Site icon Vistara News

ನನ್ನನ್ನು, ಸಿದ್ದರಾಮಯ್ಯರನ್ನು ನೆನೆಸಿಕೊಳ್ಳದಿದ್ದರೆ ಬಿಜೆಪಿಯವರಿಗೆ ನಿದ್ದೆ ಬರಲ್ಲ: ಡಿಕೆಶಿ ವ್ಯಂಗ್ಯ

DK shivakumar

ಬೆಂಗಳೂರು: ಬಿಜೆಪಿಯವರು ನಿತ್ಯ ಮಲಗುವ ಮುನ್ನ ನಮ್ಮನ್ನು ನೆನಪಿಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಒಡೆದು ಹೋಳಾಗಲು ಕುಂಬಳಕಾಯಿಯೂ ಅಲ್ಲ, ಮಡಿಕೆಯೂ ಅಲ್ಲ. ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನು ನೆನಪಿಸಿಕೊಳ್ಳದಿದ್ದರೆ ಬಿಜೆಪಿಯವರಿಗೆ ನಿದ್ದೆ ಬರುವುದಿಲ್ಲ. ಅವರು ನಮ್ಮನ್ನು ಬಹಳ ಪ್ರೀತಿಸುತ್ತಾರೆ. ಹೀಗಾಗಿ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸಿದ್ದರಾಮಯ್ಯನವರ ಹುಟ್ಟುಹಬ್ಬ ಕಾರ್ಯಕ್ರಮ ನಂತರ ಕಾಂಗ್ರೆಸ್ ಹೋಳಾಗಲಿದೆ ಎಂಬ ಬಿಜೆಪಿಯವರ ಮಾತಿಗೆ ಡಿ.ಕೆ.ಶಿವಕುಮಾರ್‌ ಹೀಗೆ ನಯವಾಗಿ ತಿರುಗೇಟು ಕೊಟ್ಟಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್ಐ ಹಗರಣದಲ್ಲಿ ಬಂಧಿತರಾಗಿರುವ ಐಪಿಎಸ್ ಅಧಿಕಾರಿಯನ್ನು ಮಂಪರು ಪರೀಕ್ಷೆ ಮಾಡಬೇಕು ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್‌, ತನಿಖಾಧಿಕಾರಿಗಳು ಕೇವಲ 50 ಜನರನ್ನು ಮಾತ್ರ ಬಂಧಿಸಿದ್ದಾರೆ. ನಾವು ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದು, ಅದನ್ನು ಮಾಡಲಿಲ್ಲ. ಕನಿಷ್ಠ ಪಕ್ಷ ಬಂಧಿತರನ್ನು ಸೆಕ್ಷನ್ 164ರ ಪ್ರಕಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿಕೊಳ್ಳಬೇಕು. ಆರೋಪಪಟ್ಟಿಯಲ್ಲಿ ಬೇರೆ ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎಂದು ಹೇಳಲಾಗಿದ್ದು, ಅವುಗಳ ತನಿಖೆಯನ್ನೂ ಮಾಡಬೇಕು ಎಂದು ಆಗ್ರಹಿಸಿದರು.

ಈ ಅಕ್ರಮದಲ್ಲಿ ಮುಖ್ಯಮಂತ್ರಿಗಳು, ಸಚಿವರು ಭಾಗಿಯಾಗಿಲ್ಲ ಎಂದಾದರೆ ತನಿಖೆ ಮಾಡಲು ಭಯ ಏಕೆ? ಅವರ ಕಚೇರಿಯೂ ಭಾಗಿಯಾಗಿದೆ. ಗೃಹ ಸಚಿವರು ಹಾಗೂ ಶಿಕ್ಷಣ ಸಚಿವರ ಒತ್ತಡದ ಮೇರೆಗೆ ಅಭ್ಯರ್ಥಿಗಳನ್ನು ವಿಚಾರಣೆ ಮಾಡದೆ ಕಳುಹಿಸಲಾಗಿತ್ತು. 15 ದಿನಗಳ ನಂತರ ಸಚಿವರು ಹಣ ಹಿಂತಿರುಗಿಸುವುದಾಗಿ ಹೇಳಿ ನಂತರ ಆ ಅಭ್ಯರ್ಥಿಯನ್ನು ಶರಣಾಗತಿ ಮಾಡಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಅವರು ರಾಜ್ಯದಲ್ಲೇ ಅತ್ಯಂತ ಭ್ರಷ್ಟ ರಾಜಕಾರಣಿಯಾಗಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ | ಅಕ್ರಮ ಆಸ್ತಿ ಗಳಿಕೆ: ಡಿ.ಕೆ. ಶಿವಕುಮಾರ್‌ ಜಾಮೀನು ವಿಚಾರಣೆ ಜುಲೈ 30ಕ್ಕೆ

