ಚಿಕ್ಕಮಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹಾಗೂ ಅವರ ಸರ್ಕಾರ ಪ್ರಾಮಾಣಿಕ ಎಂದಾದರೆ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಸಿ.ಟಿ. ರವಿ (CT Ravi) ಸವಾಲು ಹಾಕಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಇನ್ನೂ ಕಮಿಷನ್ ಪಾಲಿಟಿಕ್ಸ್ (Commission Politics) ಹೇಳಿಕೆಗಳು ನಿಂತಿಲ್ಲ.
ಬಿಬಿಎಂಪಿ ಕಾಮಗಾರಿಗಳ ಬಿಲ್ ಪಾಸ್ ಮಾಡಬೇಕೆಂದರೆ 15 ಪರ್ಸೆಂಟ್ ಕಮಿಷನ್ (15 percent commission) ಕೊಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದು, ಹೀಗೆ ಹೇಳಿಲ್ಲವಾದರೆ ಅವರು ನಂಬಿರುವ ತುಮಕೂರಿನ ನೊಣವಿನಕೆರೆ ಅಜ್ಜಯ್ಯನ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ ಎಂದು ಗುತ್ತಿಗೆದಾರೊಬ್ಬರು ಸವಾಲು ಹಾಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿ.ಟಿ. ರವಿ, ಡಿ.ಕೆ. ಶಿವಕುಮಾರ್ ಅವರು ಕಮಿಷನ್ ಕೇಳಿದ್ದಾರೆ ಎಂಬುದು ನಮ್ಮ ಆರೋಪವಲ್ಲ. ಇದು ಬಿಬಿಎಂಪಿ ಗುತ್ತಿಗೆದಾರರ ಸಂಘದ (BBMP Contractors Association) ಆರೋಪವಾಗಿದೆ. ಡಿಕೆಶಿಗೆ ಅಜ್ಜಯ್ಯನ ಮಠದ ಬಗ್ಗೆ ಇರುವ ಭಕ್ತಿಗೆ ಅಲ್ಲಿಗೆ ಕರೆದಿದ್ದಾರೆ ಎಂದು ಹೇಳಿದರು.
ನಾವು ತಪ್ಪೇ ಮಾಡಿಲ್ಲ ಅಂದಾದರೆ ಹೋಗಿ ಪ್ರಮಾಣ ಮಾಡಬಹುದಲ್ವಾ? ಗುತ್ತಿಗೆದಾರರ ಬಳಿ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಮೊದಲು 7 ಪರ್ಸೆಂಟ್ ಫಿಕ್ಸ್ ಮಾಡಿದ್ದರು. ಇದು ಹೊಸ ಕಾಮಗಾರಿಗಳಿಗೆ ಅಲ್ಲ. ಈ ಹಿಂದೆ ನಡೆದಿದ್ದ ಕಾಮಗಾರಿಗಳಿಗಾಗಿದೆ. ಮದ್ಯವರ್ತಿಗಳು ಶೇಕಡಾ 10ರಷ್ಟು ಎಂದು ಹೇಳಿದರು. ಆಮೇಲೆ ಚರ್ಚೆ ಮಾಡಿ 15 ಪರ್ಸೆಂಟ್ ಕೊಟ್ಟರೆ ಮಾತ್ರ ಮಾತ್ರ ಕ್ಲಿಯರ್ ಎಂದಿದ್ದಾರೆ ಎಂಬುದನ್ನು ಸಿ.ಟಿ. ರವಿ ವಿವರಿಸಿದರು.
ಜೀವನದಲ್ಲಿ ಲಂಚವನ್ನೇ ಕೇಳಿಲ್ಲ ಎಂದು ಪ್ರಮಾಣ ಮಾಡಲಿ
ಈಗ ಗುತ್ತಿಗೆದಾರರ ಸಂಘ ಆರೋಪ ಮಾಡಿದೆ. ಅವರು ಹೇಳುತ್ತಿರುವುದು ಸುಳ್ಳು ಎನ್ನುವುದಾದರೆ ಅಜ್ಜಯ್ಯನ ಮಠಕ್ಕೆ ಹೋಗಿ ಸತ್ಯ ಮಾಡಲಿ. ಸತ್ಯ ಮಾಡುವಾಗ ನನ್ನ ಜೀವನದಲ್ಲೇ ಲಂಚ ತೆಗೆದುಕೊಂಡಿಲ್ಲ ಎಂದು ಹೇಳಿದರೆ ಸಾಕ್ಷಿಯೇ ಬೇಕಾಗಿಲ್ಲ ಎಂದು ಮಾಜಿ ಶಾಸಕ ಸಿ.ಟಿ. ರವಿ ಹೇಳಿದರು.
