ಮಂಡ್ಯ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಮತ್ತು ರಮೇಶ್ ಜಾರಕಿಹೊಳಿ (Ramesh Jarakiholi) ನಡುವಿನ ಸಂಘರ್ಷ ಇನ್ನಷ್ಟು ಹೆಚ್ಚುವ ಲಕ್ಷಣಗಳು ಕಾಣಿಸಿವೆ. ಡಿ.ಕೆ. ಶಿವಕುಮಾರ್ ಅವರನ್ನು ಸಿ.ಡಿ ಮಾಸ್ಟರ್ ಎಂದು ಕರೆದಿರುವ ಜಾರಕಿಹೊಳಿ ವಿರುದ್ಧ ಡಿಕೆಶಿ ಆಪ್ತರು ತಿರುಗಿಬಿದ್ದಿದ್ದಾರೆ. ಅದರಲ್ಲಿ ರಮೇಶ್ ಜಾರಕಿಹೊಳಿ ಅವರು ಆಪರೇಷನ್ ಕಮಲ (Operation Kamala) ನಡೆಸಲು ಪ್ಲ್ಯಾನ್ ಮಾಡಿದ್ದಾರೆ ಎಂದು ಆರೋಪಿಸಿದ್ದ ಮಂಡ್ಯದ ಕಾಂಗ್ರೆಸ್ ಶಾಸಕ ರವಿ ಗಣಿಗ (MLA Ravi Ganiga) ಮುಂಚೂಣಿಯಲ್ಲಿದ್ದಾರೆ.
ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು ಡಿ.ಕೆ.ಶಿ ವಿರುದ್ಧ ಹರಿಹಾಯ್ದಿದ್ದರು. ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಬೆಳಗಾವಿಯಿಂದಲೇ ಮತ್ತೊಮ್ಮೆ ಮುನ್ನುಡಿ ಬರೆಯಲಾಗುತ್ತದೆ ಎಂದಿದ್ದರು. ಇದಕ್ಕೆ ಡಿ.ಕೆ. ಶಿವಕುಮಾರ್ ಬಣ ತೀವ್ರವಾಗಿ ಪ್ರತಿಕ್ರಿಯಿಸಿದೆ.
ಬೆಡ್ ಮೇಲೆ ನಾವು ಮಲಗಲು ಹೋಗಿದ್ವಾ?
ಡಿ.ಕೆ. ಶಿವಕುಮಾರ್ ಅವರನ್ನು ಸಿ.ಡಿ. ಮಾಸ್ಟರ್ ಅಂತ ಹೇಳುವ ರಮೇಶ್ ಜಾರಕಿಹೊಳಿ ಬೆಡ್ ಮೇಲೆ ಮಲಗಿದ್ದಕ್ಕೇ ಅಲ್ವಾ ಸಿಡಿ ಆಗಿರುವುದು ಎಂದು ಪ್ರಶ್ನೆ ಮಾಡಿದ್ದಾರೆ ಗಣಿಗ ರವಿ. ʻʻಮಾಡಿರೋನು ಯಾರೋ ತೋರಿಸಿರೋನು ಯಾರೋ ಅದಕ್ಕೂ ನನಗೂ ಏನ್ ಸಂಬಂಧʼʼ ಎಂದು ಕೇಳಿದ್ದಾರೆ.
ʻʻಡಿಕೆಶಿ ಅವರಿಗೆ ಬ್ಲಾಕ್ ಮೇಲ್ ಮಾಡೋ ದರ್ದು ಏನೂ ಇಲ್ಲ. ಅವರು ಹೋಗಿ ಎಲ್ಲಾದ್ರು ಬೆಡ್ ಮೇಲೆ ಮಲಗಿದ್ರಾ? ಹೋಗಿದ್ದವರದ್ದನ್ನ ತೋರಿಸಿದ್ದಾರೆ. ನಿಮ್ದನ್ನು ನೀವೇ ತೋರಿಸಿದ್ದೀರಲ್ವಾʼʼ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ʻʻಹೀಗೆ ಮಾತಾಡಿ ಮಾತಾಡಿಯೇ ಅವರು ಮಾಜಿ ಆಗಿರೋದು. ನಾವು ಅಧಿಕಾರಕ್ಕೆ ಬಂದಿರೋದು. ಡಿಸಿಎಂ ಅವರನ್ನ ಜೈಲಿಗೆ ಕಳುಹಿಸ್ತೀನಿ. ಅವರನ್ನು ಮಾಜಿ ಮಾಡ್ತೀನಿ ಅಂತೆಲ್ಲ ಹುಚ್ಚುಚ್ಚಾಗಿ ಮಾತನಾಡಬಾರದು. ಏಳೂ ಜನ್ಮ ಎತ್ತಿ ಬಂದ್ರೂ ಡಿಕೆಶಿ ಅವರನ್ನ ಮತ್ತೆ ಮಾಜಿ ಮಾಡಲು ಆಗಲ್ಲ, ಜೈಲಿಗೆ ಕಳುಹಿಸೊಕ್ಕೂ ಆಗಲ್ಲʼʼ ಎಂದು ಹೇಳಿದರು ಕೈ ಶಾಸಕ.
