ರಾಜಕಾರಣ ಮಾಡಬೇಕು ಎಂದರೆ ರಾಜಕಾರಣ ಮಾಡಲಿ, ನನಗೆ ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ” ಎಂದು ಸ್ಪಷ್ಟನೆ ನೀಡಿದರು.
ರಾಮನಗರದಲ್ಲಿ ಭಾರತ್ ಜೋಡೋ ನೆನಪಿನ ಪಾದಯಾತ್ರೆ
ಸೆ. 7ಕ್ಕೆ ಭಾರತ್ ಜೋಡೊ ಯಾತ್ರೆಗೆ 1 ವರ್ಷ ತುಂಬುತ್ತದೆ. ಇದೇ ನೆನಪಿಗೆ ಪಾದಯಾತ್ರೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಬೇಕು ಎನ್ನುವ ಯೋಚನೆ ಇತ್ತ., ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಆಗುತ್ತದೆ ಎನ್ನುವ ಕಾರಣಕ್ಕೆ ರಾಮನಗರದಲ್ಲಿ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ಅಂದು ನಮ್ಮ ಜೊತೆ ಹೆಜ್ಜೆ ಹಾಕಲಿದ್ದಾರೆ, ಅದೇ ದಿನ ಸಚಿವ ಸಂಪುಟ ಸಭೆ ಇರುವ ಕಾರಣ ಇತರೇ ಮಂತ್ರಿಗಳಿಗೆ ಸೆ. 8ರಂದು ಮಾಡಬಹುದು ಎಂದು ಸೂಚನೆ ನೀಡಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದು ಗಂಟೆಗಳ ಕಾಲ ಸಂಜೆ 5ರಿಂದ 6 ಗಂಟೆಯ ತನಕ ಈ ಕಾರ್ಯಕ್ರಮ ನಡೆಯಲಿದೆ ಎಂದು ಶಿವಕುಮಾರ್ ವಿವರಿಸಿದರು.
ನನ್ನ ಊರಿನ ಶಿಕ್ಷಕರನ್ನು ನೋಡಲು ಬಂದೆ
ಪ್ರತಿ ವರ್ಷ ಅನೇಕ ಕಾರ್ಯಗಳ ಒತ್ತಡದಿಂದ ನಮ್ಮ ಕನಕಪುರ ತಾಲ್ಲೂಕಿನ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಲು ಆಗಿರಲಿಲ್ಲ, ಈ ವರ್ಷ ಅನೇಕ ಕೆಲಸಗಳ ಒತ್ತಡ ಇದ್ದರೂ ಬಂದಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಗ್ರಾಮೀಣ ಪ್ರದೇಶದ ಶಾಲೆಗಳು ಸೇರಿದಂತೆ ಎಲ್ಲಾ ಭಾಗದ ಮಕ್ಕಳಿಗೂ ಗ್ಲೋಬಲ್ ಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ಸಿಎಸ್ಆರ್ ಹಣದ ಸದುಪಯೋಗಕ್ಕೆ ಯೋಜನೆ ರೂಪಿಸುತ್ತಿದ್ದೇವೆ. ಪ್ರಮುಖ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲೆಗಳನ್ನು ದತ್ತು ತೆಗೆದುಕೊಳ್ಳುವಂತೆ ಪ್ರೇರೆಪಿಸಲಾಗುವುದು.