ಕಾಂಗ್ರೆಸ್ಸಿನ ಬಹುತೇಕ ಶಾಸಕರು ಒಂದೇ ದಿನ ವಸೂಲಿಗೆ ಹೊರಟಿದ್ದಾರೆ. ನಾವು ಅಷ್ಟು ಖರ್ಚು ಮಾಡಿದ್ದೇವೆ ಅಂತ ಬಹಿರಂಗವಾಗಿ ಹೇಳುತ್ತಿದ್ದಾರೆ. ದಾನ-ಧರ್ಮಕ್ಕೆ ರಾಜಕಾರಣ ಮಾಡ್ತೀನಾ, ನಾನು ಧರ್ಮರಾಯನಾ? ಎಂದು ಕೇಳುತ್ತಿದ್ದಾರೆ. ಖರ್ಚು ಮಾಡಿರೋದು ವಸೂಲಿ ಆಗಬೇಕು. ಹೆಂಡತಿ, ಮಕ್ಕಳನ್ನು ಬೀದಿಗೆ ನಿಲ್ಲಿಸಲು ಆಗುತ್ತದೆಯೇ? ಎಂದು ಆ ಪಕ್ಷದ ಶಾಸಕರೇ ಕೇಳುತ್ತಿದ್ದಾರೆ ಎಂಬುದಾಗಿ ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು.
ಇದನ್ನೂ ಓದಿ: Cow slaughter : ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದರೆ ಹುಷಾರ್; ಸರ್ಕಾರದ ವಿರುದ್ಧ ಸಿಡಿದ ಸಂತರು!
ಕರಪ್ಷನ್-ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು
ಕರಪ್ಷನ್-ಕಾಂಗ್ರೆಸ್ (Corruption and Congress) ಒಂದೇ ನಾಣ್ಯದ ಎರಡು ಮುಖಗಳು. ದೇಶ-ರಾಜ್ಯದ ಹಗರಣಗಳನ್ನು ಪಟ್ಟಿ ಮಾಡಿದರೆ ಶೇ.90 ಕಾಂಗ್ರೆಸ್ ಅವಧಿಯಲ್ಲಿ ಆಗಿದೆ. 90% ಅಪರಾಧಿ ಸ್ಥಾನದಲ್ಲಿ ಇರೋರು ಕಾಂಗ್ರೆಸ್ ಸಚಿವರು, ಆ ಕಾಲದ ಅಧಿಕಾರಿಗಳು. ಭ್ರಷ್ಟಾಚಾರದ ಬೀಜ ಬಿತ್ತಿದ್ದೇ ಕಾಂಗ್ರೆಸ್ ಪಕ್ಷ. ಭ್ರಷ್ಟಾಚಾರದಿಂದ ಕಾಂಗ್ರೆಸ್ ವಿಮುಖವಾಗಿದೆ ಅನ್ನೋದನ್ನು ಯಾರೂ ನಂಬಲ್ಲ. ಭ್ರಷ್ಟಾಚಾರದ ಮತ್ತೊಂದು ಮುಖವೇ ಕಾಂಗ್ರೆಸ್ ಆಗಿದೆ. ಅವರು ಯಾವುದೇ ಪ್ರಾಮಾಣಿಕತೆಯ ಸೋಗು ಹಾಕಿದರೂ ಭ್ರಷ್ಟಾಚಾರದ ವಾಸನೆ ಇರುತ್ತದೆ. 40%, 15% ಆಗಿದೆ ಅಂದ್ರೆ ಕಡಿಮೆ ಆಯ್ತು ಅಂತ ಒಪ್ಪಿಕೊಂಡಂತೆ ಎಂದು ಸಿಎಂ ಹೇಳಿಕೆ ಗಮನಿಸಿದ್ದೇನೆ. ಅದಲ್ಲ, ನೀವು ಕೇಳುತ್ತಿರುವ 15% ಹಳೆಯದ್ದಕ್ಕೆ, ಹೊಸದು 50% ದಾಟಬಹುದು ಎಂದು ಮಾಜಿ ಸಚಿವ ಸಿ.ಟಿ.ರವಿ ತಿವಿದರು.