ಪ್ರಾಮಾಣಿಕ ತನಿಖೆ ಆಗುತ್ತಿಲ್ಲ

ನನ್ನ ಪ್ರಕಾರ ಪ್ರಾಮಾಣಿಕ ತನಿಖೆ ಆಗುತ್ತಿಲ್ಲ. ಅಧಿಕಾರಿಯೇ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ಸಿದ್ಧವಾಗಿರುವಾಗ ಏಕೆ ದಾಖಲಿಸುತ್ತಿಲ್ಲ? ನಮಗೆ ಬಂದಿರುವ ಮಾಹಿತಿ ಪ್ರಕಾರ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಕೆಲವರ ಹೆಸರು ಹಾಗೂ ಹಗರಣ ಹಣದ ಪ್ರಮಾಣದ ಬಗ್ಗೆ ಪ್ರಸ್ತಾಪಿಸಿದ್ದು, ಯತ್ನಾಳ್ ಕೂಡ ಕೆಲವು ವಿಚಾರವನ್ನು ಹೇಳಿದ್ದಾರೆ. ಆದರೂ ಈ ವಿಚಾರವಾಗಿ ಯಾವುದೇ ತನಿಖೆ ನಡೆಯುತ್ತಿಲ್ಲ ಎಂದರು.

ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ

ಬಿಜೆಪಿಯಲ್ಲಿಯೇ ಬಹಳ ಆಂತರಿಕ ಭಿನ್ನಾಭಿಪ್ರಾಯವಿದ್ದು, ಭಯ ಹೆಚ್ಚಾಗಿದೆ. ಇದೇ ಕಾರಣಕ್ಕೆ ಅವರ ರಾಷ್ಟ್ರೀಯ ನಾಯಕರು ಪದೇಪದೆ ರಾಜ್ಯಕ್ಕೆ ಬಂದು ಹೋಗುತ್ತಿದ್ದಾರೆ. ಮೂಲ ಬಿಜೆಪಿಯವರು ಈ ಸರ್ಕಾರ ನಡೆಸುತ್ತಿಲ್ಲ. ಇದೊಂದು ಮೈತ್ರಿ ಸರ್ಕಾರ ಇದ್ದಂತೆ. ಈ ಸರ್ಕಾರದಲ್ಲಿರುವ ಅನೇಕ ಸಚಿವರು ಕಾಂಗ್ರೆಸ್ ಹಾಗೂ ದಳದಿಂದ ಹೋಗಿ ಶಾಸಕರಾಗಿದ್ದಾರೆ. ಹೀಗಾಗಿ ಅವರಲ್ಲಿ ಆತಂಕ ಹೆಚ್ಚಾಗಿದೆ ಎಂದು ಡಿಕೆಶಿ ಹೇಳಿದರು.

ಪಿಎಸ್ಐ ನೇಮಕ ಅಕ್ರಮ ವಿಚಾರವಾಗಿ ನಮ್ಮ ನಾಯಕರು ಮಾತನಾಡಿದಾಗ ಅವರಿಗೆ ನೋಟಿಸ್ ಕೊಟ್ಟರು. ಇದೇ ರೀತಿ ಬಿಜೆಪಿಯ ನಾಯಕರಾದ ಯತ್ನಾಳ್ ಹಾಗೂ ವಿಶ್ವನಾಥ್ ಅವರೂ ಭ್ರಷ್ಟಾಚಾರ ಆರೋಪ ಮಾಡಿದಾಗ ಅವರಿಗೆ ಯಾಕೆ ನೋಟಿಸ್ ನೀಡಲಿಲ್ಲ? ಅವರ ವಿಚಾರಣೆ ನಡೆಸಿ ಮಾಹಿತಿ ಪಡೆಯಲಿಲ್ಲ ಯಾಕೆ? ಈ ಪ್ರಕರಣದಲ್ಲಿ ಪ್ರಭಾವಿ ಸಚಿವರು, ಅಧಿಕಾರಿಗಳ ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿದೆ. ಅವರು ಪ್ರಾಮಾಣಿಕ ಅಧಿಕಾರಿಗಳಾಗಿದ್ದರೆ ಬಂಧಿತರನ್ನು ನ್ಯಾಯಾಲಯದ ಮುಂದೆ ನಿಲ್ಲಿಸಿ ಸೆಕ್ಷನ್ 164ರ ಪ್ರಕಾರ ಹೇಳಿಕೆ ಸಂಗ್ರಹಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ | ‌Covid 19 | ಕೋವಿಡ್ ವಿಚಾರದಲ್ಲಿ ಹಣ ದುರುಪಯೋಗ ಆಗಿದ್ದರೆ ತನಿಖೆ ನಡೆಸಿ: ಸಿಎಂಗೆ ಡಿಕೆಶಿ ಸವಾಲು

Exit mobile version