Site icon Vistara News

ಸಿದ್ದರಾಮಯ್ಯರಿಂದ ʼಮುನಿʼದವರ ಸಮಾಧಾನಕ್ಕೆ ಡಿ.ಕೆ. ಶಿವಕುಮಾರ್‌ ಪ್ರಯತ್ನ

dk shivakumar meets kh muniyappa

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದಾರೆ ಎಂದು ಮುನಿಸಿಕೊಂಡಿರುವ ಕೋಲಾರ ಶಾಸಕ ಹಾಗೂ ಕಾಂಗ್ರೆಸ್‌ ಹಿರಿಯ ಮುಖಂಡ ಕೆ.ಎಚ್‌. ಮುನಿಯಪ್ಪ ಅವರನ್ನು ಸಮಾಧಾನಪಡಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮುಂದಾಗಿದ್ದಾರೆ.

2018ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜತೆಗೆ ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ನಿರೀಕ್ಷೆಯಂತೆಯೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಜಿ.ಟಿ. ದೇವೇಗೌಡ ವಿರುದ್ಧ ಬಹು ಅಂತರದ ಸೋಲು ಕಂಡು, ಬಾದಾಮಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಕೇವಲ 1,696 ಮತಗಳ ಅಂತರದಲ್ಲಿ ಜಯಿಸಿ ನಿಟ್ಟುಸಿರು ಬಿಟ್ಟಿದ್ದರು.

ಇದೀಗ 2023ರ ಚುನಾವಣೆ ಹತ್ತಿರವಾಗುತ್ತಿರುವಂತೆ ಮತ್ತೆ ಕ್ಷೇತ್ರ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿವೆ. ಉತ್ತರ ಕರ್ನಾಟಕದಲ್ಲೆ ಸವದತ್ತಿ ಕ್ಷೇತ್ರ, ಬೆಂಗಳೂರಿನ ಚಾಮರಾಜಪೇಟೆ ಹಾಗೂ ಬೆಂಗಳೂರು ಸಮೀಪದ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವ ಕುರಿತು ಆಯ್ಕೆಗಳ ಪರಿಶೀಲನೆ ನಡೆಯುತ್ತಿದೆ ಎನ್ನಲಾಗಿದೆ. ಈ ಮೂರರಲ್ಲಿ ಹೆಚ್ಚು ಕೋಲಾರ ಹೆಸರು ಚಾಲ್ತಿಯಲ್ಲಿದ್ದು, ಈಗ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ ಪ್ರತಿನಿಧಿಸುತ್ತಿದ್ದಾರೆ.

ತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಅಡ್ಡಮತದಾನ ಮಾಡಿ ಕಾಂಗ್ರೆಸ್‌ ಕಡೆ ವಾಲಿದ್ದ ಶ್ರೀನಿವಾಸಗೌಡ ತಮ್ಮ ಸ್ಥಾನವನ್ನು ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಡಲು ಒಪ್ಪಿದ್ದಾರೆ ಎನ್ನಲಾಗಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೋಲಾರ ಭಾಗದ ಕಾಂಗ್ರೆಸ್‌ ಮುಖಂಡರ ಸಭೆಯನ್ನು ಮಂಗಳವಾರ ನಡೆಸಿದ್ದರು.

ಕೋಲಾರದಿಂದಲೇ ಸ್ಪರ್ಧೆಗೆ ಒತ್ತಾಯ

ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಮಂಗಳವಾರ ಭೇಟಿ ಮಾಡಿದ್ದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ನಾಯಕರು, ಕೋಲಾರದಿಂದ ಸ್ಪರ್ಧೆ ಮಾಡಿದರೆ ಎರಡು ಜಿಲ್ಲೆಗಳಿಗೂ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು. ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌ ನೇತೃತ್ವದಲ್ಲಿ ಆಗಮಿಸಿದ್ದ ನಾಯಕರು, ಸಾಕಷ್ಟು ಹೊತ್ತು ಚರ್ಚಿಸಿದರು. ನಜೀರ್ ಅಹಮದ್, ಕೃಷ್ಣಭೈರೇಗೌಡ, ನಂಜೇಗೌಡ, ನಾರಾಯಣ ಸ್ವಾಮಿ, ಶ್ರೀನಿವಾಸ ಗೌಡ ಸೇರಿ ಹಲವು ಮುಖಂಡರು ಭಾಗಿಯಾಗಿದ್ದ ಸಭೆಗೆ, ಈ ಭಾಗದ ಪ್ರಭಾವಿ ಕಾಂಗ್ರೆಸಿಗ ಹಾಗೂ ಕೋಲಾರ ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಅವರನ್ನು ಮಾತ್ರ ಹೊರಗಿಡಲಾಗಿತ್ತು.

