ನವ ದೆಹಲಿ: ʻನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ (DK Shivakumar resignation) ಕೊಡ್ತೇನೆ ಅಂತೆಲ್ಲ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಅದೆಲ್ಲವೂ ಸುಳ್ಳು. ಕಾಂಗ್ರೆಸ್ ಪಕ್ಷ (Congress party) ನನ್ನ ತಾಯಿ ಇದ್ದ ಹಾಗೆ. ಈಗ ಗೆದ್ದಿರುವ ಎಲ್ಲ 135 ಶಾಸಕರು ಕೂಡಾ ನನ್ನವರು. ಈ ರೀತಿ ವದಂತಿಗಳನ್ನು ಹಬ್ಬಿಸುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ (Defamation suit) ಹಾಕುತ್ತೇನೆʼʼ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar ಗುಡುಗಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷದಲ್ಲಿ ಈಗ ಮುಖ್ಯಮಂತ್ರಿ ಸ್ಥಾನದ ಬಿಕ್ಕಟ್ಟು ತಲೆದೋರಿದ್ದು, ಇದರ ಬಗ್ಗೆ ವಿಸ್ತೃತ ಮುಖಾಮುಖಿ ಚರ್ಚೆಗಾಗಿ ಡಿ.ಕೆ. ಶಿವಕುಮಾರ್ ಅವರು ದಿಲ್ಲಿಯಲ್ಲಿದ್ದಾರೆ. ಬೆಂಗಳೂರಿನಿಂದ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು ತಮ್ಮ ಸೋದರ, ಸಂಸದ ಡಿ.ಕೆ. ಸುರೇಶ್ ಅವರ ನಿವಾಸಕ್ಕೆ ತೆರಳಿ, ಅಲ್ಲಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಉನ್ನತ ಮಟ್ಟದ ಚರ್ಚೆಗೆ ಹೋಗುವ ವೇಳೆ ಮಾಧ್ಯಮಗಳನ್ನು ಕಂಡು ಗರಂ ಆಗಿ ಈ ಮಾತು ಹೇಳಿದರು.
ಕೆಲವರು ನಾನು ಪಕ್ಷಕ್ಕೆ ರಾಜೀನಾಮೆ ಕೊಡುತ್ತೇನೆ ಎಂದೆಲ್ಲ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ನಾನು ಕಟ್ಟಿದ ಪಕ್ಷ ಇದು. ನನ್ನ ತಾಯಿ ಈ ಪಕ್ಷ. ಯಾವ ಕಾರಣಕ್ಕೂ ರಾಜೀನಾಮೆ ನೀಡುವ ಯೋಚನೆಯೇ ಇಲ್ಲ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವವರನ್ನು ಬಿಡುವುದಿಲ್ಲ ಎಂದು ಹೇಳಿದರು ಡಿ.ಕೆ.ಶಿವಕುಮಾರ್.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದಿದ್ದರೆ ಬಿಜೆಪಿ 66 ಸ್ಥಾನಗಳನ್ನು ಪಡೆದಿದೆ. ಜೆಡಿಎಸ್ 19 ಸ್ಥಾನಗಳಲ್ಲಿ ವಿಜಯಿಯಾಗಿದೆ. ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಇತರರು ಗೆದ್ದಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಪ್ರಬಲ ಸ್ಪರ್ಧೆ ಇದೆ. ಹೈಕಮಾಂಡ್ ನಾಯಕರ ಸೂಚನೆಯಂತೆ ಸಿದ್ದರಾಮಯ್ಯ ಅವರು ಸೋಮವಾರವೇ ದಿಲ್ಲಿ ತಲುಪಿದ್ದರು. ಆದರೆ, ಅನಾರೋಗ್ಯದ ಕಾರಣದಿಂದ ಡಿ.ಕೆ. ಶಿವಕುಮಾರ್ ಅವರಿಗೆ ಸೋಮವಾರದ ಸಭೆಗೆ ಹೋಗಲು ಆಗಿರಲಿಲ್ಲ. ಹೀಗಾಗಿ ಸೋಮವಾರ ಸಂಜೆ ನಿಗದಿಯಾಗಿದ್ದ, ಹೈಕಮಾಂಡ್ ನಾಯಕರ ಎದುರೇ ನಡೆಯಬೇಕಾಗಿದ್ದ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಮುಖಾಮುಖಿ ಮುಂದಕ್ಕೆ ಹೋಗಿತ್ತು.
ಮಂಗಳವಾರ ಬೆಳಗ್ಗೆ ಸ್ವತಃ ರಾಹುಲ್ ಗಾಂಧಿ ಅವರೇ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಆಗಮಿಸಿ ಅಲ್ಲಿ ಖರ್ಗೆ ಮತ್ತು ರಣದೀಪ್ ಸುರ್ಜೇವಾಲಾ ಜತೆಗೆ ಮಹತ್ವದ ಮಾತುಕತೆ ನಡೆಸಿದ್ದರು. ಬಳಿಕ ಇಬ್ಬರು ನಾಯಕರ ಮುಖಾಮುಖ ಮಾತುಕತೆ ಸಂಜೆ ಐದಕ್ಕೆ ನಿಗದಿಯಾಗಿದೆ.
ಅದಕ್ಕಿಂತ ಮೊದಲು ದಿಲ್ಲಿಗೆ ತೆರಳುವ ಮೊದಲು ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. ಶಿವ ಕುಮಾರ್ ಅವರು, ನನಗೆ ಪಕ್ಷವೇ ದೇವರು, ಪಕ್ಷವೇ ತಾಯಿ. ತಾಯಿ ಯಾವತ್ತೂ ಮಕ್ಕಳ ಕೈಬಿಡುವುದಿಲ್ಲ ಎಂದು ಭಾವುಕರಾಗಿ ಹೇಳಿದ್ದರು. ಹೈಕಮಾಂಡ್ ಏನು ಹೇಳಿದರೂ ಅದನ್ನು ಒಪ್ಪಲು ನಾನು ಸಿದ್ಧನಾಗಿದ್ದೇನೆ ಎಂದು ಹೇಳುವ ಮೂಲಕ ಅವರು ಪಕ್ಷದ ಪೂಜಕ ನಾನು ಎಂದು ಮತ್ತೆ ಮತ್ತೆ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: Karnataka Election : ಪಕ್ಷ ನನಗೆ ದೇವರು, ಹೇಳಿದಂತೆ ಕೇಳುವೆ; ಸಿಎಂ ಪಟ್ಟು ಬಿಟ್ಟು ಕೊಟ್ಟರಾ ಡಿಕೆಶಿ?