Site icon Vistara News

Karnataka Election: ಬಜರಂಗದಳ ನಿಷೇಧ ಭರವಸೆ; ಒಂಟಿಯಾದ್ರಾ ಡಿಕೆಶಿ? ಉಳಿದ ನಾಯಕರಿಂದೇಕೆ ಸಿಗುತ್ತಿಲ್ಲ ಬೆಂಬಲ?

DK Shivakumar the president of KPCC is only depending bajrang dal ban issue

ಬೆಂಗಳೂರು, ಕರ್ನಾಟಕ: ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಬಜರಂಗದಳ ಮತ್ತು ಪಿಎಫ್ಐಗಳಂಥ ಸಂಘಟನೆಗಳನ್ನು ನಿಷೇಧಿಸುವ ಭರವಸೆಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು. ಈ ಭರವಸೆ ಮಾತ್ರ ಕಾಂಗ್ರೆಸ್‌ಗೆ ಕಂಟಕವಾಗುತ್ತಿದ್ದರೆ, ಬಿಜೆಪಿಗೆ ಕೊನೆಗಳಿಗೆಯಲ್ಲಿ ಪ್ರತ್ಯಸ್ತ್ರ ದೊರೆತಿದೆ. ಹಾಗೆ ನೋಡಿದರೆ, ಬಜರಂಗದಳ ನಿಷೇಧ ಹಾಗೂ ಬಜರಂಗಬಲಿಗೂ ಯಾವುದೇ ಸಂಬಂಧವಿಲ್ಲವಾದರೂ, ಪ್ರಧಾನಿ ಮೋದಿ ಅವರು ಪ್ರಚಾರಸಭೆಗಳಲ್ಲಿ ಜೈ ಬಜರಂಗ ಬಲಿ ಘೋಷಣೆಗಳನ್ನು ಕೂಗಿಸುವ ಮೂಲಕ, ಕಾಂಗ್ರೆಸ್ ಹನುಮಾನನಿಗೆ ಅವಮಾನ ಮಾಡುತ್ತಿದೆ ಎಂಬ ಸಂದೇಶನ್ನು ರವಾನಿಸುತ್ತಿದ್ದಾರೆ. ಇದರಿಂದ ಕೊಂಚ ಕೆಂಗೆಟ್ಟಿರುವ ಕಾಂಗ್ರೆಸ್ ನಾಯಕರು, ಪಕ್ಷ ಘೋಷಿಸಿದ ಭರವಸೆಯನ್ನು ಸಾರ್ವಜನಿಕ ಸಮರ್ಥಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರೊಬ್ಬರೇ ಎಲ್ಲದಕ್ಕೂ ಉತ್ತರಿಸುತ್ತಿದ್ದಾರೆ(Karnataka Election 2023).

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು ಗುರುವಾರ ಬೆಳಗ್ಗೆ ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿ ಮಾಡಿ, ಬಿಜೆಪಿಯ ನಾಯಕ ಕೆ ಎಸ್ ಈಶ್ವರಪ್ಪ ಅವರು ಕಾಂಗ್ರೆಸ್‌ ಪ್ರಣಾಳಿಕೆಯನ್ನು ಸುಟ್ಟಿದ್ದು ರಾಜ್ಯದ ಜನರಿಗೆ ಮಾಡಿದ ಅವಮಾನ ಎಂದು ಹೇಳಿದರು. ಬಜರಂಗದಳ ನಿಷೇಧ ಕುರಿತು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ರಾಜ್ಯದ ಉಸ್ತುವಾರಿಯಾಗಿರುವ ರಣದೀಪ್ ಸುರ್ಜೇವಾಲಾ ಅವರು ಉತ್ತರಿಸುತ್ತಾರೆಂದರಷ್ಟೇ. ಬಹಿರಂಗವಾಗಿ ತೀರಾ ಸಮರ್ಥನೆಗೆ ಹೋಗಲಿಲ್ಲ.