ಮುನಿಯಪ್ಪ ಕೋಪ

ತಮ್ಮನ್ನು ಸಭೆಗೆ ಸೇರಿಸಿಕೊಳ್ಳದೆ ಯೋಜನೆ ಮಾಡುತ್ತಿದ್ದಾರೆ ಎಂದು ಮುನಿಯಪ್ಪ ಮುನಿಸಿಕೊಂಡಿದ್ದಾರೆ. ಇದೇ ಮೊದಲಲ್ಲ ಈ ಮುನಿಸು. ಇತ್ತೀಚೆಗೆ ನವದೆಹಲಿಯಲ್ಲಿ ಎರಡು ದಿನ ಸತತವಾಗಿ ರಾಹುಲ್‌ ಗಾಂಧಿ ಅವರೊಂದಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಸಭೆ ನಡೆಸಿದ್ದರು. ಈ ಸಭೆಯ ನಡುವೆಯೇ, ನವದೆಹಲಿಯಲ್ಲಿ ಕೊತ್ತೂರು ಮಂಜುನಾಥ್‌ ಹಾಗೂ ಡಾ. ಎಂ.ಸಿ. ಸುಧಾಕರ್‌ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಕೊತ್ತೂರು ಮಂಜುನಾಥ್‌ ಹಾಗೂ ಡಾ. ಎಂ.ಸಿ. ಸುಧಾಕರ್‌ ಇಬ್ಬರೂ ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಹಾಗೂ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಪರ ಪ್ರಚಾರ ನಡೆಸಿದ್ದರು ಎಂಬ ಕಾರಣಕ್ಕೆ ಇಬ್ಬರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲು ಮುನಿಯಪ್ಪ ಒಪ್ಪಿರಲಿಲ್ಲ. ಆದರೆ ನೇರವಾಗಿ ದೆಹಲಿಗೆ ಕರೆಯಿಸಿಕೊಂಡ ಸಿದ್ದರಾಮಯ್ಯ, ರಾಹುಲ್‌ ಗಾಂಧಿ ನೇತೃತ್ವದಲ್ಲೆ ಸೇರ್ಪಡೆ ಮಾಡಿಕೊಂಡಿದ್ದರು.

ಸುರ್ಜೇವಾಲಾ ಪ್ರತಿಕ್ರಿಯೆ

ಕೊತ್ತೂರು ಮಂಜುನಾಥ್‌ ಹಾಗೂ ಡಾ. ಎಂ.ಸಿ. ಸುಧಾಕರ್‌ ಅವರನ್ನು ದೆಹಲಿಯಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಇತ್ತ ಕರ್ನಾಟಕದಿಂದ ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶ ಮುಗಿಲುಮುಟ್ಟಿತ್ತು. ಅನೇಕ ಹಿರಿಯ ನಾಯಕರೂ ದೆಹಲಿ ಹೈಕಮಾಂಡ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಯಾರೋ ಇಬ್ಬರು ನಾಯಕರನ್ನು ಸೇರಿಸಿಕೊಳ್ಳೋಣ ಎಂದು ಫೋಟೊಗೆ ಪೋಸ್‌ ನೀಡಿದ್ದ ಸುರ್ಜೇವಾಲಗೆ ಆಗ ತಪ್ಪಿನ ಅರಿವಾಗಿತ್ತು. ನಂತರ ಇದಕ್ಕಾಗಿಯೇ ಒಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು. ಮಾಧ್ಯಮಗಳಿಂದ ಈ ಕುರಿತು ಸಾಕಷ್ಟು ಪ್ರಶ್ನೆಗಳು ಬರುತ್ತಿವೆ ಎಂದ ಸರ್ಜೆವಾಲ, ಮುನಿಯಪ್ಪ ಅವರು ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕರು ಹಾಗೂ ಅನುಭವ ಉಳ್ಳವರು. ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಿನ ಪ್ರಯತ್ನಕ್ಕಾಗಿ ಹಿಂದಿನ ಎಲ್ಲ ಕಹಿಯನ್ನೂ ಮರೆಯಲು ನಾವು ನಿರ್ಧರಿಸಿದ್ದೇವೆ. ಇದೇ ಕಾರಣಕ್ಕಾಗಿ ಕೊತ್ತೂರು ಮಂಜುನಾಥ್‌ ಹಾಗೂ ಡಾ. ಎಂ. ಸಿ. ಸುಧಾಕರ್‌ ಅವರನ್ನು ಸೇರ್ಪಡೆ ಮಾಡಿಕೊಂಡಿದ್ದೇವೆ. ಮುನಿಯಪ್ಪ ಹಾಗೂ ಇತರರೂ ಪಕ್ಷವನ್ನು ಸದೃಢಗೊಳಿಸುವ ಸಲುವಾಗಿಯೇ ತಮ್ಮ ಧ್ವನಿ ಎತ್ತುತ್ತಿದ್ದಾರೆ. ಬೊಮ್ಮಾಯಿ ಸರ್ಕಾರದ ದುರಾಡಳಿತವನ್ನು ಕೊನೆಗೊಳಿಸಲು ಪಕ್ಷದ ನಿರ್ಧಾರಕ್ಕೆ ಸಮ್ಮತಿ ವ್ಯಕ್ತಪಡಿಸಿದ ಮುನಿಯಪ್ಪ ಮತ್ತಿತರ ನಾಯಕರಿಗೆ ಧನ್ಯವಾದಗಳು ಎಂದು ಜೂನ್‌ 30ರಂದು ತಿಳಿಸಿದ್ದರು.