ʻʻನಮ್ಮ ಶಾಸಕರಲ್ಲಿ ಯಾವುದೇ ಅಸಮಾಧಾನ ಇಲ್ಲ. 137 ಜನ ಶಾಸಕರು ಎಲ್ಲರೂ ಜೊತೆಗೇ ಇದ್ದೀವಿ. ನಾವೆಲ್ಲಾ ಸಂತೋಷವಾಗಿದ್ದೀವಿ. ವಿರೋಧ ಪಕ್ಷದವರು ಅಧಿಕಾರ ಕಳ್ಕೊಂಡು ಇನ್ನೂ ನಾಲ್ಕು ತಿಂಗಳಾಗಿದೆ ಅಷ್ಟೆ. ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ರಮೇಶ್ ಜಾರಕಿಹೊಳಿಗಂತೂ ಹುಚ್ಚೇ ಹಿಡಿದಿದೆʼʼ ಎಂದು ಹೇಳಿದರು.
ಜಾರಕಿಹೊಳಿ ಯಾರಿಗೆ ಆಫರ್ ಕೊಟ್ರೋ ಅದರ ಸಾಕ್ಷ್ಯ ಇದೆ
ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ಏರ್ ಪೋರ್ಟ್‌ನಲ್ಲಿ ಯಾವ ಕಾಂಗ್ರೆಸ್ ಶಾಸಕರಿಗೆ ಆಫರ್ ಕೊಟ್ರೊ ಅವರು ಕೈ ಮುಗಿದು ಎದ್ದು ಹೋಗಿರುವ ಸಾಕ್ಷಿ ನಮ್ಮ ಬಳಿ ಇದೆ. ಅದೇ ಶಾಸಕರು ಆ ವಿಷಯವನ್ನು ನಮ್ಮ ಸಿಎಂ ಮತ್ತು ಡಿಸಿಎಂ ಬಳಿ ಹೇಳಿದ್ದಾರೆ. ಇದನ್ನೆಲ್ಲ ಮುಂದಿನ ದಿನಗಳಲ್ಲಿ ಸಾಕ್ಷಿ ಸಮೇತ ರಾಜ್ಯದ ಜನರ ಮುಂದೆ ಇಡ್ತೀವಿʼʼ ಎಂದು ಹೇಳಿದ ಮಂಡ್ಯದ ಶಾಸಕ ರವಿ ಗಣಿಗ, ʻʻಯಾವುದೇ ಆಪರೇಷನ್ ಕಮಲ ಕೈಗೂಡಲ್ಲ. ತಿರುಕನ ಕನಸು ಕಾಣೋದನ್ನು ಆ ಮೂರು ಜನರು ಬಿಡಬೇಕುʼʼ ಎಂದರು.
ಇದನ್ನೂ ಓದಿ: Operation Kamala: ಬೆಳಗಾವಿಯಿಂದಲೇ ಸರ್ಕಾರ ಪತನಕ್ಕೆ ಮುನ್ನುಡಿ; ರಮೇಶ್ ಜಾರಕಿಹೊಳಿ ಭವಿಷ್ಯ
ಡಿ.ಕೆ. ಕಾಲು ಹಿಡಿಯಲು ಬಂದಿದ್ದ ರಮೇಶ್ ಜಾರಕಿಹೊಳಿ
ʻʻನೂರು ಜನ ರಮೇಶ್ ಜಾರಕಿಹೊಳಿ ಬಂದ್ರು ಡಿಕೆಶಿನ ಟಚ್ ಮಾಡಕ್ಕಾಗಲ್ಲʼʼ ಎಂದು ಹೇಳಿದ ರವಿ ಗಣಿಗ, ಇದೇ ರಮೇಶ್ ಜಾರಕಿಹೊಳಿ ಚುನಾವಣಾ ಪೂರ್ವದಲ್ಲಿ ಡಿಕೆಶಿ ಕಾಲು ಹಿಡಿಯಲು ಬಂದಿದ್ದʼʼ ಎಂದು ಏಕವಚನದಲ್ಲಿ ದಾಳಿ ಮಾಡಿದರು.
ಒಕ್ಕಲಿಗ ನಾಯಕತ್ವ ನಾಶಕ್ಕೆ ಈ ಪ್ರಯತ್ನ ಎಂದ ರವಿ ಗಣಿಗ
ʻʻ ಒಕ್ಕಲಿಗರ ನಾಯಕತ್ವವನ್ನ ಕಿಲ್ ಮಾಡಬೇಕು, ಡಿಕೆಶಿ ಅವರನ್ನ ಅಸ್ಥಿರಗೊಳಿಸಬೇಕು ಎಂದು ರಮೇಶ್ ಜಾರಕಿಹೊಳಿ ಟೀಂ ಹಾಗೂ ಹಳೇ ಮೈಸೂರು ಭಾಗದ ಟೀಂ ಕೆಲಸ ಮಾಡುತ್ತಿದೆ. ಇದು ಕೈಗೂಡಲ್ಲ. ಡಿಕೆ ಶಿವಕುಮಾರ್ ಕಾನೂನು ಬದ್ದವಾಗಿ ವ್ಯಾಪಾರ ಮಾಡಿದ್ದಾರೆ. ಡಿ ಕೆ ಶಿವಕುಮಾರ್ ಅವರನ್ನ ಜೈಲಿಗೆ ಕಳುಸಲು ಏಳು ಜನ್ಮ ಎತ್ತಿಬಂದರು ಸಾಧ್ಯವಿಲ್ಲʼʼ ಎಂದರು.