ಬೆಂಗಳೂರು: ಒಂದೆಡೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಯಂತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವತ್ತ ವಿವಿಧ ಆದೇಶಗಳನ್ನು ಮಾಡುತ್ತಿದ್ದರೆ ಮತ್ತೊಂದೆಡೆ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮದೇ ಮಾರ್ಗ ಅನುಸರಿಸುತ್ತಿದ್ದಾರೆ.
ಅಧಿವೇಶನದ ಸಮಯದಲ್ಲಿ ಬಿಜೆಪಿ ನಾಯಕರ ಜತೆಗೆ ಲಾಂಜ್‌ನಲ್ಲಿ ಸಮಯ ಕಳೆದ ಡಿ.ಕೆ. ಶಿವಕುಮಾರ್ ಅವರು ಮದ್ಯಾಹ್ನದ ನಂತರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿಯಾಗಿದ್ದಾರೆ. ಇದರ ಜತೆಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರನ್ನೂ ಭೇಟಿ ಮಾಡಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಇದರಿಂದ ಜೆಡಿಎಸ್ ಮತಗಳು ಕಾಂಗ್ರೆಸ್‌ಗೆ ಬಂದಿವೆ, ಒಕ್ಕಲಿಗರು ಡಿ.ಕೆ. ಶಿವಕುಮಾರ್ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ ಎಂಬ ಸಂದೇಶವನ್ನು ಕಾಂಗ್ರೆಸ್ ರವಾನೆ ಮಾಡುತ್ತಿದೆ. ಒಕ್ಕಲಿಗ ಸಮುದಾಯಕ್ಕೆ ಜೆಡಿಎಸ್ ಪಕ್ಷವೇ ಮೊದಲು ಎನ್ನುವಂತಿದ್ದದ್ದನ್ನು ತಮ್ಮ ಕಡೆಗೆ ತಿರುಗಿಸಿಕೊಳ್ಳಲು ಡಿ.ಕೆ. ಶಿವಕುಮಾರ್ ಪ್ರಯತ್ನ ಮುಂದುವರಿಸಿದ್ದಾರೆ.
ನಂತರ ಆದಿಚುಂಚನಗಿರಿ ಮಠಕ್ಕೆ ತೆರಳಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಕಾಲಭೈರವನ ದರ್ಶನವನ್ನೂ ಪಡೆದಿದ್ದಾರೆ.
ಒಕ್ಕಲಿಗ ಸಮುದಾಯಕ್ಕೆ ಸೇರಿದ ಆರ್. ಅಶೋಕ್ ಅವರ ಹೆಗಲ ಮೇಲೆ ಕೈಹಾಕಿ ಫೋಟೊಗೆ ಪೋಸ್ ನೀಡಿದ್ದ ಡಿ.ಕೆ. ಶಿವಕುಮಾರ್ ಅವರು ಈ ಮೂಲಕ ಸಮುದಾಯದ ಮುಂದಿನ ನಾಯಕ ತಾವೇ ಎಂಬ ಸಂದೇಶ ನೀಡಲು ಹೊರಟಿದ್ದಾರೆ. ಈಗ ಸಿಎಂ ಸ್ಥಾನ ಸಿಗದಿದ್ದರೂ ಭವಿಷ್ಯದಲ್ಲಿ ಅವಕಾಶವಿದೆ, ಆಗ ಒಕ್ಕಲಿಗ ಸಮುದಾಯದ ಏಳಿಗೆಗಾಯತ್ತದೆ ಎಂಬ ನಿರೀಕ್ಷೆಯನ್ನು ಸಮುದಾಯ ಹೊಂದುವಂತೆ ಮಾಡಲಾಗುತ್ತಿದೆ.
ಎಚ್.ಡಿ. ದೇವೇಗೌಡರನ್ನು ಭೇಟಿಯಾದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಕರ್ನಾಟಕ ರಾಜ್ಯದ ಅತಿದೊಡ್ಡ ಸೇವೆ, ಕೊಡುಗೆ ಕೊಟ್ಟಿದ್ದಾರೆ. ಅತಿದೊಡ್ಡ ಸ್ಥಾನ ತುಂಬಿದ್ದಾರೆ. ದೇವೇಗೌಡರು ದೊಡ್ಡ ಛಲಗಾರರು, ಅವರ ಆಶೀರ್ವಾದ ಪಡೆಯೋಣ ಅಂತ ಬಂದಿದ್ದೆ. ರಾಜಕೀಯ ಮುಗಿದು ಹೋಯ್ತು, ಇನ್ನೇನಿದ್ದರೂ ಕರ್ನಾಟಕ ಉಳಿಯಬೇಕು.
ಹಾಗಾಗಿ ದೇವೇಗೌಡರ ಬಳಿಕ ಅನೇಕ ಸಲಹೆ ಕೇಳಿದ್ದೇವೆ. ಅವರು ಕೂಡ ಸ್ಪೂರ್ತಿ ಮತ್ತು ಧೈರ್ಯ ತುಂಬಿ ಕಳುಹಿಸಿದ್ದಾರೆ. ಎಲೆಕ್ಷನ್ ಮುಗೀತು, ಇನ್ಯಾಕೆ ನೆಗೆಟಿವ್? ನೆಗೆಟಿವ್ ಇಂದ ಲಾಭ ಏನೂ ಇಲ್ಲ. ಜನ ನಮಗೆ ಕೊಟ್ಟಿರುವ ಭರವಸೆ ಇಡೇರಿಸಬೇಕು. ನುಡಿದಂತೆ ನಡೆಯಬೇಕು. ಕಾಂಗ್ರೆಸ್ ಪಕ್ಷ ಮತ್ತು ವೈಯಕ್ತಿಕವಾಗಿ ನಾನು ಪಾಸಿಟಿವ್ ಆಗಿರ್ತೀನಿ. ಅನೇಕರು ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ನಾವು ಅದನ್ನು ಒಪ್ಪಿಕೊಂಡು ಗೌರವಿಸಬೇಕು. ಎಲ್ಲಾ ಹಿರಿಯ ನಾಯಕರನ್ನು ಭೇಟಿ ಮಾಡಿದ್ದೇನೆ. ಕಾವೇರಿ ನದಿ ವಿಚಾರ ಸೇರಿದಂತೆ ಅನೇಕ ವಿಚಾರ ಚರ್ಚೆ ಮಾಡಿದ್ದೇನೆ ಎಂದರು.
ಒಕ್ಕಲಿಗ ನಾಯಕತ್ವದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನಾನು ಮಾತನಾಡಲ್ಲ. ಸಮುದಾಯದ ವಿಚಾರ ಅಲ್ಲ, ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ: D.K. Shivakumar: ಮೂರು ಮನೆಗಳ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿ.ಕೆ. ಶಿವಕುಮಾರ್!