ರಮೇಶ್‌ಕುಮಾರ್‌ ಶಕುನಿ ಎಂದ ಮುನಿಯಪ್ಪ

ಬೆಂಗಳೂರಿನಲ್ಲಿ ಈ ಕುರಿತು ಬುಧವಾರ ಪ್ರತಿಕ್ರಿಯಿಸಿದ್ದ ಕೆ.ಎಚ್‌. ಮುನಿಯಪ್ಪ, ಕಳೆದ 28 ವರ್ಷಗಳಿಂದ ಸಂಸದನಾಗಿದ್ದು, 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನೆಂದು ಗುರುತಿಸಿಕೊಂಡಿದ್ದೇನೆ. ಅನೇಕರು ಪಕ್ಷ ಬಿಟ್ಟು ಮತ್ತೆ ಬಂದಿರುವ ಉದಾಹರಣೆಗಳಿವೆ. ಆದರೆ ನಾನು ಕಾಂಗ್ರೆಸ್‌ ಪಕ್ಷದಲ್ಲೇ ಗಟ್ಟಿಯಾಗಿ ನಿಂತಿದ್ದೇನೆ. ಯಾವುದೇ ಆತುರದ ನಿರ್ಧಾರವನ್ನು ಮಾಡುವುದಿಲ್ಲ.

ಕೆ.ಆರ್. ರಮೇಶ್‌ ಕುಮಾರ್ ಶಕುನಿ ಎಂಬುದನ್ನು ಮತ್ತೆ ಹೇಳುತ್ತೇನೆ. ಅವರು ಏಕಪಾತ್ರಾಭಿನಯ ಮಾಡುವುದರಲ್ಲಿ ಮೊದಲಿಗರು‌. ಹೈಕಮಾಂಡ್‌, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ಗೆ ಎಲ್ಲವನ್ನೂ ಸರಿಪಡಿಸುವಂತೆ ಒಂದು ತಿಂಗಳ ಗಡವು ನೀಡುತ್ತೇನೆ. ಕಳೆದ 50 ವರ್ಷಗಳಿಂದ ಕಾಂಗ್ರೆಸ್‌ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿದ ನನಗೆ ಒಂದು ಮಾತನ್ನೂ ಕೇಳದೆ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ಇವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರ ಬಗ್ಗೆ ನನಗೆ ಸ್ಪಷ್ಟೀಕರಣ ನೀಡಬೇಕು ಎಂದು ಮುನಿಯಪ್ಪ ತಾಕೀತು ಮಾಡಿದ್ದರು.

