ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರಮುಖ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ, ಫ್ರೀಡಂ ಮಾರ್ಚ್‌ನಲ್ಲೂ ಮುಂದುವರಿದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಸ್ವಾತಂತ್ರ್ಯದ 75ನೇ ವರ್ಷಾಚರಣೆ ಪ್ರಯುಕ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಬಸವನಗುಡಿಯ ನ್ಯಾಷನಲ್ ಕಾಲೇಜುವರೆಗೆ ಫ್ರೀಡಂ ಮಾರ್ಚ್ ಆಯೋಜಿಸಲಾಗಿತ್ತು. ಸುಮಾರು ಎರಡೂವರೆ ಗಂಟೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಸೇರಿ ಅನೇಕ ನಾಯಕರು ಭಾಗವಹಿಸಿದ್ದರು. ಸಂಜೆ 5.15ರ ವೇಳೆಗೆ ರ‍್ಯಾಲಿ, ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನವನ್ನು ತಲುಪಿತು.
ದಾರಿಯುದ್ದಕ್ಕೂ ರಾಷ್ಟ್ರಧ್ವಜವನ್ನು ಹಿಡಿದ ಕಾಂಗ್ರೆಸ್ ಕಾರ್ಯಕರ್ತರು, ವಿದ್ಯಾರ್ಥಿಗಳು, ದೇಶಭಕ್ತಿ ಡಿಜೆಗಳಿಗೆ ಹೆಜ್ಜೆ ಹಾಕಿದರು. ಮೈದಾನಕ್ಕೆ ತಲುಪುತ್ತಿದ್ದಂತೆ, ನಡಿಗೆಯ ಸಂಪೂರ್ಣ ದಣಿವನ್ನು ಡಿ.ಕೆ. ಶಿವಕುಮಾರ್ ಮರೆತು ಗೆಲುವಿನ ನಗೆ ಬೀರಿದರು.
ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವಾಗ, ವೇದಿಕೆಯೆದುರು ಕುಳಿತಿದ್ದ ಎಲ್ಲ ಕಾಂಗ್ರೆಸ್ ನಾಯಕರನ್ನೂ ಮಾತನಾಡಿಸುತ್ತಾ ಸಾಗಿದರು. ಈ ಸಮಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆಯಿತು.
ಪ್ರಾರಂಭದಲ್ಲಿ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅವರು ಸಿಕ್ಕರು. ಅವರ ಕಾಲನ್ನು ಮುಟ್ಟಿದ ಡಿ.ಕೆ. ಶಿವಕುಮಾರ್, ಆಶೀರ್ವಾದ ಪಡೆದರು. ನಂತರ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಹ್ಯಾಂಡ್ ಶೇಕ್ ಮಾಡಿದರು. ಪಾಟೀಲ್ ಪಕ್ಕ ಕುಳಿತಿದ್ದ ಸಿದ್ದರಾಮಯ್ಯ ಅವರತ್ತ ನೋಡಿದ ಶಿವಕುಮಾರ್, ಕೈಕುಲುಕಿ ಮುಂದೆ ಸಾಗಿದರು. ಸಿದ್ದರಾಮಯ್ಯ ಅವರ ನಂತರ ಕುಳಿತಿದ್ದ ದಿನೇಶ್ ಗುಂಡೂರಾವ್ ಅವರ ಕೈಕುಲುಕಿದ ಶಿವಕುಮಾರ್, ನಂತರ ಕುಳಿತಿದ್ದ ಮಾಜಿ ಸಚಿವ ಡಾ. ಜಿ. ಪರಮೇಶ್ವರ್(71) ಕಾಲಿಗೆ ನಮಸ್ಕರಿಸಿದರು, ನಂತರ ಇದ್ದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್(68) ಕಾಲಿಗೂ ನಮಸ್ಕರಿಸಿದರು.
ಡಿ.ಕೆ. ಶಿವಕುಮಾರ್ ಅವರು ಕಾಲಿಗೆ ನಮಸ್ಕರಿಸಿದ ಆರ್. ವಿ. ದೇಶಪಾಂಡೆ ಅವರು ಸಿದ್ದರಾಮಯ್ಯ ಅವರಷ್ಟೇ (75) ವಯಸ್ಸಿನವರಾಗಿದ್ದು, ಡಾ. ಜಿ. ಪರಮೇಶ್ವರ್ 71 ಹಾಗೂ ಹರಿಪ್ರಸಾದ್ 68 ವರ್ಷದವರು. ವಿಶೇಷವೆಂದರೆ, ಡಿ.ಕೆ. ಶಿವಕುಮಾರ್ ಅವರು ಕಾಲುಮುಟ್ಟಿ ನಮಸ್ಕರಿಸಿದ ಮೂವರೂ ಮೂಲ ಕಾಂಗ್ರೆಸಿಗರು.
ಇದನ್ನೂ ಓದಿ | ಸಿದ್ದರಾಮಯ್ಯ ಅದೇನು ಹೇಳುವರೋ ಬಿಚ್ಚಿಡಲಿ, ನಾನೂ ಬಿಚ್ಚಿಡುವೆ: ಸಚಿವ ಡಾ. ಕೆ. ಸುಧಾಕರ್