ಮತ್ತೊಂದೆಡೆ, ಕಾಂಗ್ರೆಸ್‌ನ ಹಿರಿಯ ನಾಯಕರಾಗಿರುವ ಆರ್ ವಿ ದೇಶಪಾಂಡೆ ಕೂಡ, ಯಾವುದೇ ಸರ್ಕಾರವು ಒಂದು ಸಂಘಟನೆಯನ್ನು ಹಿಂದೆ ಮುಂದೆ ಯೋಚಿಸದೇ ಬ್ಯಾನ್ ಮಾಡಲು ಸಾಧ್ಯವಿಲ್ಲ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೊರತು, ನಾಳೆ ಸರ್ಕಾರ ಬಂದ ಕೂಡಲೇ ನಿಷೇಧ ಮಾಡುತ್ತೇವೆ ಎಂದಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಆದಿಯಾಗಿ ರಾಜ್ಯದ ನಾಯಕರಾರು ತೀರಾ ಈ ವಿಷಯದ ಗೋಜಿಗೆ ಹೋಗುತ್ತಿಲ್ಲ. ದಿಲ್ಲಿಯಿಂದ ಬಂದ ನಾಯಕರು ಮಾತ್ರ ಬಜರಂಗದಳ ನಿಷೇಧ ಭರವಸೆಗೂ ಮತ್ತು ಹನುಮಾನ್ ಭಕ್ತರಿಗೂ ಸಂಬಂಧವಿಲ್ಲ ಎಂಬುದನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ.

ಒಂಟಿಯಾದ್ರಾ ಡಿ ಕೆ ಶಿವಕುಮಾರ್?

ಪ್ರಣಾಳಿಕೆ ಬಿಡುಗಡೆಯಾದಾಗಿನಿಂದಲೂ ಬಜರಂಗದಳ ನಿಷೇಧ ಭರವಸೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಮರ್ಥಿಸಿಕೊಂಡು ಬಂದಿದ್ದಾರೆ. ಎರಡು ದಿನದ ಹಿಂದೆ ಯಾವುದೇ ಕಾರಣಕ್ಕೂ ಬಜರಂಗದಳ ನಿಷೇಧ ಭರವಸೆ ವಾಪಸ್ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಗುರುವಾರ ಮೈಸೂರಿಗೆ ಆಗಮಿಸಿದ್ದ ಡಿ ಕೆ ಶಿವಕುಮಾರ್, ಬಜರಂಗದಳ ಮತ್ತು ಹನುಮಾನ್‌ ಅವರಿಗೂ ಏನು ಸಂಬಂಧ, ಇಬ್ಬರ ಮಧ್ಯೆ ವ್ಯತ್ಯಾಸ ಇಲ್ಲವೇ ಎಂದು ಪ್ರಶ್ನಿಸಿದ್ದರು. ಅಲ್ಲದೇ, ಹನುಮಾನ್ ಪ್ರತಿಮೆ ನಿರ್ಮಾಣ ಸೇರಿದಂತೆ ಪ್ರತಿ ಗ್ರಾಮದಲ್ಲೂ ಹನುಮಾನ್ ಹೆಸರಿನಲ್ಲಿ ಗರಡಿ ಮನೆಗಳ ನಿರ್ಮಾಣ ಮಾಡುವ ಭರವಸೆ ನೀಡುತ್ತಿದ್ದಾರೆ. ಶಿವಕುಮಾರ್ ಅವರು ತೋರಿಸುತ್ತಿರುವ ಆಸಕ್ತಿ ಅಥವಾ ಬಜರಂಗದಳ ನಿಷೇಧ ಭರವಸೆಯನ್ನು ಬೆಂಬಲಿಸಿಕೊಳ್ಳಲು ಇತರ ನಾಯಕರು ಹೋಗುತ್ತಿಲ್ಲ.