ಧ್ರುವನಾರಾಯಣ್‌ ಅಸಮಾಧಾನ

ಮುನಿಯಪ್ಪ ಹಾಗೂ ಕಾಂಗ್ರೆಸ್‌ ಪಕ್ಷದ ವಿರುದ್ಧವೇ ಕೆಲಸ ಮಾಡಿದ ಇಬ್ಬರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಮುನಿಯಪ್ಪ ಮಾತ್ರವಲ್ಲದೆ ಇನ್ನಿತರ ಕಾಂಗ್ರೆಸಿಗರೂ ಅಸಮಾಧಾನ ಹೊರಹಾಕುತ್ತಿದ್ದಾರೆ. ಮೈಸೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ, ಕೊತ್ತೂರು ಮಂಜುನಾಥ್, ಡಾ. ಎಂ. ಸಿ. ಸುಧಾಕರ್ ಸೇರಿದಂತೆ ಹಲವರು ನನ್ನ ಚುನಾವಣೆಯಲ್ಲಿ ವಿರುದ್ಧವಾಗಿ ಕೆಲಸ ಮಾಡಿದ್ದರು. ಅಂತಹವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಕೆ. ಹೆಚ್ ಮುನಿಯಪ್ಪ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ, ಅವರನ್ನು ಪಕ್ಷ ಬಿಡದಂತೆ ನೋಡಿಕೊಳ್ಳುತ್ತೇವೆ. ಇದು ಪಕ್ಷದ ಆಂತರಿಕ ವಿಚಾರ. ಈ ಬಗ್ಗೆ ಪಕ್ಷದ ಅಧ್ಯಕ್ಷರು, ಹಿರಿಯ ನಾಯಕರ ಜತೆ ಕುಳಿತು ಬಗೆಹರಿಸಲಿದ್ದೇವೆ ಎಂದಿದ್ದರು.

ಡಿ.ಕೆ. ಶಿವಕುಮಾರ್‌ ಸಭೆ

ಮುನಿಯಪ್ಪ ಮುನಿಸಿಕೊಳ್ಳುವಿಕೆ ಗಂಭೀರ ಸ್ವರೂಪ ಪಡೆಯುತ್ತಿರುವಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಎಚ್ಚೆತ್ತುಕೊಂಡಿದ್ದಾರೆ. ಕೂಡಲೆ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್‌ ಹಾಗೂ ಎಚ್‌.ಕೆ. ಪಾಟೀಲ್‌ ಅವರೊಂದಿಗೆ ಮುನಿಯಪ್ಪ ಅವರ ಮನೆಗೆ ಬುಧವಾರ ಸಂಜೆ ಭೇಟಿ ನೀಡಿದ್ದಾರೆ. ಅನೇಕ ಹೊತ್ತು ಮುನಿಯಪ್ಪ ಅಬರೊಂದಿಗೆ ಮಾತುಕತೆ ನಡೆಸಿದ್ದಾರೆ. ತಮ್ಮನ್ನು ಕೇಳದೆ ತಮ್ಮ ಕ್ಷೇತ್ರದಲ್ಲಿ ಸಂಘಟನಾತ್ಮಕ ನಿರ್ಧಾರ ಕೈಗೊಳ್ಳುತ್ತಿರುವುದಕ್ಕೆ ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಬಗೆಹರಿಸಿ ಇಲ್ಲವೇ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ಮುನಿಯಪ್ಪ ಹೇಳಿದ್ದಾರೆ ಎನ್ನಲಾಗಿದೆ. ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಲಾಗುತ್ತದೆ, ಆತುರದ ನಿರ್ಧಾರ ಬೇಡ ಎಂದು ಡಿ.ಕೆ. ಶಿವಕುಮಾರ್‌ ಸಮಾಧಾನಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುನಿಯಪ್ಪ ನಿಜವಾಗಲೂ ಸಮಾಧಾನವಾಗುತ್ತಾರೆಯೇ ಅಥವಾ ಕೋಲಾರ ಕೇಂದ್ರಿತವಾಗಿ ಮೂಲ ಕಾಂಗ್ರೆಸಿಗ ವರ್ಸಸ್‌ ವಲಸಿಗ ಕಾಂಗ್ರೆಸಿಗ ಚರ್ಚೆಗೆ ಮತ್ತೆ ಚಾಲನೆ ನೀಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ | ಸಿದ್ದರಾಮಯ್ಯ ʼಆಪ್ತʼರ ಲಿಸ್ಟ್‌ನಲ್ಲಿ ಡಿ.ಕೆ. ಶಿವಕುಮಾರ್‌‌ ಹೆಸರು ಇಲ್ಲ !

Exit mobile version