ಬೆಂಗಳೂರು: ಈಗಾಗಲೆ ಕಾಂಗ್ರೆಸ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಗಿರುವ, ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಸಂಸದ ಡಿ.ಕೆ. ಸುರೇಶ್ ತುಪ್ಪ ಸುರಿದಿದ್ದಾರೆ. ಸಿದ್ದರಾಮೋತ್ಸವ ಎಂದೇ ಪ್ರಸಿದ್ಧವಾಗಿರುವ ಈ ಕಾರ್ಯಕ್ರಮದ ಕುರಿತು ಮಾತನಾಡುವಾಗ, ಸಿದ್ದರಾಮಯ್ಯ ಅವರನ್ನು ʼಕುರಿ ಕಾಯೋನುʼ ಎಂದು ಸಂಬೋಧಿಸಿರುವುದು ಈಗ ಪಕ್ಷದಲ್ಲಿ ಸಂಚಲನ ಮೂಡಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗಿಂತ ಶಕ್ತಿವಂತ ಎಂದು ಬಿಂಬಿಸಿಕೊಳ್ಳುವ ಸಲುವಾಗಿಯೇ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಒಂದು ಬಣ ಈಗಾಗಲೆ ಅಸಮಾಧಾನಗೊಂಡಿದೆ. ಸಿದ್ದರಾಮೋತ್ಸವ ಆಚರಣೆ ಕುರಿತು ಈ ಹಿಂದೆಯೂ ಡಿ.ಕೆ. ಸುರೇಶ್ ಹೇಳಿಕೆ ನೀಡಿದ್ದರು.
ಇದನ್ನೂ ಓದಿ | ರೈತರ ಕೆಲಸಕ್ಕೆ ಆದ್ಯತೆ ಕೊಡಿ; ದಿಶಾ ಸಭೆಯಲ್ಲಿ ನಾಲ್ವರು ತಹಸೀಲ್ದಾರ್‌ಗೆ ಸಂಸದ ಡಿ.ಕೆ.ಸುರೇಶ್ ತರಾಟೆ
ಸಿದ್ದರಾಮಯ್ಯ ಬೆಂಬಲಿಗರು ಈಗಾಗಲೆ ಕಾರ್ಯಕ್ರಮಕ್ಕೆ ಅನೇಕರನ್ನು ಆಹ್ವಾನಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಶಿವಕುಮಾರ್ ಅವರ ಮನೆಗೆ ಮಂಗಳವಾರ ತೆರಳಿದ್ದ, ಉತ್ಸವ ಆಚರಣೆ ಸಮಿತಿ ಸದಸ್ಯರಾದ ಬಸವರಾಜ ರಾಯರಡ್ಡಿ, ಅಶೋಕ್ ಪಟ್ಟಣ್ ಮತ್ತಿತರರು ಆಹ್ವಾನ ಪತ್ರಿಕೆ ನೀಡಿದ್ದರು.
ಉತ್ಸವದ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಡಿ.ಕೆ. ಸುರೇಶ್, ಸಿದ್ದರಾಮೋತ್ಸವ ಆಚರಣೆ ತಪ್ಪಿಲ್ಲ ಎನ್ನುವ ಧಾಟಿಯಲ್ಲೆ ಮಾತನಾಡಿದ್ದರೂ ಅವರು ಬಳಸಿರುವ ಪದಗಳು ವಿವಾದಕ್ಕೆ ಕಾರಣವಾಗುತ್ತಿವೆ. ʻಸಿದ್ದರಾಮೋತ್ಸವ ಆಚರಣೆ ಮಾಡುವುದು ತಪ್ಪೇನಿಲ್ಲ. ಒಬ್ಬ ಕುರಿ ಕಾಯುವವನು ರಾಜ್ಯದ ಯಶಸ್ವಿ ಮುಖ್ಯಮಂತ್ರಿಯಾಗಿ, 11-12 ಬಜೆಟ್ ಮಂಡನೆ ಮಾಡುತ್ತಾರೆ ಎಂದರೆ ಕಡಿಮೆ ಸಾಧನೆಯೇನಲ್ಲ. ಅವರಿಗೆ 75 ವರ್ಷವಾಗಿದೆ. ಹಾಗೆ ನೋಡಿದರೆ 75 ವರ್ಷ ಬದುಕುವುದೇ ಸಾಧನೆ, ಅಲ್ಲವೇ?ʼ ಎಂದಿದ್ದಾರೆ.
ಸಿದ್ದರಾಮೋತ್ಸವವನ್ನು ಸಮರ್ಥನೆ ಮಾಡುತ್ತಲೇ ಸಿದ್ದರಾಮಯ್ಯ ಕುರಿತು ಸುರೇಶ್ ಟೀಕೆ ಮಾಡಿದ್ದಾರೆ ಎಂಬ ಚರ್ಚೆ ಈಗಾಗಲೆ ಕಾಂಗ್ರೆಸ್‌ನಲ್ಲಿ ಆರಂಭವಾಗಿದೆ. ಈಗಾಗಲೆ ಇರುವ ಡಿಕೆಶಿ ವರ್ಸಸ್ ಸಿದ್ದರಾಮಯ್ಯ ಶಿತಲಸಮರಕ್ಕೆ ಈ ಹೇಳಿಕೆ ತುಪ್ಪ ಸುರಿಯುತ್ತದೆ ಎನ್ನಲಾಗುತ್ತಿದೆ.
ಇದನ್ನೂ ಓದಿ | ಸಿದ್ದರಾಮೋತ್ಸವ ಕೇವಲ ಜನುಮ ದಿನ ಕಾರ್ಯಕ್ರಮವೆ? srlopcm75ನಲ್ಲಿದೆ ಈ ಒಗಟಿಗೆ ಉತ್ತರ!