ನಿಷೇಧ ಇಲ್ಲ ಎಂದ ವೀರಪ್ಪ ಮೊಯ್ಲಿ

ಮಾಜಿ ಮುಖ್ಯಮಂತ್ರಿಯೂ ಆಗಿರುವ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಅವರು, ”ನಮ್ಮ ಪ್ರಣಾಳಿಕೆಯಲ್ಲಿ ನಾವು ಎರಡೂ ಸಂಘಟನೆಗಳನ್ನು ಅಂದರೆ ಬಜರಂಗದಳ ಮತ್ತು ಪಿಎಫ್ಐ ಹೆಸರಿಸಿದ್ದೇವೆ. ಇದು ಎಲ್ಲ ಸಮಾಜವಿರೋಧಿ ಸಂಘಟನೆಗಳಿಗೆ ಅನ್ವಯಿಸುತ್ತದೆ. ಯಾವುದೇ ಸಂಘಟೆಯನ್ನು ನಿಷೇಧ ಮಾಡುವುದು ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲ. ಹಾಗಾಗಿ, ಬಜರಂಗದಳವನ್ನು ಕರ್ನಾಟಕ ನಿಷೇಧ ಮಾಡಲು ಸಾಧ್ಯವಿಲ್ಲ” ಎಂದು ಉಡುಪಿಯಲ್ಲಿ ಹೇಳಿದ್ದಾರೆ.

ಸಿದ್ದು, ಡಿಕೆಶಿ ಸಲಹೆಗೆ ಸುರ್ಜೇವಾಲಾ ಬ್ರೇಕ್ ಹಾಕಿದ್ರಾ?

ಬಜರಂಗದಳ ನಿಷೇಧ ಪ್ರಸ್ತಾಪವನ್ನು ಪ್ರಣಾಳಿಕೆಯಿಂದ ವಾಪಸ್ ಪಡೆಯುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ. ಆದರೆ, ರಾಜ್ಯ ಕಾಂಗ್ರೆಸ್ ‌ ಉಸ್ತುವಾರಿ ಹೊತ್ತಿರುವ ರಣದೀಪ್ ಸುರ್ಜೆವಾಲಾ ಅವರು ಮಾತ್ರ ಇದಕ್ಕೆ ಒಪ್ಪಿಲ್ಲ ಎನ್ನಲಾಗಿದೆ(Karnataka Election 2023).

ಬಜರಂಗದಳ ನಿಷೇಧ ಭರವಸೆ ಹುಟ್ಟು ಹಾಕಿರುವ ವಿವಾದ ಕುರಿತು ಬುಧವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಚರ್ಚಿಸಿದ್ದಾರೆ. ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಬಜರಂಗದಳ ನಿಷೇಧ ಭರವಸೆಯನ್ನು ವಾಪಸ್ ಪಡೆಯುವ ಬಗ್ಗೆ ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ.

ಇದನ್ನೂ ಓದಿ: Karnataka Election 2023: ಬಜರಂಗದಳ ಬಿಜೆಪಿಯದ್ದೇ ಸಂಘಟನೆ ಎಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಆದರೆ, ಬಜರಂಗದಳ ನಿಷೇಧ ಭರವಸೆಯನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದು ಎಂದು ರಾಜ್ಯ ಉಸ್ತುವಾರಿ ಹೊಣೆ ಹೊತ್ತಿರುವ ನಾಯಕ ರಣದೀಪ್ ಸುರ್ಜೇವಾಲಾ ಪಟ್ಟು ಹಿಡಿದರು ಎಂದು ಗೊತ್ತಾಗಿದೆ. ಈ ಕುರಿತು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಸುರ್ಜೇವಾಲಾ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದೆ ಆಗುವ ಪರಿಣಾಮಗಳಿಗೆ ನೀವೇ ಜವಾಬ್ದಾರಿ ಆಗ್ತೀರಾ ಎಂದು ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಎಚ್ಚರಿಸಿದ್ದಾರೆ ಎಂದು ಹೇಳಿದ್ದಾರೆ. ಈ ವಿಷಯವನ್ನು ರಾಹುಲ್ ಗಾಂಧಿ ಅವರ ಗಮನಕ್ಕೆ ತರುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.

Exit mobile version